ADVERTISEMENT

ಸಂಗತ: ಕೊಡಿ ನೀರವತೆಯ ಉಡುಗೊರೆ!

ದೀಪಾವಳಿಯಲ್ಲಿ ಮಣೆ ಹಾಕಬೇಕಿರುವುದು ಹಣತೆಗೇ ಹೊರತು ಬೆಂಕಿಗಲ್ಲ

ಬಿಂಡಿಗನವಿಲೆ ಭಗವಾನ್
Published 2 ನವೆಂಬರ್ 2021, 22:15 IST
Last Updated 2 ನವೆಂಬರ್ 2021, 22:15 IST
ಸಂಗತ
ಸಂಗತ   

ಕತ್ತಲೆ ಅಜ್ಞಾನದ, ಬೆಳಕು ಜ್ಞಾನದ ಪ್ರತೀಕವೆನ್ನುವುದು ಜಗಮಾನ್ಯ. ದೀಪಾವಳಿಯಂದು ಬೆಳಗಲಿ ಹಣತೆ, ಅನಾಹುತಕ್ಕೆಡೆಯಾಗಬಲ್ಲ ಸಿಡಿ(ಸುಡು!) ಮದ್ದಿನದೇನು ಕ್ಯಾತೆ?

ಯಾವುದೇ ಸಾಧಾರಣ ಪಟಾಕಿ ಕೇವಲ 8 ಸೆಕೆಂಡ್ ಉರಿದರೂ ಸಾಕು. ಅದರ ಹೊಗೆ ಸುಮಾರು 400 ಸಿಗರೇಟುಗಳು ಸುಟ್ಟ ಒಟ್ಟು ಧೂಮದಷ್ಟೇ ಮಾರಕ. ಕಿವಿಗಡಚಿಕ್ಕುವ ಸದ್ದಿನ ಅಸಹನೀಯತೆಯೊಂದಿಗೆ ತರಾವರಿ ವಿಷಾನಿಲಗಳು ನಮ್ಮ ಶ್ವಾಸಾಂಗಗಳ ಆಳ ಕ್ಕಾಗಲೇ ತಲುಪಿಬಿಟ್ಟಿರುತ್ತವೆ! ಮನುಷ್ಯ ಅದದೇ ತಪ್ಪುಗಳನ್ನು ಎಸಗುವ ಕಾರಣ ಇತಿಹಾಸ ಮರು
ಕಳಿಸುತ್ತದೆ ಎಂಬ ಮಾತಿದೆ. ಹಾಗಾಗಿ ದೀಪಾವಳಿಯ ಈ ಸಂದರ್ಭದಲ್ಲಿ ‘ಹಸಿರು ದೀಪಾವಳಿ’ಗೆ ದೃಢವಾಗಿ ಸಂಕಲ್ಪಿಸಬೇಕಿದೆ. ಈಗಾಗಲೇ ಕೆಲವು ರಾಜ್ಯಗಳು ಸಂಪೂರ್ಣವಾಗಿ ಪಟಾಕಿ ನಿಷೇಧಿಸಿವೆ. ಮಣೆ ಹಣತೆಗೆ, ಬೆಂಕಿಗಲ್ಲ ಎನ್ನುವ ವಿವೇಕ ಮೆರೆಯಬೇಕಿದೆ.

ಸಿಡಿಮದ್ದುರಹಿತವಾಗಿ ಹಣತೆ ಹಚ್ಚಿಯೇ ಸಂಭ್ರಮಿಸಿ ಎಂಬಂಥ ಎಚ್ಚರಿಕೆಗಳು, ಸಲಹೆಗಳು ಪ್ರತೀ ವರ್ಷವೂ ಇರುತ್ತವೆ. ಅವು ‘ಇದು ನಿಚ್ಚಂ ಪೊಸತು’ ಎನ್ನುವಷ್ಟು ಯಾಂತ್ರಿಕ! ಆಗುತ್ತಿರುವುದೇನು? ಪ್ರತೀ ಬಾರಿ ಮೈ, ಕೈ ಸುಟ್ಟುಕೊಂಡು ಆಸ್ಪತ್ರೆಗಳಲ್ಲಿ ದಪ್ಪ ದಪ್ಪ ಬ್ಯಾಂಡೇಜು ಬಿಗಿಸಿಕೊಂಡು ನಲುಗುವ ದೃಶ್ಯ ಗಳು. ಕೊಂಚ ಎಚ್ಚರಿಕೆ ತಪ್ಪಿದರೂ ಅತ್ಯಮೂಲ್ಯವಾದ ಕಣ್ಣುಗಳಿಗೆ ಅಪಾಯ ತರಬಹುದಾದ ರೋಮಾಂಚನ ವನ್ನು ಅಪ್ಪಬೇಕೇ?

ADVERTISEMENT

ಸರ್ವರ ಒಳಿತಿಗೆ ಸುಧಾರಣೆ ಅರಸುವುದೇ ಹಬ್ಬದ ಆಶಯ. ದೀಪಾವಳಿ ಬೆಳಕಿನ ಸಂಭ್ರಮವಾಗಿ ನಮ್ಮನ್ನು ಪುನಶ್ಚೇತನಗೊಳಿಸಬೇಕು. ಆದರೆ ಈ ಅರ್ಥಪೂರ್ಣ ಸಂದರ್ಭವನ್ನು ನಾವೇ ಕೈಯಾರೆ ಕಿವಿಗಡಚಿಕ್ಕುವ ಅಸಹನೀಯ ಸದ್ದು, ಅವಘಡ, ಅವಾಂತರ, ರಾದ್ಧಾಂತ ಗಳನ್ನು ಸೃಷ್ಟಿಸುವ ‘ಸಾಂವತ್ಸರಿಕ ಅಸುರ’ನನ್ನಾಗಿಸಿದ್ದೇವೆ. ಪಟಾಕಿ ಸಿಡಿಸುವುದರಿಂದ ಸ್ವಲ್ಪಮಟ್ಟಿನ ಪುಳಕ ದೊರಕುವುದು ನಿಜ. ಆದರೆ ನಮಗೂ ಇತರರಿಗೂ ಸುತ್ತಮುತ್ತಲಿನ ಪರಿಸರಕ್ಕೂ ಒದಗುವ ಗಂಡಾಂತರ ಘೋರ. ಕಿವಿಗೆ ಹಠಾತ್ತಾಗಿ ಬೀಳುವ ಸದ್ದಿನಿಂದಂತೂ ಪೂರ್ಣ ಅಥವಾ ಭಾಗಶಃ ಕಿವುಡು ಪರಿಣಮಿಸಬಹುದು. ದೀಪಾವಳಿಯ ಮೂರು ದಿನಗಳವರೆಗೆ ಎಲ್ಲಿಗಾದರೂ ಗುಳೆ ಹೋಗಿಬಿಡೋಣವೆನ್ನಿಸುವ ಮಟ್ಟಿಗೆ ಬವಣೆ, ಜುಗುಪ್ಸೆ. ಒಂದು ದಿನದ ಪಟಾಕಿ ಸಿಡಿತದ ಫಲಶ್ರುತಿ ಒಂದು ತಿಂಗಳ ಹೆಚ್ಚುವರಿ ಪರಿಸರ ಮಾಲಿನ್ಯ.

ಹೊಗೆಮಂಜು (ಸ್ಮಾಗ್) ಮುಗಿಲಿನಲ್ಲಿ ಎರಡು ತಿಂಗಳವರೆಗೆ ದಟ್ಟೈಸಿರುತ್ತದೆ. ಅದರಲ್ಲಿನ ತಾಮ್ರ, ಸೀಸ, ಸತು, ಸೋಡಿಯಂ, ಕ್ಯಾಡ್ಮಿಯಂ, ಮ್ಯಾಂಗನೀಸ್, ಪೊಟ್ಯಾಸಿಯಂ ಲೋಹಗಳ ಕಣಗಳಿಂದ ಗಾಳಿ ಮಲಿನವಾಗುತ್ತದೆ. ಪ್ರಾಣಿ, ಪಕ್ಷಿಗಳಂತೂ ಶಬ್ದದಿಂದ ಅಕ್ಷರಶಃ ನರಕ ಅನುಭವಿಸುತ್ತವೆ.

ಒಂದು ಕಾಲದಲ್ಲಿ ಒಂಟೊಂಟಿ ಮನೆಗಳದ್ದೇ ಕಾರುಬಾರು. ಪ್ರಯಾಸದಿಂದ ಹುಡುಕಿಕೊಂಡು ಬರುವ ನೆಂಟರಿಷ್ಟರಿಗೆ ‘ಇಗೋ ಇಲ್ಲಿದೆ ನಮ್ಮ ಮನೆ’ ಅಂತ ತೋರಿಸುವುದಕ್ಕೆ ಉಪಾಯ ತಾನೆ ಆಗ ಏನಿತ್ತು? ಮೊಬೈಲ್‌ ಫೋನೇ? ಇ- ಮೇಲೇ? ಕಿಲೊ ಮೀಟರುಗಳವರೆಗೆ ಕೇಳಿಸುವಂತೆ ಜೋರು ಸದ್ದು. ಇರುಳಾದರೆ ಸದ್ದಿನ ಜೊತೆಗೆ ಕಟ್ಟಿಗೆ ಉರಿಸಿ ಜ್ವಾಲೆ. ಇಂದು ಬದುಕಿನ ಶೈಲಿಯು ಅಂದಕಾಲತ್ತಲೆ ಹಾಗೂ ಇತ್ತೆ ಎಂದು ನಂಬಲಾಗದಷ್ಟು ಬದಲಾಗಿದೆ. ನಗರಗಳು ಗಗನಮುಖಿಯಾಗಿ ಬೆಳೆಯುತ್ತಿವೆ. ಒಂದು ಬೀದಿಯಲ್ಲಿ ಸರಾಸರಿ ಸಾವಿರಕ್ಕೂ ಮೀರಿದ ಸಂಖ್ಯೆಯ ನಿವಾಸಿಗಳಿರುವಷ್ಟು ಜನಸಾಂದ್ರತೆ. ಅಗಲಗೊಳ್ಳಬೇಕಾದ ಪಾದಚಾರಿ ಮಾರ್ಗಗಳು ರಸ್ತೆ ವಿಶಾಲಗೊಳ್ಳುವ ಅನಿವಾರ್ಯಕ್ಕೆ ತುತ್ತಾಗಿ ಕಿರಿದಾಗುತ್ತಿವೆ. ಈ ಪರಿಸ್ಥಿತಿಯಲ್ಲಿ ಪಟಾಕಿಗಳಿಂದ ಆಗ ಬಹುದಾದ ಅನಾಹುತದಿಂದ ಪಾರಾಗುವ ಸಲುವಾಗಿ ಓಡುವುದೆಲ್ಲಿಗೆ? ವರ್ತಮಾನಕ್ಕೆ ಒಗ್ಗದ ಆಚರಣೆ
ಗಳನ್ನು ಕೈಬಿಡುವುದು ಸಮಂಜಸ.

ಸಾಲು ದೀಪಗಳು ಬೆಳಗೆ ದಿಕ್ಕನ್ನೆಲ್ಲ ಎನ್ನುವಾಗ ಸಮಷ್ಟಿ ಶಾಂತಿ, ನೆಮ್ಮದಿ, ಸಮೃದ್ಧಿಗೆ ಹಂಬಲಿಸುವ ಆಶಯವಿದೆ. ‘ನನ್ನ ತವರವರ ಬಂದರ ನಿತ್ಯ ದೀವಳಿಗೆ ನನ್ನ ಮನೆಯಾಗ’ ಎಂಬ ಹೆಣ್ಣುಮಗಳ ಮಿಡಿತಕ್ಕೆ ಸಾಟಿ ಯಾವುದು? ದೀಪಾವಳಿಯನ್ನು ರಂಗೋಲಿ, ಮನೆಯ ಒಪ್ಪ ಓರಣ, ಹೊಸ ಹೊಸ ಪಾಕ ವಿಧಾನ ವಿನಿಮಯ, ಸಿಹಿ ಹಂಚಿಕೆ, ಹತ್ತಿರದ ವೃದ್ಧಾಶ್ರಮ ವಾಸಿಗಳೊಂದಿಗೆ ಕುಶಲೋಪರಿಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹರ್ಷಿಸುವುದು ಇಂದಿನ ಅಗತ್ಯ. ಬಣ್ಣ ಬಣ್ಣದ ಮತಾಪು, ಸುರುಸುರು ಬತ್ತಿ, ಹೂ ಕುಂಡಗಳಿಗೆ ಸಂಭ್ರಮ ಪರಿಮಿತಿಗೊಳಿಸುವುದು ಸರಿ. ದೀಪಾವಳಿಯಷ್ಟೇ ಅಲ್ಲ ಯಾವುದೇ ಹಬ್ಬ, ಉತ್ಸವ ಶಬ್ದಾಸುರನನ್ನು ಕೊಬ್ಬಿಸಬಾರದು. ಎಂದ ಮೇಲೆ ನಾವು ನಮ್ಮ ಆಪ್ತರಿಗೆ ನೀಡಬಹುದಾದ ಪ್ರೀತಿಯ ದೀಪಾವಳಿ ಉಡುಗೊರೆಯೆಂದರೆ ನೀರವತೆ.

ಅಮೆರಿಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪರಿ ಮಾದರಿಯೆನ್ನಿಸುತ್ತದೆ. ವೈಭವೋಪೇತವಾಗಿ ಮೈಮನ ರೋಮಾಂಚನಗೊಳ್ಳುವಂತಹ ಬಾಣ ಬಿರುಸುಗಳ ಪ್ರದರ್ಶನ ಏರ್ಪಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಅದು ಕೆರೆಯಂಗಳದಲ್ಲಿ. ವೀಕ್ಷಕರು ಕನಿಷ್ಠ ಒಂದು ಫರ್ಲಾಂಗು ದೂರದಲ್ಲಿರುವಂತೆ ವ್ಯವಸ್ಥೆಯಾಗುವುದರಿಂದ ಅವರಿಗೆ ಒಂದು ಕಿಡಿಯೂ ಹಾರದು. ನಮ್ಮಲ್ಲೂ ಈ ಬಗೆಯಲ್ಲಿ ಸರ್ಕಾರ ಅಥವಾ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿ
‘ಜನದೀಪಾವಳಿ’ಗೆ ಮುಂದಾಗಬಹುದು.

ನಿದ್ರೆ ಮೂಲಭೂತ ಹಕ್ಕುಗಳಲ್ಲೊಂದು ಎಂದು ಪರಿಗಣಿಸಿರುವ ಭಾರತದ ಸರ್ಕಾರ ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಯಾವುದೇ ಕಾಯ್ದೆ, ಕಟ್ಟಲೆಗಳ ಪಾಲನೆ ನಮ್ಮ ಹಿತಕ್ಕೇ. ಅಷ್ಟಕ್ಕೂ ಕಾನೂನು ಎನ್ನುವುದು ಸಾಮಾನ್ಯ ಪ್ರಜ್ಞೆ ಎನ್ನುವುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.