ADVERTISEMENT

ಸಂಗತ| ರಂಗತೇರಿನ ಮೂಲಕ ರಾಜ್ಯಾಂಗದರಿವು

ನಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ರಂಗ ಪ್ರಯೋಗದ ಮೂಲಕ ಅರ್ಥಮಾಡಿಸುವ ಮಾದರಿ ಯೋಜನೆಯೊಂದನ್ನು ಶಿವಮೊಗ್ಗ ರಂಗಾಯಣ ಅನುಷ್ಠಾನಗೊಳಿಸುತ್ತಿದೆ

ಡಾ.ಮುರಳೀಧರ ಕಿರಣಕೆರೆ
Published 28 ಮಾರ್ಚ್ 2022, 19:30 IST
Last Updated 28 ಮಾರ್ಚ್ 2022, 19:30 IST
Sangata_29-3-2022.jpg
Sangata_29-3-2022.jpg   

ಸಾಂಸ್ಕೃತಿಕ ಸಂಸ್ಥೆಯಾದ ಮೈಸೂರು ರಂಗಾಯಣ ವಿಭಿನ್ನ ಕಾರಣಗಳಿಂದ ಸುದ್ದಿಯಾಗಿರುವ ಈ ಹೊತ್ತಿನಲ್ಲಿ, ಶಿವಮೊಗ್ಗ ರಂಗಾಯಣವು ಮಾದರಿ ಎನ್ನಬಹುದಾದ ಯೋಜನೆಯೊಂದನ್ನು ಹೆಚ್ಚು ಸದ್ದಿಲ್ಲದೆ ಅನುಷ್ಠಾನಗೊಳಿಸುತ್ತಿದೆ. ಭಾರತೀಯ ಸಂವಿಧಾನದ ಮೂಲ ಆಶಯಗಳು, ತತ್ವಗಳು, ಸ್ಫೂರ್ತಿದಾಯಕ ಅಂಶಗಳನ್ನು ರಂಗಪ್ರಯೋಗದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಿದು. ಸರ್ವರಿಗೂ ಸಂವಿಧಾನ ಎಂಬ ಯೋಜನೆಯಡಿ ನಮ್ಮ ರಾಜ್ಯಾಂಗದ ಮುಖ್ಯ ತಿರುಳನ್ನು ‘ವೀ ದ ಪೀಪಲ್ ಆಫ್ ಇಂಡಿಯಾ’ ನಾಟಕ ರೂಪದಲ್ಲಿ ಮನವರಿಕೆ ಮಾಡಿಸುವ ವಿಶಿಷ್ಟ ಉಪಕ್ರಮ ಅಪರೂಪದ್ದೇ ಸರಿ.

ಹೌದು, ನಮ್ಮ ಸಂವಿಧಾನವನ್ನು ಪೂರ್ಣವಾಗಿ ಅರ್ಥಮಾಡಿಕೊಂಡವರ ಸಂಖ್ಯೆ ತುಂಬಾ ಸಣ್ಣದು. ಇದು ಶುಷ್ಕ, ಕ್ಲಿಷ್ಟ ಪಾರಿಭಾಷಿಕ ಪದಗಳ, ಸಾಮಾನ್ಯ ತಿಳಿವಳಿಕೆಗೆ ನಿಲುಕದ ಕಬ್ಬಿಣದ ಕಡಲೆ ಎಂಬ ಭಾವನೆ ಬಹುತೇಕರದ್ದು. ಜೊತೆಗೆ ಇದನ್ನು ಅರಿತು ಆಗಬೇಕಾದ್ದೇನು ಎಂಬ ಉದಾಸೀನವೂ ಸೇರಿದೆ. ಹಾಗಾಗಿ ಈ ವಿಷಯದಲ್ಲಿ ಅರಿವಿಗಿಂತ ಅಜ್ಞಾನದ್ದೇ ದೊಡ್ಡ ಪಾಲು.

ವೀ ದ ಪೀಪಲ್ ಆಫ್ ಇಂಡಿಯಾ ಎಂಬ ಹೆಸರಲ್ಲೇ ಒಂಥರಾ ರೋಮಾಂಚನವಿದೆ! ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿನ ಮೊದಲ ಪದಗಳಿವು. ಭಾರತದ ಜನರಾದ ನಾವು... ಎಂದು ಪ್ರಾರಂಭವಾಗುವ ನಮ್ಮ ಸಂವಿಧಾನಕ್ಕೆ ವಿಶ್ವದಲ್ಲೇ ಅತ್ಯಂತ ಉದ್ದನೆಯ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆ. ಅಮೆರಿಕದ್ದೂ ಬರಹ ರೂಪದಲ್ಲಿದ್ದರೂ ನಮಗೆ ಹೋಲಿಸಿದಲ್ಲಿ ಗಾತ್ರದಲ್ಲಿ ಚಿಕ್ಕದು. ಇಷ್ಟೊಂದು ಸಮಗ್ರ, ಪರಿಪೂರ್ಣ ರಾಜ್ಯಾಂಗವನ್ನು ಬೇರೆ ಯಾವ ದೇಶವೂ ಹೊಂದಿಲ್ಲ ಎಂಬುದು ಖಂಡಿತಾ ಹೆಮ್ಮೆಯ ವಿಷಯ.

ADVERTISEMENT

ಪ್ರಪಂಚದ ಹಲವು ರಾಷ್ಟ್ರಗಳ ಆಡಳಿತ ವ್ಯವಸ್ಥೆಯ ಮುಖ್ಯಾಂಶಗಳನ್ನು ಸೇರಿಸಿಕೊಂಡು ರಚನೆಯಾಗಿರುವ ನಮ್ಮ ಸಂವಿಧಾನ ಶ್ರೇಷ್ಠವೆನಿಸಲು ಕಾರಣವೇ ಇದು. ಕಾಲಕಾಲಕ್ಕೆ ಅಗತ್ಯ ತಿದ್ದುಪಡಿಗಳನ್ನು ಸ್ವೀಕರಿಸುತ್ತಲೇ ತನ್ನ ಬಿಗಿತನ, ಕಟ್ಟುನಿಟ್ಟನ್ನು ಕಾಪಾಡಿಕೊಂಡಿದೆ. ತಿದ್ದುಪಡಿ ತರಲು ಅತ್ಯಂತ ಕಠಿಣ ನಿಯಮಗಳನ್ನು ಪಾಲಿಸಬೇಕಿರುವುದರಿಂದಲೇ ಪಾವಿತ್ರ್ಯ ಮುಕ್ಕಾಗದೇ ಉಳಿದಿರುವುದು.

ರಂಗ ಮಾಧ್ಯಮದ ಮೂಲಕ ನಮ್ಮ ಸಂವಿಧಾನದ ಪ್ರಧಾನ ಆಶಯಗಳನ್ನು ಬಿಂಬಿಸುವ ವಿಶಿಷ್ಟ ಪ್ರಸ್ತಾವ
ವನ್ನು ಶಿವಮೊಗ್ಗ ರಂಗಾಯಣ ಕಳೆದ ವರ್ಷ ಸರ್ಕಾರದ ಮುಂದಿಟ್ಟಿತ್ತು. ಸುದೀರ್ಘ ಮನವರಿಕೆಯ ಮೇಲಷ್ಟೇ ಇಂತಹದ್ದೊಂದು ಯೋಜನೆಗೆ ಒಪ್ಪಿ ಅನುದಾನ ನೀಡಿದ್ದು, ಅದೂ ಹಲವು ಷರತ್ತುಗಳಿಗೆ ಒಳಪಡಿಸಿ. ಪ್ರಕಟಣೆ ಹೊರಡಿಸಿ ರಾಜ್ಯದ ವಿವಿಧೆಡೆಯ ಕಲಾವಿದರ ಅರ್ಜಿಗಳನ್ನು ಪರಿಶೀಲಿಸಿ, ರಂಗಾರ್ಹತೆಯನ್ನು ಪರೀಕ್ಷೆ ಗೊಳಪಡಿಸಿದ ನಂತರವೇ ಪ್ರತಿಭೆಗಳನ್ನು ಆಯ್ದದ್ದು. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಚಿತ್ರದುರ್ಗ, ಮೈಸೂರು, ಚಿಕ್ಕಬಳ್ಳಾಪುರಗಳಲ್ಲದೆ ದೂರದ ಗದಗ, ವಿಜಯನಗರ, ಬಾಗಲಕೋಟೆ, ರಾಯಚೂರು, ಬೀದರ್, ಕಲಬುರಗಿ ಜಿಲ್ಲೆಗಳ ಎಲ್ಲಾ ಇಪ್ಪತ್ತಕ್ಕೂ ಅಧಿಕ ಕಲಾವಿದರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಎಂಬುದು ಮತ್ತೊಂದು ವಿಶೇಷ.

ಮಾತೃಸ್ಥಾನದಲ್ಲಿದ್ದು ನಮ್ಮನ್ನು ಕಾಯುವ ಈ ಪವಿತ್ರ ಗ್ರಂಥದ ಪ್ರಧಾನ ಆಶಯಗಳನ್ನು ಬಿಂಬಿಸುವ ರಂಗಕೃತಿ ಸಿದ್ಧವಾಗುತ್ತಿದ್ದಂತೆ ಪ್ರಯೋಗಕ್ಕೆ ಇಳಿಸುವ ಸವಾಲು. ವಿಶ್ವಮಾನವ ಪ್ರಜ್ಞೆ ಬಿತ್ತಿದ ಕುವೆಂಪು ಕುಪ್ಪಳಿಯಲಿ ಒಂದು ತಿಂಗಳು ಕಠಿಣ ತಾಲೀಮು ನಡೆಯಿತು. ರಾಜ್ಯದ ವಿವಿಧೆಡೆಯ ಕಲಾವಿದರ ಮಾತು, ಅಭಿನಯ, ಅಭಿವ್ಯಕ್ತಿಯನ್ನು ನಿರ್ದಿಷ್ಟ ಚೌಕಟ್ಟಿಗೆ ಹೊಂದಿಸಿ, ಅವರೊಳಗಿನ ಪ್ರತಿಭೆಯನ್ನು ಸಹಜವಾಗಿ ಹೊರತರುವಲ್ಲಿ ಈ ತಾಣದ ಸ್ಫೂರ್ತಿಯ ಕೊಡುಗೆಯೂ ಸೇರಿತ್ತು.

ಹಾಡುತ್ತಾ, ಬೇಡುತ್ತಾ ಊರೂರು ಸುತ್ತುವ ಅಲೆಮಾರಿಗಳ ಗುಂಪಿಗೆ ದಿಢೀರೆಂದು ಉದ್ಭವವಾಗುವ ‘ಸಂವಿಧಾನವೆಂದರೇನು’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಹಾದಿಯಲ್ಲಿ ರೂಪುಗೊಂಡ ಈ ದೃಶ್ಯಕಾವ್ಯದ ಮೊದಲ ಪ್ರದರ್ಶನ ನಡೆದಿದ್ದು ಜ. 26ರ ಗಣರಾಜ್ಯೋತ್ಸವದಂದು, ಶಿವಮೊಗ್ಗದಲ್ಲಿ. ನಾಡಿನ ಹಲವೆಡೆಯಲ್ಲಿ ಈಗಾಗಲೇ 35 ರಂಗಪ್ರಸ್ತುತಿಗಳನ್ನು ಮುಗಿಸಿದ ತಂಡದ ಸುತ್ತಾಟ ಮುಂದುವರಿದಿದೆ.

ಚೇತೋಹಾರಿ ಅಭಿನಯ, ಉತ್ತಮ ರಂಗಸಜ್ಜಿಕೆ, ರಂಗಪರಿಕರಗಳ ಸಮರ್ಥ ಬಳಕೆ, ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸೋದರತ್ವಗಳ ಮಹತ್ವವನ್ನು ಬಿಂಬಿಸುವ ಬಗೆ, ಸಂವಿಧಾನ ರಚನಾ ಸಭೆಯ ಚರ್ಚೆ, ನಡಾವಳಿಗಳನ್ನು ಪ್ರೇಕ್ಷಕರ ಕಣ್ಣೆದುರಿಗೆ ಕಟ್ಟಿಕೊಡುವ ರೀತಿ, ಮಹಿಳೆಯ ಮೇಲಿನ ಶೋಷಣೆ, ಅತ್ಯಾಚಾರ, ಅನಾಚಾರಗಳ ಅಂಕಿ ಅಂಶಗಳನ್ನು ಸಭಿಕರ ಮಧ್ಯೆಯೇ ಬಿಚ್ಚಿಡುತ್ತಾ ಬೆಚ್ಚಿಬೀಳಿಸುವ ಪರಿ ನಿಜಕ್ಕೂ ಪರಿಣಾಮಕಾರಿ. ಕಲಾವಿದರೆಲ್ಲಾ ದಮನಿತ, ಶೋಷಿತ ವರ್ಗದಿಂದಲೇ ಬಂದವರಾದ್ದರಿಂದ ಅವರ ಧ್ವನಿಯಲ್ಲಿನ ಆಕ್ರೋಶಕ್ಕೆ ಸಹಜತೆಯ ಸ್ಪರ್ಶವಿದೆ. ನಾಟಕ ಎಲ್ಲಿಯೂ ಶುಷ್ಕವಾಗದಂತೆ ಎಚ್ಚರ ವಹಿಸುತ್ತಾ ಕಲಾತ್ಮಕತೆಯನ್ನು ಉಳಿಸಿಕೊಂಡು ಸಂವಿಧಾನದ ಸ್ಫೂರ್ತಿಯನ್ನು ಅರ್ಥಪೂರ್ಣವಾಗಿ ಸಂವಹನ ಮಾಡುವ ಈ ಪ್ರಕ್ರಿಯೆ ಸವಾಲಿನದ್ದಾದರೂ ಯಶಸ್ವಿಯಾಗಿದೆ.

ನಮ್ಮ ಸಂವಿಧಾನಾತ್ಮಕ ಹಕ್ಕುಗಳು, ಮೂಲ ತತ್ವಗಳಂತಹ ಪ್ರಮುಖ ಅಂಶಗಳನ್ನು ರಂಗ ಪ್ರಯೋಗದ ಮೂಲಕ ಅರ್ಥಮಾಡಿಸುವ, ಮನವರಿಕೆ ಮಾಡಿಕೊಡುವ ಈ ನಡೆ ಪ್ರಶಂಸಾರ್ಹ. ಸರ್ವರಲ್ಲೂ ಸಂವಿಧಾನದ ಬಗ್ಗೆ ತಿಳಿವಳಿಕೆ ಮೂಡಿ, ಒಪ್ಪಿ ನಡೆಯುವ ಮನಃಸ್ಥಿತಿಯಿಂದಷ್ಟೇ ನಮ್ಮ ಪ್ರಸ್ತುತ ಸಾಮಾಜಿಕ ವ್ಯಾಧಿಗಳಿಗೆ ಮದ್ದು, ಮುಕ್ತಿ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.