ADVERTISEMENT

ಸಂಗತ | ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ

ಉಡಾಫೆ ಅಥವಾ ನಿರ್ಲಕ್ಷ್ಯ ಸಾವಿನಲ್ಲಿ ಕೊನೆಗೊಳ್ಳಬಹುದು

ದೀಪಾ ಹಿರೇಗುತ್ತಿ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ
ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ   

ಮಧ್ಯಪ್ರದೇಶದ ರಾಜಾ ರಘುವಂಶಿ ಹಾಗೂ ಸೋನಮ್‌ ದಂಪತಿ ಇತ್ತೀಚೆಗೆ ಮೇಘಾಲಯದಲ್ಲಿ ನಾಪತ್ತೆಯಾಗಿದ್ದರು. ಅವರಲ್ಲಿ, ರಾಜಾ ರಘುವಂಶಿ ಅವರ ಮೃತದೇಹ ಕಿರು ಕಣಿವೆಯೊಂದರಲ್ಲಿ ಪತ್ತೆಯಾಗಿದೆ. ಸೋನಮ್‌ಗಾಗಿ ಹುಡುಕಾಟ ಮುಂದುವರಿದಿದೆ.

ಇತ್ತೀಚೆಗಷ್ಟೇ ಮದುವೆಯಾಗಿದ್ದ ಈ ಜೋಡಿ, ಮಧುಚಂದ್ರಕ್ಕೆಂದು ಈಶಾನ್ಯ ರಾಜ್ಯಗಳಿಗೆ ಮೇ 20ರಂದು ಬಂದಿತ್ತು. ಬೈಕ್‌ ಬಾಡಿಗೆಗೆ ಪಡೆದು ತಿರುಗಾಡುತ್ತ, ಮೇಘಾಲಯದ ಪ್ರಕೃತಿ ಸೌಂದರ್ಯವನ್ನು ಸವಿಯುವ ಆಸೆಯಿಂದ ಟ್ರೆಕ್ಕಿಂಗ್‌ ಹೊರಟಿದ್ದರು. ಚಿರಾಪುಂಜಿ ತಲುಪುವವರೆಗೆ ಕುಟುಂಬದ ಸಂಪರ್ಕದಲ್ಲಿದ್ದರು. ಅದಾದ ಮೇಲೆ, ಅಂದರೆ ಮೇ 23ರಿಂದ ನದದಂಪತಿಯ ಸಂಪರ್ಕ ಕುಟುಂಬದವರಿಗೆ ಸಿಕ್ಕಿರಲಿಲ್ಲ. ಕುಟುಂಬದವರು ಮಾಹಿತಿದಾರರಿಗೆ ₹5 ಲಕ್ಷ ಬಹುಮಾನವನ್ನೂ ಘೋಷಿಸಿದ್ದರು. ದುರದೃಷ್ಟವಶಾತ್‌ ಈಗ ಪತಿ ಶವವಾಗಿ ಸಿಕ್ಕರೆ, ಪತ್ನಿ ಇನ್ನೂ ಪತ್ತೆಯಾಗಿಲ್ಲ. ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿರುವುದು ಕಳವಳಕಾರಿ.

ಇತ್ತೀಚಿನ ವರ್ಷಗಳಲ್ಲಿ ಪ್ರವಾಸದ ಹವ್ಯಾಸ ಜನರಲ್ಲಿ ಹೆಚ್ಚುತ್ತಿದೆ. ಟ್ರೆಕ್ಕಿಂಗ್‌ ಎನ್ನುವುದು ಈಗ ಜನಪ್ರಿಯ ಹವ್ಯಾಸ. ಅದೊಂದು ಫ್ಯಾಷನ್‌ ಆಗಿಯೂ ಮಾರ್ಪಡುತ್ತಿದೆ. ಕೆಲವರು ಬೇರೆ ಬೇರೆ ರಾಜ್ಯಗಳಿಗೆ ಟ್ರೆಕ್ಕಿಂಗ್‌ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ– ವಿವರಗಳನ್ನು ಹಾಕುತ್ತಿದ್ದಾರೆ. ಆ ಮಾಹಿತಿ ನೋಡಿ ಟ್ರೆಕ್ಕಿಂಗ್‌ ಬಗ್ಗೆ ಏನೂ ತಿಳಿಯದ ಕೆಲವರು ಚಾರಣದ ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ADVERTISEMENT

ಮುನ್ನೆಚ್ಚರಿಕೆ ತೆಗೆದುಕೊಂಡು, ಸ್ಥಳೀಯರ ಸಹಾಯ ಪಡೆದು ಮುಂದುವರಿದರೆ ತೊಂದರೆಯಿಲ್ಲ. ಆದರೆ, ಬಹುತೇಕರು ತಮ್ಮಷ್ಟಕ್ಕೆ ತಾವೇ ಟ್ರೆಕ್ಕಿಂಗ್‌ ಹೊರಡುತ್ತಾರೆ. ಎಂಜಿನಿಯರಿಂಗ್‌, ವೈದ್ಯಕೀಯದಂತಹ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಂತೂ ವಾರಾಂತ್ಯದಲ್ಲಿ ಗುಂಪಾಗಿ ಪ್ರವಾಸ ಹೋಗುತ್ತಾರೆ. ಬಹುತೇಕ ಮಂದಿಯ ಆಯ್ಕೆ ನೀರಿರುವ ಸ್ಥಳಗಳು ಮತ್ತು ಗುಡ್ಡಗಾಡು ಪ್ರದೇಶಗಳು. ಅವರು ಎಲ್ಲಿಗೆ ಹೋಗುತ್ತಾರೆ ಎಂಬ ಸಣ್ಣ ಸುಳಿವೂ ಕುಟುಂಬದವರಿಗೆ ಇರುವುದಿಲ್ಲ. ಬೇಡ ಎನ್ನುತ್ತಾರೆಂಬ ಕಾರಣಕ್ಕೆ ಮನೆಯವರಿಂದ ವಿಚಾರ ಮುಚ್ಚಿಡುತ್ತಾರೆ.

ಪ್ರತಿ ವರ್ಷವೂ ಅದೆಷ್ಟೋ ಯುವಕ, ಯುವತಿಯರು ನೀರುಪಾಲಾಗುತ್ತಾರೆ. ಟ್ರೆಕ್ಕಿಂಗ್‌ನಲ್ಲಿ ಅದೆಷ್ಟೋ ಮಂದಿ ಮೃತಪಟ್ಟಿದ್ದಾರೆ, ದಾರಿ ತಪ್ಪಿಸಿಕೊಂಡು ಒದ್ದಾಡಿದ್ದಾರೆ. ದುರಂತದ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ.

ಗೊತ್ತಿರದ ಜಾಗಕ್ಕೆ ಪ್ರವಾಸ ಹೋಗುವಾಗ ಮುನ್ನೆಚ್ಚರಿಕೆಯ ಕ್ರಮಗಳು ಮುಖ್ಯ. ಪರ್ವತಗಳ ಹವಾಮಾನದ ಬಗ್ಗೆ ಏನೇನೂ ಗೊತ್ತಿಲ್ಲದಿದ್ದರೂ ಕೆಲವರು ಚಾರಣಕ್ಕೆ ಹೊರಟುಬಿಡುತ್ತಾರೆ. ಹೋಗುವ ಜಾಗದ ಭೌಗೋಳಿಕ ಪರಿಸರದ ಅರಿವು ಬಹಳ ಮುಖ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಕಳೆದ ವರ್ಷ ಉತ್ತರಾಖಂಡಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಕರ್ನಾಟಕದ ಇಪ್ಪತ್ತೆರಡು ಮಂದಿಯಲ್ಲಿ ಒಂಬತ್ತು ಮಂದಿ ಹಿಮಪಾತಕ್ಕೆ ಬಲಿಯಾಗಿದ್ದರು. ಅವರೆಲ್ಲರೂ ಮಧ್ಯವಯಸ್ಕರು. ಪರ್ವತದ ತುದಿಯಲ್ಲಿ ಅವರ ಜತೆ ಗೈಡ್‌ಗಳು ಇರಲಿಲ್ಲ. ಆ ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ಉತ್ತರಕಾಶಿಯ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದರು. ಹಿಮಪಾತವಾದಾಗ ದೊಡ್ಡದೊಂದು ಬಂಡೆಯ ಕೆಳಗೆ ಅವರು ಆಶ್ರಯ ಪಡೆದಿದ್ದರು. ಆದರೆ, ದಣಿವು, ದೇಹದ ಉಷ್ಣತೆಯ ಕುಸಿತ ಮತ್ತು ಆಮ್ಲಜನಕದ ಕೊರತೆಯಿಂದ ಒಂಬತ್ತು ಮಂದಿ ಮೃತಪಟ್ಟಿದ್ದರು. ದುರ್ಗಮ ವಾತಾವರಣದಲ್ಲೂ ಬಚಾವಾದ ಹದಿಮೂರು ಮಂದಿ, ತಮ್ಮ ಸ್ನೇಹಿತರ ಶವಗಳೊಂದಿಗೇ ಒಂದೂವರೆ ದಿನ ಕಳೆದಿದ್ದರು!

ಅಷ್ಟು ದೂರ ಏಕೆ, ಕೆಲವು ವರ್ಷಗಳ ಹಿಂದೆ ಇದೇ ನಮ್ಮ ಕೊಪ್ಪ– ಶೃಂಗೇರಿ ರಸ್ತೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ದೊಡ್ಡ ಕುಟುಂಬವೊಂದು ದುರಂತ ಎದುರಿಸಿತ್ತು. ಮೊಮ್ಮಗುವನ್ನು ಎತ್ತಿಕೊಂಡು ಹಿರಿಯರೊಬ್ಬರು ಬಸ್‌ನಲ್ಲಿ ಮತ್ತೊಂದು ಕಡೆ ಕೂರಲು ಪ್ರಯತ್ನಿಸುತ್ತಿದ್ದರು. ಕಡಿದಾದ ತಿರುವೊಂದರಲ್ಲಿ ಬಸ್‌ ತಿರುಗಿದಾಗ ಆಯತಪ್ಪಿ ತೆರೆದೇ ಇದ್ದ ಬಾಗಿಲಿಂದ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟರು. ಅಜ್ಜ ತಬ್ಬಿ ಹಿಡಿದಿದ್ದ ಕಾರಣ ಮಗು ಬಚಾವಾಯಿತು. ಇಷ್ಟೆಲ್ಲ ದುರಂತಗಳು ನಡೆದರೂ ತಮಗೇನೂ ಆಗದು ಎಂಬ ಹುಂಬತನವೇ ಸಾವುಗಳಿಗೆ ಕಾರಣ.  

ಯಾವುದೇ ಪ್ರವಾಸ ಕೈಗೊಳ್ಳುವಾಗ ಸೂಕ್ತ ತಯಾರಿ ಅತ್ಯಗತ್ಯ. ಹೋಗುವುದಕ್ಕೂ ಮುನ್ನ ಅಲ್ಲಿನ ಹವಾಮಾನದ ಪರಿಸ್ಥಿತಿ ಹೇಗಿದೆ? ಹವಾಮಾನ ಇಲಾಖೆಯಿಂದ ಅಪಾಯದ ಮುನ್ನೆಚ್ಚರಿಕೆ ಏನಾದರೂ ಬಂದಿದೆಯೇ ಎಂಬುದನ್ನು ಗಮನಿಸಬೇಕು. ಚಳಿಯಿದ್ದರೆ ಸೂಕ್ತ ಉಡುಗೆ ತೊಡುಗೆ, ಎತ್ತರದ ಪ್ರದೇಶವಾದರೆ ಅದಕ್ಕೆ ಹೊಂದಿಕೊಳ್ಳಲು ಬೇಕಾದ ತರಬೇತಿ, ಹಿಮಪಾತದಂತಹ ಸಂಕಷ್ಟಗಳು ಎದುರಾದರೆ ಏನು ಮಾಡಬೇಕು ಎಂಬ ಪ್ರಾಥಮಿಕ ಮಾಹಿತಿ ಬಹಳ ಮುಖ್ಯ.

ಪ್ರವಾಸಿಗರು ತಮ್ಮ ಆರೋಗ್ಯ ತಪಾಸಣೆಯನ್ನು ತಪ್ಪದೇ ಮಾಡಿಸಿಕೊಳ್ಳಬೇಕು. ಸ್ಥಳೀಯ
ಮಾರ್ಗದರ್ಶಕರನ್ನು ಹೊಂದಿರುವುದು ಮತ್ತು ಅವರ ಮಾರ್ಗದರ್ಶನದಲ್ಲೇ ಚಾರಣ ಮಾಡುವುದೂ ಮುಖ್ಯವಾದ ಸಂಗತಿ. ಹಾಗೆಯೇ, ತಾವೆಲ್ಲಿ ಹೋಗುತ್ತೇವೆಂಬುದನ್ನು ಯುವಕರು ಯಾರಿಗಾದರೂ ಹೇಳಿ ಹೋಗಬೇಕು.

ಪ್ರವಾಸವೆಂಬುದು ನಮ್ಮ ಬದುಕಿನ ಅಚ್ಚಳಿಯದ ಸವಿನೆನಪಾಗಬೇಕೇ ವಿನಾ ದುಃಸ್ವಪ್ನ ಆಗಬಾರದು. ನಮ್ಮ ತಪ್ಪಿಗೆ ಕುಟುಂಬದವರು ಬೆಲೆ ತೆರುವಂತಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.