ADVERTISEMENT

ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

ರಾಜಕಾರಣಿ – ಧರ್ಮಗುರು ಎಸಗುವ ಅತ್ಯಾಚಾರದ ಹಿಂದೆ ಲೈಂಗಿಕ ಆಸೆಯಷ್ಟೇ ಇರುವುದಿಲ್ಲ. ಅದು ಅಧಿಕಾರ ಹಾಗೂ ಧರ್ಮದ ದುರುಪಯೋಗವೂ ಹೌದು.

ಶಿವಲಿಂಗಸ್ವಾಮಿ ಎಚ್.ಕೆ.
Published 7 ಜನವರಿ 2026, 23:31 IST
Last Updated 7 ಜನವರಿ 2026, 23:31 IST
<div class="paragraphs"><p>ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!</p></div>

ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

   

ಪ್ರಪಂಚದಲ್ಲಿ ಎಲ್ಲಿ ಅತ್ಯಾಚಾರ ಸಂಭವಿಸಿದರೂ ಅದನ್ನು ಸಾಮಾನ್ಯವಾಗಿ ಲೈಂಗಿಕ ಹಿಂಸೆಯ ಒಂದು ಕ್ಷಣಿಕ ಘಟನೆ ಎಂದು ಅರ್ಥೈಸಿ, ವಿಕೃತ ಮನಃಸ್ಥಿತಿಯ ವ್ಯಕ್ತಿಯಿಂದ ನಡೆದ ಅಚಾನಕ್ ಅಪರಾಧವೆಂದು ವಿವರಿಸಲಾಗುತ್ತದೆ. ಆದರೆ, ರಾಜಕಾರಣಿಗಳು ಅಥವಾ ಧಾರ್ಮಿಕ ನಾಯಕರು ಅತ್ಯಾಚಾರ ಎಸಗಿರುವ ಸಂದರ್ಭಗಳಲ್ಲಿ ಆ ಕೃತ್ಯಗಳನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಬಹಳಷ್ಟು
ಸಂದರ್ಭಗಳಲ್ಲಿ ಅತ್ಯಾಚಾರವು ಬರೀ ದೇಹದ ಮೇಲಿನದೌರ್ಜನ್ಯವಷ್ಟೇ ಆಗಿರುವುದಿಲ್ಲ ಮತ್ತು ಅತಿಕಾಮದ ಅಭಿವ್ಯಕ್ತಿ ಮಾತ್ರವಾಗಿರುವುದಿಲ್ಲ; ಬದಲಾಗಿ ಅದು ಸಂಬಂಧಪಟ್ಟ ವ್ಯಕ್ತಿಯ ಶಕ್ತಿ ಮತ್ತು ಅಧಿಕಾರದ ಬಹಿರಂಗ ಪ್ರದರ್ಶನ ಆಗಿರುತ್ತದೆ. ಈ ಕೃತ್ಯದ ಮೂಲಕ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಮತ್ತು ಸಮಾಜಕ್ಕೆ ಆತ ನೀಡುವ ಸಂದೇಶ: ನಾನು ಇದನ್ನು ನಿರ್ಭಯವಾಗಿ ಮಾಡಬಲ್ಲೆ, ನನಗೆ ಏನೂ ಆಗುವುದಿಲ್ಲ.

ಜೇಮ್ಸ್ ಮ್ಯಾಕ್ಸ್ವೇಲ್ ಕಟ್ಸಿ ಅವರ ಕಾದಂಬರಿ, ‘ಡಿಸ್‌ಗ್ರೇಸ್‌’ನಲ್ಲಿ ಮೂವರು ವ್ಯಕ್ತಿಗಳಿಂದ ಏಕಕಾಲಕ್ಕೆ ಅತ್ಯಾಚಾರಕ್ಕೊಳಗಾಗುವ ಲೂಸಿ ಎಂಬ ಹೆಣ್ಣುಮಗಳು, ಅತ್ಯಾಚಾರದ ವ್ಯಾಖ್ಯಾನವನ್ನು ಲೈಂಗಿಕ ಆಸೆಯ ಪರಿಧಿಯಿಂದ ಬೇರ್ಪಡಿಸಿ, ಅದನ್ನು ಮಹಿಳೆಯರ ಮೇಲೆ ಅಧಿಕಾರ ಸ್ಥಾಪನೆಯ ಮತ್ತು ದ್ವೇಷದ ಕ್ರಿಯೆ
ಯಾಗಿ ನಿರೂಪಿಸುತ್ತಾಳೆ. ಅಪರಿಚಿತ ಹೆಣ್ಣೊಬ್ಬಳ ಜೊತೆ ಲೈಂಗಿಕ ಸಂಪರ್ಕ ಸಾಧಿಸುವುದು ಕೊಲೆಯಿದ್ದಂತೆ ಎಂದು ವಾದಿಸುತ್ತಾಳೆ. ಚೂರಿಯನ್ನು ದೇಹದ ಒಳಗೆ ಚುಚ್ಚಿ, ರಕ್ತಸಿಕ್ತ ದೇಹವನ್ನು ನರಳಲು ಬಿಟ್ಟು ಕಾಲ್ತೆಗೆಯುವ ಕೊಲೆಗಾರನಂತೆಯೇ ಪ್ರತಿಯೊಬ್ಬ ಅತ್ಯಾಚಾರಿ ಎನ್ನುತ್ತಾಳೆ. ಲೂಸಿಗೆ ಅತ್ಯಾಚಾರವೆಂದರೆ, ಪೂರ್ಣಾಧಿಕಾರದ ಘೋಷಣೆ. ಆಕೆಯ ಪ್ರಕಾರ, ಅತ್ಯಾಚಾರಿಯ ಕಣ್ಣಲ್ಲಿ ಮಹಿಳೆಯ ದೇಹವು ಆಕ್ರಮಿಸಿ ತ್ಯಜಿಸಬಹುದಾದ ವಸ್ತು.

ADVERTISEMENT

ಅತ್ಯಾಚಾರವೆಸಗುವ ವ್ಯಕ್ತಿಗಳಲ್ಲಿ ಜನಪ್ರತಿನಿಧಿಗಳು ಮತ್ತು ಧರ್ಮಗುರುಗಳು ಇರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ. ಇದರಲ್ಲಿ, ದೇವಮಾನವ ಅಂದರೆ ಧಾರ್ಮಿಕ ಗುರುಗಳು ಮಾಡುವ ಅತ್ಯಾಚಾರವು ಅತ್ಯಂತ ಭೀಕರ ಅಪರಾಧ. ಇಲ್ಲಿ ಲೈಂಗಿಕ ಹಿಂಸೆಯು ಧರ್ಮ ಮತ್ತು ಆಧ್ಯಾತ್ಮಿಕತೆಯ ಮುಖವಾಡದ ಹಿಂದೆ ನಡೆಯುತ್ತದೆ. ಇಂತಹ ಕೃತ್ಯಗಳು ಅತ್ಯಾಚಾರಿಯ ವೈಯಕ್ತಿಕ ನೈತಿಕ ವೈಫಲ್ಯದಿಂದಷ್ಟೇ ಅಲ್ಲದೆ, ಅನುಯಾಯಿಗಳ ಮೌಢ್ಯದಿಂದಲೂ ಆಗುತ್ತವೆ. ಕೆಲ ಸಂದರ್ಭಗಳಲ್ಲಿ ಲೈಂಗಿಕ ಶೋಷಣೆಯನ್ನೇ ‘ಆಶೀರ್ವಾದ’, ‘ಚಿಕಿತ್ಸೆ’ ಎಂದು ನಂಬಿಸಲಾಗುತ್ತದೆ. ಧರ್ಮ ಗುರುಗಳೂ ಮನುಷ್ಯರು ಮತ್ತು ಅವರಿಗೂ ಲೈಂಗಿಕ ಆಸೆಗಳು ಇರುವುದು ಅಸಹಜವಲ್ಲ. ಆದರೆ, ಅವರು ಧಾರ್ಮಿಕ ಪರಿಭಾಷೆಯನ್ನು ದುರುಪಯೋಗಪಡಿಸಿಕೊಳ್ಳುವುದು, ತಮ್ಮ ಆಸೆಗಳನ್ನು ಮರೆಮಾಡಿ ಭಕ್ತರನ್ನು ಬಲಿಪಶುಗಳನ್ನಾಗಿ
ಮಾಡುವುದು ಶಿಕ್ಷಾರ್ಹ ಅಪರಾಧ.

ರಾಜಕಾರಣಿಗಳು ಅತ್ಯಾಚಾರ ನಡೆಸುವ ಸಂದರ್ಭಗಳಲ್ಲಿ ಅದು ಬರೀ ಲೈಂಗಿಕ ಅಪರಾಧವಾಗಿರದೆ, ಅಧಿಕಾರದಿಂದ ಬೆಂಬಲಿತವಾದ ಶಕ್ತಿಯ ಪ್ರದರ್ಶನವಾಗುತ್ತದೆ. ರಾಜಕಾರಣಿಗಳು ಸಾಮಾನ್ಯವಾಗಿ ಸಾಮಾಜಿಕ ಪ್ರತಿಷ್ಠೆ ಅನುಭವಿಸುತ್ತಿರುತ್ತಾರೆ ಮತ್ತು ಎಲ್ಲ ಸಾಮಾಜಿಕ ಸಂಸ್ಥೆಗಳ ಮೇಲೆ ತಮ್ಮ ನಿಯಂತ್ರಣ ಹೊಂದಿರುವುದರಿಂದ ತಾವು ಶಿಕ್ಷಾತೀತರು ಎಂಬ ಭಾವನೆ ಹೊಂದಿರುತ್ತಾರೆ. ಅಧಿಕಾರದ ನಶೆಯು ಅವರಲ್ಲಿ ‘ನಿಯಮಗಳು ಇತರರಿಗೆ ಮಾತ್ರ’ ಎಂಬ ಅಹಂಕಾರ ಹುಟ್ಟುಹಾಕುತ್ತದೆ. ಈ ಕಾರಣದಿಂದ ಬಲಿ
ಆದವರು ಭಯ, ಅಥವಾ ಸಾಮಾಜಿಕ ಒತ್ತಡಗಳಿಂದ ಮೌನ ವಾಗುತ್ತಾರೆ. ರಾಜಕೀಯ ಪ್ರಭಾವದ ಕಾರಣದಿಂದ ವ್ಯವಸ್ಥೆಯೂ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂಜರಿಯುತ್ತದೆ.

ಯುದ್ಧಗಳಲ್ಲಿ ಮತ್ತು ಕೋಮುಗಲಭೆಗಳಲ್ಲಿ ನಡೆಯುವ ಅತ್ಯಾಚಾರವು ಕೂಡ ಶಕ್ತಿ ಪ್ರದರ್ಶನದ ಆಯುಧವಾಗಿದೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರ ದೇಹಗಳನ್ನು ಶತ್ರು ಸಮುದಾಯದ ಮತ್ತು ಶತ್ರು ರಾಷ್ಟ್ರದ ಗೌರವದ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ. ಹೆಣ್ಣುಮಕ್ಕಳ ಅತ್ಯಾಚಾರದ ಮೂಲಕ ಭೀತಿಯನ್ನು ಹುಟ್ಟಿಸಿ, ಎದುರಿನ ಸಮುದಾಯದ ಮತ್ತು ರಾಷ್ಟ್ರದ ಮನೋಬಲವನ್ನು ಕುಗ್ಗಿಸು
ವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಕೃತ್ಯವು ಲೈಂಗಿಕ ಆಸೆಗಿಂತಲೂ, ಆಧಿಪತ್ಯವನ್ನು ಸ್ಥಾಪಿಸುವುದು, ಭಯವನ್ನು ಬಿತ್ತುವುದು ಮತ್ತು ಜಯವನ್ನು ಪ್ರದರ್ಶಿಸುವ ಉದ್ದೇಶಗಳಿಂದ ಹೆಚ್ಚು ಪ್ರೇರಿತವಾಗಿರುತ್ತದೆ.

ಧರ್ಮಗುರುಗಳು ಹಾಗೂ ರಾಜಕಾರಣಿಗಳು ಅತ್ಯಾಚಾರಗಳನ್ನು ಎಸಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಅತ್ಯಂತ ಸಹಜ ಸಂಗತಿ. ಇದಕ್ಕೆ ಕಾರಣ, ಅವರ ಅಪರಾಧಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎನ್ನುವುದಲ್ಲ. ಫ್ರೆಂಚ್ ಚಿಂತಕ ಮಿಷೆಲ್ ಫೂಕೋ ಹೇಳುವಂತೆ, ಇವರೆಲ್ಲ ಅಧಿಕಾರ ಮತ್ತು ಜ್ಞಾನದ ವ್ಯವಸ್ಥೆಗಳೊಳಗೆ ಕಾರ್ಯನಿರ್ವಹಿಸುತ್ತಿರುವುದು. ಅವರ ಅಧಿಕಾರವು ಸಾಂಸ್ಥಿಕವಾಗಿ ನಿರ್ಮಿತಗೊಂಡು ಸಮಾಜದೊಳಗೆ ಪ್ರಸರಣಗೊಂಡಿರುತ್ತದೆ. ದೇವಮಾನವರು ಧರ್ಮದ ಹೆಸರಿನಲ್ಲಿ ವಿಧೇಯತೆಯನ್ನು ಸೃಷ್ಟಿಸುತ್ತಾರೆ; ರಾಜಕಾರಣಿಗಳು ಕಾನೂನು ಮತ್ತು ಆಡಳಿತಾತ್ಮಕ ಪ್ರಭಾವವನ್ನು ಬಳಸುತ್ತಾರೆ.

ಅತ್ಯಾಚಾರದ ಮೂಲಕ ಅಧಿಕಾರದ ಶಕ್ತಿಯನ್ನು ಪ್ರದರ್ಶಿಸಿ ಬಲವಂತರು ಸಾಮಾನ್ಯ ಜನರನ್ನು ತ್ಯಾಜ್ಯವನ್ನಾಗಿಸುವಾಗ, ಜನಸಾಮಾನ್ಯರು ಸ್ವತಂತ್ರವಾಗಿ ನ್ಯಾಯವನ್ನು ಪಡೆಯಲು ಪ್ರಯತ್ನಿಸುವುದು ದುರಂತಗಳಲ್ಲಿ ಕೊನೆಗೊಳ್ಳುತ್ತದೆ. ಅಧಿಕಾರಕ್ಕೆ ಬಲಿಯಾದ ಜನರು ತಮ್ಮ ದೌರ್ಬಲ್ಯವನ್ನು ಸಾಮೂಹಿಕಗೊಳಿಸಬೇಕು ಮತ್ತು ತಮ್ಮ ವೇದನೆಯನ್ನು ರಾಜಕೀಯಗೊಳಿಸಬೇಕು. ವ್ಯಕ್ತಿಗಳು ಒಂಟಿಯಾಗಿ ಹೋರಾಟ ಮಾಡುವಾಗ ಅವರ ಖಾಸಗಿ ಆಘಾತವನ್ನು ಸಾರ್ವಜನಿಕ ಆಘಾತವಾಗಿ ಪರಿವರ್ತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.