ADVERTISEMENT

ಸಂಗತ | ಮೇಲರಿಮೆಯ ವ್ಯಾಧಿಗೆ ಮದ್ದುಂಟೇ?

ದೀಪಾ ಹಿರೇಗುತ್ತಿ
Published 10 ಜನವರಿ 2025, 23:30 IST
Last Updated 10 ಜನವರಿ 2025, 23:30 IST
   

ಹಲಸಿನ ಕಾಯಿ ಕೀಳಲು ತೋಟದ ಅಂಚಿನಲ್ಲಿದ್ದ ಮರ ಹತ್ತಿದ್ದ ಪರಿಶಿಷ್ಟ ಪಂಗಡದ ಯುವಕನೊಬ್ಬನನ್ನು
ತೋಟದ ಮಾಲೀಕ ಗುಂಡಿಕ್ಕಿ ಕೊಲೆ ಮಾಡಿದ ಸುದ್ದಿಯನ್ನು ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿ ಆಘಾತವಾಯಿತು. ಕೊಡಗಿನಲ್ಲಿ ಕೊಲೆಯಾದ ಈ ಇಪ್ಪತ್ಮೂರು ವರ್ಷದ ಹುಡುಗ, ಕೊಲೆ ಮಾಡಿದ ವ್ಯಕ್ತಿಗೆ ಅಪರಿಚಿತನೇನಲ್ಲ. ಆ ವ್ಯಕ್ತಿಯ ಸಂಬಂಧಿಕರ ತೋಟದಲ್ಲೇ ಯುವಕ ಕೆಲಸ ಮಾಡುತ್ತಿದ್ದುದು. ಹಾಗಿರುವಾಗ, ಸಾಂಬಾರು ಮಾಡಲು ಒಂದು ಕಾಯಿ ಕಿತ್ತಿದ್ದಕ್ಕೆ ಜೀವವನ್ನೇ ತೆಗೆಯುವ ಧಾರ್ಷ್ಟ್ಯ ಈ ಮಾಲೀಕನಿಗೆ ಬಂದಿದ್ದಾದರೂ ಹೇಗೆ?

ಉತ್ತರ ಭಾರತದ ಕಡೆಯಿಂದ ಕೇಳಿಬರುತ್ತಿದ್ದ ಇಂತಹ ನೀಚ ಕೃತ್ಯಗಳ ಸುದ್ದಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಕೂಡ ಸಾಮಾನ್ಯ ಆಗುತ್ತಿರುವುದು ತಲೆತಗ್ಗಿಸುವ ಸಂಗತಿ. ಅತ್ಯಂತ ಕ್ಷುಲ್ಲಕ ಎನ್ನುವ ಕಾರಣ ಗಳಿಗಾಗಿ ದಲಿತರನ್ನು ಸಾಯಿಸಿರುವ ಉದಾಹರಣೆಗಳು ಉತ್ತರ ಭಾರತದಲ್ಲಿ ಹೇರಳವಾಗಿ ಸಿಗುತ್ತವೆ. 2019ರಲ್ಲಿ ಮದುವೆಯೊಂದರಲ್ಲಿ ತಮ್ಮೆದುರು ಕುರ್ಚಿಯಲ್ಲಿ ಕುಳಿತು ಊಟ ಮಾಡಿದ ಎನ್ನುವ ಕಾರಣಕ್ಕೆ ಜಿತೇಂದ್ರ ಎಂಬ ಪರಿಶಿಷ್ಟ ಯುವಕನನ್ನು ಪ್ರಬಲ ಜಾತಿಯ ಗಂಡಸರು ಚೆನ್ನಾಗಿ ಹೊಡೆದರು. ಒಂಬತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಿ ಆ ಯುವಕ ತೀರಿಕೊಂಡ. ಸಾರ್ವಜನಿಕ ಕೆರೆಯಲ್ಲಿ ಸ್ನಾನ ಮಾಡಿದ್ದಕ್ಕೆ ಒಡಿಶಾದಲ್ಲಿ, ಅಂಬೇಡ್ಕರ್‌ ಜಯಂತಿ ಆಚರಿಸಿದ್ದಕ್ಕೆ ಮಹಾರಾಷ್ಟ್ರ ದಲ್ಲಿ, ಒಳ್ಳೆಯ ಬಟ್ಟೆ ಧರಿಸಿದ್ದಕ್ಕೆ ಗುಜರಾತಿನಲ್ಲಿ, ಪ್ರಬಲ ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ಉತ್ತರಾಖಂಡದಲ್ಲಿ... ಬರೆಯುತ್ತಾ ಹೋದರೆ ಇಂತಹ ಕಾರಣಗಳಿಗೆ ಬಲಿಯಾದ ಬಡಪಾಯಿಗಳ ಉದಾಹರಣೆಗಳನ್ನು ಪುಟಗಟ್ಟಲೆ ಕೊಡಬಹುದು.

ಜಿತೇಂದ್ರನ ಪ್ರಕರಣದಲ್ಲಂತೂ ಮದುವೆಗೆ ಸೇರಿದ್ದ ನೂರಾರು ಜನರಲ್ಲಿ ಯಾರೊಬ್ಬರೂ ಅಂದು ಏನಾಯಿತೆಂದು ಹೇಳಲು ತಯಾರಿರಲಿಲ್ಲ! ಮದುವೆ ದಲಿತ ಯುವಕನದ್ದೇ ಆಗಿತ್ತು. ಸೇರಿದ್ದ ಜನರಲ್ಲಿ ಎಲ್ಲ ಜಾತಿಯವರೂ ಇದ್ದರು. ಬೇರೆಯವರು ದಲಿತರು ಮಾಡಿದ ಅಡುಗೆ ಮುಟ್ಟದ ಕಾರಣ ಪ್ರಬಲ ಜಾತಿಯವರಿಂದಲೇ ಅಡುಗೆ ಮಾಡಿಸಲಾಗಿತ್ತು ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ನಮ್ಮ ಊರು
ಗಳಲ್ಲಿ ಸಹ ಮದುವೆಗೆ ಕರೆಯಲು ಬರುವವರು, ಅಡುಗೆಯನ್ನು ಇಂಥವರಿಂದ ಮಾಡಿಸಲಾಗುತ್ತದೆ ಎಂದು ಪ್ರಬಲ ಜಾತಿಗೆ ಸೇರಿದ ಅಡುಗೆಯವರ ಹೆಸರನ್ನೇ ಹೇಳಿ ಮದುವೆಗೆ ಕರೆಯುವ ಪರಿಪಾಟ ಇದೆ. ಇದರಿಂದ ಈ ಜಾತಿಯ ಶ್ರೇಣಿ ವ್ಯವಸ್ಥೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಆಳವಾಗಿ ಬೇರೂರಿಬಿಟ್ಟಿದೆ ಎಂಬುದು ಅರಿವಾಗುತ್ತದೆ.

ADVERTISEMENT

ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳೇ ಕಳೆದರೂ ಎಂಥೆಂಥ ಮಹಾನುಭಾವರು ಜಾತಿವಿನಾಶಕ್ಕೆ ಶ್ರಮಿಸಿದರೂ ಜಾತಿ ನಾಶವಾಗುವುದು ಒತ್ತಟ್ಟಿಗಿರಲಿ, ದಿನಗಳೆದಂತೆ ನಾವು ಹೆಚ್ಚುಹೆಚ್ಚು ಜಾತಿವಾದಿಗಳಾಗುತ್ತಿರುವುದು ಒಂದು ವ್ಯಂಗ್ಯ. ಮತ್ತೂ ಭಯಾನಕವಾದ ವ್ಯಂಗ್ಯವೆಂದರೆ, ಯಾವ ಸಂವಿಧಾನವು ಸಮಾನವಾಗಿ ಬದುಕುವ ಹಕ್ಕುಗಳನ್ನು ಪರಿಶಿಷ್ಟರಿಗೆ ಕೊಟ್ಟಿದೆಯೋ ಅದೇ ಸಂವಿಧಾನದ ತತ್ವಗಳ ಪ್ರಕಾರ ಬದುಕಲು ಮುಂದಾಗುವ ಪರಿಶಿಷ್ಟರನ್ನು ಸಮಾಜ ಕೆಂಗಣ್ಣಿನಿಂದ
ನೋಡುತ್ತದೆ. ಅಷ್ಟೇ ಅಲ್ಲ, ಇತರರ ಜತೆ ಸಮಾನವಾಗಿ ಗುರುತಿಸಿಕೊಳ್ಳುವ ಆಸೆಯಿಂದ ಪರಿಶಿಷ್ಟರು ಕಾನೂನು ಬದ್ಧವಾಗಿಯೇ ಮಾಡುವ ಕೆಲಸಗಳೂ ಅವರ ಪ್ರಾಣವನ್ನೇ ತೆಗೆಯುತ್ತವೆಂದರೆ ಅದಕ್ಕಿಂತ ದುರದೃಷ್ಟ ಮತ್ತೊಂದಿಲ್ಲ.

ತಮ್ಮ ತಮ್ಮ ಹಕ್ಕುಗಳ ಸ್ಥಾಪನೆಗೆ ಸದಾ ಮುಂದಾ ಗುವ ಜನ, ಸಾಮಾಜಿಕವಾಗಿ ತಮಗಿಂತ ಕೆಳಗಿನ ಶ್ರೇಣಿಯಲ್ಲಿ ಇರುವವರು ಆ ಕೆಲಸ ಮಾಡಿದ ಕೂಡಲೇ ಸಿಟ್ಟಿಗೇಳುತ್ತಾರೆ. ಕೊಡಗಿನಲ್ಲಿ ಆಗಿದ್ದು ಅದೇ! ಬಡವನಾದ ಈ ಕೂಲಿ ಕೆಲಸದವನೇನು ತನ್ನ ಮರ ಹತ್ತುವುದು ಎಂಬ ಕೋಪ. ಅದೇ ತನ್ನ ಸಂಬಂಧಿ ಯಾಗಿದ್ದರೆ ಗುಂಡಿಕ್ಕುತ್ತಿದ್ದನೇ? ಖಂಡಿತ ಇಲ್ಲ.

ಬೇರೆಯವರನ್ನು ಕೀಳಾಗಿಸಿ ತಾವು ದೊಡ್ಡವರೆನಿಸಿಕೊಳ್ಳುವ ಸುಲಭ ಮಾರ್ಗ ಕೈತಪ್ಪಿ ಹೋಗುತ್ತಿರುವುದೇ ಈ ಎಲ್ಲ ಅಸಹನೆಗೆ ಕಾರಣ. ಹೆಣ್ಣನ್ನು ಕೀಳಾಗಿಸಿ ಗಂಡು, ಕೆಲವು ಜಾತಿಯವರನ್ನು ಕೀಳಾಗಿಸಿ ಮತ್ತೆ ಕೆಲವು ಜಾತಿಯವರು ಸುಲಭವಾಗಿ ‘ಶ್ರೇಷ್ಠ’ರಾಗಿಬಿಡುತ್ತಿದ್ದರು. ಆದರೀಗ ಸಂವಿಧಾನ ತಂದಿತ್ತ ಅವಕಾಶಗಳಿಂದ, ಸಾಧನೆ ಮಾಡುವವರೆಲ್ಲರೂ ಶ್ರೇಷ್ಠರಾಗಬಹುದು. ಆದರೆ ತಲೆತಲಾಂತರಗಳಿಂದ ಮೆದುಳಿನ ಆಳದಲ್ಲಿದ್ದ ಶ್ರೇಷ್ಠತೆಯ ಅಹಂಕಾರ ಗಾಸಿಗೊಂಡಾಗ ಈ ರೀತಿಯ ಅಪರಾಧಗಳು ಘಟಿಸುತ್ತವೆ.

ಸಾಂಸ್ಕೃತಿಕ ಆಚರಣೆ ಎಂದೆಲ್ಲ ದೊಡ್ಡ ದೊಡ್ಡ ಪದಗಳಿಂದ ಕರೆಸಿಕೊಳ್ಳುವ ಈ ಜಾತಿ ಪದ್ಧತಿಯು ನಿಜವಾಗಿ ನೋಡಿದರೆ ಒಂದು ದುಷ್ಟ ವ್ಯವಸ್ಥೆ. ವೇದವನ್ನು ಕೇಳುವ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕೆಂಬ ಮತ್ತು ವೇದ ಪಠಣ ಮಾಡುವ ಶೂದ್ರನ ನಾಲಿಗೆಯನ್ನು ಕತ್ತರಿಸಬೇಕೆಂದು ಹೇಳಿದ ಮನುಸ್ಮೃತಿಯ ಆಶಯ ಇಂದು ಬೇರೆಬೇರೆ ರೂಪದಲ್ಲಿ ಆಚರಣೆಗೆ ಬರುತ್ತಿದೆ. ಕುದುರೆ ಮೇಲೆ ಕೂತ ದಲಿತನ ಕೊಲೆ, ಮೀಸೆ ಬಿಟ್ಟ ದಲಿತನ ಕೊಲೆ ಇವೆಲ್ಲ ಆ ಆಚರಣೆಯ ಮುಂದುವರಿದ ಭಾಗಗಳಷ್ಟೇ. ಅಷ್ಟೇ ಅಲ್ಲ, ಜಾತಿಯ ಅವಮಾನವನ್ನು ಎದುರಿಸಲಾಗದೇ ಆತ್ಮಹತ್ಯೆಗೆ ಶರಣಾಗುವ ವೇಮುಲರಂತಹ ವಿದ್ಯಾರ್ಥಿ ಗಳ ಸಾವು ಕೂಡ ಜಾತಿಯಿಂದಾದ ಕೊಲೆಯೆ!

ಉಸಿರಾಡಲಾಗುತ್ತಿಲ್ಲ ಎಂದು ಅಂಗಲಾಚಿದರೂ ಬಿಡದೇ ಉಸಿರುಗಟ್ಟಿಸಿ, ಕಪ್ಪುವರ್ಣೀಯನಾದ ಜಾರ್ಜ್‌ ಫ್ಲಾಯ್ಡ್‌ನನ್ನು ಕೊಂದ ಅಮೆರಿಕದ ಪೊಲೀಸ್‌ ಕೂಡ ಈ ಅಹಂಕಾರಿ ಮೇಲರಿಮೆಗೆ ಉದಾಹರಣೆ. ಈ
ಮೇಲರಿಮೆಯನ್ನು ಕಾಪಿಡಲು ಕ್ರೌರ್ಯವನ್ನು ಬಳಸುತ್ತಿ ರುವುದು ಶತಶತಮಾನಗಳಿಂದ ನಡೆದುಕೊಂಡು ಬಂದಿ ರುವ ಅನಿಷ್ಟ ಪದ್ಧತಿ. ಈ ನೀಚ ಪ್ರವೃತ್ತಿ ಕೊನೆಯಾಗಲು ಇನ್ನೆಷ್ಟು ಮುಗ್ಧ ಜೀವಗಳು ಬಲಿಯಾಗಬೇಕೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.