ADVERTISEMENT

ಸಂಗತ | ಆಹಾರಶೈಲಿ ಬದಲಾಗಬೇಕಾದ ಹೊತ್ತು

ಡಾ.ಮುರಳೀಧರ ಕಿರಣಕೆರೆ
Published 9 ಜನವರಿ 2025, 23:30 IST
Last Updated 9 ಜನವರಿ 2025, 23:30 IST
   

ಮಾತಿಗೆ ಸಿಕ್ಕಿದ ಪರಿಚಿತ ಹಿರಿಯರೊಬ್ಬರು ಅಲವತ್ತುಕೊಂಡರು- ‘ಈ ಮದ್ವೆಮನೆಗಳಲ್ಲಿ ಮಧ್ಯಾಹ್ನ ಚೆನ್ನಾಗಿ ಊಟ ಮಾಡಿ ಬಂದ್ರೂ ಸಂಜೆ ಹೊತ್ತಿಗೆ ಮತ್ತೆ ಹೊಟ್ಟೆ ಹಸಿಯಲು ಆರಂಭವಾಗುತ್ತೆ. ರಾತ್ರಿ ಹೊತ್ತೂ ಹೀಗೆ, ಯಾವ್ದಾದ್ರು ಕಾರ್ಯಕ್ರಮದಲ್ಲಿ ಊಟ ಮಾಡಿ ಬಂದ್ರೆ ಮಧ್ಯರಾತ್ರಿ ಹಸಿವಾಗಿ ಎಚ್ಚರ ಆಗ್ಬಿಡುತ್ತೆ. ಆದ್ರೆ ಮನೇಲೆ ಇದ್ದಾಗ ಹೀಗಾಗಲ್ಲ, ಫಂಕ್ಷನ್‌ಗಳಲ್ಲಿ ತಿಂದು ಬಂದಾಗ ಮಾತ್ರ ಈ ಸಮಸ್ಯೆ. ಅದ್ಕೆ ಈಗೆಲ್ಲಾ ಫಂಕ್ಷನ್‌ಗಳಿಗೆ ಜಾಸ್ತಿ ಹೋಗಲ್ಲ. ಹೋದ್ರೆ ಇದೇ ಫಜೀತಿ. ಹಂಗಂತ ತುಂಬಾ ಹತ್ರದವರು, ನೆಂಟರಿಷ್ಟರು ಮನೆಗೇ ಬಂದು ಒತ್ತಾಯದಿಂದ ಕರೆದುಹೋದಾಗ ಹೋಗ್ದೇ ಇರಕ್ಕೂ ಆಗಲ್ಲ. ಡಯಾಬಿಟಿಸ್‌ ಕಂಟ್ರೋಲ್‌ ಮಾಡೋದೇ ತುಂಬಾ ಕಷ್ಟ ಆಗ್ಬಿಟ್ಟಿದೆ’. ಆ ಹಿರಿಯರ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

‘ಅಲ್ಲೆಲ್ಲಾ ತುಂಬಾ ಸ್ವೀಟ್ಸ್‌ ತಿಂತೀರೇನೊ, ಅದಕ್ಕೇ ಈ ಥರದ ಸಮಸ್ಯೆ. ಅದರ ಬದ್ಲು ಪಲ್ಯ, ಕೋಸಂಬರಿ, ಸಲಾಡು ಜಾಸ್ತಿ ತಿನ್ನಿ. ಅನ್ನನೂ ಹೆಚ್ಗೆ ಬೇಡ. ಆಗ ನಿಮ್‌ ತೊಂದ್ರೆ ಕಡಿಮೆ ಆಗುತ್ತೆ ನೋಡಿ’ ಎನ್ನುತ್ತಾ ಅವರನ್ನು ಸಮಾಧಾನಪಡಿಸಿದೆ.

‘ಅಯ್ಯೋ ಬಿಡಿ ಡಾಕ್ಟ್ರೇ, ಈಗ ಫಂಕ್ಷನ್‌ಗಳಲ್ಲಿ ಪಲ್ಯ, ಕೋಸಂಬರಿಗೆಲ್ಲಾ ಜಾಗ ಎಲ್ಲಿದೆ? ಮಾಡಿದ್ರೂ ಚಮಚದ ಲೆಕ್ಕದಲ್ಲಿ ಬಡಿಸ್ತಾರೆ. ಬೇಕಾ ಅಂತ ಮತ್ತೊಮ್ಮೆ ಕೇಳೋದೇ ಇಲ್ಲ. ಹಂಗಾಗಿ, ಹೊಟ್ಟೆ ತುಂಬಬೇಕು ಅಂದ್ರೆ ಅನ್ನ ಜಾಸ್ತಿ ಉಣ್ಣಲೇಬೇಕು’ ಎನ್ನುತ್ತಾ ನಿಟ್ಟುಸಿರುಬಿಟ್ಟರು!

ADVERTISEMENT

ಹೌದು, ಆ ಹಿರಿಯರು ಹೇಳಿದ್ದು ತುಂಬಾ ಗಂಭೀರವಾದ ವಿಚಾರವೆ. ಹಿಂದಿನ ಸಾಂಪ್ರದಾಯಿಕ ಊಟದ ಮನೆಗಳಿಗಿಂತ ಸಂಪೂರ್ಣ ಭಿನ್ನವಾಗಿರುವ ಇಂದಿನ ಭೋಜನಕೂಟಗಳು, ಪಾರ್ಟಿಗಳು ಆರೋಗ್ಯ ಕೆಡಿಸುತ್ತಿರುವುದು ವಾಸ್ತವ ಸಂಗತಿ. ಈಗಿನ ಕಾರ್ಯಕ್ರಮಗಳಲ್ಲಿ ಆರೋಗ್ಯಕಾರಿ ಊಟೋಪಚಾರದ ಮೂಲಕ ಅತಿಥಿಗಳನ್ನು ತೃಪ್ತಿಪಡಿಸುವುದು ಆದ್ಯತೆಯಾಗಿ ಉಳಿದಿಲ್ಲ. ಏನಿದ್ದರೂ ಬಗೆ ಬಗೆಯ, ಚಿತ್ರವಿಚಿತ್ರ ತಿನಿಸು, ಭಕ್ಷ್ಯಗಳನ್ನು ಉಣಬಡಿಸಿ ತಮ್ಮ ಪ್ರತಿಷ್ಠೆ ಪ್ರದರ್ಶಿಸುವುದಕ್ಕಷ್ಟೇ ಪೂರ್ಣ ಗಮನ. ಎಷ್ಟು ತರಹದ ಸಿಹಿ ತಿನಿಸುಗಳಿದ್ದವು, ಏನೇನು ಉಡುಗೊರೆ ಕೊಟ್ಟರು ಎಂಬುದಕ್ಕೇ ಹೆಚ್ಚು ಪ್ರಾಮುಖ್ಯ!

ಹಿಂದಿನ ಆ ಪಾರಂಪರಿಕ ಆಹಾರ, ಬಡಿಸುವ ಪದ್ಧತಿ ಆರೋಗ್ಯಕ್ಕೆ ಪೂರಕವಾಗಿದ್ದವು. ಊಟದ ಮನೆ ಯಾವುದೇ ಆಗಿರಲಿ, ಮೂರ್ನಾಲ್ಕು ವಿಧದ ಪಲ್ಯಗಳು, ಕೋಸಂಬರಿ, ಗೊಜ್ಜು ಕಡ್ಡಾಯವಾಗಿ ಇರುತ್ತಿದ್ದವು. ಇವುಗಳನ್ನು ಒಮ್ಮೆ ಬಡಿಸಿದ ನಂತರ ಪುನಃ ವಿಚಾರಿಸಲು ಬರುತ್ತಿದ್ದರು. ಹೊಟ್ಟೆ ಬಹುತೇಕ ತುಂಬಿದ ಮೇಲೆ ಕೊನೆಯಲ್ಲಷ್ಟೇ ಸಿಹಿಭಕ್ಷ್ಯಗಳ ಸರದಿ. ಅವೂ ಒಂದೋ ಎರಡೋ ಅಷ್ಟೆ. ಹಾಗಾಗಿ, ಊಟ ಮಾಡಿದ ನಂತರ ನಿಜಕ್ಕೂ ಹೊಟ್ಟೆ ತುಂಬಿದ ಸಂತೃಪ್ತಿ ಸಿಗುತ್ತಿತ್ತು.

ಆರೋಗ್ಯಕ್ಕೂ ಈ ಪರಿಯ ಊಟ ಹಿತಕರವಾಗಿ ಇರುತ್ತಿತ್ತು. ಆದರೆ ಈಗಿನ ಊಟ, ತಿಂಡಿಯಲ್ಲಿ ಹಿತಕ್ಕಿಂತ ಬಾಯಿರುಚಿಗೆ ಪ್ರಾಧಾನ್ಯ. ಸಿಹಿಯು ನಾರಿನಾಂಶವನ್ನು ನುಂಗುವುದರ ಜೊತೆಗೆ ಆರೋಗ್ಯವನ್ನೂ ನುಂಗುತ್ತಿದೆ!

ನಾರು (ಫೈಬರ್) ಎಂಬುದು ಆಹಾರದಲ್ಲಿ ಅತ್ಯಗತ್ಯವಾಗಿ ಇರಬೇಕಾದ ಅಂಶ. ಇದು ಸೊಪ್ಪು, ತರಕಾರಿ, ಹಣ್ಣು ಹಂಪಲು, ಇಡೀ ಧಾನ್ಯ, ಬೇಳೆ, ಕಾಳುಗಳು, ಸಿರಿಧಾನ್ಯಗಳಲ್ಲಿ ಹೆಚ್ಚಾಗಿ ಇರುತ್ತದೆ. ತಿನ್ನುವ ಆಹಾರದಲ್ಲಿ ಈ ನಾರಿನಾಂಶ ಅಧಿಕವಾಗಿದ್ದಾಗ ಮಾತ್ರ ಬೇಗನೆ ಹೊಟ್ಟೆ ತುಂಬಿದ ಅನುಭವವಾಗಿ ತೃಪ್ತಿಯ ಭಾವನೆ ಮೂಡುತ್ತದೆ. ಆಗ ಅನ್ನ ಇಲ್ಲವೇ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಕೆನಿಸುವುದಿಲ್ಲ. ನಮ್ಮ ಆರೋಗ್ಯದ ಗುಟ್ಟು ಇರುವುದು ಇಲ್ಲೇ.

ಶರ್ಕರಪಿಷ್ಟ ಹೆಚ್ಚಿರುವ, ನಾರಿನಾಂಶ ತೀರಾ ಕಡಿಮೆಯಿರುವ ಸಿಹಿತಿನಿಸುಗಳು, ಅನ್ನದಂತಹ ಆಹಾರ ತ್ವರಿತವಾಗಿ ಜೀರ್ಣವಾಗುವುದರ ಜೊತೆಗೆ ಇವುಗಳಲ್ಲಿರುವ ಸಕ್ಕರೆ ಅಂಶವು ಹಸಿವನ್ನು ನಿಯಂತ್ರಿಸುವ ರಸದೂತಗಳ ಸಮತೋಲನ ತಪ್ಪಿಸಿ, ಮೆದುಳಿನಲ್ಲಿನ ಸಂಬಂಧಿಸಿದ ಕೇಂದ್ರಗಳನ್ನು ಪ್ರಚೋದಿಸುವುದರಿಂದ ಬೇಗ ಹಸಿವು ಕಾಡಲಾರಂಭಿಸುತ್ತದೆ.

ಮಧುಮೇಹಿಗಳಲ್ಲಂತೂ ಈ ಸಮಸ್ಯೆ ಮತ್ತಷ್ಟು ಹೆಚ್ಚು. ಹಾಗಾಗಿ, ಅವರಿಗೆ ಹಸಿವೂ ಜಾಸ್ತಿ, ಅದನ್ನು ತಣಿಸಲು ಸಿಹಿ ತಿನ್ನಬೇಕೆಂಬ ಕಡುಬಯಕೆಯೂ ತೀವ್ರ. ಇದಕ್ಕೆಲ್ಲಾ ಪರಿಹಾರ ಇರುವುದು ನಾರಿನ ಪದಾರ್ಥ
ಗಳಲ್ಲಿ ಮಾತ್ರ.

ಆಹಾರದಲ್ಲಿ ನಾರು ಹೆಚ್ಚಿದ್ದಾಗ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ. ಕರುಳಿನಲ್ಲಿ ಸಕ್ಕರೆಯ ಅಂಶ ನಿಧಾನವಾಗಿ ಹೀರಲ್ಪಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಕಾಯ್ದುಕೊಳ್ಳುವಲ್ಲಿ ಇದು ಸಹಕಾರಿ. ಇದರಿಂದ ಬೇಗ ಹಸಿವೂ ಆಗದು, ಮತ್ತೆ ಮತ್ತೆ ತಿನ್ನಬೇಕೆಂಬ ಬಯಕೆಯೂ ಕಾಡದು. ಕರುಳಿನ ಸುಗಮ ಚಲನೆಯಿಂದ ಮಲಬದ್ಧತೆ ಉಂಟಾಗದು. ಆಗ ಕರುಳಿನ ಕ್ಯಾನ್ಸರ್‌ನಂತಹ ತೊಂದರೆಗಳು ತಪ್ಪುತ್ತವೆ. ಜೊತೆಗೆ ಜೀರ್ಣಕ್ರಿಯೆಯಲ್ಲಿ ಸಹಕರಿಸುವ ಕರುಳಿನ ಉಪಯುಕ್ತ ಬ್ಯಾಕ್ಟೀರಿಯಾ, ಯೀಸ್ಟ್‌ಗಳಿಗೆ ಈ ನಾರೇ ಆಹಾರ. ಹಾಗಾಗಿ, ನಾವು ತಿನ್ನುವ ಆಹಾರದಲ್ಲಿ ನಾರಿನಾಂಶ ಅಗತ್ಯ ಪ್ರಮಾಣದಲ್ಲಿ ಇರಲೇಬೇಕು.

ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯು, ಬೊಜ್ಜು, ಸಂಧಿವಾತ, ಕೊಲೆಸ್ಟರಾಲ್‌ ತೊಂದರೆ, ಹೃದಯ ಸಂಬಂಧಿ ಸಮಸ್ಯೆಗಳು ಆತಂಕಕಾರಿಯಾಗಿ ಏರುತ್ತಿರುವ ಈ ಹೊತ್ತಿನಲ್ಲಿ, ಊಟದ ಮನೆಯ ಎಲೆಯಲ್ಲಿನ ಬಗೆಗಳನ್ನು ಪ್ರಜ್ಞಾಪೂರ್ವಕವಾಗಿ ಬದಲಿಸಿಕೊಳ್ಳಬೇಕಾದ ತುರ್ತಿದೆ. ಆಹಾರಶೈಲಿಯಲ್ಲಿ ಬದಲಾವಣೆ ಆಗದಿದ್ದರೆ ಆರೋಗ್ಯ ಹದಗೆಡುವುದು ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.