ಪ್ರತಿವರ್ಷ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಹೊರಬಿದ್ದಾಗ ಪ್ರತಿ ಜಿಲ್ಲೆಯೂ ತನ್ನ ಪಾಲಿನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅದರ ಜೊತೆಗೆ ‘ಆ ಜಿಲ್ಲೆ ಯಾಕೆ ಹಾಗೆ?’ ‘ಈ ಜಿಲ್ಲೆ ಯಾಕೆ ಅಷ್ಟು ಕೆಳಗಿನ ಸ್ಥಾನದಲ್ಲಿದೆ?’ ಎಂಬಂತಹ ಚರ್ಚೆಗಳೂ ಶುರುವಾಗುತ್ತವೆ. ಇಂತಹ ಚರ್ಚೆಗಳು ನಡೆಯುವಾಗಲೆಲ್ಲಾ ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣವೊಂದು ನೆನಪಾಗುತ್ತದೆ.
ನಮ್ಮ ಮನೆಯ ಬೀದಿಯ ಅಂಚಿನಲ್ಲಿ, ಎಂಟನೇ ತರಗತಿಯಲ್ಲಿ ಪರಸ್ಪರ ಪೈಪೋಟಿಯಿಂದ ತುಂಬಾ ಚೆನ್ನಾಗಿ ಓದುತ್ತಿದ್ದ ಇಬ್ಬರು ಮಕ್ಕಳಿದ್ದರು. ಎಂಟನೇ ತರಗತಿ ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಒಬ್ಬ ಹುಡುಗನ ತಂದೆ ತೀರಿಹೋದರು. ಮನೆಯಲ್ಲಿ ಬಡತನ. ಅವನ ತಾಯಿ ಮಗುವಿನ ಶಾಲೆ ಬದಲಿಸಿದರು. ಈ ಹುಡುಗ ಆಗಾಗ ರಜೆಯಲ್ಲಿ ಸಣ್ಣಪುಟ್ಟ ಕೆಲಸಕ್ಕೂ ಹೋಗಲು ಶುರು ಮಾಡಿದ. ಎಸ್‌ಎಸ್‌ಎಲ್‌ಸಿಯಲ್ಲಿ ಇವನು ತನಗೆ ಪೈಪೋಟಿ ಒಡ್ಡುತ್ತಿದ್ದ ಗೆಳೆಯನಿಗಿಂತ 210 ಕಡಿಮೆ ಅಂಕಗಳನ್ನು ತೆಗೆದುಕೊಂಡ. ಎಲ್ಲವೂ ಸರಿ ಇದ್ದಿದ್ದರೆ ಬಹುಶಃ ಇವನೂ ಅವನಷ್ಟೇ ಅಥವಾ ಅವನಿಗಿಂತ ಹೆಚ್ಚೇ ಅಂಕಗಳನ್ನು ತೆಗೆಯುತ್ತಿದ್ದನೇನೊ.
ಬಡತನ ಒಂದು ನೆಪ ಅಷ್ಟೇ, ಆ ಹುಡುಗ ಓದಬಹುದಿತ್ತು, ಎಷ್ಟು ಜನ ಓದಿಲ್ಲ ಹೇಳಿ ಎಂದು ಕೆಲವರು ಮಾತನಾಡಬಹುದು. ಒಂದು ತಾಲ್ಲೂಕಿನಲ್ಲಿ ಒಬ್ಬ ಬಡ ಹುಡುಗ ಹೇಗೋ ಕಷ್ಟಪಟ್ಟು ಓದಿ ಮೆಡಿಕಲ್ ಸೀಟ್ ತೆಗೆದುಕೊಂಡ ಅಂದಮಾತ್ರಕ್ಕೆ ಎಲ್ಲ ಬಡ ಮಕ್ಕಳೂ ಹೀಗೇ ಓದಿಬಿಡಬಹುದು ಎಂಬ ನಿರ್ಧಾರಕ್ಕೆ ಬರಬಾರದು. ಅದೇ ತಾಲ್ಲೂಕಿನಲ್ಲಿ ಎಲ್ಲಾ ಸವಲತ್ತು ಪಡೆದು ಓದಿದ ಹತ್ತಾರು ಹುಡುಗರು ಆ ಸೀಟ್‌ಗಳನ್ನು ಗಿಟ್ಟಿಸಿಕೊಂಡಿರುತ್ತಾರೆ.
ಸ್ಥಾನವಾರು ಪಟ್ಟಿಯಲ್ಲಿ ಮೇಲಿರುವ ಕೆಲವು ಜಿಲ್ಲೆಗಳಲ್ಲಿ ಎಲ್ಲವೂ ಸರಿಯಿರುತ್ತವೆ ಮತ್ತು ಕೊನೆಯಲ್ಲಿರುವ ಕೆಲವು ಜಿಲ್ಲೆಗಳಲ್ಲಿ ಎಲ್ಲವೂ ಸರಿ ಇರುವುದಿಲ್ಲವೇ? ಅಲ್ಲಿ ಬುದ್ಧಿವಂತ ಮಕ್ಕಳಿದ್ದಾರೆ, ಇಲ್ಲಿ ದಡ್ಡ ಮಕ್ಕಳಿದ್ದಾರೆ, ಅಲ್ಲಿ ಬೋಧಿಸಲು ಉತ್ತಮ ಶಿಕ್ಷಕರಿದ್ದಾರೆ, ಇಲ್ಲಿ ಇಲ್ಲ, ಅಲ್ಲಿನ ಅಧಿಕಾರಿಗಳು ದಕ್ಷರು, ಇಲ್ಲಿನವರು ಅಲ್ಲ ಎಂಬಂತಹ ಅರ್ಥ ಬರುತ್ತದೆಯೇ? ಯಾವುದೇ ಜಿಲ್ಲೆ ಆಗಿರಲಿ, ಯಾವ ಮಗು ತಾನು ಫೇಲಾಗಬೇಕು ಎಂದುಕೊಂಡು ಶಾಲೆಗೆ ಬರುತ್ತದೆ? ಫಲಿತಾಂಶದ ಮೇಲೇ ಶಿಕ್ಷಕನ ದಕ್ಷತೆಯನ್ನು ಅಳೆಯುತ್ತಿರುವ ಈ ಸಂದರ್ಭದಲ್ಲಿ, ಯಾವ ಶಿಕ್ಷಕ ತಾನೆ ಸುಮ್ಮನೆ ಕೂರುತ್ತಾನೆ? ಯಾವ ಅಧಿಕಾರಿಗೆ ತನ್ನ ಜಿಲ್ಲೆಯ ಫಲಿತಾಂಶ ಹೇಗೆ ಬಂದರೂ ನಡೆಯುತ್ತದೆ ಎಂಬ ಇರಾದೆ ಇರುತ್ತದೆ? ಇವೆಲ್ಲದರ ಹೊರತಾಗಿಯೂ ಬೇರೆ ಏನೋ ಕಾರಣ ಇರಬಹುದು ಎಂದು ನಾವು ಚಿಂತಿಸಬೇಕಿದೆ.
ಪಟ್ಟಿಯಲ್ಲಿ ಕೊನೆಯಲ್ಲಿರುವ ಜಿಲ್ಲೆಗಳ ಆರ್ಥಿಕ ಸ್ಥಿತಿಗತಿಯನ್ನು ಅವಲೋಕಿಸಬೇಕಾಗುತ್ತದೆ. ಅಲ್ಲಿನ ಜನರ ಬಡತನವು ಮಕ್ಕಳ ಶಿಕ್ಷಣದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಊಟವೇ, ಅಕ್ಷರವೇ ಎನ್ನುವ ಪ್ರಶ್ನೆ ಬಂದಾಗ, ಪೋಷಕರು ಅನ್ನದ ಕಡೆ ಗಮನ ಕೊಡುತ್ತಾರೆ. ಅದು ಸಹಜ ಕೂಡ. ಯಾವ ಜಿಲ್ಲೆಯಲ್ಲಿ ಫಲಿತಾಂಶ ಕಡಿಮೆ ಇದೆಯೋ ಅಲ್ಲಿನ ಸಾಕ್ಷರತೆಯ ಪ್ರಮಾಣವೂ ಕಡಿಮೆ ಇರುವುದು ಗಮನಾರ್ಹ. ಈ ವರ್ಷ ಪಿಯುಸಿಯಲ್ಲಿ ಕೊನೆಯ ಸ್ಥಾನ ಪಡೆದ ಯಾದಗಿರಿ ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಶೇ 51.83 ಇದ್ದರೆ, ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 86.29.
ಮನೆಯಲ್ಲಿ ಒದಗುವ ಶೈಕ್ಷಣಿಕ ವಾತಾವರಣವೂ ಮಗು ಓದುವಂತೆ ಮಾಡುತ್ತದೆ. ಶಿಕ್ಷಣವೇ ಮುಖ್ಯ ಅನ್ನುವ ಪೋಷಕರ ಅರಿವೇ ಮಕ್ಕಳಿಗೆ ಓದಿನ ಮೊದಲ ಬೆಳಕು. ಒಂದು ಸಮೀಕ್ಷೆಯ ಪ್ರಕಾರ, ಶಿಕ್ಷಣ ಪಡೆದ ತಂದೆ-ತಾಯಿಯುಳ್ಳ ಮಕ್ಕಳ ಓದು ಹೆಚ್ಚು ಉತ್ತಮವಾಗಿರುತ್ತದೆ. ಕಾರಣ, ಆ ಪೋಷಕರಿಗೆ ಓದಿನ ಬೆಲೆ ಗೊತ್ತಿರುತ್ತದೆ. ‘ಓದಿದರೆ ಕೆಲಸ ಸಿಗುತ್ತದೆ, ಜೀವನ ಚೆನ್ನಾಗಿರುತ್ತದೆ’ ಎಂಬ ನಂಬಿಕೆಯು ಕುಟುಂಬದೊಳಗೆ ಹರಡಿರುತ್ತದೆ. ಆದರೆ ಶೈಕ್ಷಣಿಕವಾಗಿ ಹಿಂದೆ ಇರುವ ಮನೆಗಳಲ್ಲಿ ಮೊದಲ ಪೀಳಿಗೆಯವರು ವಿದ್ಯೆಯ ಅನ್ವಯಿಕತೆಯನ್ನು ಅರಿಯದೇ ಉಳಿದಿದ್ದಾರೆ. ಇದು ನಿಜಕ್ಕೂ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತದೆ.
ಅದು ಮಾತ್ರವಲ್ಲ, ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಕೆಲವು ಕಡೆ ಶಾಲೆಗಳಲ್ಲಿ ಮೂಲಸೌಕರ್ಯಗಳ ಅಭಾವವಿದೆ. ಕೆಲವು ಹಳ್ಳಿಗಳ ಮಕ್ಕಳಿಗೆ ಪ್ರತಿದಿನವೂ ಶಾಲೆಗೆ ಹೋಗುವುದು ಒಂದು ದೊಡ್ಡ ಸವಾಲು. ಬಸ್ ಸಿಗುತ್ತದೋ ಇಲ್ಲವೋ ಎಂಬುದು ಪ್ರಶ್ನೆ. ಮಳೆ ಬಂದರೆ ಶಾಲೆಗೆ ಹೋಗುವುದು ಕಷ್ಟ. ಮಗು ಶಾಲೆಗೆ ಹೋಗುವುದಕ್ಕೆ ಮುನ್ನ ಮನೆಯ, ಹೊಲದ ಎಷ್ಟೋ ಕೆಲಸಗಳನ್ನು ಮುಗಿಸಿ ಬರುತ್ತದೆ.
ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಸಿಕ್ಕಾಗ ಮಾತ್ರ ಈ ಸ್ಥಾನವಾರು ಪಟ್ಟಿಗೆ ಬೆಲೆ ಬರುತ್ತದೆ. ಓಟದ ಸ್ಪರ್ಧೆಗೆ ನಿಂತ ಎಲ್ಲರ ಕಾಲುಗಳೂ ಸರಿ ಇರಬೇಕು. ಒಬ್ಬನ ಕಾಲಿಗೆ ಗಾಯವಾಗಿದ್ದರೆ, ಇನ್ನೊಬ್ಬನದು ಮುರಿದುಹೋಗಿದ್ದರೆ ಅದು ನಿಜಕ್ಕೂ ಸ್ಪರ್ಧೆ ಎನಿಸಿ ಕೊಳ್ಳುವುದಿಲ್ಲ ಮತ್ತು ಗೆದ್ದವರದು ನಿಜವಾದ ಗೆಲುವಾಗಿರುವುದಿಲ್ಲ. ಅದು, ಈ ವ್ಯವಸ್ಥೆಯು ಒದಗಿಸುವ, ಅಸಮಾನತೆಯಿಂದ ಕೂಡಿದ ಅವಕಾಶಗಳ ಫಲ ಮಾತ್ರ ಆಗಿರುತ್ತದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.