ADVERTISEMENT

ಸಂಗತ | ಪೇಟೆಂಟ್: ಸಂಖ್ಯೆಗಿಂತ ಬಳಕೆ ಮುಖ್ಯ

ಎಚ್.ಕೆ.ಶರತ್
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
1
1   

ಭಾರತೀಯ ಪೇಟೆಂಟ್ ಕಚೇರಿಯು 2023-24ನೇ ಸಾಲಿನಲ್ಲಿ ನವೆಂಬರ್ 15ರವರೆಗೂ 41,010 ಪೇಟೆಂಟ್‍ಗಳನ್ನು ನೀಡಿದೆ. ಇದನ್ನು ದೊಡ್ಡ ಸಾಧನೆಯಾಗಿ ಬಿಂಬಿಸಲು ಒಕ್ಕೂಟ ಸರ್ಕಾರ ಉತ್ಸುಕ
ವಾಗಿರುವಂತೆ ತೋರುತ್ತಿದೆ. ಈ ಕುರಿತು ‘ಎಕ್ಸ್’ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ‘ಇದು ದಾಖಲೆ. ಆವಿಷ್ಕಾರಪ್ರಣೀತ ಜ್ಞಾನಕೇಂದ್ರಿತ ಆರ್ಥಿಕತೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಫಲ ನೀಡತೊಡಗಿದೆ’ ಎಂದಿದ್ದರು.

ಪೇಟೆಂಟ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಮತ್ತು ಹೊಸದಾಗಿ ಮಂಜೂರು ಮಾಡಲಾಗುತ್ತಿರುವ ಪೇಟೆಂಟ್‍ಗಳ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಆಗುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಇದಕ್ಕೆ ಯಾವೆಲ್ಲ ಅಂಶಗಳು ಕಾರಣ ಮತ್ತು ಇದರಿಂದ ಉಂಟಾಗಬಹುದಾದ ಪರಿಣಾಮ ಎಂತಹುದು ಎಂಬ ಬಗ್ಗೆಯೂ ಚಿಂತಿಸಬೇಕಲ್ಲವೇ? ಎಷ್ಟು ಪೇಟೆಂಟ್‍ಗಳನ್ನು ಮಂಜೂರು ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಾಗಬೇಕೊ ಅಥವಾ ಹೀಗೆ ಮಂಜೂರಾದ ಪೇಟೆಂಟ್‍ಗಳ ಪೈಕಿ ಎಷ್ಟು ವಾಣಿಜ್ಯೀಕರಣಗೊಂಡು ವಾಸ್ತವದಲ್ಲೂ ಬಳಕೆಗೆ ಒಳಪಡುತ್ತಿವೆ ಎನ್ನುವುದು ಮುಖ್ಯವಾಗಬೇಕೊ?

ಉದ್ದಿಮೆ ಸಂಸ್ಥೆಗಳು ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಮಂಜೂರಾಗಿರುವ ಪೇಟೆಂಟ್‍ಗಳು ವಾಣಿಜ್ಯೀಕರಣ
ಗೊಂಡು ಬಳಕೆಗೆ ಒಳಪಡುವ ಸಾಧ್ಯತೆ ಹೆಚ್ಚು. ಆದರೆ, ಮಂಜೂರಾಗುವ ಒಟ್ಟಾರೆ ಪೇಟೆಂಟ್‍ಗಳ ಪೈಕಿ ಹೆಚ್ಚಿನವು ಖಾಸಗಿ ವ್ಯಕ್ತಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿರುತ್ತವೆ. ಹೀಗಾಗಿ, ಮಂಜೂರಾಗುವ ಪೇಟೆಂಟ್‍ಗಳ ಸಂಖ್ಯೆಗಿಂತ ಅವುಗಳ ವಾಣಿಜ್ಯೀಕರಣದ ಪ್ರಮಾಣ ಎಷ್ಟೆಂಬುದನ್ನು ಪರಿಶೀಲಿಸುವುದು ನೀತಿ ನಿರೂಪಕರ ಆದ್ಯತೆಯಾಗಬೇಕಿದೆ.

ADVERTISEMENT

ಕೆಲವು ವರ್ಷಗಳಿಂದ ಶೈಕ್ಷಣಿಕ ವಲಯದಲ್ಲಿ ಕೂಡ ಬೌದ್ಧಿಕ ಆಸ್ತಿ ಹಕ್ಕು ಮತ್ತು ಕೃತಿಸ್ವಾಮ್ಯದ ಕುರಿತು
ಅರಿವು ಮೂಡಿಸಲು ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ಉಪನ್ಯಾಸ, ಕಾರ್ಯಾಗಾರಗಳನ್ನು ಏರ್ಪಡಿ
ಸುವುದಲ್ಲದೆ ಪಠ್ಯದಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೇರಿಸಲಾಗುತ್ತಿದೆ. ಅಲ್ಲದೆ, ಬೋಧಕ
ವರ್ಗ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳನ್ನು ಕೂಡ ಪೇಟೆಂಟ್‍ಗೆ ಅರ್ಜಿ ಸಲ್ಲಿಸಲು ಹುರಿದುಂಬಿಸಲಾಗುತ್ತಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಗುಣಮಟ್ಟದ ಮಾಪನ ನಡೆಯುವ ಸಂದರ್ಭದಲ್ಲಿ ಪೇಟೆಂಟ್‍ಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ಆಯಾ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕರು ಹಾಗೂ ಸಂಶೋಧನಾರ್ಥಿಗಳ ಬಳಿ ಇರುವ ಮಂಜೂರಾದ ಪೇಟೆಂಟ್‍ಗಳ ಸಂಖ್ಯೆ ಎಷ್ಟು, ಪೇಟೆಂಟ್ ಪಡೆಯುವ ಸಲುವಾಗಿ ಸಲ್ಲಿಸಿರುವ ಹಾಗೂ ಪ್ರಕಟಿಸಿರುವ ಅರ್ಜಿಗಳ ಸಂಖ್ಯೆ ಎಷ್ಟು ಎನ್ನುವ ಅಂಕಿ-ಅಂಶವು ಶಿಕ್ಷಣ ಸಂಸ್ಥೆಯೊಂದರ ಗುಣಮಟ್ಟವನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಹೇಗಾದರೂ ಸರಿ ಪೇಟೆಂಟ್ ಪಡೆಯಲೇಬೇಕು ಎನ್ನುವ ಒತ್ತಡ, ಸಂಶೋಧನಾ ಕೇಂದ್ರಗಳನ್ನು ಹೊಂದಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಮೇಲಿದೆ. ಪೇಟೆಂಟ್‍ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದಕ್ಕೆ ಇದು ಕೂಡ ಪ್ರಮುಖ ಕಾರಣವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ಮಂಜೂರಾಗುತ್ತಿರುವ ಪೇಟೆಂಟ್‍ಗಳಲ್ಲಿನ ಆವಿಷ್ಕಾರಗಳು ಉತ್ಪನ್ನವೋ ತಂತ್ರಜ್ಞಾನವೋ ಮತ್ತೊಂದೋ ಆಗಿ ಪ್ರಾಯೋಗಿಕವಾಗಿಯೂ ಬಳಕೆಗೆ ಬರುವುದು ಅಪರೂಪ.

2021-22ನೇ ಸಾಲಿನಲ್ಲಿ ಅತಿ ಹೆಚ್ಚು ಪೇಟೆಂಟ್ ಪಡೆದುಕೊಂಡ ಐದು ಸಂಸ್ಥೆಗಳ ಪೈಕಿ ಮೂರು ವಿಶ್ವವಿದ್ಯಾಲಯಗಳೇ ಇರುವುದು, ಶೈಕ್ಷಣಿಕ ವಲಯದಲ್ಲಿ ಪೇಟೆಂಟ್‍ಗಳೆಡೆಗಿನ ಒಲವು ಹೆಚ್ಚುತ್ತಿರುವುದಕ್ಕೆ ಹಿಡಿದ ಕೈಗನ್ನಡಿ. 2017-18ನೇ ಸಾಲಿನಲ್ಲಿ ಒಂದು ವಿಶ್ವವಿದ್ಯಾಲಯ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಕೂಡ ಉದ್ದಿಮೆ ಸಂಸ್ಥೆಗಳೇ ಈ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ.

‘ಭಾರತದಲ್ಲಿ ತಯಾರಿಸಿ’ ಎನ್ನುವ ಆಶಯ ನಿಜ ಅರ್ಥದಲ್ಲಿ ಈಡೇರಬೇಕಿದ್ದರೆ ಹೊಸ ಆವಿಷ್ಕಾರಗಳು, ಕ್ಲಿಷ್ಟ ತಂತ್ರಜ್ಞಾನಗಳು ಇಲ್ಲಿಂದಲೇ ಹೊರಹೊಮ್ಮತೊಡಗಬೇಕು. ಆದರೆ, ಭಾರತೀಯ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗಿಂತ ಹೆಚ್ಚಾಗಿ ವಿದೇಶಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಪೇಟೆಂಟ್‍ಗಳು ಮಂಜೂರಾಗುತ್ತಿರುವ ಟ್ರೆಂಡ್ ಹಾಗೇ ಮುಂದುವರಿದುಕೊಂಡು ಹೋಗುತ್ತಿದೆ. 2021-22ನೇ ಸಾಲಿನಲ್ಲಿ ಮಂಜೂರಾದ 66,440 ಪೇಟೆಂಟ್‍ಗಳ ಪೈಕಿ 36,932 ಪೇಟೆಂಟ್‍ಗಳು ವಿದೇಶಿ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಸೇರಿದ್ದರೆ, 29,508 ಪೇಟೆಂಟ್‍ಗಳು ಭಾರತೀಯ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಸೇರಿದ್ದಾಗಿವೆ.

ಪೇಟೆಂಟ್‍ಗಳ ಸಂಖ್ಯೆ ಹೆಚ್ಚುವುದರ ಜೊತೆಗೆ, ಅವುಗಳ ವಾಣಿಜ್ಯೀಕರಣದ ಪ್ರಮಾಣದಲ್ಲೂ ಗಮ
ನಾರ್ಹ ಏರಿಕೆಯಾದರೆ ಮಾತ್ರ ದೇಶದ ಆರ್ಥಿಕತೆಗೆ ಬಲ ಬರಲಿದೆ. ಮಂಜೂರಾದ ಪೇಟೆಂಟ್‍ಗಳ ಸಂಖ್ಯೆಯೊಂದಿಗೆ ಅವುಗಳ ವಾಣಿಜ್ಯೀಕರಣದ ಪ್ರಮಾಣವನ್ನೂ ಒಕ್ಕೂಟ ಸರ್ಕಾರ ಸಾರ್ವಜನಿಕ
ಗೊಳಿಸಲು ಮುಂದಾದರೆ, ಆವಿಷ್ಕಾರಪ್ರಣೀತ ಜ್ಞಾನಕೇಂದ್ರಿತ ಆರ್ಥಿಕತೆ ಕಡೆಗಿನ ಪಯಣದಲ್ಲಿ ಅಸಲಿಗೂ ನಾವು ಎಷ್ಟು ಹೆಜ್ಜೆಗಳನ್ನು ಮುಂದಿಟ್ಟಿದ್ದೇವೆ ಎಂಬ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಅದಿಲ್ಲದೆ ಸಲ್ಲಿಕೆಯಾದ ಅರ್ಜಿಗಳು ಹಾಗೂ ಮಂಜೂರಾದ ಪೇಟೆಂಟ್‍ಗಳ ಸಂಖ್ಯೆಯನ್ನಷ್ಟೇ ಮುಂದು ಮಾಡಿದರೆ, ಅದರಿಂದ ಅರ್ಧಸತ್ಯವನ್ನಷ್ಟೇ ಹೇಳಿದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.