ಜಾಗತಿಕ ಮಟ್ಟದ ಶ್ರೇಷ್ಠ ವಿಶ್ವವಿದ್ಯಾಲಯವಾಗುವ ಸದವಕಾಶ ಇದೀಗ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಮುಂದೆ ಇದೆ
ಪ್ರಪಂಚದ ವಿವಿಧ ದೇಶಗಳಲ್ಲಿ ನಗರಕೇಂದ್ರಿತ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್, ಸಿಟಿ ಯೂನಿವರ್ಸಿಟಿ ಆಫ್ ಲಂಡನ್, ಯೂನಿವರ್ಸಿಟಿ ಆಫ್ ಟೊರಾಂಟೊ, ಆರಿಜಾನ ಸ್ಟೇಟ್ ಯೂನಿವರ್ಸಿಟಿ ಯಂತಹ ವಿಶ್ವದರ್ಜೆಯ 23 ವಿಶ್ವವಿದ್ಯಾಲಯಗಳಿದ್ದು, ಇವು ಒಂದು ಒಕ್ಕೂಟವಾಗಿ ಕಾರ್ಯನಿರ್ವಹಿಸುತ್ತಿವೆ. ಉತ್ಕೃಷ್ಟ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೂಲಕ ಜಾಗತಿಕ ಮನ್ನಣೆಯನ್ನು ಗಳಿಸಿಕೊಂಡಿವೆ.
ಮಹತ್ವದ ಸಂಗತಿಯೆಂದರೆ, ಈ ವಿಶ್ವವಿದ್ಯಾಲಯಗಳು ತಾವು ನೆಲೆಗೊಂಡ ಮಹಾನಗರಗಳು ವಾಣಿಜ್ಯ, ಸಮಾಜೋ–ಆರ್ಥಿಕ, ಹವಾಮಾನ ಬದಲಾವಣೆ, ಇಂಧನ, ಕುಡಿಯುವ ನೀರು, ವಲಸೆ, ಸಾರಿಗೆ, ಸೈಬರ್ ಸೆಕ್ಯೂರಿಟಿಯಂತಹ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಸಂಶೋಧನೆ, ಸಂವಾದಗಳನ್ನು ಕೈಗೊಳ್ಳುತ್ತವೆ. ಇದರಿಂದ ಹೊರಬರುವ ಫಲಿತಾಂಶ ವನ್ನು ಆಡಳಿತ ವ್ಯವಸ್ಥೆಯೊಂದಿಗೆ ಹಂಚಿಕೊಳ್ಳುವ ಮೂಲಕ ಆ ನಗರಗಳು ಆರ್ಥಿಕ ಸುಸ್ಥಿರತೆ ಮತ್ತು ಅಭಿವೃದ್ಧಿಯ ವೇಗ ಕಾಯ್ದುಕೊಳ್ಳುವಲ್ಲಿ ನೆರವಾಗುತ್ತವೆ. ಅಲ್ಲದೆ ಅಲ್ಲಿನ ಕೈಗಾರಿಕಾ ವಿಸ್ತರಣೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಕೌಶಲಾಧಾರಿತ ಪಠ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ ಹಾಗೂ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿವೆ.
ಈ ದಿಸೆಯಲ್ಲಿ, ಭಾರತದ ಮೊದಲ ನಗರಕೇಂದ್ರಿತ ವಿಶ್ವವಿದ್ಯಾಲಯವಾಗುವ ಚಾರಿತ್ರಿಕ ಅವಕಾಶ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಒದಗಿಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ 2017ರಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿ ಪ್ರತ್ಯೇಕಗೊಂಡು, ಈ ವರ್ಷ ಡಾ. ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಮರುನಾಮಕರಣಗೊಂಡಿರುವ ಈ ಸಂಸ್ಥೆಯು ಜಾಗತಿಕ ಮಟ್ಟದ ಶ್ರೇಷ್ಠ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲು ಅಗತ್ಯವಾದ ಎಲ್ಲ ಅನುಕೂಲ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಈ ವಿಶ್ವವಿದ್ಯಾಲಯದ ಕೇಂದ್ರಸ್ಥಾನ ಬೆಂಗಳೂರಿನ ಹೃದಯಭಾಗದಲ್ಲಿದೆ. 167 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸೆಂಟ್ರಲ್ ಕಾಲೇಜಿನ ಬೃಹತ್ ಕಟ್ಟಡಗಳು ಮತ್ತು ನವೀಕೃತ ಕ್ಯಾಂಪಸ್ ಇಲ್ಲಿನ ಪ್ರಥಮ ಆಕರ್ಷಣೆ.
ಸುಮಾರು 275 ಸಂಯೋಜಿತ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ್ದು, 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸರ್ಕಾರಿ ಕಲಾ ಕಾಲೇಜು ಮತ್ತು ಆರ್.ಸಿ. ಕಾಲೇಜನ್ನು ಸರ್ಕಾರವು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಘೋಷಿಸಿರುವುದು ಸ್ನಾತಕ ಅಧ್ಯಯನದ ಗುಣಾತ್ಮಕ ಮಾದರಿಯನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಐಐಎಸ್ಸಿ, ಸಿ.ವಿ.ರಾಮನ್ ಸಂಶೋಧನಾ ಸಂಸ್ಥೆ, ಇಸ್ರೊ ಕೇಂದ್ರ ಕಚೇರಿ, ನಿಮ್ಹಾನ್ಸ್‌ನಂತಹ ಜಾಗತಿಕ ಸಂಸ್ಥೆಗಳೊಂದಿಗೆ ಕಲಿಕಾ ಒಡಂಬಡಿಕೆಯ ಮೂಲಕ ವಿಶ್ವವಿದ್ಯಾಲಯವು ವೃತ್ತಿಪರ ಸಂಶೋಧನೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು.
ದೇಶದ ಎಲ್ಲ ಭಾಗಗಳಿಂದಲೂ ಪ್ರತಿಭಾವಂತ ಯುವಜನ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಲಸೆ ಬರುತ್ತಿರುವ ವಿದ್ಯಮಾನದಿಂದ ಬೆಂಗಳೂರು ದಿನೇ ದಿನೇ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಈ ಬೆಳವಣಿಗೆಯಿಂದ ಮೂಲಭೂತ ಅಗತ್ಯಗಳ ಮೇಲೆ ಬೀಳುತ್ತಿರುವ ಅಧಿಕ ಒತ್ತಡವನ್ನು ನಿಭಾಯಿಸುವುದು ನಗರಾಡಳಿತಕ್ಕೆ ದೊಡ್ಡ ಸವಾಲಾಗಿದೆ. ನಗರದ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವನ್ನು ವಿಶ್ವವಿದ್ಯಾಲಯ ಕೈಗೊಳ್ಳಬೇಕು. ಮಹಾನಗರವನ್ನು ಔದ್ಯಮಿಕ ಅವಕಾಶಗಳ ಸ್ಥಳವನ್ನಾಗಿ ಪರಿವರ್ತಿಸಿದರಷ್ಟೇ ಸಾಲದು ಅದನ್ನು ಕಲೆ ಮತ್ತು ಮಾನವಿಕ ಜ್ಞಾನ ಸಂಗಮಿಸುವ ಸಾಂಸ್ಕೃತಿಕ ಆವರಣವಾಗಿಯೂ ರೂಪಿಸುವ ಕಾರ್ಯಕ್ಕೆ ಅದು ಮುಂದಾಗಬೇಕು.
70– 80ರ ದಶಕದಲ್ಲಿ ರಾಜ್ಯದಲ್ಲಿ ನಡೆದ ಜನಚಳವಳಿಗಳಿಗೆ ಸೆಂಟ್ರಲ್ ಕಾಲೇಜಿನ ಅಧ್ಯಾಪಕರು ಬೌದ್ಧಿಕ ಮಾರ್ಗದರ್ಶನ ಮಾಡಿದ್ದರು. ಆಡಳಿತವು ಜನಮುಖಿಯಾಗಿರುವಂತೆ ಎಚ್ಚರಿಸುವ ಸಂವಾದಗಳನ್ನು ನಡೆಸುತ್ತಿದ್ದರು. ಅಂತೆಯೇ ಈಗಲೂ ಈ ಕೇಂದ್ರವು ಜನಾಭಿಪ್ರಾಯದ ಮುಕ್ತ ವೇದಿಕೆಯಾಗಿ ಯುವ ಮನಸ್ಸುಗಳನ್ನು ಪ್ರೇರೇಪಿಸುವ ನಲ್ದಾಣ ಆಗಬೇಕು. ಕಲೆ ಮತ್ತು ಸೌಂದರ್ಯಶಾಸ್ತ್ರ ವಿಭಾಗಗಳನ್ನು ಆರಂಭಿಸುವ ಮೂಲಕ ಕಲೆ ಮತ್ತು ಸಮುದಾಯಗಳ ನಡುವಣ ಬೆಸುಗೆಯನ್ನು ಗಟ್ಟಿಗೊಳಿಸಬೇಕು.
ವಿಶ್ವವಿದ್ಯಾಲಯವು ತನ್ನ ಕಾಸ್ಮೊಪಾಲಿಟನ್ ಸ್ವರೂಪವನ್ನು ಉಳಿಸಿಕೊಂಡೇ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸುವ ದೂರಗಾಮಿ ಪಠ್ಯಕ್ರಮಗಳನ್ನು ರೂಪಿಸಬೇಕು. ಹೊರ ರಾಜ್ಯ-ದೇಶಗಳಿಂದ ಉದ್ಯೋಗ ಅರಸಿ ಬರುವ ಜನರಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುವ ಕಲಿಕಾ ಕೇಂದ್ರ ಪ್ರಾರಂಭಿಸ ಬೇಕು. ಬಹುಶಿಸ್ತೀಯವಾದ ಉತ್ಕೃಷ್ಟ ದರ್ಜೆಯ ಸಂಶೋಧನಾ ಬರಹಗಳನ್ನು ಪ್ರಕಟಿಸುವ ಪ್ರಸಾರಾಂಗ ವನ್ನು ಪ್ರಾರಂಭಿಸಬೇಕು. ಸರ್ಕಾರ ಸೃಜಿಸಿರುವ 162 ಬೋಧಕರ ಹುದ್ದೆಗಳನ್ನು ಕೂಡಲೇ ನೇಮಕ ಮಾಡುವುದು ಸರ್ಕಾರದ ಆದ್ಯತೆ ಆಗಬೇಕಾಗಿದೆ.
ಈ ಮೂಲಕ ಬೌದ್ಧಿಕ ನಾಯಕತ್ವವನ್ನು ನಿಭಾಯಿಸುವ ಹೊಣೆಯನ್ನು ವಿಶ್ವವಿದ್ಯಾಲಯ ಹೊರಬೇಕಿದೆ. ಅಂತಹ ಸಾಮರ್ಥ್ಯವನ್ನು ಅದು ಗಳಿಸಲಿ ಎನ್ನುವುದು ಶಿಕ್ಷಣ ತಜ್ಞರ ನಿರೀಕ್ಷೆಯಾಗಿದೆ.
ಲೇಖಕ: ವಿಶ್ರಾಂತ ಕುಲಪತಿ, ಬೆಂಗಳೂರು ನಗರ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.