ADVERTISEMENT

ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ

ಹಬ್ಬಗಳ ಮೂಲ ಉದ್ದೇಶವನ್ನು ಮರೆಯದೆ, ಪ್ರಕೃತಿಯ ಜೊತೆಗಿನ ಸಾಮರಸ್ಯದ ಸಂಕೇತವಾಗಿ ನಾವು ಅವುಗಳನ್ನು ಆಚರಿಸಬೇಕು

ಸದಾಶಿವ ಸೊರಟೂರು
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
ಸಂಗತ
ಸಂಗತ   

ನಮ್ಮ ಮನೆಯ ತಿರುವಿನಲ್ಲಿ ಒಂದಷ್ಟು ಬೇವಿನ ಮರಗಳಿವೆ. ಹೋದ ವರ್ಷ ಯುಗಾದಿಯ ದಿನ ಆ ಮರಗಳಲ್ಲಿ ಒಂದೇ ಒಂದು ಎಲೆಯೂ ಉಳಿಯದಂತೆ ಜನ ಕಿತ್ತುಕೊಂಡು ಹೋಗಿದ್ದರು. ಬಹುಶಃ ಅದರ ಹಿಂದಿನ ವರ್ಷವೂ ಹಾಗೇ ಮಾಡಿದ್ದರು.‌ ಊರು ಹಬ್ಬವನ್ನು ಆಚರಿಸುತ್ತಿದ್ದರೆ ಬೇವಿನ ಮರಗಳು ಮಾತ್ರ ತಮ್ಮ ಎಲ್ಲಾ ಎಲೆಗಳನ್ನು, ಸಣ್ಣ ಪುಟ್ಟ ಕೊಂಬೆಗಳನ್ನು ಕಳೆದುಕೊಂಡು ನಿಂತಿದ್ದವು. ಹಬ್ಬ ಕೊಟ್ಟ ಶಾಪದಂತೆ. ಈಗಲೂ ಎಲೆಗಳನ್ನು ಬಿಟ್ಟಿವೆ. ಆದರೆ ಮೊದಲಿನಷ್ಟು ಸೊಂಪಾಗಿಲ್ಲ. ಯುಗಾದಿಯೂ ಮುಂದಿದೆ.

ಮರವೊಂದು ಶೇಕಡ 70ಕ್ಕಿಂತ ಹೆಚ್ಚು ಎಲೆಗಳನ್ನು ಕಳೆದುಕೊಂಡರೆ, ಆ ಮರ ಮೂರ್ನಾಲ್ಕು ವರ್ಷಗಳ ವರೆಗೆ ಪುನಃ ಸಮರ್ಥವಾಗಿ ಬೆಳೆಯಲು ಸಾಧ್ಯವಿಲ್ಲ. ಕರ್ನಾಟಕದ ಕೆಲ ಗ್ರಾಮಗಳಲ್ಲಿ, ಯುಗಾದಿ ಹಬ್ಬದ ನಂತರ ಕೆಲವು ಬೇವಿನ ಮರಗಳು ರೋಗಗಳಿಗೆ ತುತ್ತಾದ ಉದಾಹರಣೆಗಳಿವೆ ಎಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳು ವರದಿ ಮಾಡಿವೆ.

ಹಬ್ಬ ಎನ್ನುವುದು ಬದುಕಿನ ಸಂಭ್ರಮದ ಆಚರಣೆ.‌ ಈ ಸಂಭ್ರಮ ತನ್ನ ಮಹತ್ವ ಕಳೆದುಕೊಂಡು ಯಾವಾಗ ಶೋಕಿಗೆ ತಿರುಗಿತೋ ಅದರಿಂದ ಉಂಟಾಗುವ ಪರಿಣಾಮಗಳು ಢಾಳಾಗಿ ಕಾಣಿಸತೊಡಗಿವೆ.

ADVERTISEMENT

ಬೇವು, ಬೆಲ್ಲ ಎಂಬುದು ಒಂದು ರೂಪಕ. ಸಿಹಿ ಕಹಿ ಎರಡೂ ಇರಬೇಕು ಅನ್ನುವುದರ ಸೂಚಕ. ಅದೊಂದು ಅರಿವು. ಬೇವು ಬೆಲ್ಲ ತಿಂದೇ ನಾವು ಸುಖ ದುಃಖವನ್ನು ಸಮಾನವಾಗಿ ಸ್ವೀಕರಿಸಲು ಅರ್ಹತೆ ಪಡೆಯು ತ್ತೇವೆಯೇ? ತಿನ್ನದೇ ಇರುವವರು ಸುಖ ದುಃಖದ ಸಮತೋಲನ ಸಾಧಿಸಲು ಸೋತು ಹೋಗುವರೇ? ತಿಂದೂ ಸೋಲಬಹುದು, ತಿನ್ನದೆಯೂ ಗೆಲ್ಲಬಹುದು.

ಇತ್ತೀಚೆಗೆ ಪ್ರತಿ ಹಬ್ಬವೂ ಪ್ರಕೃತಿಯ ಮೇಲೆ ನಡೆಯುತ್ತಿರುವ ದಾಳಿಯಂತೆಯೇ ಭಾಸವಾಗುತ್ತದೆ. ಹಬ್ಬಗಳನ್ನು ಪ್ರಕೃತಿಗೆ ಪೂರಕವಾಗಿಯೇ ಆಚರಿಸಿಕೊಂಡು ಬಂದ ನೆಲ ಇದು‌. ಈಗ ಪರಿಸರವನ್ನು ಬಲಿ ಕೊಟ್ಟು ಹಬ್ಬಗಳನ್ನು ಸಂಭ್ರಮಿಸುತ್ತಿರುವ ಪರಿ ಅಚ್ಚರಿಯನ್ನುಂಟು ಮಾಡುತ್ತದೆ.‌

ಗಣೇಶ ಹಬ್ಬ ಬಂದ ಕೂಡಲೇ ನದಿಗಳು, ಕೆರೆಗಳ ಬಗ್ಗೆ ಪ್ರಜ್ಞಾವಂತರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗುತ್ತದೆ. ದೀಪಾವಳಿ ಮುಗಿದ ದಿನ ಊರು ಕಸದಬುಟ್ಟಿಯಂತಾಗಿ, ಗಾಳಿಯಲ್ಲಿ ಪಟಾಕಿಯ ಘಮಟು ಉಸಿರುಗಟ್ಟಿಸುತ್ತದೆ. ಗಣೇಶ ಮೂರ್ತಿಯ ಮೆರವಣಿಗೆಯ ಡಿ.ಜೆ ಸದ್ದು ಹೃದಯಗಳನ್ನು ಅಲುಗಾಡಿಸುತ್ತದೆ. ಕಂದಮ್ಮಗಳನ್ನು ಬೆಚ್ಚಿಬೀಳಿಸುತ್ತದೆ. ಹೋಳಿಯ ಕಾರಣಕ್ಕೆ ನೀರಿಗೆ‌‌ ಹೋಗಿ ಸೇರುವ ವಿಷಯುಕ್ತ ರಾಸಾಯನಿಕಗಳೆಷ್ಟೊ.

ಭಾರತದಲ್ಲಿ ವರ್ಷಕ್ಕೆ 10 ಲಕ್ಷ ಜಾತ್ರೆಗಳಾಗುತ್ತವೆ ಎಂಬ ಅಂದಾಜಿದೆ. ಅಲ್ಲಿ ದೊಡ್ಡ ಪ್ರಮಾಣದ ಜನಸಂದಣಿ ಸೇರುತ್ತದೆ. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ತಟ್ಟೆಗಳು, ಕಪ್‌ಗಳು ಮತ್ತು ಆಹಾರ ತ್ಯಾಜ್ಯವು ಸುತ್ತಮುತ್ತಲಿನ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗುತ್ತವೆ.‌ ಮಲ ಮೂತ್ರದ ಸರಿಯಾದ ವಿಲೇವಾರಿಯಾಗದೆ ಇಡೀ ವಾತಾವರಣ ಕೆಟ್ಟು ಹೋಗುತ್ತದೆ.

ಹಬ್ಬಗಳು ತಮ್ಮ ಮಹತ್ವ ಕಳೆದುಕೊಂಡು ತೋರ್ಪಡಿಕೆಯ ಚಟುವಟಿಕೆಗಳಾಗುತ್ತಿವೆ. ಈಗಿನ ಬಹುತೇಕ ಹಬ್ಬಗಳು ಸಾಮಾಜಿಕ ಜಾಲತಾಣಕ್ಕಾಗಿ ಆಗುತ್ತಿವೆ ಮತ್ತು ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲೇ ಆಗುತ್ತಿವೆ. ಮೊನ್ನೆ ಗೆಳತಿಯೊಬ್ಬಳು ಬಣ್ಣ ತಂದು ರೂಮಿನಲ್ಲಿ ಬಳಿದುಕೊಂಡು, ರೀಲ್ಸ್ ಮಾಡಿ ಹೋಳಿ ಹಬ್ಬದ ಶುಭಾಶಯ ಕೋರಿದ್ದಳು. ಸ್ಟೇಟಸ್‌ಗೆ ಹಾಕಲೆಂದೇ ಜನ ಬಗೆಬಗೆಯ ಬಟ್ಟೆ ಖರೀದಿಸುತ್ತಾರೇನೋ ತಿನಿಸುಗಳನ್ನು ತಯಾರಿಸುತ್ತಾರೇನೋ ಅನ್ನಿಸುತ್ತದೆ. ಇನ್ನು ಕೆಲವರಿಗೆ ಹಬ್ಬಗಳು ತಮ್ಮ ಅದ್ದೂರಿತನದ ತೋರ್ಪಡಿಕೆಯ ಚಟುವಟಿಕೆ ಗಳಾಗಿ ಬದಲಾಗಿವೆ.‌ ಇದನ್ನು ನೋಡಿಯೇ ಸಾಮಾನ್ಯ ಜನ ತಾವು ಹಬ್ಬ ಮಾಡುವ ಪರಿಯನ್ನು ಬದಲಿಸಿಕೊಳ್ಳುತ್ತಿರುವುದು ಸೋಜಿಗ.

ಹಬ್ಬಗಳ ಈ ರೂಪಾಂತರ ಬರೀ ಪರಿಸರದ ಮೇಲಲ್ಲ, ಮನುಷ್ಯರ ಮನಸ್ಸಿನ ಮೇಲೂ ಗಾಢವಾದ ಪರಿಣಾಮ ಬೀರುತ್ತಿರುತ್ತದೆ. ಹಿಂದೆ ಹಬ್ಬಗಳು ಸಮುದಾಯವನ್ನು ಒಗ್ಗೂಡಿಸುವ, ಪರಸ್ಪರ ಪ್ರೀತಿ, ವಿಶ್ವಾಸವನ್ನು ಬೆಳೆಸುವ ಸಾಧನಗಳಾಗಿದ್ದವು. ಈಗ ಅವು ಸ್ಪರ್ಧೆಯ ಕೇಂದ್ರಗಳಾಗಿ, ತಮ್ಮ ಸಂಪತ್ತು, ಸ್ಥಾನಮಾನವನ್ನು ಪ್ರದರ್ಶಿಸುವ ವೇದಿಕೆಗಳಾಗಿ ಮಾರ್ಪಟ್ಟಿವೆ. ಒಬ್ಬರು ನಡೆಸುವ ಅದ್ದೂರಿ ಆಚರಣೆಯು ಇನ್ನೊಬ್ಬರಲ್ಲಿ ಅಂತಹದೇ ಅದ್ದೂರಿ ಆಚರಣೆ ನಡೆಸಬೇಕಾದ ಒತ್ತಡವನ್ನು ಉಂಟು ಮಾಡುತ್ತದೆ. ಈ ಹುಚ್ಚು ಸ್ಪರ್ಧೆಯಲ್ಲಿ ಹಬ್ಬದ ಮೂಲ ಉದ್ದೇಶವೇ ಮಸುಕಾಗುತ್ತಿದೆ.

ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂಪ್ರದಾಯವನ್ನು ನಾವು ಮರೆಯುತ್ತಿದ್ದೇವೆ. ಬೇವಿನ ಮರಗಳ ಉದಾಹರಣೆಯೇ ಇದಕ್ಕೆ ಸಾಕ್ಷಿ. ನಮ್ಮ  ಸಂಪ್ರದಾಯದ ಆಳವಾದ ಅರ್ಥವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ದಿನೇ ದಿನೇ ಅದರಿಂದ ನಾವು ದೂರ ಸರಿಯುತ್ತಿದ್ದೇವೆ ಅನಿಸುತ್ತಿಲ್ಲವೇ?

ಹಬ್ಬಗಳು ಪ್ರಕೃತಿಯೊಂದಿಗೆ ಸಾಮರಸ್ಯದ ಸಂಕೇತವಾಗಬೇಕೇ ವಿನಾ ಅದರ ವಿನಾಶಕ್ಕೆ ಕಾರಣವಾಗಬಾರದು. ನಮ್ಮ ಮುಂದಿನ ಪೀಳಿಗೆಗೆ ಸಂಪ್ರದಾಯದ ಜೊತೆಗೆ ಶುದ್ಧ ಗಾಳಿ, ನೀರು ಮತ್ತು ಹಸಿರನ್ನೂ ಉಳಿಸಿಕೊಡುವ ಜವಾಬ್ದಾರಿ ನಮ್ಮದು. ಹಬ್ಬಗಳ ಮೂಲ ಉದ್ದೇಶವನ್ನು ಮರೆಯದೆ, ಅವುಗಳನ್ನು ಸಂಭ್ರಮದ ಜೊತೆಗೆ ಸಂವೇದನೆಯಿಂದ ಆಚರಿಸಿದರೆ ಮಾತ್ರ ನಾವು ಜೀವನದಲ್ಲಿ ನಿಜವಾದ ಸಮತೋಲನವನ್ನು ಕಂಡುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.