
ಒಳಗಣ್ಣನ್ನು ತೆರೆಯಿಸುತ್ತೇವೆ ಎನ್ನುವವರು, ಕಣ್ಣಿದ್ದವರನ್ನೂ ಕುರುಡರನ್ನಾಗಿಸುವವರು. ವಿಶೇಷ ದೃಷ್ಟಿಶಕ್ತಿ ಸಾಧ್ಯವಿದ್ದರೆ, ಆ ವಿದ್ಯೆಯನ್ನು ಅಂಧರ ಮೇಲೆ ಪ್ರಯೋಗಿಸಬಹುದು.
‘ಗಾಂಧಾರಿ’ ವಿದ್ಯೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ ಒಬ್ಬಳ ಬಗೆಗಿನ ‘ಪ್ರಜಾವಾಣಿ’ ವರದಿಯನ್ನು (ಡಿ. 12) ಗಮನಿಸಿದೆ. ‘ಗಾಂಧಾರಿ’ ವಿದ್ಯೆ, ‘ಮಧ್ಯ ಮೆದುಳಿನ ಸಕ್ರಿಯಗೊಳಿಸುವಿಕೆ’ ಅಥವಾ ‘ಮೂರನೇ ಕಣ್ಣು ತೆರೆಯಿಸುವುದು’ ಇತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಹಗಲುದರೋಡೆ ವಿದ್ಯೆಯಿದು. ಇದರ ಬಗ್ಗೆ ಸಾಮಾಜಿಕ ಎಚ್ಚರ ಮೂಡಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ದೇಶದ ಎಲ್ಲೆಡೆಗೂ ಗಾಂಧಾರಿ ವಿದ್ಯೆ ಹಬ್ಬುತ್ತಿದೆ. ಹತ್ತರಿಂದ ಹನ್ನೆರಡು ದಿನಗಳ ತರಬೇತಿಗೆ ಸಾವಿರಾರು ರೂಪಾಯಿಗಳ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. 64 ವಿದ್ಯೆಗಳಲ್ಲಿ ‘ಗಾಂಧಾರಿ’ಯೂ ಒಂದೆಂದೂ, ಗುರುವಿನ ಮಾರ್ಗದರ್ಶನದಿಂದ ಮಾತ್ರ, ಕೆಲವು ತಂತ್ರಗಳ ಮೂಲಕ ಇದನ್ನು ಕಲಿಯಲು ಸಾಧ್ಯವೆಂದು ನಂಬಿಸಲಾಗುತ್ತಿದೆ.
‘ಗಾಂಧಾರಿ’ ವಿದ್ಯೆ ಕಲಿಯುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುವುದೆಂದೂ, ಮಕ್ಕಳ ಆತ್ಮವಿಶ್ವಾಸ ಮತ್ತು ಏಕಾಗ್ರತೆ ಹೆಚ್ಚುವುದೆಂದೂ, ಇದೊಂದು ಮನೋವಿಜ್ಞಾನದ ಪ್ರಯೋಗವೆಂದೂ, ಮಕ್ಕಳಲ್ಲಿ ಅತಿಯಾದ ಅಭ್ಯಾಸದಿಂದಾಗುವ ಒತ್ತಡವನ್ನು ಇದರ ಮೂಲಕ ನಿವಾರಿಸಬಹುದೆಂದು ಹೇಳಲಾಗುತ್ತಿದೆ. ಈ ತರಬೇತಿ ಪಡೆದ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಕೆಲಸಗಳನ್ನು ಮಾಡಲು ಸಮರ್ಥರಾಗುತ್ತಾರೆ ಎನ್ನುವ ಹಸಿ ಸುಳ್ಳುಗಳನ್ನು ಹೇಳಿ ಪೋಷಕರನ್ನು ಮರುಳು ಮಾಡಲಾಗುತ್ತಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ತಮ್ಮ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಬುದ್ಧಿವಂತರಾಗಬೇಕು ಎಂದು ಆಸೆಪಡುವ ಪೋಷಕರು, ‘ಗಾಂಧಾರಿ’ ವಿದ್ಯೆಯ ಜಾಲಕ್ಕೆ ಸಿಲುಕುತ್ತಿದ್ದಾರೆ; ಹಣ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳನ್ನು ಭ್ರಮೆಗೆ ದೂಡುತ್ತಿದ್ದಾರೆ.
ಮಕ್ಕಳ ಕಣ್ಣಿಗೆ ಬಟ್ಟೆ ಕಟ್ಟಿ, ಆ ಮಗು ಓದುವುದು, ಬರೆಯುವುದು, ಬಣ್ಣದ ಚೆಂಡುಗಳನ್ನು ಗುರುತಿಸುವುದು, ಚಿತ್ರಕ್ಕೆ ಬಣ್ಣ ತುಂಬುವುದು, ವಸ್ತುಗಳನ್ನು, ಕಾರ್ಡುಗಳನ್ನು ಸ್ಪರ್ಶಜ್ಞಾನದಿಂದಲೇ ಗುರುತಿಸಿ ಹೇಳುವುದು, ಇತ್ಯಾದಿಗಳನ್ನು ಮಾಡಿಸಿ, ಮಕ್ಕಳ ಮಧ್ಯದ ಮೆದುಳು ಸಕ್ರಿಯಗೊಂಡಿರುವುದರಿಂದ ಸೂಪರ್ ವೇಗದ ಕಲಿಕೆಗೆ ಅವರು ಒಳಗಾಗಿದ್ದಾರೆಂದು ಹೇಳಲಾಗುತ್ತದೆ. ನಮ್ಮ ಎಡ ಮತ್ತು ಬಲ ಮೆದುಳಿನ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಲು ಸಾಧ್ಯ ಆಗಬೇಕಾದರೆ, ಮಧ್ಯ ಇರುವ ಮೆದುಳನ್ನು ಸಕ್ರಿಯಗೊಳಿಸಲೇಬೇಕು ಎಂಬ ಸುಳ್ಳನ್ನು ಹೇಳುವ ಈ ಜಾಲವು, ಈ ಸಕ್ರಿಯೆಗೊಳಿಸುವಿಕೆಯನ್ನು ವಿಶೇಷ ಜ್ಞಾನ ಇರುವ ತಜ್ಞರಿಂದ ಕಲಿಸಲಾಗುತ್ತದೆ ಎಂದು ನಂಬಿಸುತ್ತಾರೆ.
ಮ್... ಮ್... ಮ್... ಎಂಬ ಶಬ್ದ ಹೊರಡಿಸುವುದು, ಕಣ್ಣುಗುಡ್ಡೆಗಳನ್ನು ತಿರುಗಿಸುವುದು, ಕೈ ಬೆರಳುಗಳನ್ನು ಒಂದಕ್ಕೊಂದು ನಿಧಾನವಾಗಿ ಅಥವಾ ವೇಗವಾಗಿ ಮುಟ್ಟಿಸುವುದು ಸೇರಿದಂತೆ ಹಲವು ತಂತ್ರಗಳಿಂದ ಮೆದುಳಿನ ಸಕ್ರಿಯಗೊಳಿಸುವಿಕೆ ಆಗಿದೆ ಎಂದು ಪೋಷಕರನ್ನು ನಂಬಿಸುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವ, ಬರೆಯುವ, ಬಣ್ಣ ಗುರುತಿಸುವ ನಾಟಕವನ್ನು ತರಬೇತಿ ಪಡೆದ ಮಕ್ಕಳಿಂದ ಮಾಡಿಸುತ್ತಾರೆ. ಬೇರೆಯವರಿಗಿಂತ ವಿಶೇಷ ಜ್ಞಾನವನ್ನು ಪಡೆದಿದ್ದೇನೆ ಎಂದು ಭ್ರಮಿಸುವ ಆ ಮಕ್ಕಳು, ಕಣ್ಣಿಗೆ ಸಡಿಲವಾಗಿ ಬಟ್ಟೆ ಕಟ್ಟಿಕೊಂಡು, ತಮ್ಮ ಕಣ್ಣುಗಳ ಮಟ್ಟಕ್ಕಿಂತ ಕೆಳಗೆ ಹಿಡಿದು ತೋರಿಸುವ ನೋಟಿನ ಸಂಖ್ಯೆಯನ್ನು ಹೇಳುವುದು ಹಾಗೂ ವಿವಿಧ ಬಣ್ಣದ ಚೆಂಡುಗಳನ್ನು ಗುರುತಿಸುವುದು, ಚಿತ್ರಗಳಿಗೆ ಬಣ್ಣವನ್ನು ತುಂಬುವುದು, ಪುಸ್ತಕಗಳನ್ನು ಓದುವುದು ಹಾಗೂ ಬರೆಯುವ ಚಟುವಟಿಕೆಗಳನ್ನು ಮಾಡುತ್ತಾರೆ.
ಮಕ್ಕಳು ತಮ್ಮ ಕಣ್ಣಿನ ಮಟ್ಟಕ್ಕಿಂತ ಮೇಲೆ, ಕಣ್ಣಿನ ಎಡ ಅಥವಾ ಬಲ ಬದಿಗಳಲ್ಲಿ, ತಲೆಯ ಮೇಲೆ, ಬೆನ್ನಿನ ಹಿಂದೆ ಹಿಡಿದು ತೋರಿಸುವ ಅಥವಾ ಸ್ವಲ್ಪ ದೂರದಲ್ಲಿರುವ, ಗೋಡೆಯ ಆಚೆಗಿರುವ ವಸ್ತುಗಳನ್ನು ಗುರುತಿಸಲು, ಓದಲು ಅಥವಾ ನೋಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕಿದೆ. ಮಕ್ಕಳ ಕಣ್ಣುಗಳನ್ನು ಅವರ ಕಣ್ಣುಗಳ ಕೆಳಭಾಗದಲ್ಲಿ ಸಂದು ಉಳಿಯದಂತೆ ಬಿಗಿಯಾಗಿ ಕಟ್ಟುವುದು ಅಥವಾ ಕಟ್ಟಿದ ಬಟ್ಟೆಯ ಮೇಲೆ ಸ್ವಿಮ್ಮಿಂಗ್ ಮಾಡುವಾಗ ಬಳಸುವ ಗಾಗಲ್ಸ್ ಹಾಕಿ ಬಿಗಿ ಮಾಡಿದರೆ, ಮೂಗಿನ ಕೆಳಗೆ ಇಣುಕಿ ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ. ಆಗ, ಗಾಂಧಾರಿ ವಿದ್ಯೆಯನ್ನು ಕಲಿತಿದ್ದೇನೆ ಎಂದು ಹೇಳುವ ಮಕ್ಕಳಿಗೆ ಯಾವುದೇ ವಸ್ತುಗಳನ್ನು ಓದಲು ಅಥವಾ ನೋಡಲು ಸಾಧ್ಯವಾಗುವುದಿಲ್ಲ. ಅನೇಕ ಶಾಲಾ ಕಾರ್ಯಕ್ರಮಗಳಲ್ಲಿ ‘ಈ ವಿದ್ಯೆ ಒಂದು ಮೋಸ’ ಎಂಬುದನ್ನು ನಾನು ಪ್ರಾಯೋಗಿಕವಾಗಿ ತೋರಿಸಿದ್ದೇನೆ.
ಗಾಂಧಾರಿ ವಿದ್ಯೆಯು ಸತ್ಯವೇ ಆಗಿದ್ದಲ್ಲಿ, ಅದನ್ನು ಕಣ್ಣಿರುವ ಮಕ್ಕಳಿಗೆ ಕಲಿಸುವುದರಲ್ಲಿ ಅರ್ಥವಿಲ್ಲ. ಬದಲಾಗಿ, ಕುರುಡು ಮಕ್ಕಳಿಗೆ ಆ ವಿದ್ಯೆಯನ್ನು ಕಲಿಸಿ, ಅವರು ಕುರುಡು ಆಗಿದ್ದರೂ ಎಲ್ಲವನ್ನೂ ನೋಡುವಂತೆ ದೃಷ್ಟಿ ನೀಡಬಹುದು ಅಲ್ಲವೇ?
ಮುಗ್ಧ ಮಕ್ಕಳನ್ನು ಸುಳ್ಳು ಹೇಳುವಂತೆ ಪ್ರೇರೇಪಿಸುವ ಮತ್ತು ಮೋಸದ ಉದ್ದೇಶಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಿರುವ, ಪೋಷಕರಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ಯಶಸ್ಸಿಗೆ ನೇರ ದಾರಿಗಳಿವೆಯೇ ಹೊರತು, ಅಡ್ಡ ದಾರಿಗಳಿಲ್ಲ ಎನ್ನುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಾಗಿದೆ ಹಾಗೂ ತಮ್ಮ ಮಕ್ಕಳನ್ನು ಪ್ರಯೋಗಕ್ಕೆ ಒಡ್ಡುವುದನ್ನು ನಿಲ್ಲಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.