ADVERTISEMENT

ಸಂಗತ: ತತ್ತ್ವಶಾಸ್ತ್ರದ ನಿರ್ಲಕ್ಷ್ಯ, ದುರಂತಕ್ಕೆ ಆಹ್ವಾನ

ಚಂದ್ರಶೇಖರ ತಾಳ್ಯ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
   
ವರ್ತಮಾನದ ಬಿಕ್ಕಟ್ಟುಗಳಿಗೆ ತತ್ತ್ವಶಾಸ್ತ್ರದ ನಿರ್ಲಕ್ಷ್ಯವೂ ಒಂದು ಕಾರಣವಾಗಿದೆ. ತತ್ತ್ವಶಾಸ್ತ್ರದ ಗೈರುಹಾಜರಿಯಲ್ಲಿ ಸಂಸ್ಕೃತಿಯ ತಳಹದಿಯು ಸಡಿಲವಾಗುತ್ತದೆ.

ತತ್ತ್ವಶಾಸ್ತ್ರವನ್ನು ಕುರಿತು ಖ್ಯಾತ ತತ್ತ್ವಜ್ಞಾನಿ ಬರ್ಟ್ರೆಂಡ್‌ ರಸೆಲ್‌ ‘ನೋ ಮ್ಯಾನ್ಸ್‌ ಲ್ಯಾಂಡ್‌’ ಎನ್ನುತ್ತಾನೆ. ತತ್ತ್ವಶಾಸ್ತ್ರವು ಕಲೆಯೋ ವಿಜ್ಞಾನವೋ ಎಂಬ ಜಿಜ್ಞಾಸೆಯಲ್ಲಿ, ಅದು ಎರಡೂ ಅಲ್ಲ ಅಥವಾ ಎರಡೂ ಹೌದು ಎನ್ನುವುದಕ್ಕೆ ರಸೆಲ್‌ ನೀಡಿದ ವ್ಯಾಖ್ಯಾನ ಇದು. ತತ್ತ್ವಶಾಸ್ತ್ರವು ಕಲೆ, ವಿಜ್ಞಾನಗಳೆಲ್ಲ ದರ ಆಳದಲ್ಲಿ ಅಂತರಗಂಗೆಯಂತೆ ಸದಾ ಚಲನಶೀಲ ಆಗಿರುವಂತಹುದು. ಇದ್ದೂ ಇಲ್ಲದಂತೆ ತನ್ನ ಅಸ್ಮಿತೆಯನ್ನು ಖಚಿತಗೊಳಿಸಿರುತ್ತದೆ. ಅದರ ಸೂಕ್ಷ್ಮ ಇರುವಿಕೆ ಸಾದಾ ಕಣ್ಣುಗಳಿಗೆ ಅಗೋಚರ. ಆದುದರಿಂದಲೇ ಅದನ್ನು ಉಪೇಕ್ಷೆ ಮಾಡುವವರೇ ಹೆಚ್ಚು. ತತ್ತ್ವಶಾಸ್ತ್ರದ ಗಂಭೀರ ಚಿಂತನೆಯ ತಳಹದಿಯಿಲ್ಲದೆ ಯಾವ ವಿಜ್ಞಾನವೂ, ಶಾಸ್ತ್ರವೂ ಪೂರ್ಣ ಎನಿಸಿಕೊಳ್ಳಲಾರವು. ಈ ಕಾರಣದಿಂದಲೇ ಅದನ್ನು ಶಾಸ್ತ್ರಗಳ ಶಾಸ್ತ್ರ, ವಿಜ್ಞಾನಗಳ ವಿಜ್ಞಾನ, ಎಲ್ಲ ಶಾಸ್ತ್ರಗಳ ತಾಯಿಬೇರು ಎನ್ನಲಾಗುತ್ತದೆ. ಆದರೆ, ಪ್ರಸ್ತುತದಲ್ಲಿ ಈ ತಾಯಿಯನ್ನು ಸಲಹುವವರು ಕಾಪಿಡುವವರು ವಿರಳ.

ಭಾರತದಲ್ಲಂತೂ ಈಗ ಅದು ಮುಳುಗುತ್ತಿರುವ ಹಡಗು. ಹಿಂದಿನ ಶತಮಾನದ 70ರ ದಶಕದಿಂದಲೇ ಅದರ ಅವನತಿ ಪ್ರಾರಂಭವಾಯಿತೆನ್ನಬೇಕು. 90ರ ದಶಕದ ತನಕವೂ ಏದುಸಿರುಬಿಡುತ್ತಾ ಹೇಗೋ ಜೀವ ಹಿಡಿದುಕೊಂಡಂತಿದ್ದ ತತ್ತ್ವಶಾಸ್ತ್ರವು ಜಾಗತೀಕರಣದ ರಣಬಿರುಗಾಳಿಗೆ ಸಿಕ್ಕು ಸಂಪೂರ್ಣ ಮಸುಕಾಗಿ ಹೋಯಿತು. ಈಗ ಅದು ಯಾರಿಗೂ ಬೇಡವಾದ ಕೂಸಾಗಿ ಮೂಲೆಯಲ್ಲೆಲ್ಲೋ ಶಾಶ್ವತ ರೋಗಶಯ್ಯೆಯಲ್ಲಿ ದುಪ್ಪಡಿ ಹೊದ್ದು ಮಲಗಿರುವಂತೆ ಕಾಣಿಸುತ್ತದೆ. ಬದಲಾದ ಜೀವನಶೈಲಿ, ಗ್ರಾಹಕ ಕೇಂದ್ರಿತ ಸಂಸ್ಕೃತಿಯ ನಿಷ್ಠುರ ಬೆಳವಣಿಗೆ, ವ್ಯಾಪಾರೀಕರಣಗೊಂಡ ರಾಜಕಾರಣ ಅಂದರೆ ತತ್ತ್ವರಹಿತ ರಾಜಕಾರಣ, ನೈತಿಕತೆ ಇಲ್ಲದ ಶಿಕ್ಷಣ, ವ್ಯಕ್ತೀಕರಣದ ಅತಿರೇಕಗಳಿಂದಾಗಿ ಜೀವನ ಸಂತೋಷವನ್ನೇ ಅಡವಿಟ್ಟಂತಿರುವ ವಾತಾವರಣದಲ್ಲಿ ತತ್ತ್ವಶಾಸ್ತ್ರದಂತಹ ಅತ್ಯುನ್ನತ ಬೌದ್ಧಿಕ ಕ್ರಿಯೆ ನಡೆಯುವುದು ಅಸಾಧ್ಯವೇ ಸರಿ.

ಮ್ಯಾನೇಜ್‌ಮೆಂಟ್‌ ಎನ್ನುವ ಪೆಡಂಭೂತದ ಬೆನ್ನು ಹತ್ತಿ ವಿದ್ಯಾರ್ಥಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯಗಳು ಇನ್ನಿಲ್ಲದ ಉತ್ಸಾಹದಿಂದ ಶೈಕ್ಷಣಿಕ ವ್ಯವಹಾರವನ್ನು ಕುದುರಿಸುತ್ತಿರುವಾಗ– ನಾನು ಯಾರು? ನಾನು ವಾಸಿಸುತ್ತಿರುವ ಈ ಸುಂದರ ಭುವನದ ಕರ್ತೃ ಯಾರಿರಬಹುದು? ಈ ಆಕಾಶ, ಈ ತಾರೆ, ಈ ನೀಹಾರಿಕೆಗಳ ಅಸದೃಶ ಚೆಲುವಿನ ಗುಟ್ಟೇನಿರಬಹುದು? ಹಗಲಿರುಳುಗಳ ಆವರ್ತನದ ನಿಯತಗತಿಯ ಆಳದಲ್ಲಿ ಯಾವ ಶಕ್ತಿ ಅಡಗಿದ್ದೀತು? ಮತ-ಧರ್ಮಕ್ಕೂ ಧರ್ಮಕ್ಕೂ ವ್ಯತ್ಯಾಸ ವಿದೆಯೇ? ನಾವು ಆಚರಿಸುವ ಆಚರಣೆಗಳಿಗೆ, ನೇಮಗಳಿಗೆ ಅರ್ಥ ವಿದೆಯೆ? ಎಂಬಂತಹ ಚಿಂತನಪರವಾದ ತಳದ ಪ್ರಶ್ನೆಗಳಿಗೆ
ಉತ್ತರ ಕಂಡುಕೊಳ್ಳುವ ಕುತೂಹಲ, ತಾಳ್ಮೆ, ವ್ಯವಧಾನ ಈಗಂತೂ ಕಣ್ಮರೆಯಾಗಿ ಹೋಗಿದೆ. ವಿಜ್ಞಾನವು ತತ್ತ್ವಶಾಸ್ತ್ರದ ಸಮಸ್ಪರ್ಧಿ ಯಾಗಿ ಅಥವಾ ಸಹವರ್ತಿಯಾಗಿ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡ ದ್ದುಂಟು. ಆಗೆಲ್ಲ ವಿಜ್ಞಾನವೂ ಒಂದುಸೊಗಸಾದ ಆಟದಂತೆಯೇ ಇತ್ತು. ಅದೀಗ ಇಂದ್ರಜಾಲ, ಮಾಯಾಜಾಲದಲ್ಲಿ ಮುಳುಗಿದೆ.

ADVERTISEMENT

ಸೃಷ್ಟಿಯ ಆತ್ಯಂತಿಕ ಸತ್ಯದ ಹುಡುಕಾಟದಲ್ಲಿ ತತ್ತ್ವಶಾಸ್ತ್ರವು ಅನೇಕ ಬಾರಿ ಯತ್ನಿಸಿ ಸೋಲುತ್ತದೆ. ದಾರ್ಶನಿಕರು ಈ ನಿಗೂಢ ವಿಶ್ವದ ವಿದ್ಯಮಾನವನ್ನು ಅರ್ಥೈಸುವಲ್ಲಿ ಅನೇಕ ಪ್ರಸ್ಥಾನಗಳು, ಪ್ರತಿಪ್ರಸ್ಥಾನಗಳು ಹುಟ್ಟಿಕೊಳ್ಳುತ್ತವೆ. ಪ್ರಭುತ್ವಗಳು ಇವನ್ನು ತಮಗೆ ಅನುಕೂಲವಾಗುವಂತೆ ಅರ್ಥೈಸಿಕೊಳ್ಳುತ್ತವೆ. ಅವು ಮತಾಚರಣೆಯ ಅಪಸವ್ಯಗಳಾಗಿ ಧರ್ಮವನ್ನು ಮಲಿನಗೊಳಿಸುತ್ತವೆ. ತತ್ತ್ವಶಾಸ್ತ್ರ ಇದರ ವಿರುದ್ಧ ಸೆಣೆಸುತ್ತಿರುತ್ತದೆ.

ಏಕ ಚಿಂತನೆ, ಏಕ ಸಂಸ್ಕೃತಿ, ಏಕ ಸಮಾಜ ಎನ್ನುವುದು ಮುನ್ನೆಲೆಯಲ್ಲಿ ಕ್ರಿಯಾಶೀಲವಾಗಿರುವ ಸಂದರ್ಭದಲ್ಲಿ ‘ಅದು ಹಾಗಿಲ್ಲ’ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಭಾರತೀಯ ತತ್ತ್ವಚಿಂತನೆಯ ವೈವಿಧ್ಯವನ್ನೂ, ಅದರ ಸಂಕೀರ್ಣ ಒಳಪದರಗಳನ್ನೂ ಪರಿಗಣಿಸುವುದು ಆರೋಗ್ಯ ಪೂರ್ಣ. ಭಾರತೀಯ ಚಿಂತನೆಯಲ್ಲಿ ನಡೆದಷ್ಟು ವೈವಿಧ್ಯಮಯವಾದ, ಬಹುತ್ವಪರವಾದ ವಾದ, ವಾಗ್ವಾದ, ಹೊಂದಾಣಿಕೆ, ದರ್ಶನವೊಂದರಲ್ಲೇ ಕಾಣಬರುವ ಅನೇಕ ಸೀಳುಗಳು ನಮ್ಮನ್ನು ದಿಗ್ಭ್ರಮೆಗೊಳಿಸುವಂತಿವೆ. ಹಾಗಾಗಿ, ಇಲ್ಲಿ ಏಕಮುಖದ ಚಿಂತನೆಗೆ ಇಂಬೇ ಇಲ್ಲ. ತತ್ತ್ವಶಾಸ್ತ್ರದ ಪರ್ಯಾಯಗಳಂತೆ ಇರುವ ಅಧ್ಯಾತ್ಮ, ಅನುಭಾವೀ ಪರಂಪರೆಗಳಂತೂ ತಮ್ಮ ಚಿಂತನ ವಿಧಾನಗಳಿಂದಲೇ ವಿಸ್ಮಯಗೊಳಿಸುವಂತಿವೆ. ಅವು ಧರ್ಮವನ್ನು ಅಪವ್ಯಾಖ್ಯಾನಗಳಿಂದ ಮುಕ್ತಗೊಳಿಸುವ, ಮತಾಚರಣೆಗಳಿಂದ ಮುಕ್ತವಾದ ಲೋಕಗ್ರಹಿಕೆಯ ಸರಿಯಾದ ಕ್ರಮಕ್ಕೆ ಆಗ್ರಹಿಸುವ, ರೂಢಿಗತ ವ್ಯವಸ್ಥೆಯ ವಿರುದ್ಧ ದಂಗೆಯೆದ್ದು ಸನ್ಮಾರ್ಗವನ್ನು ತೋರುವ ಮೌಢ್ಯ ವಿರೋಧಿ ಪ್ರಸ್ಥಾನಗಳು. ಈ ಪ್ರಸ್ಥಾನಗಳೇ ತತ್ತ್ವಶಾಸ್ತ್ರದ ನಿಜ ರೂಪಗಳಾಗಿ ಪೌರಾತ್ಯ ಚಿಂತನೆಯಲ್ಲಿ ಸಹಜವಾಗಿಯೇ ರೂಪು ಗೊಂಡಂಥವು. ಬದುಕಿನ ಸಮ್ಯಕ್ ಮಾರ್ಗವಾಗಿ ತತ್ತ್ವ ಶಾಸ್ತ್ರದ ಚಿಂತನೆ ಮಂಡನೆಯಾಗುವ ಪರಿಯೂ ಇದೇ. ಈ ಕಾರಣವೇ ಭಾರತದಲ್ಲಿ ತತ್ತ್ವಶಾಸ್ತ್ರ ಹಾಗೂ ಧರ್ಮ ಪರಸ್ಪರ ಹಾಸುಹೊಕ್ಕಾಗಿ ಸಹಬಾಳ್ವೆ ಮಾಡುತ್ತವೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಈ ಸಹಬಾಳ್ವೆಯನ್ನು ಸಹಿಸದೆ ಮತಧರ್ಮವೇ ತತ್ತ್ವ, ಧರ್ಮವೆಂಬ ಭ್ರಮೆಯನ್ನು ಬಿತ್ತುತ್ತವೆ.

ಇದನ್ನು ಮುಂದಿಟ್ಟುಕೊಂಡು ನಮ್ಮ ವಿದ್ಯಾಸಂಸ್ಥೆಗಳು ತಮ್ಮ ಮೂಲ ಕ್ರಿಯಾಶೀಲತೆಗೆ ಹೊರಳಬೇಕೆಂದರೆ ತತ್ತ್ವಶಾಸ್ತ್ರದ ಅಧ್ಯಯನವನ್ನು ಕಡ್ಡಾಯಗೊಳಿಸುವಂತಾಗ ಬೇಕು. ಅಲ್ಲಿ ಬೋಧನೆ, ಕಲಿಕೆ, ಸಂಶೋಧನೆ, ಪರೀಕ್ಷೆಗಳು ತಮ್ಮ ಸೃಜನಶೀಲತೆಯಲ್ಲಿ ಜೀವಂತಿಕೆಯನ್ನು ಪಡೆದುಕೊಳ್ಳ ಬೇಕು. ಇಲ್ಲದೇ ಹೋದರೆ ಮರಳು ದಿಣ್ಣೆಯ ಮೇಲೆ ಸಂಸ್ಕೃತಿಯ ಭವ್ಯಸೌಧ ನಿರ್ಮಾಣ ಮಾಡಿದಂತಾಗಿ, ಒಂದು ದಿನ ಅದು ಕುಸಿದುಬೀಳುವುದು ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.