ಅರಣ್ಯ ಇಲಾಖೆಯ ಮುಖ್ಯ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ಇತ್ತೀಚೆಗೆ ಹೋಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಇಲಾಖೆಯಲ್ಲಿ ‘ಕನ್ನಡ ಘಟಕ’ವನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ. ಇಲಾಖೆಗೆ ಸಂಬಂಧಪಟ್ಟ ತಾಂತ್ರಿಕ ಪದಕೋಶವನ್ನು ಪ್ರಕಟಿಸಬೇಕು ಎಂದಿದ್ದಾರೆ. ನಿಜವೆಂದರೆ, ಇಂಥ ಕನ್ನಡ ಘಟಕಗಳು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಸ್ಥಾಪನೆ ಆಗಬೇಕು.
1963ರಷ್ಟು ಹಿಂದೆಯೇ ಕರ್ನಾಟಕ ಅಧಿಕೃತ ಭಾಷಾ ಕಾಯ್ದೆಯು ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯನ್ನಾಗಿ ಘೋಷಿಸಿ, ಅದರ ಅನುಷ್ಠಾನದಲ್ಲಿ ಸೂಕ್ತವಾದ ಹಂತಗಳನ್ನು ಸೂಚಿಸಿತ್ತು. ಈ ಹೊತ್ತಿಗೆ ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸೌಧದ ಇಲಾಖೆಗಳವರೆಗೆ ಎಲ್ಲವೂ ಕನ್ನಡದಲ್ಲಿ ನಡೆಯ
ಬೇಕಾಗಿತ್ತು. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ತಕ್ಕಮಟ್ಟಿಗೆ ಆಗಿದ್ದರೂ ರಾಜ್ಯ ಮಟ್ಟದ ಹಲವಾರು ಇಲಾಖಾ ಕಚೇರಿಗಳಲ್ಲಿ ಕನ್ನಡದ ಬಳಕೆ ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ. ಅಷ್ಟೇ ಅಲ್ಲ, ಕನ್ನಡ ಭಾಷೆಯ ಬಳಕೆಯೂ
ನಿರೀಕ್ಷಿಸುವಷ್ಟು ಪರಿಣಾಮಕಾರಿಯಾಗಿಲ್ಲ.
ಇತ್ತೀಚೆಗೆ ಶಿಕ್ಷಣ ಇಲಾಖೆಯ ಒಂದು ಪ್ರಮುಖ ವಿಭಾಗದ ನೂರಕ್ಕೂ ಹೆಚ್ಚು ಪುಟದ
ಪತ್ರವ್ಯವಹಾರದ ಸಾಮಗ್ರಿಯನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಮಾಡಬೇಕಾದ ಕೆಲಸ ಬಂದಿತ್ತು. ಅಲ್ಲಿನ ಪತ್ರಗಳು, ಆದೇಶಗಳು, ಟಿಪ್ಪಣಿಗಳಲ್ಲಿ ಕನ್ನಡದ ಬಳಕೆ ಶೋಚನೀಯ ಎನ್ನಿಸಿತು.
ಕಚೇರಿಗಳಲ್ಲಿ ವಿವಿಧ ಬಗೆಯ ಪತ್ರಗಳು, ಆದೇಶಗಳ ಕರಡನ್ನು, ಟಿಪ್ಪಣಿಗಳನ್ನು ಬರೆಯುವವರು ಸಾಮಾನ್ಯವಾಗಿ ಸಹಾಯಕರು. ಅದನ್ನು ನೋಡುವ ಅಧಿಕಾರಿಗಳು ಕರಡಿನಲ್ಲಿರುವ ಕಾಗುಣಿತ ತಪ್ಪುಗಳನ್ನಾಗಲೀ, ವಾಕ್ಯರಚನೆಗಳನ್ನಾಗಲೀ ತಿದ್ದಲು ಹೋಗುವುದಿಲ್ಲ. ಇದೇ ಬರಹ ಸಹಾಯಕರಿಂದ ನಿರ್ದೇಶಕರವರೆಗೆ ಒಂದೆರಡು ಸಲ ಮೇಲೆ–ಕೆಳಗೆ ಓಡಾಡಿ, ಹೋಗಬೇಕಾದ ಇಲಾಖೆಗೆ ರವಾನೆಯಾಗುತ್ತದೆ. ಆಡಳಿತ ಕನ್ನಡದ ಬಳಕೆಯ ಮಟ್ಟಿಗೆ ಅಲ್ಲಿಯೂ ಇದೇ ಸ್ಥಿತಿ.ಕೆಲವೇ ಉದಾಹರಣೆಗಳನ್ನು ಬಿಟ್ಟರೆ ಆಡಳಿತದಲ್ಲಿ ಕನ್ನಡದ ಬಳಕೆಯ ಸ್ಥಿತಿ ಇಷ್ಟೇ ಚಿಂತಾಜನಕವಾಗಿದೆ.
ಇದಕ್ಕೆ ಕಾರಣವಿದೆ. ಆಡಳಿತ ಕನ್ನಡ ಎನ್ನುವುದು ಕನ್ನಡ ಭಾಷೆಯಲ್ಲಿಯೇ ಒಂದು ವಿಶಿಷ್ಟ ತಾಂತ್ರಿಕ ಶೈಲಿ ಎನ್ನುವುದನ್ನು ನಾವು ಮನಗಂಡಿಲ್ಲ. ಇದರಲ್ಲಿ ಬಳಕೆಯಾಗುವ ಪದಗಳಿಂದ ಹಿಡಿದು, ವಾಕ್ಯರಚನೆ, ಲೇಖನ ಚಿಹ್ನೆಗಳು, ನಮೂನೆಯ ವಿನ್ಯಾಸ ಎಲ್ಲವೂ ವಿಶಿಷ್ಟವಾಗಿರುತ್ತದೆ. ಇದು ಯಾರಿಗೂ ಹುಟ್ಟಿನಿಂದಲೇ ಬರುವುದಿಲ್ಲ, ಇದನ್ನು ಕಲಿಯಬೇಕಾಗುತ್ತದೆ. ಎಲ್ಲಿ ಕಲಿಯುವುದು? ನಮ್ಮ ಶಾಲೆಗಳಲ್ಲಿ ಹತ್ತು ವರ್ಷಗಳಲ್ಲಿ ಕಲಿಸುವ ಕನ್ನಡದಲ್ಲಿ ನಾವು ಹೆಚ್ಚಿನಂಶ ಸಾಹಿತ್ಯ, ಅದಕ್ಕೆ ತಕ್ಕ ವ್ಯಾಕರಣ, ಛಂದಸ್ಸು ಕಲಿಯುತ್ತೇವೆ. ವ್ಯವಹಾರ, ಆಡಳಿತ, ವಿಜ್ಞಾನ– ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯ ಕುರಿತು ಶಾಲೆಗಳಲ್ಲಿ ಏನನ್ನೂ ಕಲಿಯುವುದಿಲ್ಲ. ಇನ್ನೆಲ್ಲಿ ಕಲಿಯಬೇಕು? ಎಲ್ಲಿಯೂ ಇಲ್ಲ. ಹೀಗಾಗಿ, ಸರ್ಕಾರಿ ನೌಕರಿಗೆ ಸೇರಿದ ನಂತರ ಶಾಲೆಯಲ್ಲಿ ಕಲಿತ ಕನ್ನಡ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.
1970ರ ದಶಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯವೇ ವಿವಿಧ ಹಂತಗಳ ಆಡಳಿತ ಕನ್ನಡ ತರಬೇತಿಗಳನ್ನು ಹಮ್ಮಿಕೊಳ್ಳುವುದಾಗಿತ್ತು. ಇದರಲ್ಲಿ, ಮೈಸೂರಿನ ಭಾರತೀಯ ಭಾಷೆಗಳ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಭಾಷಾಂತರ ಇಲಾಖೆ ಇವೂ ಒಳಗೊಂಡಿದ್ದವು. ಅಗ, ಆಡಳಿತ ಕನ್ನಡ ಕೈಪಿಡಿಗಳು, ಆಡಳಿತ ಪದಕೋಶ, ಕಾನೂನು ಪದಕೋಶ, ಇಲಾಖಾವಾರು ಪದಕೋಶಗಳು ಪ್ರಕಟವಾದವು. ತರಬೇತಿದಾರರ ತರಬೇತಿ, ತರಬೇತಿಗಳಿಗಾಗಿ ಪಠ್ಯಕ್ರಮಗಳು, ಸಾಮಗ್ರಿ ರಚಿತವಾದವು, ಇಡೀ ರಾಜ್ಯದಲ್ಲಿ ಭರಾಟೆಯಿಂದ ತರಬೇತಿಗಳು ನಡೆದವು. ಮುಂದಿನ ದಶಕದಲ್ಲಿ ಆಡಳಿತ ಕನ್ನಡದ ತರಬೇತಿಗಳು ನಿಂತೇಹೋದವು. ಆಗ ತರಬೇತಿ ಹೊಂದಿದ್ದ ಸಿಬ್ಬಂದಿ– ಅಧಿಕಾರಿಗಳು ಈಗ ನಿವೃತ್ತ
ರಾಗಿರುತ್ತಾರೆ. ಅದರ ನಂತರ ಬಂದ ಸಿಬ್ಬಂದಿ– ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ ಇಲ್ಲದೇ ಪರಿಣಾಮ
ಕಾರಿಯಾದ ಆಡಳಿತ ಕನ್ನಡ ಕೌಶಲ ಬರಬೇಕು ಎಂದರೆ, ಅದೇನು ಚಮತ್ಕಾರವೇ?
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅರಣ್ಯ ಇಲಾಖೆಯಲ್ಲಿ ‘ಕನ್ನಡ ಘಟಕ’ವನ್ನು ಸ್ಥಾಪಿಸಲು ಸೂಚಿಸಿರುವುದೇ ಒಂದು ಹೊಸ ಸಬಲೀಕರಣಕ್ಕೆ ನಾಂದಿಯಾಗಲಿ. ಅವರು ಹೇಳಿರುವ ಹಾಗೆ, ಪ್ರತಿಯೊಂದು ಇಲಾಖೆಯ ಪ್ರಧಾನ ಕಚೇರಿಯಲ್ಲಿ ಒಂದು ‘ಆಡಳಿತ ಕನ್ನಡ’ ಘಟಕ ತೆರೆಯಬೇಕು. ಅದರಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಆಡಳಿತ ಕನ್ನಡದಲ್ಲಿ ಸಿಬ್ಬಂದಿ– ಅಧಿಕಾರಿಗಳ ತರಬೇತಿಗಳು ನಡೆಯಬೇಕು. ಎಲ್ಲಾ ಇಲಾಖೆಗಳ ವಿಶಿಷ್ಟ ಪದಕೋಶ ರಚನೆ– ಪ್ರಕಟಣೆ ಆಗಬೇಕು. ಈವರೆಗೆ ಇಂಗ್ಲಿಷಿನಲ್ಲಿ
ರುವ ಸುತ್ತೋಲೆ, ಅದೇಶ, ಕೈಪಿಡಿಗಳನ್ನು ಆಯಾ ಇಲಾಖೆಯೇ ಅನುವಾದಿಸಿಕೊಳ್ಳುವಂತಾಗಬೇಕು. ಇಲಾಖೆಯಲ್ಲಿ ಈಗಲೂ ಇರಬಹುದಾದ, ಇಲಾಖಾ ಕನ್ನಡ ಪರೀಕ್ಷೆಗಳನ್ನು ಪಾಸು ಮಾಡುವ ಅಗತ್ಯವುಳ್ಳ ಸಿಬ್ಬಂದಿಗೆ, ಕನ್ನಡೇತರರಿಗೆ ಕನ್ನಡ ತರಬೇತಿಗಳನ್ನು ನಡೆಸಬೇಕು. ಪ್ರಾಧಿಕಾರ ಇಂಥ ಘಟಕದ ರಚನೆ ಮತ್ತು ಉದ್ದೇಶಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು. ಇದಕ್ಕೆ ಹೆಚ್ಚುವರಿ ಹಣ ಬೇಕಾಗುತ್ತದೆ. ಆದರೆ ಹಳಸಾದ, ಗೊಂದಲಮಯ ಕನ್ನಡವನ್ನು ಬಳಸಿ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಂತರ ನಷ್ಟ ಉಂಟುಮಾಡುವ ಮತ್ತು ವಿಳಂಬಕ್ಕೆ ಕಾರಣವಾಗುವುದರ ಬದಲಿಗೆ ಈ ಹೂಡಿಕೆ ಹೆಚ್ಚು ಸುಸ್ಥಿರವಾದದ್ದು.
ಎಲ್ಲಕ್ಕಿಂತ ಹೆಚ್ಚಾಗಿ ಶಾಲೆಗಳಲ್ಲಿ ಕಲಿಸುವ ಕನ್ನಡ ಪಠ್ಯಕ್ರಮದಲ್ಲಿ ವ್ಯಾವಹಾರಿಕ, ಆಡಳಿತ, ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ, ವಾಣಿಜ್ಯ ಕನ್ನಡವನ್ನು ಪರಿಚಯಿಸುವ ಕೆಲಸ ತುರ್ತಾಗಿ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.