ADVERTISEMENT

ಸ್ವಹಿಂಸೆ: ಪ್ರಕೃತಿಯ ಕ್ರೂರ ಅಣಕ

ಶರೀರ ಸೊರಗಿಸಿಕೊಳ್ಳುವುದರಿಂದ ಯಾವ ಸದ್ಗತಿ, ಸೌಖ್ಯ, ಪುರುಷಾರ್ಥ?

ಯೋಗಾನಂದ
Published 21 ಮಾರ್ಚ್ 2021, 19:31 IST
Last Updated 21 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರಿನಲ್ಲಿ ಪ್ರಧಾನ ಅರ್ಚಕರೊಬ್ಬರು ಹೊಂಡ ಹಾಯುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದರಿಂದ ಮೃತಪಟ್ಟ ಸುದ್ದಿ (ಪ್ರ.ವಾ. ಮಾರ್ಚ್‌ 14) ವಿಷಾದ, ಬೇಸರ ತರುವಂಥದ್ದು. ವಿಷಾದವು ದಾರುಣ ಸಾವಿಗಾಗಿ ಮತ್ತು ಬೇಸರವು ಬೆಂಕಿಯ ಅಸಲಿಯತ್ತು ತಿಳಿದೂ ಕೈಯಾರೆ ಹೀಗೆ ಅವಘಡ ತಂದುಕೊಂಡಿದ್ದಕ್ಕಾಗಿ.

ಕಾಳಿದಾಸ ತನ್ನ ‘ಕುಮಾರಸಂಭವಮ್’ ಮಹಾಕಾವ್ಯದಲ್ಲಿ ‘ಶರೀರಮಾದ್ಯಮ್ ಖಲು ಧರ್ಮ ಸಾಧನಮ್’- ಶರೀರದ ಮೂಲಕವೇ ಧರ್ಮವನ್ನು ಅರ್ಜಿಸತಕ್ಕದ್ದು ಎಂದಿದ್ದಾನೆ. ಈ ಅದ್ಭುತ ನುಡಿಯನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ತನ್ನ ಧ್ಯೇಯವಾಕ್ಯವಾಗಿಸಿ
ಕೊಂಡಿದೆ. ತನ್ನ ಚೆನ್ನುಡಿ ಎರಡು ಸಾವಿರ ವರ್ಷಗಳ ನಂತರ ಒಂದು ಮಹಾಸಂಸ್ಥೆಯ ಲಾಂಛನವನ್ನು ಅಲಂಕರಿಸೀತೆಂದು ಆ ಮಹಾಕವಿ ಭಾವಿಸಿರಲಿಕ್ಕಿಲ್ಲ. ದೃಢ ಶರೀರದಲ್ಲಿ ದೃಢ ಮನಸ್ಸಿದ್ದರೇನೆ ಯಶಸ್ವಿಯಾಗಿ ಧರ್ಮಪಾಲನೆ.

ಎರಡನೇ ಪೋಪ್ ಜಾನ್ ಪಾಲ್ ಅವರ ಸಾರ್ವಕಾಲಿಕ ನುಡಿಯಿದು: ‘ವಿಜ್ಞಾನವು ಧರ್ಮವನ್ನು ದೋಷ ಹಾಗೂ ಮೌಢ್ಯದಿಂದ ದೂರವಿಡುತ್ತದೆ. ಧರ್ಮವು ವಿಜ್ಞಾನವನ್ನು ನಿರಂಕುಶ ನಿಲುವಿನಿಂದ ಬೇರ್ಪಡಿಸುತ್ತದೆ’. ‘ಸಂಪ್ರದಾಯವೆಂಬ ನೀರಿನಲ್ಲಿ ಈಜುವುದು ಸರಿಯೆ, ಆದರೆ ಮುಳುಗುವುದು ಆತ್ಮಹತ್ಯೆಯಾದೀತು’ ಎಂದು ಗಾಂಧೀಜಿ ಎಚ್ಚರಿಸಿದ್ದರು.‌

ADVERTISEMENT

ಅಂಧಶ್ರದ್ಧೆ, ಮೂಢಾಚರಣೆಗಳಿಗೆ ಶಿಕ್ಷಣದ ಕೊರತೆಯನ್ನೇ ಗುರಿಯಾಗಿಸುತ್ತೇವೆ. ಆದರೆ ಅನಕ್ಷರ ಸ್ಥರಿಗಿಂತಲೂ ಸಾಕ್ಷರರಲ್ಲೇ ಹೆಚ್ಚಾಗಿ ಅವು ತಾಂಡವ ವಾಡುತ್ತವೆ! ಏನೋ ನಮ್ಮ ಪೂರ್ವಜರು ಹೀಗೆ ನಡೆದುಕೊಳ್ಳುತ್ತಿದ್ದರು, ನಾವೂ ಪಾಲಿಸುತ್ತಿದ್ದೇವೆ ಎಂಬ (ಅ)ಸಮರ್ಥನೆಗಳು. ಅವರವರ ನಂಬಿಕೆ ಬಿಡಿ ಎನ್ನುವ ಇತರರ ವಕಾಲತ್ತುಗಳೂ ಕಂದಾಚಾರಗಳಿಗೆ ದಕ್ಕಿರುತ್ತವೆ. ದಸರೆ ಸಂದರ್ಭದಲ್ಲಿ ಆಂಧ್ರ ಪ್ರದೇಶದ ದೇವರಗಟ್ಟು ದೇಗುಲದಲ್ಲಿ ಭಕ್ತರು ಪರಸ್ಪರ ಹಣೆಗೆ ಪೆಟ್ಟಾಗುವಂತೆ ದೊಣ್ಣೆಗಳಿಂದ ಹೊಡೆದಾಡಿಕೊಳ್ಳುತ್ತಾರೆ. ಕೆಲ ವರ್ಷಗಳ ಹಿಂದೆ ಭಕ್ತಿಯ ಅತಿರೇಕದಲ್ಲಿ ಒಬ್ಬ ತನ್ನ ಎರಡೂ ಕಣ್ಣುಗಳನ್ನು ಕಿತ್ತುಕೊಂಡ ಕರುಣಾ ಜನಕ ಪ್ರಸಂಗ ನಡೆದಿತ್ತು. ಇಂಥ ಆತ್ಮವಿಕೃತಿಗಳು ಪ್ರಕೃತಿಗೆ ವಿರುದ್ಧದ ನಡೆಗಳು.

ಅಮೆರಿಕದ ಪ್ರಸಿದ್ಧ ದೇವತಾಶಾಸ್ತ್ರಜ್ಞ ವಿಲಿಯಮ್ ಕ್ಯಾವನಾಗ್ ‘ಧಾರ್ಮಿಕ ಹಿಂಸೆ’ ಧಾರ್ಮಿಕವೇ ಅಲ್ಲ, ಅದೊಂದು ಮೂಲ ಸ್ವರೂಪದ ವಿಕೃತಿ ಎನ್ನುತ್ತಾರೆ. ಭಾರತದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾನಸಿಕ ದುರ್ಬಲರನ್ನು ಹೊಡೆಯುವ ರೂಢಿಯಿದೆ. ರೋಗ ಪ್ರತಿರೋಧ ಶಕ್ತಿ ಹೆಚ್ಚುವುದೆಂದು ಭಾವಿಸಿ ಮಕ್ಕಳನ್ನು 20-30 ಅಡಿಗಳ ಮೇಲಿನಿಂದ ಎಸೆಯಲಾಗುತ್ತದೆ! ಕೆಳಗೆ ಅವರನ್ನು ಆತುಕೊಳ್ಳಲು ಬಟ್ಟೆ ಹಿಡಿಯು ವವರಿರುವುದು ಸರಿ. ಆದರೆ ಕಂದಮ್ಮಗಳು, ಪೋಷಕರು ಅನುಭವಿಸುವ ತಲ್ಲಣ, ಭಯ ಕಲ್ಪಿಸಿ ಕೊಳ್ಳಲಾಗದು. ಸತ್ಯದ ಪ್ರಮಾಣಕ್ಕೆ ಅಂಗೈಯಲ್ಲಿ ಕರ್ಪೂರ ಉರಿಸುವುದು, ಕಾದ ಎಣ್ಣೆಯಲ್ಲಿ ಕೈ ಅದ್ದು ವುದು ಅದೆಷ್ಟು ಭೀಕರ. ನಾಲಿಗೆ ಚುಚ್ಚಿಕೊಳ್ಳುವುದು, ಗಲ್ಲದಿಂದ ಗಲ್ಲಕ್ಕೆ ದಬ್ಬಳ ತೂರಿಸಿಕೊಳ್ಳುವುದು, ತಲೆಯಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವುದು, ಮುಳ್ಳಿನ ಮೇಲೆ ನಿಲ್ಲುವಂತಹ ಸ್ವಹಿಂಸೆಗಳು ನೋಡುಗರಿಗೇ ಸಹಿಸುವುದು ಶಿಕ್ಷೆಯಾಗುತ್ತವೆ. ಇವೆಲ್ಲ ವನ್ನೂ ಮೀರಿಸುವಂತೆ ‘ಸಿಡಿ’ ಎಂಬ ಅತಿ ಕ್ರೂರ ಸ್ವದಂಡನೆ. ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಉಯ್ಯಾಲೆ ಯಾಡುವುದು, ಬಂಡಿ ಎಳೆಯುವುದು. ಶರೀರ ಸೊರಗಿಸಿಕೊಳ್ಳುವುದರಿಂದ ಯಾವ ಸದ್ಗತಿ, ಸೌಖ್ಯ, ಪುರುಷಾರ್ಥ?

ಅಪ್ರತಿಮ ವಿಚಾರವಾದಿ ಬುದ್ಧನ ಕುರಿತ ಒಂದು ಕಥೆ ಸ್ವಾರಸ್ಯಕರವಾಗಿದೆ. ಬುದ್ಧ ತನ್ನ ಆಪ್ತ ಶಿಷ್ಯ ಆನಂದ ನನ್ನು ಒಂದು ದಿನ ಕರೆದು ‘ನೀನಿಂದು ತುರ್ತಾಗಿ ತಲೆ ಬೋಳಿಸಿಕೊಳ್ಳಬೇಕು’ ಎಂದು ಆದೇಶಿಸುತ್ತಾನೆ. ಆನಂದ ಗುರುವಿನ ಆಜ್ಞಾನುಸಾರ ನಡೆದುಕೊಳ್ಳುತ್ತಾನೆ. ಈ ಘಟನೆಯಾದ ಆರು ತಿಂಗಳಿಗೆ ಆನಂದ ಆ ತನಕ ತನ್ನ ತಲೆಗೂದಲು ಜಟೆಯಂತೆ ಬೆಳೆದಿದ್ದ ಕಾರಣ ಗುರುವಿನ ಅಪ್ಪಣೆಗೆ ಕಾಯದೆ ತಾನಾಗಿಯೇ ತಲೆ ಬೋಳಿಸಿಕೊಳ್ಳುತ್ತಾನೆ. ಬುದ್ಧ ಶಿಷ್ಯನನ್ನು ಮೆಚ್ಚುವ ಬದಲು ರೇಗುತ್ತಾನೆ. ‘ಇದೇನು ವಿಚಿತ್ರ ಗುರುಗಳೇ, ತಾವು ನನ್ನನ್ನು ಹೊಗಳುವಿರೆಂದು ಭಾವಿಸಿದ್ದೆ....ಹೀಗೆ ದೂಷಿಸಿದಿರಲ್ಲ?’ ಅಂತ ಖಿನ್ನನಾಗುತ್ತಾನೆ ಆನಂದ.

‘ಅಲ್ಲಪ್ಪ, ಅಂದು ಗುಹೆಯೊಳಗೆ ನೀನು ನನಗೆ ಅಮೂಲ್ಯ ತಾಳೆಪತ್ರಗಳನ್ನು ಹುಡುಕುವುದಿತ್ತು. ಕತ್ತಲೆ ಯನ್ನು ನಿನ್ನ ತಲೆಗೂದಲು ಮತ್ತೂ ಹೆಚ್ಚಿಸದಿರಲಿ ಅಂತ ತಲೆ ಬೋಳಿಸಿಕೊಳ್ಳುವಂತೆ ಸೂಚಿಸಿದೆ. ಇಂದು ನಿನಗೆ ಆ ಕೆಲಸವಿಲ್ಲ, ಬೋಳಿಸುವ ಅಗತ್ಯವೂ ಇಲ್ಲ. ಅಂದೇ ನೀನು ನನ್ನನ್ನು ಏಕೆ, ಏನು ಅಂತ ವಿಚಾರಿಸ ಬಹುದಿತ್ತು. ಅದಕ್ಕೇ ಹೇಳುವುದು, ಪ್ರಶ್ನಿಸದೆ ಯಾವುದೇ ಕೆಲಸ ಮಾಡಬಾರದೆಂದು’ ಎಂದನಂತೆ ಬುದ್ಧ. ಎರಡೂವರೆ ಸಹಸ್ರಮಾನಗಳ ಹಿಂದೆಯೇ ಆವಿರ್ಭವಿಸಿತ್ತು ಆ ಪ್ರಖರ ವೈಚಾರಿಕತೆ. ಕ್ರಾಂತಿಯೋಗಿ ಬಸವೇಶ್ವರರು ‘ಮಂಡೆ ಬೋಳಾದರೇನು ಮನ ಬೋಳಾಗದನಕ್ಕ’ ಎಂದಿದ್ದಾರೆ. ಧರ್ಮ, ಧಾರ್ಮಿಕ ಆಚರಣೆ
ಗಳಿಗಿಂತ ಮನುಷ್ಯನೇ ದೊಡ್ಡವನು.

ಪುರುಷ ಮತ್ತು ಸ್ತ್ರೀಯರಿಗೆ ಸಮಾನ ಶಿಕ್ಷಣ ನೀಡಿಕೆಯು ಮೌಢ್ಯಾಚರಣೆಗಳನ್ನು ಹತ್ತಿಕ್ಕುವ ಪ್ರಬಲ ಅಸ್ತ್ರ. ಇದಕ್ಕೆ ಪೂರಕವಾಗಿ ಅಂಧಶ್ರದ್ಧೆಯ ದುಷ್ಪರಿಣಾಮಗಳನ್ನು ಬಿಂಬಿಸುವ ಬೀದಿ ನಾಟಕಗಳ ಏರ್ಪಾಟು, ಚರ್ಚೆ ಹಾಗೂ ಸಂವಾದಗಳು ವ್ಯಾಪಕ ವಾಗಿ ಸಾಗಿದರೆ ಜನಜಾಗೃತಿ ಮೂಡುತ್ತದೆ. ತನ್ನ ಆತ್ಮಸಾಕ್ಷಿ ಮೆಚ್ಚುವಂತೆ ನಡೆದರೆ ಅದಕ್ಕಿಂತ ಪ್ರಮಾಣ ಬೇಡ. ಪ್ರಕೃತಿಯ ಕ್ರೂರ ಅಣಕವಾದ ಆತ್ಮಹಿಂಸೆ ಒಂದು ವ್ಯಸನ, ಭ್ರಮೆ. ಅದರ ಶಮನಕ್ಕೆ ಆತ್ಮವಿಶ್ವಾಸ ವೆಂಬ ಸಂಜೀವಿನಿಯನ್ನು ಸ್ವತಃ ದಕ್ಕಿಸಿಕೊಳ್ಳುವುದೇ ಶ್ರೇಷ್ಠ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.