ವಿಶ್ವದಾದ್ಯಂತ ಹಿರಿಯ ನಾಗರಿಕರು ಪರಿತ್ಯಾಗ, ನಿರ್ಲಕ್ಷ್ಯ ಮತ್ತು ತಿರಸ್ಕಾರದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತ್ವರಿತ ಜನಸಂಖ್ಯಾ ಬೆಳವಣಿಗೆಯ ರಾಷ್ಟ್ರವಾಗಿರುವ ಭಾರತವೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಇಳಿವಯಸ್ಸಿನ ತಿಳಿ ಮನಸ್ಸುಗಳನ್ನು ಗಾಸಿಗೊಳಿಸಲಾಗುತ್ತಿದೆ ಹಾಗೂ ಅವರ ಮಾನವ ಹಕ್ಕುಗಳ ಮೇಲೆ ನಿರಂತರ ದಾಳಿಯಾಗುತ್ತಿದೆ.
ಸರ್ಕಾರ, ಸಮಾಜ ಮತ್ತು ಸಮುದಾಯಗಳನ್ನು ಒಳಗೊಂಡ ಬಹುವಲಯ ವಿಧಾನವು ಘನತೆಯ ವೃದ್ಧಾಪ್ಯವನ್ನು ಸಾಧಿಸಲು ಅಗತ್ಯ. ಹಿರಿಯರ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಅವರ ಕೊಡುಗೆಗಳನ್ನು ಗುರುತಿಸಿ ಗೌರವಿಸುವುದು ಯಾವುದೇ ಆರೋಗ್ಯಕರ ಸಮಾಜದ ಲಕ್ಷಣ. ಈ ದಿಸೆಯಲ್ಲಿ, ಪ್ರತಿವರ್ಷದ ಜೂನ್ 15 ಅನ್ನು ‘ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನ’ವಾಗಿ ಆಚರಿಸಲಾಗುತ್ತಿದೆ. 2006ರಲ್ಲಿ ಪ್ರಾರಂಭವಾದ ಜಾಗತಿಕ ಆಂದೋಲನವು ಹಿರಿಯರ ಮೇಲಿನ ದೌರ್ಜನ್ಯವನ್ನು ತೊಡೆದು ಹಾಕುವ ಅರಿವಿನ ಪಥವನ್ನು ಸೃಷ್ಟಿಸುವ ಗುರಿ ಹೊಂದಿದೆ.
ಹಿರಿಯ ನಾಗರಿಕರು ಸಮಾಜದ ಪ್ರಮುಖ ಭಾಗ; ಸಾಮಾಜಿಕ ಮೌಲ್ಯಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ
ತಲುಪಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಜನವರ್ಗ. ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರಿಗೆ ಗೌರವದ ಸ್ಥಾನಮಾನವಿತ್ತು. ಕುಟುಂಬ ಗಳು ಒಡೆಯತೊಡಗಿ ದಂತೆಲ್ಲ ಹಿರಿಯ ಸದಸ್ಯರ ಪ್ರಾಮುಖ್ಯವೂ ಕಡಿಮೆ ಆಗುತ್ತಿದೆ. ತಾಂತ್ರಿಕತೆ ಆಧಾರಿತ ಬದುಕು ವೃದ್ಧಾಪ್ಯದ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಿದೆ. ನಗರೀಕರಣ, ಆಧುನಿಕ ಜೀವನಶೈಲಿ, ಒತ್ತಡಗಳ ಬದುಕಿನಿಂದಾಗಿ ಹಿರಿಯರು ಕೆಲವು ಕುಟುಂಬಗಳಿಗೆ ಹೊರೆಯೆನ್ನಿಸುತ್ತಿದ್ದಾರೆ. ಅದರ ಪರಿಣಾಮವಾಗಿಯೇ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮನೆಯ ಪರಿಸರದಲ್ಲಿ ಸಾಕುಪ್ರಾಣಿಗಳಿಗೆ ದೊರಕುವ ಪ್ರೀತಿ, ಕಾಳಜಿಯೂ ದೊರೆಯದೇ ಹೋದ ಸಂದರ್ಭದಲ್ಲಿ, ಹಿರಿಯ ನಾಗರಿಕರು ಭಾವನಾತ್ಮಕವಾಗಿ ಕುಗ್ಗುತ್ತಿರುವ ಸನ್ನಿವೇಶಗಳಂತೂ ಸಾಮಾನ್ಯವೆನ್ನಿಸಿವೆ.
ತಮ್ಮ ಆಸ್ತಿ, ಆದಾಯ ಕಳೆದುಕೊಂಡು ಅನ್ನ– ಆಸರೆಗಾಗಿ ಪರಿತಪಿಸುವವರೂ ಇದ್ದಾರೆ.
ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆಗೆ ಕಾನೂನು ಬೆಂಬಲವಿದೆ. ಭಾರತ ಸಂವಿಧಾನದ 21ನೇ ವಿಧಿ
ಘನತೆಯ ವೃದ್ಧಾಪ್ಯವನ್ನು ಖಾತರಿಪಡಿಸುತ್ತದೆ. ಅಂತೆಯೇ, ಹಿರಿಯರಿಗೆ ಸಾಮಾಜಿಕ ಭದ್ರತೆ ಒದಗಿಸುವ ಹೊಣೆಗಾರಿಕೆಯು ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಕಾಯ್ದೆಯು ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಮತ್ತು ನಿರ್ಲಕ್ಷ್ಯದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಪ್ರಮುಖ ಅಸ್ತ್ರವಾಗಿದೆ. ಈ ಕಾಯ್ದೆಯು ಯಾವುದೇ ರೀತಿಯ ದೌರ್ಜನ್ಯ ಅಥವಾ ಅಮಾನವೀಯ ಪ್ರಕರಣಗಳಿಂದ ಹಿರಿಯರನ್ನು ರಕ್ಷಿಸುವ ಹಾಗೂ ಅವರಿಗೆ ಸಹಾಯ–ಸುರಕ್ಷತೆಯನ್ನು ಖಾತರಿಗೊಳಿಸುವ ಉದ್ದೇಶ ಹೊಂದಿದೆ.
ವೃದ್ಧರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅಟಲ್ ವಯೋ ಅಭ್ಯುದಯ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಯು ವೃದ್ಧಾಪ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದಿಸೆಯಲ್ಲಿ ರೂಪುಗೊಂಡಿವೆ.
ಹಿರಿಯ ನಾಗರಿಕರ ವಿರುದ್ಧ ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ತಕ್ಷಣದ ಗುಣಾತ್ಮಕ
ಹಸ್ತಕ್ಷೇಪದ ಅಗತ್ಯವಿದೆ. ಹಿರಿಯರನ್ನು ಗುರಿಯಾಗಿಸಿ ಕೊಂಡು ನಡೆಯುವ ಸೈಬರ್ ವಂಚನೆ ಹಾಗೂ ಇತರೆ ಆರ್ಥಿಕ ವಂಚನೆಗಳು ಮತ್ತು ದೈಹಿಕ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವುದು ಬಹುಮುಖ್ಯವಾಗಿದೆ. ಹಿರಿಯ ನಾಗರಿಕರ ಸುರಕ್ಷತೆಯು ಬರೀ ಕಾನೂನು ಜಾರಿಗೆ ಸಂಬಂಧಿಸಿದ್ದಲ್ಲ; ಅದು ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯೂ ಆಗಿದೆ. ಕೌಟುಂಬಿಕ ಬಂಧಗಳು, ಸಮುದಾಯ ಭಾಗವಹಿಸುವಿಕೆ ಮತ್ತು ಸರ್ಕಾರಿ ಉಪಕ್ರಮಗಳನ್ನು ಬಲಪಡಿಸುವ ಮೂಲಕ, ಹಿರಿಯರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬಹುದು.
ಹಿರಿ ತಲೆಮಾರು ಮತ್ತು ಕಿರಿ ತಲೆಮಾರುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ವೃದ್ಧರ ಅಗತ್ಯಗಳು ಮತ್ತು ಭಾವನೆಗಳಿಗೆ ಸೂಕ್ತ ಅವಕಾಶ ಮತ್ತು ಪ್ರಾಶಸ್ತ್ಯ ಸಿಗುವುದು ಕಡಿಮೆಯಾಗಿದೆ. ಇದರಿಂದಾಗಿ, ಹಿರಿಯರು ಭಾವನಾತ್ಮಕವಾಗಿ ಏಕಾಂಗಿಯಾಗಿ ಬದುಕಬೇಕಾದ ಪರಿಸ್ಥಿತಿ ಹೆಚ್ಚುತ್ತಿದೆ. ಕುಟುಂಬಗಳಲ್ಲಿ ಪರಸ್ಪರ ತಿಳಿವಳಿಕೆ ಮತ್ತು ಜವಾಬ್ದಾರಿಯ ಭಾವನೆ ಮೂಡಿಸುವುದು ಈ ಬಿಕ್ಕಟ್ಟು ನಿರ್ವಹಣೆಗಿರುವ ಮುಖ್ಯ ದಾರಿಯಾಗಿದೆ. ಬಹುಮುಖ್ಯವಾಗಿ, ಕಿರಿಯರು ಮತ್ತು ಹಿರಿಯರ ನಡುವಿನ ಮುಕ್ತ ಸಂಭಾಷಣೆ, ಕಿರಿಯರ ತಾಳ್ಮೆಯ ವರ್ತನೆ ಮತ್ತು ಮಾನವೀಯ ಸ್ಪಂದನ ಅಗತ್ಯ. ಸಾಮಾಜಿಕ ಬಂಡವಾಳ ನಿರ್ಮಾಣ ಪ್ರಕ್ರಿಯೆಯಲ್ಲಿ ಹಿರಿಯರ ಅನುಭವಗಳ ಜ್ಞಾನ ಬಹುಮುಖ್ಯವಾದುದು. ಆ ಅನುಭವವನ್ನು ಬಳಸಿಕೊಳ್ಳುವ ಪ್ರಾಂಜಲ ಮನೋಭಾವ ಕಿರಿಯರದಾಗಬೇಕು.
ಸಾಮಾಜಿಕ ಭದ್ರತೆಯೊಂದಿಗೆ ಗೌರವಯುತವಾಗಿ ಬದುಕುವ ವಾತಾವರಣವನ್ನು ಹಿರಿಯರಿಗೆ ಒದಗಿಸಿ ಕೊಡುವುದು ಸರ್ಕಾರಗಳ ಕರ್ತವ್ಯವಾಗಿರುವಂತೆಯೇ, ಸಮಾಜದ ಹೊಣೆಗಾರಿಕೆಯೂ ಆಗಿದೆ. ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆಗಳ ಕುಸಿತ, ಹೆಚ್ಚುತ್ತಿರುವ ಸಾಮಾಜಿಕ ಪ್ರತ್ಯೇಕತೆ, ಆರ್ಥಿಕ ಅಭದ್ರತೆ, ಆರೋಗ್ಯ ಸೇವೆಯ ಲಭ್ಯತೆಯಲ್ಲಿನ ಸಮಸ್ಯೆ ಮತ್ತು ಭದ್ರತಾ ವೈಫಲ್ಯದಂತಹ ಸವಾಲುಗಳು ವೃದ್ಧರ ಯೋಗಕ್ಷೇಮವನ್ನು ನಿರಂತರವಾಗಿ ಗಾಸಿಗೊಳಿಸುತ್ತಿವೆ. ಈ ದಿಸೆಯಲ್ಲಿ ಯೋಚಿಸಿ ಉತ್ತರ ಕಂಡುಕೊಳ್ಳುವುದು, ಹಿರಿಯರ ಘನತೆಯ ಬದುಕಿನ ಜೊತೆಗೆ ಕೌಟುಂಬಿಕ ಆರೋಗ್ಯಕ್ಕೂ ಅಗತ್ಯವಾದುದಾಗಿದೆ.
ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ರಾಜ್ಯಶಾಸ್ತ್ರ ವಿಭಾಗ ಗೋವಿಂದ ದಾಸ ಕಾಲೇಜು, ಸುರತ್ಕಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.