ADVERTISEMENT

ಸಂಗತ | ಲೈಂಗಿಕ ಅಸ್ಮಿತೆ: ಬೇಕು ಪ್ರಾಮಾಣಿಕತೆ

ಶಿವಲಿಂಗಸ್ವಾಮಿ ಎಚ್.ಕೆ.
Published 8 ಜುಲೈ 2025, 23:32 IST
Last Updated 8 ಜುಲೈ 2025, 23:32 IST
<div class="paragraphs"><p>ಸಂಗತ | ಲೈಂಗಿಕ ಅಸ್ಮಿತೆ: ಬೇಕು ಪ್ರಾಮಾಣಿಕತೆ</p></div>

ಸಂಗತ | ಲೈಂಗಿಕ ಅಸ್ಮಿತೆ: ಬೇಕು ಪ್ರಾಮಾಣಿಕತೆ

   

ಹುಡುಗ ಅಥವಾ ಹುಡುಗಿ ಮದುವೆಗೆ ಮುನ್ನ ತಮ್ಮ ಲೈಂಗಿಕ ಅಸ್ಮಿತೆಯನ್ನು ಮರೆಮಾಚುವ ಕಾರಣದಿಂದ ವಿವಾಹ ವಿಚ್ಛೇದನದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಈ ಪ್ರಕರಣಗಳು ದುಃಖಕರವಷ್ಟೇ ಅಲ್ಲದೆ, ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಕುಟುಂಬಗಳ ಜೀವನವನ್ನೇ ದುಸ್ತರಗೊಳಿಸುತ್ತವೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸಮಾಜದ ಆಂತರಿಕ ಮೌನ ಮತ್ತು ಅಪಹಾಸ್ಯದ ಮನೋಭಾವವನ್ನೂ ಬಹಿರಂಗಪಡಿಸುತ್ತವೆ.

ಯಾವುದೇ ವ್ಯಕ್ತಿ ತನ್ನ ನಿಜವಾದ ಲೈಂಗಿಕ ಅಸ್ಮಿತೆಯನ್ನು ಮರೆಮಾಚಿಕೊಂಡು ಸಾಂಪ್ರದಾಯಿಕ ವಿವಾಹಕ್ಕೆ ಮುಂದಾಗುವುದು, ಸಂಗಾತಿಯ ನಂಬಿಕೆಗೆ ಮಾಡುವ ಬಹುದೊಡ್ಡ ದ್ರೋಹ ಮತ್ತು ಅದನ್ನು ಸರಿಪಡಿಸುವ ಸಾಧ್ಯತೆಗಳು ತೀರಾ ಕಡಿಮೆ.

ADVERTISEMENT

ಲೈಂಗಿಕ ಅಸ್ಮಿತೆಯ ವಾಸ್ತವಗಳನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಲು ನಿರಾಕರಿಸುವ ಸಾಂಪ್ರದಾಯಿಕ ಮನೋಭಾವದವರು, ಇಂತಹ ಪರಿಸ್ಥಿತಿಯನ್ನು ಸಾಂಪ್ರದಾಯಿಕ ಮದುವೆಯ ಮೂಲಕ ಸರಿಪಡಿಸಬಹುದು ಎಂದು ಭಾವಿಸಿರುವುದು ವಿಪರ್ಯಾಸ. ಈ ರೀತಿಯ ಒತ್ತಾಯಪೂರ್ವಕ ವಿವಾಹಗಳು ಶಾಶ್ವತವಾದ ನೋವುಂಟು ಮಾಡಿ, ನ್ಯಾಯಾಲಯಗಳಲ್ಲಿ ಕೊನೆಗೊಳ್ಳುತ್ತವೆ. ಎಲ್ಲ ರೀತಿಯ ಲೈಂಗಿಕ ಅಸ್ಮಿತೆಗಳ ಕುರಿತು ಮುಕ್ತ ಮನಃಸ್ಥಿತಿಯಲ್ಲಿ ಚರ್ಚೆ ಮಾಡುವ ಮತ್ತು ಅವುಗಳನ್ನು ಒಪ್ಪಿಕೊಳ್ಳುವ ಮನೋಧರ್ಮವನ್ನು ನಮ್ಮ ಸಮಾಜ ಹೊಂದಿಲ್ಲ. ಅಮೆರಿಕದ ಸ್ತ್ರೀವಾದಿ ಲೇಖಕಿ ಈವ್ ಸೆಡ್ಜ್ವಿಕ್ ತಮ್ಮ ‘ಎಪಿಸ್ಟಮಾಲಜಿ ಆಫ್ ದಿ ಕ್ಲಾಸೆಟ್’ ಕೃತಿಯಲ್ಲಿ ಹೇಳುವಂತೆ, ‘ಅಸಾಂಪ್ರದಾಯಿಕ ಎನಿಸುವ ಲೈಂಗಿಕ ಅಸ್ಮಿತೆಗಳು ಗೋಪ್ಯತೆ ಮತ್ತು ಮೌನವನ್ನು ಅವಲಂಬಿಸುತ್ತವೆ’.

ಲೈಂಗಿಕತೆ ಕುರಿತ ಸಮಾಜದ ಅರಿವು ಹಿಂದಿನಿಂದಲೂ ಕಠಿಣ ದ್ವಂದ್ವಗಳಾದ ‘ಹೆಟೆರೋಸೆಕ್ಷುಯಾಲಿಟಿ’ ಮತ್ತು ‘ಹೋಮೋಸೆಕ್ಷುಯಾಲಿಟಿ’ ಎಂಬ ಸೀಮಿತ ವಿಭಜನೆ ಯೊಂದಿಗೆ ರೂಪುಗೊಂಡಿದೆ. ಹೆಟೆರೋಸೆಕ್ಷುಯಾಲಿಟಿ ಅಂದರೆ, ಒಪ್ಪಿತವಾದ ಅಸ್ಮಿತೆ. ಹೋಮೋಸೆಕ್ಷುಯಾಲಿಟಿ, ಒಪ್ಪಿತವಲ್ಲದ ಅಸ್ಮಿತೆ. ಈ ದ್ವಂದ್ವಗಳು ಮನುಷ್ಯರ ಲೈಂಗಿಕ ಆಯ್ಕೆ ಮತ್ತು ಅಸ್ಮಿತೆಗಳ ವ್ಯಾಪ್ತಿಯನ್ನು ಬಹಳವಾಗಿ ಸರಳೀಕರಿಸುತ್ತವೆ ಎಂದು ಈವ್ ಸೆಡ್ಜ್ವಿಕ್ ಹೇಳುತ್ತಾರೆ. ಲೈಂಗಿಕ ಅಸ್ಮಿತೆಯು ಸ್ಥಿರವಾದುದೂ ಅಲ್ಲ ಅಥವಾ ಏಕಪಕ್ಷೀಯವಾದುದೂ ಅಲ್ಲ; ಅದು ವಿಕಸನಗೊಳ್ಳುವಂತಹದ್ದು, ಬಹುಮುಖವುಳ್ಳದ್ದು ಎಂದವರು ವಿವರಿಸುತ್ತಾರೆ. ಆದರೆ, ನಮ್ಮ ಸಾಮಾಜಿಕ ವ್ಯವಸ್ಥೆಗಳಾದ ವಿವಾಹ, ಕುಟುಂಬ, ಶಿಕ್ಷಣ ಇತ್ಯಾದಿಗಳು ‘ಹೆಟೆರೋನಾರ್ಮೇಟಿವಿಟಿ’ ಎಂಬ ಕಠಿಣ ದೃಷ್ಟಿಕೋನದ ಮೇಲೆ ನಿರ್ಮಿತವಾಗಿವೆ. ಇದು, ವೈವಿಧ್ಯಮಯ ಲೈಂಗಿಕ ಅಭಿವ್ಯಕ್ತಿಗಳಿಗೆ ಮುಕ್ತವಾದ ಅವಕಾಶ ಕಡಿಮೆ ಇರುವ ದೃಷ್ಟಿಕೋನ. ಈ ಸೀಮಿತ ಚೌಕಟ್ಟು ರಹಸ್ಯ, ನಾಚಿಕೆ ಮತ್ತು ಬಲವಂತದ ಅನುಕೂಲತೆಯ ಒಂದು ಸಂಸ್ಕೃತಿಯನ್ನೂ ನಿರ್ಮಿಸುತ್ತದೆ.

ವ್ಯವಸ್ಥೆಯಲ್ಲಿನ ಸಮಸ್ಯೆಗಳು ಲೈಂಗಿಕತೆಗೆ ಮಾತ್ರ ಸೀಮಿತವಾಗಿಲ್ಲ. ಪೋಷಕರ ಪ್ರತಿಷ್ಠೆ ಮತ್ತು ಅಭಿಲಾಷೆಗೆ ತಕ್ಕಂತೆ ವಿವಾಹಗಳು ಜರುಗಲೇಬೇಕು ಎಂಬ ಹಟದಿಂದ, ಪ್ರೇಮಿಗಳೂ ತಮ್ಮ ಪ್ರೀತಿಯನ್ನು ತ್ಯಾಗ ಮಾಡುತ್ತಾರೆ; ಪೋಷಕರನ್ನು ತೃಪ್ತಿಪಡಿಸಲಿಕ್ಕಾಗಿ ಒಲ್ಲದ ಮನಸ್ಸುಗಳಿಂದ ತಮ್ಮದೇ ಜಾತಿಯವರೊಡನೆ ಪಾರಂಪರಿಕ ವಿವಾಹಗಳಿಗೆ ಒಪ್ಪುತ್ತಾರೆ. ಕೆಲವು ಪ್ರೇಮ ವಿವಾಹಗಳು ಮರ್ಯಾದೆಗೇಡು ಹತ್ಯೆಗಳಲ್ಲಿ ಕೊನೆಗೊಳ್ಳುತ್ತವೆ. ಬಹುಸಂಖ್ಯಾತರ ಸ್ಥಿತಿಯೇ ಹೀಗಿರುವಾಗ, ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಆಯ್ಕೆಗಳನ್ನು ಮುಕ್ತವಾಗಿ ಹೇಳಲು ಸಮಾಜ ಬಿಡುತ್ತದೆಯೇ?

ನೈಜ ಲೈಂಗಿಕ ಅಸ್ಮಿತೆಯನ್ನು ಮದುವೆಗೆ ಮುಂಚೆಯೇ ಬಹಿರಂಗಪಡಿಸಲು ನಾಚಿ ಅಥವಾ ಹೆದರಿ ಮದುವೆಗೆ ಒಪ್ಪಿ, ನಂತರ ತಮ್ಮ ಲೈಂಗಿಕತೆ ಕುರಿತು ಸಹಾನುಭೂತಿ ಅಪೇಕ್ಷಿಸಿದರೆ ಅದು ಸಾಧುವಾಗಲಾರದು. ಇಂತಹ ವಿವಾಹಗಳನ್ನು ದ್ರೋಹ, ಪಿತೂರಿ ಮತ್ತು ಮೋಸ ಎಂದು ಅರ್ಥೈಸಲಾಗುತ್ತದೆ.

ವಿಭಿನ್ನ ಲೈಂಗಿಕ ನೆಲೆಗಳ ಸಂಗಾತಿಗಳು ತಮ್ಮ ಸ್ಥಿತಿಯನ್ನು ಇನ್ನೊಬ್ಬರಿಗೆ ತಿಳಿಸದೆ ಅಥವಾ ಅವರ ಒಪ್ಪಿಗೆ ಇಲ್ಲದೇ ದಾಂಪತ್ಯ ಜೀವನಕ್ಕೆ ಬರುವಾಗ, ಅದು ಭಾವನಾತ್ಮಕ, ಶಾರೀರಿಕ ಹಾಗೂ ಮಾನಸಿಕ ಅಸಾಧ್ಯತೆಗಳಿಂದ ತುಂಬಿದ ಸ್ಥಿತಿಯನ್ನು ಹುಟ್ಟುಹಾಕುತ್ತದೆ. ಈ ಸಂದರ್ಭದಲ್ಲಿ ಮೋಸ ಹೋಗಿರುವ ಸಂಗಾತಿ, ನಿಜವಾದ ಆತ್ಮೀಯತೆ ಮತ್ತು ಪ್ರೀತಿಯ ಕೊರತೆಯಿಂದ ತತ್ತರಿಸುತ್ತಾರೆ. ಇನ್ನೊಂದೆಡೆ, ತನ್ನ ಲೈಂಗಿಕ ಸ್ವಭಾವವನ್ನು ಗುಪ್ತವಾಗಿಟ್ಟುಕೊಂಡಿರುವ ವ್ಯಕ್ತಿ ತನ್ನ ಭಾವನೆಗಳನ್ನು ತಾನಾಗಿಯೇ ಅಡಗಿಸಿಕೊಂಡು, ಸದಾ ಆಂತರಿಕ ಸಂಘರ್ಷ, ಅಪರಾಧಿ ಪ್ರಜ್ಞೆ ಅಥವಾ ಆಕ್ರೋಶದಿಂದ ಬದುಕುತ್ತಿರುತ್ತಾರೆ.

ವಿವಾಹದ ಮೂಲಭೂತ ಅಂಶಗಳಾದ ಪರಸ್ಪರ ಪ್ರೀತಿ ಮತ್ತು ನಂಬಿಕೆ ಇಲ್ಲಿ ಸಾಧ್ಯವಾಗದೇ ಹೋಗುತ್ತದೆ. ಭಾವನಾತ್ಮಕ ಮತ್ತು ಶಾರೀರಿಕ ಅಂತರದ ಕಾರಣದಿಂದ ದಾಂಪತ್ಯದೊಳಗೆ ಒಂಟಿತನ ಶುರುವಾಗಿ, ಕ್ರಮೇಣ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಬಹುದು. ಕೆಲವೊಮ್ಮೆ, ಆತ್ಮಹತ್ಯೆ ಅಥವಾ ಹೆಣ್ಣಿನ ಮೇಲೆ ದೌರ್ಜನ್ಯದೊಂದಿಗೂ ಅಂತ್ಯವಾಗಬಹುದು.

ಭಿನ್ನ ಲೈಂಗಿಕತೆ ಉಂಟು ಮಾಡಬಹುದಾದ ಸಮಸ್ಯೆ ಗಳಿಗೆ ಎರಡು ರೀತಿಯಲ್ಲಿ ಪರಿಹಾರ ಯೋಚಿಸಬಹುದು. ಒಂದು, ತಮ್ಮ ಲೈಂಗಿಕತೆಯನ್ನು ಮರೆಮಾಚುವವರಿಗೆ ಕಾನೂನುಬದ್ಧವಾಗಿ ಹೊಣೆಗಾರಿಕೆಯನ್ನು ನಿಗದಿಪಡಿಸುವುದು. ಇನ್ನೊಂದು, ಎಲ್ಲ ರೀತಿಯ ಲೈಂಗಿಕ ಅಸ್ತಿತ್ವಗಳು ಯಾವುದೇ ಹಿಂಜರಿಕೆಯಿಲ್ಲದೆ ವ್ಯಕ್ತವಾಗಬಹುದಾದ ಪ್ರಗತಿಶೀಲ ಸಮಾಜವನ್ನು ನಿರ್ಮಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.