ADVERTISEMENT

ಸಂಗತ: ಅಡ್ಡದಾರಿಯೇ ‘ಜನಪ್ರಿಯ’ ಹೆದ್ದಾರಿಯಾದರೆ…

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 23:30 IST
Last Updated 17 ಸೆಪ್ಟೆಂಬರ್ 2025, 23:30 IST
ಸಂಗತ
ಸಂಗತ   
ಜನಪ್ರಿಯತೆಯ ಅಡ್ಡದಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೆರೆದುಕೊಳ್ಳುತ್ತಿವೆ. ಅದು ‘ಅಡ್ಡದಾರಿ’ ಎಂದು ಗುರ್ತಿಸುವ ಮನಃಸ್ಥಿತಿಯೂ ವಿರಳವಾಗುತ್ತಿದೆ.

ಕನ್ನಡ ಸಿನಿಮಾದ ಹಾಡುಗಳನ್ನು ಗೀತೆಯ ಸಾಹಿತ್ಯ, ಆ ಸಾಹಿತ್ಯದಲ್ಲಿನ ಅಲ್ಪಪ್ರಾಣ, ಮಹಾಪ್ರಾಣಗಳ ಬಳಕೆಯನ್ನು ಲೆಕ್ಕಿಸದೆ ಹಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಟ್ರೆಂಡ್‌ ಪ್ರಸ್ತುತ ಯುವಕ, ಯುವತಿಯರಲ್ಲಿ ಚಾಲ್ತಿಯಲ್ಲಿದೆ. ಹೀಗೆ ಜನಪ್ರಿಯಗೊಳ್ಳುವ ಹಾಡುಗಳನ್ನು ಅನುಸರಿಸುವ ಮತ್ತೊಂದಷ್ಟು ಜನ ಇನ್ನೂ ತಮಾಷೆಯಾಗಿ ಹಾಡಿ ಜನರನ್ನು ನಗಿಸಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನ ಗಳಲ್ಲಿ, ಮೂಲ ಸಿನಿಮಾದಲ್ಲಿ ಅರ್ಥಪೂರ್ಣ ಸಾಹಿತ್ಯ ಹಾಗೂ ಸ್ವರ ಸಂಯೋಜನೆಯಿದ್ದ ಗೀತೆ, ಡಿಜಿಟಲ್ ಹರಟೆಕಟ್ಟೆಯಲ್ಲಿ ಅರ್ಥ–ಭಾವನೆ ಕಳೆದುಕೊಳ್ಳುತ್ತದೆ ಹಾಗೂ ಮೂಲ ಗೀತೆಯನ್ನೇ ಹಿಂದಿಕ್ಕಿ ಮುನ್ನೆಲೆಗೆ ಬರುತ್ತದೆ. 

ಜನಪ್ರಿಯತೆಗಾಗಿ ಯುವಜನತೆ ಪ್ರಯತ್ನಿಸುವುದು ತಪ್ಪೇನಲ್ಲ. ಆದರೆ, ಹೀಗೆ ಸೃಜನಶೀಲ ಗೀತೆಯೊಂದನ್ನು ಹೇಗೆಹೇಗೋ ಹಾಡುವ ಮೂಲಕ, ಗೀತರಚನೆಕಾರ, ಸ್ವರ ಸಂಯೋಜಕ ಹಾಗೂ ಮೂಲ ಗಾಯಕನ ಪರಿಶ್ರಮವನ್ನು ಅಣಕ ಮಾಡಲಾಗುತ್ತದೆ ಎನ್ನುವುದನ್ನು ಡಿಜಿಟಲ್‌ ಲೋಕದ ಜಾಣ ಜಾಣೆಯರು ಮರೆಯಬಾರದು.

ವೈರಲ್‌ ಆಗುವ ಗೀತೆಗಳಿಂದ ಕೆಲವರಿಗೆ ಜನಪ್ರಿಯತೆ ಹಾಗೂ ಹಲವರಿಗೆ ಮನರಂಜನೆ ದೊರೆಯುತ್ತದೆ. ಆದರೆ, ಅದರ ಪರಿಣಾಮಗಳು ಬೇರೆ ಬೇರೆ ರೂಪಗಳಲ್ಲಿರುತ್ತವೆ. ಅರ್ಥಪೂರ್ಣ ಸಾಹಿತ್ಯವಿರುವ ಮೂಲ ಹಾಡನ್ನು ಆಸ್ವಾದಿಸದೆ, ವೈರಲ್‌ ಆಗುವ ಹಾಡುಗಳನ್ನೇ ಕೇಳುತ್ತ, ತಪ್ಪು ತಪ್ಪಾದ ಭಾ‍ಷೆಯನ್ನು ಕೇಳಿಯೂ ಮುಸಿ ಮುಸಿ ನಗುತ್ತ, ಈ ಹಾಡುಗಳೇ ಅದ್ಭುತ ಎಂದು ಹಂಚಿಕೊಳ್ಳುವ ಒಂದು ಸಮುದಾಯ ರೂಪುಗೊಳ್ಳು ತ್ತಿದೆ. ಬರೀ ಹಾಡು ಮಾತ್ರವಲ್ಲ, ಎಲ್ಲಾ ಕಲಾಪ್ರಕಾರದ್ದೂ ಇದೇ ವ್ಯಥೆ. ಯಕ್ಷಗಾನವನ್ನೇ ಕಲಿಯದವರು ಸೋಷಿಯಲ್ ಮೀಡಿಯಾದಲ್ಲಿ ಯಕ್ಷಗಾನದ ಹಾಡು ಹಾಕಿ ಕುಣಿದಾಗ, ಅದೇ ನಿಜವಾದ ಯಕ್ಷಗಾನವೆಂದು ಹೊಗಳಿ ಅಂಥವರನ್ನು ಫೇಮಸ್ ಮಾಡುವವರಿದ್ದಾರೆ. ಅಡ್ಡದಾರಿಯಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಬೇಕೆಂದು ಬಯಸುವವರ ಹುಚ್ಚಾಟಕ್ಕೆ ಕಲಾಪ್ರಕಾರಗಳು ಗಾಸಿಗೊಳ ಗಾಗುತ್ತವೆ. ಕಲಾಪ್ರಕಾರಗಳ ಪರಿಚಯ ಇರದವರು ‘ಈ ಕಲೆ ಹೀಗೆಯೇ ಇರುತ್ತದೆ’ ಎಂದು ನಿರ್ಣಯಕ್ಕೆ ಬರುವ ಸಾಧ್ಯತೆಯಿದೆ.

ADVERTISEMENT

ವರ್ಷಗಟ್ಟಲೆ ಶಾಸ್ತ್ರೀಯ ಸಂಗೀತವನ್ನು ಕಲಿತರೂ ಎಲೆಮರೆಯ ಕಾಯಿಯಂತೆ ಇರುವವರೇ ಬಹಳಷ್ಟು. ಆದರೆ, ಸಂಗೀತ–ಸಾಹಿತ್ಯದ ಗಂಧಗಾಳಿಯಿಲ್ಲದೆ ಹೋದರೂ ವಿಚಿತ್ರ ಸ್ವರದಲ್ಲಿ ಗುನುಗಿ ಒಮ್ಮೆಗೇ ಜನಪ್ರಿಯ ಆಗುವವರನ್ನು ನೋಡಿದರೆ ಸಾಧನೆ ಹಾಗೂ ಜನಪ್ರಿಯತೆಯ ವ್ಯಾಖ್ಯಾನವೇ ಬದಲಾಗಿದೆಯೇನೋ ಎನ್ನಿಸುತ್ತದೆ. ಸಾಹಿತ್ಯದ ಸ್ಥಿತಿಯೂ ಭಿನ್ನವೇನಲ್ಲ. ಕಾವ್ಯ ಪ್ರಕಾರದಲ್ಲಿ ಗಂಭೀರವಾಗಿ ತೊಡಗಿಕೊಂಡವರು ಕವಿ ಎಂದು ಕರೆಸಿಕೊಳ್ಳುವುದು ಕಷ್ಟವಾಗಿರುವಾಗ, ಪ್ರಾಸಕ್ಕೆ ಪ್ರಾಸ ಜೋಡಿಸಿ ತೋಚಿದ್ದೆಲ್ಲಾ ಗೀಚಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವವರು ‘ಕವಿ’ಗಳಾಗಿ ಚಾಲ್ತಿಯಲ್ಲಿರುತ್ತಾರೆ.

ಸಾಹಿತ್ಯ ಸೇರಿದಂತೆ ಯಾವುದೇ ಕಲಾಪ್ರಕಾರಕ್ಕೆ ಸಂಬಂಧಿಸಿದಂತೆ ಅಗತ್ಯವಾದ ‍ಪೂರ್ವಸಿದ್ಧತೆ, ಸಾಮಾನ್ಯ ಜ್ಞಾನ, ಪರಿಶ್ರಮ ಇಲ್ಲದೆಯೂ ಆ ಕಲೆಯ ಹೆಸರಿನಲ್ಲಿ ಗುರ್ತಿಸಿಕೊಳ್ಳುವುದು ಹಾಗೂ ಜನಪ್ರಿಯತೆ ಗಳಿಸುವುದು ಅಪಾಯಕಾರಿ ಬೆಳವಣಿಗೆ.

ಕವಿಗಳು, ಕಲಾವಿದರು ನಿರಂತರ ಶ್ರಮದಿಂದ ಒಂದು ಭಾಷೆಯನ್ನು, ಕಲಾಪ್ರಕಾರವನ್ನು ರೂಪಿಸಿರುತ್ತಾರೆ. ಅವರ ಪರಿಶ್ರಮ ಹಾಗೂ ಪರಿಣತಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಸ್ತುತವಾಗುವ ಹಂತಕ್ಕೆ ತಲುಪಿದೆ. ಕಲೆಯಲ್ಲಿ ಸಾಧನೆಗೈಯಲು ತಾಳ್ಮೆ, ಶ್ರಮ, ಯಾವುದೂ ಬೇಡ; ಒಂದೇ ರೀಲ್ಸ್, ವಿಡಿಯೊ ಮಾಡಿ ಜನಪ್ರಿಯರಾಗಬಹುದು ಎನ್ನುವ ವಿಶ್ವಾಸ ಯುವ ಮನಸ್ಸಿನಲ್ಲಿ ಬಲಗೊಳ್ಳುತ್ತಾ ಹೋದಂತೆ ಹಾಗೂ ಅದನ್ನು ಸಮಾಜ ಪುರಸ್ಕರಿಸುತ್ತಾ ಹೋದಂತೆ, ನೈಜ ಕಲೆ ಹಿನ್ನೆಲೆಗೆ ಸರಿಯತೊಡಗುತ್ತದೆ ಹಾಗೂ ಸಾಧಕರು ಅಪ್ರಸ್ತುತರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ತಪ್ಪಾದ ಕನ್ನಡದಲ್ಲಿ ಬರೆದಾಗ, ತಪ್ಪು ತಪ್ಪಾಗಿ ಹಾಡಿದಾಗ, ‘ಅದು ಸರಿಯಾದ ರೂಪವಲ್ಲ’ ಎನ್ನುವುದನ್ನು ಗುರುತಿಸಲು ಸಾಧ್ಯವಾಗದಷ್ಟು ಮಟ್ಟಿಗೆ ಸಾರ್ವಜನಿಕ ಸಂವೇದನೆ ಜಡಗೊಳ್ಳುತ್ತಿದೆ. ಶಿವರಾಮ ಕಾರಂತರು ಸಂದರ್ಶನವೊಂದ ರಲ್ಲಿ, ‘ಕುಣಿಯುವವನು ತಪ್ಪು ಹೆಜ್ಜೆಯಲ್ಲಿ ಕುಣಿಯುತ್ತಿದ್ದಾನೆ, ತಪ್ಪು ಸಾಹಿತ್ಯ ಬಳಸುತ್ತಿದ್ದಾನೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಬೇಕೆಂದರೆ ಅವರ ತಲೆಯಲ್ಲಿ ಕಲೆ–ಸಾಹಿತ್ಯದ ಕುರಿತು ಸ್ವಲ್ಪವಾದರೂ ಜ್ಞಾನವಿದ್ದರೆ ಮಾತ್ರ ಸಾಧ್ಯ. ಅದೇ ಇಲ್ಲದಿದ್ದರೆ ಅವನು ಕುಣಿದದ್ದೇ ನೃತ್ಯ, ಒದರಿದ್ದೇ ಸಾಹಿತ್ಯ’ ಎಂದು ಹೇಳಿದ ಮಾತು ಇಂದು ಹೆಚ್ಚು ಪ್ರಸ್ತುತ.

ಕೆಲವರು ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಉದ್ದೇಶಕ್ಕೆ, ಸಾಮಾಜಿಕ ಬದಲಾವಣೆಯ ದಾರಿಯಾಗಿ, ಮನಸ್ಸನ್ನು ಅರಳಿಸುವ ವೇದಿಕೆಯಾಗಿ ಬಳಸುತ್ತಿರುವುದು ಸ್ವಾಗತಾರ್ಹ. ಆದರೆ, ಮನೋವಿಕಾಸಕ್ಕಿಂತಲೂ ಮನಸ್ಸನ್ನು ಕೆರಳಿಸುವ ಸಾಧ್ಯತೆಗಳಿಗೇ ಅಂತರ್ಜಾಲ ವೇದಿಕೆಗಳು ಹೆಚ್ಚು ಬಳಕೆಯಾಗುತ್ತಿವೆ. ಶಾಲಾ–ಕಾಲೇಜು ಹಂತದಲ್ಲಿ ಸಾಹಿತ್ಯ, ಓದು, ಭಾಷೆ, ಅಭಿರುಚಿ ಯಾವುದೂ ಬೇಕಾಗಿಲ್ಲ ಎನ್ನುವ ಪರಿಸ್ಥಿತಿಯನ್ನು ಶೈಕ್ಷಣಿಕ ವ್ಯವಸ್ಥೆಯೇ ಹುಟ್ಟಿಸುತ್ತಿರುವಾಗ, ಅನಿಯಂತ್ರಿತವಾಗಿರುವ ಸಾಮಾಜಿಕ ಮಾಧ್ಯಮದಲ್ಲಿ ಗುಣಮಟ್ಟದ ಭಾಷೆ ಹಾಗೂ ಸಾಹಿತ್ಯದ ಬಳಕೆಯನ್ನು ನಿರೀಕ್ಷಿಸುವುದು ತಪ್ಪೇನೊ?

ಸಾಮಾಜಿಕ ಜಾಲತಾಣಗಳ ಆಗುಹೋಗುಗಳನ್ನು ನಿಯಂತ್ರಿಸುವುದು ಅಸಾಧ್ಯ. ಆದರೆ, ಆ ಮಾಧ್ಯಮದ ಲ್ಲಿನ ಬೆಳವಣಿಗೆಗಳಲ್ಲಿ ಯಾವುದು ಸರಿ, ಯಾವುದು ಸರಿಯಲ್ಲ ಎಂದು ನಿರ್ಣಯಿಸಲು ಅಗತ್ಯವಾದ ಸಾರ್ವಜನಿಕ ಸಂವೇದನೆ ನಷ್ಟವಾಗುವುದು ನಾಡು–ನುಡಿಯ ಆರೋಗ್ಯಕ್ಕೆ ಪೂರಕವಾದ ಬೆಳವಣಿಗೆಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.