ADVERTISEMENT

ಸಂಗತ | ಮಕ್ಕಳ ಮೇಲೆ ಬಿದ್ದೀತು ವಕ್ರದೃಷ್ಟಿ

ಮಕ್ಕಳು ದುಡಿಮೆಗೆ, ಸಾಗಣೆಗೆ, ಮಾರಾಟಕ್ಕೆ ಗುರಿಯಾಗದಂತೆ ರಕ್ಷಿಸಬೇಕಾದ ತುರ್ತು ಹಿಂದೆಂದಿಗಿಂತಲೂ ಈಗ ನಮ್ಮೆಲ್ಲರ ಮುಂದಿದೆ

ಎನ್.ವಿ.ವಾಸುದೇವ ಶರ್ಮಾ
Published 11 ಜೂನ್ 2020, 21:10 IST
Last Updated 11 ಜೂನ್ 2020, 21:10 IST
.
.   

ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಅಗತ್ಯವಿರುವ ‘ಸರ್ಕಾರ ಮತ್ತು ಸಾಮುದಾಯಿಕ’ ಬೆಂಬಲ ಕೋರಲೆಂದೇ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಒ), 2002ರಿಂದ ಜೂನ್ 12 ಅನ್ನು ‘ಜಾಗತಿಕ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಎಂದು ಗುರುತಿಸಿದೆ. ಈ ವರ್ಷ ಕೋವಿಡ್-19ರ ಅಟಾಟೋಪದಿಂದಾಗಿ ಮಕ್ಕಳು ಅತ್ಯಧಿಕ ಸಂಖ್ಯೆಯಲ್ಲಿ ಬಾಲಕಾರ್ಮಿಕರಾಗುವ ಅಥವಾ ಸಾಗಣೆಗೆ ಒಳಗಾಗುವ ಭಯದ ನೆರಳಲ್ಲೇ ಈ ದಿನವನ್ನು ಗಮನಿಸುವ ಸಂದರ್ಭ ಬಂದಿದೆ.

ಈ ದಶಕದ ಆರಂಭದಲ್ಲಿ ಜಗತ್ತಿನೆಲ್ಲೆಡೆಯ ಅಂಕಿ ಅಂಶಗಳನ್ನು ಆಧರಿಸಿ, ಬಾಲಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಆದರೆ, ದಶಕದ ಅಂತ್ಯದಲ್ಲಿ ಕೊರೊನಾ ಸೋಂಕು ದಾಳಿ ಇಟ್ಟಿತು. ಅದರ ಪರಿಣಾಮವಾಗಿ ವ್ಯಾಪಾರ– ವಹಿವಾಟುಗಳು ಸ್ತಬ್ಧವಾದವು. ಉದ್ಯೋಗ ನಷ್ಟ, ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಕುಟುಂಬಗಳು ತಮ್ಮ ಮೂಲ ನೆಲೆಗಳಿಗೆ ತೆರಳಿದವು. ಶಾಲೆಗಳು ದೀರ್ಘ ಅವಧಿಗೆ ಬಂದ್‌ ಆಗಿವೆ. ಈ ಎಲ್ಲದರ ಪರಿಣಾಮವಾಗಿ ಮಕ್ಕಳು ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ದುಡಿಮೆಯ ಕೂಪಕ್ಕೆ ತಳ್ಳಲ್ಪಡಬಹುದೇನೋ ಎನ್ನುವ ಆತಂಕ ಉಂಟಾಗಿದೆ.

ಸಂವಿಧಾನ ರಚನೆಯ ಕಾಲದಲ್ಲಿ, ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಿನ ಸ್ವರೂಪದಲ್ಲಿ ಮಕ್ಕಳಿಗೆ ಒದಗಿಸಲಾಗಿರಲಿಲ್ಲ. ಅದಕ್ಕೆ ನೂರಾರು ಅಡ್ಡಿ, ಪ್ರಶ್ನೆಗಳನ್ನು ಒಡ್ಡಲಾಗಿತ್ತು. ಆ ಕುರಿತು ಡಾ. ಬಿ.ಆರ್.ಅಂಬೇಡ್ಕರ್ ಅವರು ಪ್ರತಿಕ್ರಿಯಿಸುತ್ತಾ ಕೊಂಚ ನೋವು, ಕೊಂಚ ಆಶಾಭಾವದಿಂದ ಹೀಗೆ ಹೇಳಿದ್ದರು: ‘...ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಕ್ಕಳಿಗೆ ಈಗ ನೀಡಲಾಗಲಿಲ್ಲ. ಆದರೆ ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸುವುದನ್ನು ನಿಷೇಧಿಸಲಾಗಿದೆ. ಮಕ್ಕಳು ದುಡಿಮೆಯಲ್ಲಿ ಇಲ್ಲ ಎಂದಾದರೆ, ಸ್ವಾಭಾವಿಕವಾಗಿ ಅವರು ಶಾಲೆಗಳಲ್ಲಿ ಇರಲೇಬೇಕು’.

ADVERTISEMENT

ಈಗ ಪ್ರಾಥಮಿಕ ಶಿಕ್ಷಣವು ಜೀವಿಸುವ ಹಕ್ಕಿನ ಅಡಿ ಬರುತ್ತದೆ. ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯು (2016ರ ತಿದ್ದುಪಡಿ) ಹೆಚ್ಚು ಬಿಗಿಯಾಗಿದೆ. ಆರೋಗ್ಯ, ಜೀವ, ಶಿಕ್ಷಣ, ರಕ್ಷಣೆ ಈ ಎಲ್ಲದರ ತಾಕಲಾಟವಾಗಿರುವ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುಹೆಚ್ಚು ಮಕ್ಕಳನ್ನು ದುಡಿಮೆಯತ್ತ ಸೆಳೆಯುವ ಸಾಧ್ಯತೆಯನ್ನು ಜಗತ್ತಿನಾದ್ಯಂತ ಚಿಂತಕರು ಗುರುತಿಸುತ್ತಿದ್ದಾರೆ. ಕಾರಣ ಸ್ಪಷ್ಟ. ಈಗ ನಗರಗಳಲ್ಲಿ ನಿರುದ್ಯೋಗದ ಪ್ರಮಾಣ ಶೇ 30.9ಕ್ಕೆ ಏರಿದೆ. ಅಸಂಘಟಿತ ಕ್ಷೇತ್ರ ದಿಕ್ಕಾಪಾಲಾಗಿದೆ. ಅದರೊಂದಿಗೆ ಬಡತನದ ಪ್ರಮಾಣವೂ ಹೆಚ್ಚಾಗಿದೆ. ಯಾವುದೇ ಕೆಲಸ ಸಿಕ್ಕರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ಬಹುತೇಕರು ಬಂದಿರುವ ಈ ಸಂದಿಗ್ಧದಲ್ಲಿ, ಮಕ್ಕಳು ಹಿಂದೆಂದಿಗಿಂತಲೂ ಈಗ ದುಡಿಮೆಗೆ, ಸಾಗಣೆಗೆ, ಮಾರಾಟಕ್ಕೆ ಗುರಿಯಾಗದಂತೆ ರಕ್ಷಿಸಬೇಕಾದ ತುರ್ತು ನಮ್ಮೆಲ್ಲರ ಎದುರಿದೆ.

ಐ.ಎಲ್.ಒ.ದ ಇತ್ತೀಚಿನ ಲೆಕ್ಕಾಚಾರದಂತೆ, ಜಗತ್ತಿನಲ್ಲಿ 15 ಕೋಟಿಗೂ ಹೆಚ್ಚು ಬಾಲಕಾರ್ಮಿಕರಿದ್ದಾರೆ. ಇವರಲ್ಲಿ ಶೇ 71ರಷ್ಟು ಕೃಷಿ ಕ್ಷೇತ್ರದಲ್ಲಿ, ಶೇ 12ರಷ್ಟು ಕೈಗಾರಿಕೆ, ಗಣಿ ಕ್ಷೇತ್ರದಲ್ಲಿ, ಶೇ 17ರಷ್ಟು ಮಂದಿ ಸೇವಾಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಇವರಲ್ಲಿ ಸುಮಾರು 7 ಕೋಟಿಯಷ್ಟು ಮಕ್ಕಳು ಅಪಾಯಕಾರಿ ಉದ್ದಿಮೆ ಅಥವಾ ಪರಿಸ್ಥಿತಿಯಲ್ಲಿದ್ದಾರೆ. ದೇಶದಲ್ಲಿ ಒಂದು ಕೋಟಿಯಷ್ಟು ಬಾಲಕಾರ್ಮಿಕರಿದ್ದು, ಅವರಲ್ಲಿ ಬಹುತೇಕರು ಕೃಷಿ ಮತ್ತು ಪಶು ಸಂಗೋಪನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿಶ್ವಸಂಸ್ಥೆಯು 2021 ಅನ್ನು ಅಂತರರಾಷ್ಟ್ರೀಯಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ವರ್ಷ ಎಂದು ಗುರುತಿಸಲು ನಿರ್ಧರಿಸಿದೆ. ಸರ್ಕಾರ ಮತ್ತು ಸಮುದಾಯಗಳಿಗೆ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಕಾರಗೊಳಿಸಲು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಇದೊಂದು ಮುಖ್ಯವಾದ ಅವಕಾಶ. ಮಾನವ ಕಳ್ಳಸಾಗಣೆ ಕೊನೆಗಾಣಿಸಲು, ಅತ್ಯಂತ ಕೆಟ್ಟ ಸ್ವರೂಪದ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲಗೊಳಿಸಲುತಕ್ಷಣವೇ ಪರಿಣಾಮಕಾರಿ ಕ್ರಮ ಕೈಗೊಂಡು, 2025ರೊಳಗೆ ಎಲ್ಲ ರೀತಿಯ ಬಾಲಕಾರ್ಮಿಕ ಪದ್ಧತಿಯನ್ನೂ ಕೊನೆಗಾಣಿಸುವುದು ನಮ್ಮೆದುರು ಇರುವ ಸವಾಲು. ಇದನ್ನು ಎದುರಿಸಲು ಬೇಕಾಗಿರುವ ಬಹುದೊಡ್ಡ ವಿಚಾರ, ನಮ್ಮಲ್ಲಿ ಈಗ ಎಷ್ಟು ಬಾಲಕಾರ್ಮಿಕರಿದ್ದಾರೆ, ಎಲ್ಲೆಲ್ಲಿ ಇದ್ದಾರೆ ಮತ್ತು ಎಂಥೆಂಥ ಪರಿಸ್ಥಿತಿಗಳಲ್ಲಿದ್ದಾರೆ ಎಂದು ಅರಿತುಕೊಳ್ಳುವುದು.

2011ರ ಜನಗಣತಿಯಂತೆ, ರಾಜ್ಯದಲ್ಲಿ 5ರಿಂದ 14 ವರ್ಷದೊಳಗಿನ 2,49,432 ಬಾಲಕಾರ್ಮಿಕರಿದ್ದರು. ಈಗ ಬಾಲಕರು ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ವ್ಯಾಖ್ಯಾನದಂತೆ, 18 ವರ್ಷದವರೆಗಿನ ದುಡಿಯುವ ಮಕ್ಕಳ ಸರ್ವೇಕ್ಷಣೆ ನಡೆಸಿದರೆ, ಈ ಸಂಖ್ಯೆ ಎಷ್ಟು ಬೃಹತ್ ಆಗಬಹುದು ಎಂದು ಊಹಿಸಿಕೊಳ್ಳಲಿಕ್ಕೇ ಕಷ್ಟವಾಗಬಹುದು.

ಇಂತಹ ಸ್ಥಿತಿಯಲ್ಲಿ ನಮ್ಮ ಗುರಿಯು ವಯಸ್ಕರಿಗೆ ಕನಿಷ್ಠ ವೇತನದ ಖಾತರಿ, ಮಕ್ಕಳ ರಕ್ಷಣೆ ಸಮಿತಿಗಳನ್ನು ಬಲಪಡಿಸಿ ಅವರ ಹಕ್ಕುಗಳನ್ನು ಉಲ್ಲಂಘಿಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು, ವಯಸ್ಕರಿಗೆ ಉದ್ಯೋಗ ದೊರಕುವಂತೆ ಮಾಡಿ, ಎಲ್ಲ ಮಕ್ಕಳನ್ನೂ ಕಡ್ಡಾಯವಾಗಿ ಶಿಕ್ಷಣದಲ್ಲಿ ತೊಡಗಿಸುವುದೇ ಆಗಿದೆ. ಯಾರೇ ಆಗಲಿ, ಎಂತಹುದೇ ಕಾರಣಕ್ಕೂ ಯಾವುದೇ ದುಡಿಮೆಗೆ ಮಕ್ಕಳನ್ನು ತೊಡಗಿಸಿಕೊಳ್ಳದಂತೆ ಸಮುದಾಯಗಳು ನಿರ್ಧರಿಸಿದ್ದೇ ಆದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.