ADVERTISEMENT

ಸಂಗತ | ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ಮಂದಿರಗಳ ಪ್ರವೇಶಕ್ಕೆ ಎಲ್ಲರಿಗೂ ಅವಕಾಶ ಕಲ್ಪಿಸಲು ಸೌಮ್ಯ ಮಾರ್ಗದಲ್ಲಿ ಮನಃಪರಿವರ್ತನೆ ಮಾಡುವ ಕೆಲಸ ಚುರುಕು ಪಡೆಯಬೇಕು

ಮಲ್ಲಿಕಾರ್ಜುನ ಹೆಗ್ಗಳಗಿ
Published 30 ಡಿಸೆಂಬರ್ 2024, 23:30 IST
Last Updated 30 ಡಿಸೆಂಬರ್ 2024, 23:30 IST
   

ಗಾಂಧೀಜಿ 1934ರಲ್ಲಿ ಉಡುಪಿಗೆ ಬಂದಿದ್ದರು. ಅಲ್ಲಿ ಅವರು ಸಾರ್ವಜನಿಕ ಭಾಷಣದಲ್ಲಿ ‘ಉಡುಪಿ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿ ಇದೆ. ಇಲ್ಲಿಯ ಕೃಷ್ಣ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದೇನೆ. ಜಾತಿಯ ಕಾರಣದಿಂದ ಭಕ್ತ ಕನಕನಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಕಾರಣ, ಇಲ್ಲಿಯ ಕೃಷ್ಣದೇವರು ತಿರುಗಿ ಭಕ್ತನಿಗೆ ದರ್ಶನ ದಯಪಾಲಿಸಿದ ಕಥೆಯನ್ನು ಅರಿತಿದ್ದೇನೆ. ಇದು ಭಾರತದ ಜಾತಿ ತಾರತಮ್ಯ ನಿವಾರಣೆ ಸಂಬಂಧದ ಅರ್ಥಪೂರ್ಣ ರೂಪಕ. ದೇವರೇ ಪರಿಹಾರ ಸೂಚಿಸಿರುವುದು ನಿಜಕ್ಕೂ ಒಂದು ಅಪರೂಪದ ಸಂಗತಿ. ಇದು ನನ್ನ ಮನಸ್ಸನ್ನು ಆವರಿಸಿದೆ. ಆದ್ದರಿಂದ ದೇವಾಲಯ ಪ್ರವೇಶಿಸಲು ಎಲ್ಲರಿಗೂ ಸಾಧ್ಯವಾಗುವಂತೆ, ಸೌಮ್ಯ ಮಾರ್ಗದಿಂದ ಜನಾಭಿಪ್ರಾಯವನ್ನು ರೂಪಿಸಬೇಕು. ಇದು ಆತ್ಮಶುದ್ಧಿಯ ಚಳವಳಿಯಾಗಬೇಕು’ ಎಂದು ಹೇಳಿದ್ದರು. ಮುಂದೆ ಕೆಲವೇ ದಿನಗಳಲ್ಲಿ ಅವರ ಇಚ್ಛೆಯಂತೆ ಕೃಷ್ಣ ಮಂದಿರ ಪ್ರವೇಶ ಎಲ್ಲರಿಗೂ ಮುಕ್ತವಾಯಿತು.

ಮೈಸೂರು ತಾಲ್ಲೂಕಿನ ಮಾರ್ಬಳ್ಳಿ ಗ್ರಾಮದ ದಲಿತರಿಗೆ ಅಲ್ಲಿಯ ಮಾರಮ್ಮ ದೇವಾಲಯ ಪ್ರವೇಶ ನಿರಾಕರಿಸಿ 11 ವರ್ಷಗಳಿಂದ ಮಂದಿರದ ದ್ವಾರಕ್ಕೆ ಬೀಗ ಹಾಕಲಾಗಿತ್ತು. ಹಿರಿಯ ಅಧಿಕಾರಿಗಳು ಈಚೆಗೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸ್ಥಳೀಯರ ಮನವೊಲಿಸಿ ದಲಿತರ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟ ವರದಿ ಓದಿದಾಗ, ಗಾಂಧೀಜಿ ಹೇಳಿದಂತೆ ಸೌಮ್ಯ ಮಾರ್ಗದಲ್ಲಿ ಈಗಲೂ ಚಳವಳಿ ರೂಪಿಸುವುದು ಅವಶ್ಯ ಎನಿಸಿತು.

ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿವೆ. ಗ್ರಾಮೀಣ ಭಾಗದಲ್ಲಿ ಇದು ಅಧಿಕವಾಗಿದೆ. ಹಳ್ಳಿಗಳ ಹೋಟೆಲುಗಳಲ್ಲಿ ತಳ ಸಮುದಾಯದವರಿಗಾಗಿ ಚಹಾ ಕಪ್ಪು, ಬಸಿ, ಉಪಾಹಾರದ ತಟ್ಟೆ, ಆಸನಗಳನ್ನು ಪ್ರತ್ಯೇಕವಾಗಿ ಇಟ್ಟಿರುತ್ತಾರೆ ಮಾತ್ರವಲ್ಲ ಅವುಗಳನ್ನು ಅವರೇ ಸ್ವಚ್ಛ ಮಾಡಿಕೊಂಡು ಬಳಸಬೇಕಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಮಂದಿರ ಪ್ರವೇಶ ತಾರತಮ್ಯದಿಂದಾಗಿ ದ್ವೇಷದ ವಾತಾವರಣ ಕಾಣಿಸುತ್ತದೆ. ಇದೇ ಕಾರಣಕ್ಕಾಗಿ ವಿವಿಧ ಸಮುದಾಯಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ.  

ADVERTISEMENT

ಜನರಲ್ಲಿ ವೈಚಾರಿಕ ಮನೋಭಾವ, ವೈಜ್ಞಾನಿಕ ಪ್ರಜ್ಞೆ, ಸಾಮಾಜಿಕ ಚಿಂತನೆ, ಮಾನವ ಹಕ್ಕುಗಳ ಅರಿವು, ಕಾನೂನಿನ ಜ್ಞಾನ ಈಗ ಬಹಳಷ್ಟು ಬೆಳೆದಿದೆ. ಇದು ಕ್ರಿಯಾತ್ಮಕವಾಗಿ ಬದಲಾಗಬೇಕಾದ ಅವಶ್ಯಕತೆ ಇದೆ. ಗ್ರಾಮಗಳಲ್ಲಿ ಯುವಕರು ಸಂಘಟಿತರಾಗಬೇಕು. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಕರಾಳ ರೂಪವನ್ನು ಅಹಿಂಸಾ ಮಾರ್ಗದಿಂದ ಬದಲಿಸಲು ಮುಂದಾಗಬೇಕು. ಗ್ರಾಮದ ಎಲ್ಲ ಮಂದಿರಗಳಿಗೆ, ಸಾಮೂಹಿಕ ಸ್ಥಳಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಸಿಗಬೇಕು. ಇದು ಸಾಮಾಜಿಕ ಚಳವಳಿಯಾಗಿ ರೂಪುಗೊಳ್ಳಬೇಕು.

ಭಾರತದ ಸಂವಿಧಾನವು ಧರ್ಮ, ಜಾತಿ, ವರ್ಣ, ವರ್ಗ, ಪ್ರದೇಶ, ಭಾಷೆ, ರಾಜಕೀಯ ನಿಲುವುಗಳ ಆಧಾರದ ಮೇಲೆ ತಾರತಮ್ಯ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಹಾಗೆಯೇ ದೇಶದ ಎಲ್ಲ ನಾಗರಿಕರಿಗೆ ವಿಚಾರ, ನಂಬಿಕೆ, ಧರ್ಮ, ಪೂಜೆ, ಉಪಾಸನೆಯ ಸ್ವಾತಂತ್ರ್ಯ ಹಾಗೂ ಸ್ಥಾನಮಾನಗಳ ಸಮಾನತೆಯನ್ನು ನೀಡಿದೆ. ವ್ಯಕ್ತಿಯ ಘನತೆ ಕಾಪಾಡುವುದು ಸಂವಿಧಾನದ ಮುಖ್ಯ ಆಶಯವಾಗಿದೆ.

ಪ್ರಗತಿಪರ ಲೇಖಕರಾಗಿದ್ದ ಬೆಳಗಾವಿಯ ದೇವರಾಯ ಇಂಗಳೆ ಅವರು ಬಿ.ಆರ್.ಅಂಬೇಡ್ಕರ್ ಅವರ ಸ್ನೇಹಿತರಾಗಿದ್ದರು. ಅವರ ಮೊದಲ ಹೆಸರು ದೇವರಾಯ ಹೊಲೆಯರ ಎಂದು ಇತ್ತು. ಅವರು ಸಾಂಗ್ಲಿಯಲ್ಲಿ ಕ್ಷೌರ ಮಾಡಿಸಿಕೊಳ್ಳಲು ಸಲೂನಿಗೆ ಹೋಗಿದ್ದರು. ಹೊಲೆಯರ ಎಂಬ ಅಡ್ಡ ಹೆಸರಿನಿಂದ ಇವರ ಜಾತಿಯನ್ನು ಗುರುತಿಸಿ, ಹೇರ್‌ಕಟ್‌ ಮಾಡುತ್ತಿದ್ದ ವ್ಯಕ್ತಿ ಆ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಇವರನ್ನು ಹೊರದಬ್ಬಿದ್ದ. ಇದರಿಂದ ನೊಂದುಕೊಂಡ ದೇವರಾಯ ಅವರು ತಮ್ಮ ಅಡ್ಡಹೆಸರನ್ನು ಇಂಗಳೆ ಎಂದು ಬದಲಿಸಿಕೊಂಡರು (ಅವರ ಹುಟ್ಟೂರು ಇಂಗಳೆ ಗ್ರಾಮ). ಅವರು ಉತ್ತರ ಕರ್ನಾಟಕದ ಜಾತಿಸೂಚಕ ಅಡ್ಡ ಹೆಸರುಗಳನ್ನು ಬದಲಿಸುವ ‘ಅಡ್ಡ ಹೆಸರು ಅಡ್ಡಡ್ಡ ಸೀಳಿ’ ಎಂಬ ವಿಶಿಷ್ಟ ಚಳವಳಿಯನ್ನು ಹುಟ್ಟುಹಾಕಿದ್ದರು. ಕೆಳವರ್ಗಗಳ ಜಾತಿಸೂಚಕ ಅಡ್ಡಹೆಸರನ್ನು ಹೊಂದಿದವರು ತಮ್ಮ ಅಡ್ಡ ಹೆಸರನ್ನು ತಮ್ಮ ಊರಿನ ಹೆಸರಿಗೆ ಅಥವಾ ಇಷ್ಟವಾಗುವ ಹೆಸರಿಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರ ಸಲಹೆಯಂತೆ ಅನೇಕರು ತಮ್ಮ ಅಡ್ಡ ಹೆಸರು ಬದಲಿಸಿಕೊಂಡಿದ್ದಾರೆ. ಈಗಲೂ ಬದಲಿಸಿಕೊಳ್ಳುತ್ತಿದ್ದಾರೆ. ಜಾತಿಸೂಚಕ ತಾರತಮ್ಯ ನಿವಾರಣೆಯಲ್ಲಿ ಈ ಸರಳ ವಿಧಾನ ತಕ್ಕಮಟ್ಟಿಗೆ ನೆರವಾಗಿದೆ. ದೇವರಾಯ ಅವರನ್ನು ಕುರಿತು ಪತ್ರಕರ್ತ ಸರಜೂ ಕಾಟ್ಕರ್ ಪುಸ್ತಕ ರಚಿಸಿದ್ದಾರೆ. ಅದು ‘ಇಂಗಳೆ ಮಾರ್ಗ’ ಎಂಬ ಹೆಸರಿನಲ್ಲಿ ಕನ್ನಡ ಚಲನಚಿತ್ರ ಆಗಿದೆ.

‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದಿದ್ದಾರೆ ಪಂಪ ಮಹಾಕವಿ. ಮಂದಿರ ಮುಕ್ತ ಪ್ರವೇಶ ಅವಕಾಶಕ್ಕಾಗಿ ಕೇರಳದಲ್ಲಿ ನಡೆದ ವೈಕಂ ಅಹಿಂಸಾತ್ಮಕ  ಚಳವಳಿಯ ಶತಮಾನದ ಸ್ಮರಣೆ ಈಗ ದೇಶದಲ್ಲಿ ನಡೆಯುತ್ತಿದೆ. ಮಂದಿರಗಳ ಪ್ರವೇಶಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲು ಮನಃಪರಿವರ್ತಿಸುವ ಕೆಲಸ ಚುರುಕು ಪಡೆಯಬೇಕು. ಸುಶಿಕ್ಷಿತರು, ಪ್ರಜ್ಞಾವಂತರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು. ಸಂಘ–ಸಂಸ್ಥೆಗಳು ಹೆಗಲು ಕೊಡಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.