ADVERTISEMENT

ಸಂಗತ | ಹುಲಿಗಳ ಸಂರಕ್ಷಣೆ ಎಲ್ಲರ ಹೊಣೆ

ಐದು ಹುಲಿಗಳ ಸಾವು ಆತಂಕ ಮೂಡಿಸುವ ಸಂಗತಿ. ಇಂಥ ದುರಂತಗಳನ್ನು ತಡೆಗಟ್ಟಲು, ಸ್ಥಳೀಯರಿಗೆ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚಬೇಕು.

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 22:37 IST
Last Updated 1 ಜುಲೈ 2025, 22:37 IST
   

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯ ಮೀಣ್ಯಂ ಅರಣ್ಯದಲ್ಲಿ ಸಂಭವಿಸಿದ ಐದು ಹುಲಿಗಳ ಸಾವು ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಹುಲಿಯ ದಾಳಿಗೆ ಬಲಿಯಾದ ಹಸುವಿನ ಕಳೇಬರಕ್ಕೆ ಸಿಂಪಡಿಸಿದ ಕೀಟನಾಶಕವನ್ನು ತಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಮೃತಪಟ್ಟಿವೆ.

ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯಕ್ಕೆ ಹೋಲಿಸಿದರೆ, ಕಾವೇರಿ ವನ್ಯಜೀವಿಧಾಮ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಇರುವ ಹುಲಿಗಳ ಸಂಖ್ಯೆ ಬಹಳ ಕಡಿಮೆ. ಹೀಗಿರುವಾಗ, ಏಕಾಏಕಿ ಐದು ಹುಲಿಗಳ ಸಾವು ಆತಂಕದ ವಿಚಾರವಾಗಿದೆ. ಕೆಲವು ಮಾಧ್ಯಮಗಳು ‘ಮಲೆಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ದಾರುಣ ಸಾವು’ ಎಂದು ತಪ್ಪಾಗಿ ವರದಿ ಮಾಡುತ್ತಿವೆ. ಹುಲಿಗಳು ಮೃತಪಟ್ಟಿರುವುದು ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲೇ ಹೊರತು, ಮಲೆಮಹದೇಶ್ವರ ಬೆಟ್ಟದಲ್ಲಿ ಅಲ್ಲ. ಘಟನೆ ನಡೆದ ಸ್ಥಳ ಮಲೆಮಹದೇಶ್ವರ ಬೆಟ್ಟದಿಂದ ನೈರುತ್ಯಕ್ಕೆ ಸುಮಾರು 60 ಕಿ.ಮೀ ದೂರದಲ್ಲಿದ್ದು, ರಾಮಾಪುರ ಠಾಣೆಯ ವ್ಯಾಪ್ತಿಗೆ ಬರುತ್ತದೆ.

ಹನೂರು ತಾಲ್ಲೂಕಿನ ಮೀಣ್ಯಂ, ಹೂಗ್ಯಂ, ಮಾರ್ಟಳ್ಳಿ, ಗೋಪಿನಾಥಂ ಗ್ರಾಮ ಪಂಚಾಯಿತಿಗಳು ಕರ್ನಾಟಕದ ಗಡಿಯಲ್ಲಿ ಅರಣ್ಯ ಪ್ರದೇಶದ ನಡುವೆ ಇವೆ. ಇಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಡಂಚಿನ ಜನರು ಕೃಷಿ, ಪಶುಸಂಗೋಪನೆಯ ಜೊತೆಗೆ ಅರಣ್ಯ ಅವಲಂಬಿತ ಕಸುಬುಗಳಲ್ಲಿ ತೊಡಗಿಕೊಂಡಿದ್ದಾರೆ.

ADVERTISEMENT

ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿದಿದೆ. ಕಾಡುಪ್ರಾಣಿಗಳು ಊರೊಳಗೆ ನುಗ್ಗಿ ರೈತರ ಫಸಲುಗಳನ್ನು ಹಾಳು ಮಾಡಿದಾಗ, ಕೆಲವರು ಪ್ರಾಣಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಕಾಡುಪ್ರಾಣಿಗಳು ಊರೊಳಗೆ ಬಂದು ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿದಾಗ, ಜಾಡನ್ನು ಅನುಸರಿಸಿ ಹೋಗಿ ವಿಷಪ್ರಾಶನ ಮಾಡಿ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇಸಿ ದನಕರುಗಳನ್ನು ಸಾಕುವ ಮಾಲೀಕರು, ತಮ್ಮ ಜಾನುವಾರುಗಳನ್ನು ಕಾಡಿಗೆ ಬಿಡುವಾಗ ಅವುಗಳ ಜೊತೆಗೆ ಹೋಗುವುದಿಲ್ಲ. ಮೇವಿಗಾಗಿ ಕಾಡಿಗೆ ಹೋದ ದನಕರುಗಳಲ್ಲಿ ಕೆಲವು, ಒಂದೆರಡು ದಿನ ಅಲ್ಲೇ ತಂಗಿದ್ದು ವಾಪಸ್ಸಾಗುವುದೂ ಇದೆ.

ಹೀಗೆ ಅರಣ್ಯದಲ್ಲಿಯೇ ತಂಗುವ ದನಕರುಗಳು ಕಾಡುಪ್ರಾಣಿಗಳಿಗೆ ಬಲಿಯಾದಾಗಲೂ ವಿಷಪ್ರಾಶನದಂತಹ ಘಟನೆಗಳು ಸಂಭವಿಸುತ್ತವೆ. ಇಂತಹ ದುರ್ಘಟನೆಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಮೊದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ಅರಣ್ಯ ಸಂರಕ್ಷಣೆಯ ಮಹತ್ವ ಕುರಿತು ಅರಿವು ಮೂಡಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಿಗೆ ವಿಧಿಸುವ ಶಿಕ್ಷೆಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು.

ಕಾಡುಪ್ರಾಣಿಗಳಿಂದ ರೈತರ ಫಸಲಿಗೆ ಹಾನಿಯಾದರೆ ಅಥವಾ ಸಾಕುಪ್ರಾಣಿಗಳು ಬಲಿಯಾದರೆ ಅರಣ್ಯ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತವಾಗಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತಾಗಬೇಕು. ಹಾಗೆ ಮಾಡಿದಲ್ಲಿ ಸಂತ್ರಸ್ತರು ಕಾಡುಪ್ರಾಣಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ಹೋಗಲಾರರು. ಅಂತೆಯೇ, ಕಾಡಿನಲ್ಲಿ ಸತ್ತ ಪ್ರಾಣಿಗಳ ಕಳೇಬರಗಳನ್ನು ಅರಣ್ಯ ಇಲಾಖೆ ಆದಷ್ಟು ಬೇಗನೆ ಪತ್ತೆಹಚ್ಚಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಅರಣ್ಯ ಇಲಾಖೆಯು ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕರನ್ನು ನೇಮಕ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡುವುದು ಒಳ್ಳೆಯದು. ಸ್ಥಳೀಯರಿಗೆ ಅರಣ್ಯದ ಪರಿಚಯದ ಜೊತೆಗೆ ಜನರ ಪರಿಚಯವೂ ಇರುವುದರಿಂದ, ಅವರಲ್ಲಿ ಕಾನೂನುಬಾಹಿರ ಚಟುವಟಿಕೆ ಗಳಲ್ಲಿ ತೊಡಗುವವರನ್ನು ಸುಲಭವಾಗಿ ಪತ್ತೆ ಹಚ್ಚಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನೆರವಾಗಬಹುದು.

ತಮಿಳುನಾಡಿನ ಬರಗೂರು, ತಟ್ಟೆಕೆರೆ, ತಾವರೆಕೆರೆ ಮುಂತಾದ ಸ್ಥಳಗಳಿಂದ ಪ್ರತಿವರ್ಷ ಮೇವು ಮತ್ತು ಗೊಬ್ಬರಕ್ಕಾಗಿ ಸಾವಿರಾರು ಜಾನುವಾರುಗಳನ್ನು ಕರ್ನಾಟಕದ ಗಡಿಯೊಳಗೆ ತಂದು ತಾತ್ಕಾಲಿಕ ಕೊಟ್ಟಿಗೆಗಳನ್ನು ನಿರ್ಮಿಸಿ, ಮೇಯಲು ಬಿಡುತ್ತಾರೆ. ಈ ಜಾನುವಾರುಗಳ ಪ್ರವೇಶದಿಂದಾಗಿ ಸ್ಥಳೀಯರ ದನಕರುಗಳಿಗೆ ಮೇವಿನ ಅಭಾವ ಉಂಟಾಗುವುದಲ್ಲದೆ, ವಿಷಪ್ರಾಶನದಂತಹ ಘಟನೆಗಳಿಗೆ ಕಾರಣವಾಗುತ್ತದೆ.

ಹನೂರು ತಾಲ್ಲೂಕಿನ ಪಾಲಾರ್, ಗರಿಕೆಕಂಡಿ, ಜಲ್ಲಿಪಾಳ್ಯ ಮುಂತಾದ ಅಂತರರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ, ಹೊರರಾಜ್ಯದ ಜಾನುವಾರುಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕು. ಹನೂರು– ಹಂದಿಯೂರು ರಸ್ತೆಗಳು ಕೂಡುವ ಅಂತರರಾಜ್ಯ ಗಡಿಯಾದ ಗರಿಕೆಕಂಡಿಯಲ್ಲಿ ತಮಿಳುನಾಡಿನ ಚೆಕ್‌ಪೋಸ್ಟ್ ಮಾತ್ರ ಇದ್ದು, ಕರ್ನಾಟಕದ ಚೆಕ್‌ಪೋಸ್ಟ್ ರಾಜ್ಯದ ಗಡಿಯಿಂದ 5 ಕಿ.ಮೀ ಒಳಗೆ ನಾಲ್ ರೋಡ್‌ನಲ್ಲಿದೆ. ಇದನ್ನು ಅರಣ್ಯದೊಳಗಿರುವ ಗರಿಕೆಕಂಡಿಗೆ ಸ್ಥಳಾಂತರ ಮಾಡಿದಲ್ಲಿ, ಕಾಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸಹಾಯಕವಾಗಬಹುದು.

ರಾಜ್ಯದಲ್ಲೇ ಅತಿಹೆಚ್ಚು ಹುಲಿಗಳು ಇರುವ ಪ್ರದೇಶ ಎಂಬ ಕೀರ್ತಿಗೆ ಚಾಮರಾಜನಗರ ಪಾತ್ರವಾಗಿದೆ. ಜಿಲ್ಲೆಯ ಬಂಡೀಪುರ ಮತ್ತು ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯಗಳಿವೆ. ಮಲೆಮಹದೇಶ್ವರ ವನ್ಯಜೀವಿಧಾಮವನ್ನೂ ಹುಲಿ ರಕ್ಷಿತಾರಣ್ಯವೆಂದು ಘೋಷಿಸಬೇಕೆಂಬ ಪ್ರಸ್ತಾವ ಇದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯೋನ್ಮುಖವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.