ADVERTISEMENT

ಬತ್ತಿದೆ ಮಾನವೀಯತೆಯ ಕಡಲು

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:30 IST
Last Updated 15 ಮೇ 2019, 20:30 IST
   

‘ನಾನೀಗ ಶೇ 80ರಷ್ಟು ಸುಟ್ಟು ಹೋಗಿದ್ದೇನೆ. ನಾನು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಈಗ ಯಾರೂ ನನ್ನ ಮೇಲೆ ಅತ್ಯಾಚಾರ ಮಾಡಲಾರರು’

ತಂದೆಯಿಂದ ₹ 10,000ಕ್ಕೆ ಮಾರಾಟವಾಗಿ, ಪತಿಯ ಸ್ನೇಹಿತರಿಂದಲೇ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗಿ, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ ಮನನೊಂದು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಉತ್ತರ ಪ್ರದೇಶದ ಮಹಿಳೆಯೊಬ್ಬಳ ಮಾತು ಇದು. ಮೈ ಪೂರ್ತಿ ಸುಟ್ಟು ಹೋದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಹೇಳಿದ ಈ ಮಾತು ನಿಜಕ್ಕೂ ಇಡೀ ಪುರುಷ ಕುಲ ತಲೆ ತಗ್ಗಿಸುವಂತಹದ್ದು.

ಇಂತಹ ಮಾತನ್ನು ಹೇಳುವ ಸ್ಥಿತಿಗೆ ಆ ಮಹಿಳೆ ಬಂದಿದ್ದಾಳೆ ಎಂದರೆ ಆ ಮಹಿಳೆ ಎಷ್ಟು ನೊಂದಿರ ಬೇಕು. ಆಕೆಯ ಮೈ ಮತ್ತು ಮನದ ಮೇಲೆ ಎಷ್ಟು ಭೀಕರವಾದ ಹಿಂಸಾಚಾರ ನಡೆದಿರಬೇಕು. ದೆಹಲಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆ ಮಹಿಳೆಯ ಮಾತುಗಳು ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತದೆ.

ADVERTISEMENT

ಮಹಿಳೆಯೊಬ್ಬಳ ಬದುಕನ್ನು ಅಷ್ಟೊಂದು ಅಸಹನೀಯಗೊಳಿಸಿದ ಇಡೀ ಸಮಾಜ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಆಕೆಯ ಒಡಲಲ್ಲಿ ಕಣ್ಣೀರು ಇಲ್ಲ. ಎಲ್ಲವೂ ಬತ್ತಿದ ನಂತರವೇ ಆಕೆ ಬೆಂಕಿಗೆ ಮೈಯೊಡ್ಡಿದ್ದಾಳೆ. ಆದರೆ ಸುಟ್ಟು ಬೆಂದು ಹೋಗಬೇಕಾಗಿರುವುದು ಪುರುಷನೆಂಬ ಮೃಗನ ಮೃಗೀಯತೆಯೇ ವಿನಾ ಆ ಮಹಿಳೆಯಲ್ಲ. ಆದರೆ ನೈತಿಕ ಅಧಃಪತನದಲ್ಲಿ ಮುಳುಗಿಹೋಗಿರುವ ಸಮಾಜದಲ್ಲಿ ಮಹಿಳೆಯರು ಸುಟ್ಟು ಕರಕಲಾಗುತ್ತಿದ್ದಾರೆ. ನೇಣಿಗೆ ಕೊರಳು ಕೊಟ್ಟು ಜೀವನ ಯಾತ್ರೆ ಮುಗಿಸುತ್ತಿದ್ದಾರೆ. ಈ ಪುರುಷ ಸಿಂಹ ಮಾತ್ರ ಇನ್ನೊಬ್ಬ ಅಸಹಾಯಕ ಮಹಿಳೆಯ ಶೋಧನೆಗೆ ಹೊರಡುತ್ತಿದ್ದಾನೆ.

ಆ ಮಹಿಳೆ ಇನ್ನೂ 14 ವರ್ಷದ ಬಾಲಕಿಯಾಗಿದ್ದಾಗಲೇ ಆಕೆಯ ತಂದೆ ಒಬ್ಬ ಮುದುಕನೊಂದಿಗೆ ಮದುವೆ ಮಾಡಿದ. ಆ ದಾಂಪತ್ಯದಲ್ಲಿ ಆಕೆಗೊಂದು ಮಗುವೂ ಇದೆ. ತನಗಿಂತ ಬಹಳ ವರ್ಷ ಕಿರಿಯಳಾದ ಪತ್ನಿಯೊಂದಿಗೆ ವಾಸ ಮಾಡುವುದು ಸಾಧ್ಯವಿಲ್ಲದೇ ಇರುವುದರಿಂದ ಆತ ಪತ್ನಿಯನ್ನು ತ್ಯಜಿಸಿದ. ಆಕೆ ಬೇರೆ ದಾರಿಯಿಲ್ಲದೆ ತವರು ಮನೆ ಸೇರಿದಳು.

ಅವಳ ಪಾಲಿಗೆ ತವರು ಮನೆ ಭದ್ರವಾದ ಗೂಡಾಗಿರಲಿಲ್ಲ. ಅಲ್ಲಿ ಪ್ರೀತಿಯ ಕರೆ ಇರಲಿಲ್ಲ. ವಿಶ್ವಾಸದ ಸೆಲೆಯೂ ಇರಲಿಲ್ಲ. ಪತಿಯಿಂದ ಬೇರೆಯಾಗಿ ಬಂದ ಮಗಳನ್ನು ನೋಡಿಕೊಳ್ಳಬೇಕಾದ ತಂದೆ ಎಂಬ ಮಹಾಪುರುಷ ಆಕೆಯನ್ನು ₹ 10,000 ಕ್ಕೆ ತನ್ನ ಸ್ನೇಹಿತನಿಗೇ ಮಾರಾಟ ಮಾಡಿದ. ತಂದೆಯ ಸ್ನೇಹಿತನ ಜೊತೆಗೆ ಆಕೆಗೆ ಮದುವೆ ಶಾಸ್ತ್ರ ಆಯಿತು. ಈ ಎರಡನೇ ಪತಿಯಿಂದಲೂ ಆಕೆಗೊಂದು ಮಗುವಾಯಿತು. ಕೆಲವೇ ದಿನಗಳಲ್ಲಿ ಆತ ನರರಾಕ್ಷಸ ಎನ್ನುವುದು ಆಕೆಗೆ ಗೊತ್ತಾಯಿತು.

ಎರಡನೇ ಪತಿ ಪತ್ನಿಯನ್ನು ತನ್ನ ಸ್ನೇಹಿತರ ಮನೆಗೆ ಕೆಲಸಕ್ಕೆ ಎಂದು ಕಳಿಸುತ್ತಿದ್ದ. ಜೊತೆಗೆ ಆ ಸ್ನೇಹಿತರು ಪತ್ನಿಯ ಮೇಲೆ ಅತ್ಯಾಚಾರ ನಡೆಸಲೂ ಪ್ರೇರೇಪಿಸುತ್ತಿದ್ದ. ಸುಮಾರು 20 ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆ ಮಹಿಳೆ ದೂರಿದ್ದಾರೆ. ಆಸಿಡ್ ಹಾಕುವುದಾಗಿ ಹೆದರಿಸಿ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದರು. ನಾನು ಬಹಳ ಸುಲಭವಾಗಿ ಸಿಗುತ್ತೇನೆ ಎಂದು ಅವರು ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದರು‘ ಎಂದೂ ಮಹಿಳೆ ಆರೋಪಿಸಿದ್ದಾರೆ.

ನಿರಂತರ ಅತ್ಯಾಚಾರದಿಂದ ನೊಂದ ಮಹಿಳೆ 2018ರ ಅಕ್ಟೋಬರ್ ನಲ್ಲಿಯೇ ಪೊಲೀಸರಿಗೆ ದೂರು ನೀಡಿದ್ದರೂ 2019ರ ಏಪ್ರಿಲ್ ವರೆಗೂ ಪೊಲೀಸರು ದೂರು ದಾಖಲಿಸಿಕೊಳ್ಳಲೇ ಇಲ್ಲ. ಅಸಹಾಯಕ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಮಾಡಿದ 20ಕ್ಕೂ ಹೆಚ್ಚು ಮಂದಿಗಿಂತ, ಒಂದು ವರ್ಷಕ್ಕಿಂತ ಹೆಚ್ಚಿನ ಕಾಲ ನೊಂದ ಮಹಿಳೆಯೊಬ್ಬಳ ದೂರು ದಾಖಲಿಸಿಕೊಳ್ಳದ ಪೊಲೀಸರು ಹೆಚ್ಚು ದುಷ್ಟರು. ಮೊದಲು ಅವರಿಗೆ ಶಿಕ್ಷೆಯಾಗಬೇಕು. ಇವರು ಕಾನೂನು ಪಾಲನೆಗೇ ಇದ್ದವರು. ತಮ್ಮ ಕರ್ತವ್ಯವನ್ನು ಪಾಲಿಸಲು ಮುಂದಾಗದ ಈ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಸಮಾಜ ಕೊಳತು ನಾರುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಮಿಗಿಲಾದ ಉದಾಹರಣೆ ಬೇಕೆ?

ದೆಹಲಿಯಲ್ಲಿ ನಿರ್ಭಯ ಪ್ರಕರಣ ನಡೆದ ನಂತರ ಅತ್ಯಾಚಾರಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗಿದೆ. ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ಕಾದಿದೆ. ಆದರೆ ಕಾನೂನು ಜಾರಿ ಮಾಡುವವರೇ ಈ ರೀತಿ ದಪ್ಪ ಚರ್ಮದವರಾಗಿದ್ದರೆ ಮಹಿಳೆಯರಿಗೆ ನ್ಯಾಯ ಸಿಗುವ ಬಗೆ ಹೇಗೆ? ಅತ್ಯಾಚಾರದ ಫಲವಾಗಿ ಆಕೆಗೆ ಮತ್ತೊಂದು ಮಗುವಾಗಿದೆ. ಎಲ್ಲ ಮೂರು ಮಕ್ಕಳನ್ನೂ ಎರಡನೇ ಗಂಡನೇ ಇಟ್ಟುಕೊಂಡಿದ್ದಾನಂತೆ. ಯಾಕೆಂದರೆ ಮಕ್ಕಳ ಆಸೆಯಿಂದ ಆಕೆ ತನ್ನ ಬಳಿಗೇ ಬರುತ್ತಾಳೆ ಎಂಬ ಕಾರಣಕ್ಕಾಗಿ. ನಮ್ಮ ದೇಶದಲ್ಲಿ ಜಲಾಶಯದ ಒಡಲು ಮಾತ್ರ ಬರಿದಾಗಿಲ್ಲ. ಮನುಷ್ಯರ ಒಡಲೂ ಬರಿದಾಗಿದೆ. ಬಡತನದ ಬೇಗೆಯಿಂದ ಬಳಲುವ ಮಹಿಳೆಯ ಕತೆ ಬಹಿರಂಗವಾಗಿದೆ. ಗುಡಿಸಲಿಗೆ ಪಾರದರ್ಶಕತೆ ಜಾಸ್ತಿ. ಅರಮನೆಗಳಲ್ಲಿ ನರಳುವ ಜೀವಗಳು ಎಷ್ಟಿವೆಯೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.