
ಇಂದಿನ ಶಿಕ್ಷಣ ಕ್ರಮ ಮೌಲ್ಯಶಿಕ್ಷಣಕ್ಕೆ ಒತ್ತು ನೀಡದ, ನಿರಂತರವಾದ ಓದು ಹಾಗೂ ನೆನಪಿನ ಶಕ್ತಿಯನ್ನು ಮಾತ್ರ ಪರೀಕ್ಷಿಸುವ ಯಾಂತ್ರಿಕ ವಿಧಾನವಾಗಿದೆ. ಪರೀಕ್ಷೆ ಹಾಗೂ ಅಂಕಗಳನ್ನು ಆಧರಿಸಿದ ಕಲಿಕಾ ವಿಧಾನದಿಂದ ಯಾಂತ್ರಿಕ ವ್ಯಕ್ತಿತ್ವಗಳನ್ನು ಹುಟ್ಟುಹಾಕಲಾಗುತ್ತಿದೆ. ಇದು ಶಿಕ್ಷಣ ಇಲಾಖೆಗೂ ಮನವರಿಕೆಯಾದಂತಿದೆ. ಹಾಗಾಗಿಯೇ, ಕಲಿಕೆಯಲ್ಲಿ ನೀತಿಶಿಕ್ಷಣವನ್ನು ಅಳವಡಿಸುವ ತೀರ್ಮಾನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೌಲ್ಯಶಿಕ್ಷಣದ ಸ್ವರೂಪ ಕುರಿತಾಗಿ ಕೆಲವು ಸಂಗತಿಗಳನ್ನು ಚರ್ಚಿಸುವ ಅಗತ್ಯವಿದೆ.
ಮೌಲ್ಯಶಿಕ್ಷಣದ್ದು ಮಗುವಿನ ಮನೋಧರ್ಮವನ್ನು ರೂಪಿಸುವ ಕೆಲಸ. ಬದುಕಿಗೆ ಬೇಕಾದ ಪ್ರೀತಿ, ಸ್ನೇಹ, ನಂಬಿಕೆ, ಸಹಕಾರ, ಸತ್ಯ, ಪ್ರಾಮಾಣಿಕತೆ ಹಾಗೂ ಜೀವಕಾರುಣ್ಯದ ಮನೋಭಾವ ಬೆಳೆಸುವ ದಿಸೆಯಲ್ಲಿ ಮೌಲ್ಯಶಿಕ್ಷಣದ ಸ್ವರೂಪವನ್ನು ರೂಪಿಸಬೇಕಾಗಿದೆ.
ಇಂದಿನ ಶಿಕ್ಷಣದ ಬಹುದೊಡ್ಡ ಸಮಸ್ಯೆ, ಅದು ಬರೀ ಜ್ಞಾನಾಧಾರಿತ ಆಗಿರುವುದು. ಕ್ರೀಡೆ, ಕಲೆ, ಸಾಹಿತ್ಯ ಮೊದಲಾದ ಸೃಜನಶೀಲ ಆಸಕ್ತಿಯು ಇಲಾಖೆಗಳು ನಡೆಸುವ ಔಪಚಾರಿಕ ಕಾರ್ಯಕ್ರಮಗಳಾಗಿ ಉಳಿದಿವೆ. ಒಂದು ಪರೀಕ್ಷೆ ಬರೆದು ಹಗುರಾದೆ ಎಂಬ ನಿರಾಳತೆ ಅನುಭವಿಸಲೂ ಬಿಡದೆ ಇನ್ನೊಂದು ಪರೀಕ್ಷೆಯನ್ನು ಎದುರಿಗೆ ತಂದು ನಿಲ್ಲಿಸುವ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹತ್ತಿಕ್ಕಿ ಹೈರಾಣಾಗಿಸಿದೆ.
ಮಗುವಿನ ಮನೋಲೋಕವನ್ನು ಕಟ್ಟುವಲ್ಲಿ ಭಾಷೆ– ಸಾಹಿತ್ಯ ಮೊದಲಾದ ಸೃಜನಶೀಲ ಕಲಾಮಾಧ್ಯಮಗಳು ಮಹತ್ತರವಾದ ಪಾತ್ರವಹಿಸುತ್ತವೆ ಎಂಬುದನ್ನು ನಾವಿಂದು ಸಂಪೂರ್ಣ ಮರೆತಿದ್ದೇವೆ. ಭಾವನೆ, ಸ್ಪಂದನ, ಮಾನವೀಯ ಗುಣಗಳಿಲ್ಲದ ವಿದ್ಯಾರ್ಥಿ ಸಮುದಾಯವನ್ನು ಬೆಳೆಸುತ್ತಿದ್ದೇವೆ. ಇದು ‘ಎ.ಐ’ ಎಂಬ ರೋಬೊಗಳಂತಹ ಯಾಂತ್ರಿಕ ವ್ಯಕ್ತಿತ್ವಗಳಿಗಿಂತ ಭಿನ್ನವೇನಲ್ಲ. ನಮ್ಮ ವಿದ್ಯಾರ್ಥಿಗಳು ಜ್ಞಾನಾಧಾರಿತ ರೋಬೊಗಳಾಗದೆ, ಮಾನವೀಯ ಸ್ಪಂದನಗಳಿರುವ ರಕ್ತ–ಮಾಂಸದ ವ್ಯಕ್ತಿತ್ವಗಳಾಗಿ ರೂಪುಗೊಳ್ಳುವಂತೆ ಶಿಕ್ಷಣದ ಸ್ವರೂಪ ಇರಬೇಕಾಗಿದೆ.
ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎಂಬ ಮಾತನ್ನು ದಾರ್ಶನಿಕ ವಿಜ್ಞಾನಿ ಐನ್‌ಸ್ಟೀನ್ ಹೇಳಿದ್ದ. ಹೆಲಿಕಾಪ್ಟರ್ ಇಲ್ಲದ ಹದಿನಾರನೇ ಶತಮಾನದಲ್ಲಿ ಲಿಯೊನಾರ್ಡೊ ಡಾ ವಿಂಚಿ ತನ್ನ ಕಲ್ಪನೆಯ ಲೋಕದಲ್ಲಿ ಅಂತಹದ್ದೊಂದು ಚಿತ್ರವನ್ನು ಬರೆದಿದ್ದ. ವಿಮಾನವೇ ಇಲ್ಲದ ರಾಮಾಯಣದ ಕಾಲದಲ್ಲಿ ವಾಲ್ಮೀಕಿ ‘ಪುಷ್ಪಕ ವಿಮಾನ’ದ ಕಲ್ಪನೆ ಹೊಂದಿದ್ದ. ಸೃಜನಶೀಲ ಮನಸ್ಸು ಕಲ್ಪಿಸಿದ ಕನಸನ್ನು ಆ ನಂತರದ ವಿಜ್ಞಾನ ನನಸಾಗಿಸಿತು. ಕಲ್ಪನೆ–ಕನಸುಗಳನ್ನು ಅರಳಿಸುವಲ್ಲಿ ಮಹತ್ವದ ಪಾತ್ರವಹಿಸುವ ಭಾಷೆ ಹಾಗೂ ಸಾಹಿತ್ಯದ ಕಲಿಕೆಯನ್ನು ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಾರ್ವತ್ರಿಕಗೊಳಿಸಬೇಕಾಗಿತ್ತು. ಬದಲಿಗೆ ನಾವಿಂದು ಕಲಾ ವಿಭಾಗವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ್ದೇವೆ.
ವರ್ತಮಾನದ ಶಿಕ್ಷಣ ಪದ್ಧತಿ ಕಲ್ಪನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಜ್ಞಾನ (ಮಾಹಿತಿ) ಆಧಾರಿತ ಮಾರ್ಗವನ್ನು ಮುನ್ನೆಲೆಗೆ ತಂದ ಪರಿಣಾಮ ಕಣ್ಣ ಮುಂದಿದೆ. ಇದರ ಪರಿಣಾಮವಾಗಿ ಇಂದಿನ ವಿದ್ಯಾರ್ಥಿಗಳು ನೀತಿಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಥೆಗಳು ನಮ್ಮ ಮನೋಲೋಕವನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ ಮಾತ್ರವಲ್ಲ, ಪರೋಕ್ಷವಾಗಿ ನಮ್ಮ ಭವಿಷ್ಯದ ಬದುಕಿಗೆ ಬೇಕಾದ ಜೀವನಮೌಲ್ಯಗಳನ್ನು ಕಲಿಸಬಲ್ಲವು. ಕಾವ್ಯಮೀಮಾಂಸೆ ಹೇಳುವ ಕಾಂತಾಸಮ್ಮಿತೆಯ ವಿಧಾನ ಅದರದು. ಶಿಕ್ಷಣದಲ್ಲಿ ಕಥೆಗಳ ಮಹತ್ವವನ್ನು ಅರಿತಿದ್ದ ಯು.ಆರ್. ಅನಂತಮೂರ್ತಿಯವರು ‘ಕಥೆ ಹೇಳಲು ಅಜ್ಜಿಯರನ್ನು ನೇಮಿಸಿಕೊಳ್ಳಿ’ ಎಂದಿದ್ದರು.
‘ಸಾವಿರದ ಒಂದು ರಾತ್ರಿ’ ಕಥೆ ಹೇಳಿದ ‘ಅರೇಬಿಯನ್ ನೈಟ್ಸ್’ನ ಶಹಜಾದೆ, ತನ್ನ ಕ್ರೂರ ಗಂಡ ಬಾದಶಹನಿಂದ ಸಾವನ್ನು ಗೆದ್ದು ಬರುತ್ತಾಳೆ. ‘ಪಂಚತಂತ್ರ’ದ ವಿಷ್ಣುಗುಪ್ತ ಕಥೆಗಳ ಮೂಲಕವೇ ಅರಸನ ಶತದಡ್ಡ ಮಕ್ಕಳಿಗೆ ರಾಜನೀತಿಯ ಪಾಠ ಹೇಳಿ ಅವರನ್ನು ವಿದ್ಯಾವಂತರನ್ನಾಗಿಸುತ್ತಾನೆ. ಆಧುನಿಕವಾದ ಹಾಗೂ ಅತಿ ತಾಂತ್ರಿಕ ಶಿಕ್ಷಣ ನೀಡಲು ಹೊರಟಿರುವ ನಾವಿಂದು, ಭಾಷೆ–ಸಾಹಿತ್ಯದ ಕಲಿಕೆಯಿಂದ ವಿಮುಖರಾದ ಪರಿಣಾಮವಾಗಿ ಮೌಲ್ಯಶಿಕ್ಷಣದಿಂದಲೂ ವಂಚಿತರಾಗಿದ್ದೇವೆ. ಬದುಕಿಗೆ ಬೇಕಾದ ಜೀವಜಲವನ್ನು ಉದ್ದೀಪಿಸುವ ಕಲೆ–ಸಾಹಿತ್ಯದ ಕಲಿಕೆಯ ವಾತಾವರಣವನ್ನು ಮರುರೂಪಿಸುವುದರಿಂದ ಮೌಲ್ಯಶಿಕ್ಷಣವು ತನ್ನಿಂತಾನೇ ಸಾಕಾರಗೊಳ್ಳುತ್ತದೆಯೇ ಹೊರತು, ವಾರಕ್ಕೊಂದು ದಿನ ಹೇಳುವ ಕಥೆಗಳಿಂದ ಅದು ಸಾಧ್ಯವಾಗಲಾರದು.
ದಿನಕ್ಕೊಂದು ಕಥೆ, ದಿನಕ್ಕೊಂದು ಹಾಡು, ದಿನದ ಒಂದು ಗಂಟೆಯಾದರೂ ಆಟದ ಮೈದಾನ– ಇವೆಲ್ಲ ಮಕ್ಕಳ ಮೈಮನಸ್ಸುಗಳನ್ನು ಅರಳಿಸಬಲ್ಲವು. ಕನಸು ಕಾಣುವುದಿರಲಿ, ನಿದ್ರಿಸಲೂ ಬಿಡದ ನಿರಂತರ ಪರೀಕ್ಷೆಗಳು, ಆನ್‌ಲೈನ್ ತರಗತಿಗಳು, ಟ್ಯೂಷನ್ ಕ್ಲಾಸ್‌ಗಳು, ಪರಿಹಾರ ಬೋಧನೆಗಳು, ರಜಾದಿನದ ತರಗತಿಗಳು ವಿದ್ಯಾರ್ಥಿಗಳ ಬದುಕುವ ಹಕ್ಕನ್ನೂ ಕಸಿದುಕೊಳ್ಳುತ್ತಿರುವುದನ್ನು ಎಲ್ಲರೂ ಅಸಹಾಯಕತೆಯಿಂದ ನೋಡುತ್ತಿದ್ದೇವೆ. ಹುಟ್ಟಿದಾರಭ್ಯ ಮಕ್ಕಳು ಓದಿನ ಹಿಂದೆ ಓಡುತ್ತಲೇ ಇರುವಂತಾಗಿದೆ. ಈ ಓಟದ ಸ್ಪರ್ಧೆಯಿಂದಾಗಿ ಬಸವಳಿದಿರುವ ಮಕ್ಕಳು ತಮ್ಮ ಸುತ್ತಲ ಪರಿಸರವನ್ನು ದ್ವೇಷ ಭಾವನೆಯಿಂದ ನೋಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಈ ಬೆಳವಣಿಗೆಯನ್ನು ತಡೆಗಟ್ಟಲು ನಾವು ಮೊದಲು ಏನನ್ನು ಕಳೆದುಕೊಂಡಿದ್ದೇವೆಯೋ ಅದನ್ನು ಮರಳಿ ಪಡೆದುಕೊಳ್ಳಲು ಪ್ರಯತ್ನಿಸಬೇಕಾಗಿದೆ.
ಹಿಂದಿದ್ದ ಸಾಂಸ್ಕೃತಿಕ ವಾತಾವರಣವನ್ನು ಮರಳಿ ಕಟ್ಟಿಕೊಳ್ಳಬೇಕಾಗಿದೆ. ಶಾಲಾ–ಕಾಲೇಜುಗಳು ಟ್ಯೂಷನ್ ಕ್ಲಾಸುಗಳಾಗದೆ ಅವು ಕಲಿಕೆಯೊಂದಿಗೆ ಸಾಂಸ್ಕೃತಿಕ ತಾಣಗಳಾಗಿಯೂ ಬದಲಾಗಬೇಕಾಗಿದೆ. ಇಲ್ಲದಿದ್ದರೆ ನಾವೇ ಸೃಷ್ಟಿಸಿದ ಮರುಭೂಮಿಯಲ್ಲಿ ಹಸುರನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡಿದಂತಾಗುತ್ತದೆ.