ADVERTISEMENT

ಸಂಗತ: ಕಾಡಿನ ಕಳೆಗುಂದಿಸೀತು ವೃಕ್ಷಕಳೆ

ಆರ್ಥಿಕ ಲಾಭವನ್ನೇ ನೆಚ್ಚಿಕೊಳ್ಳುವ ಸರ್ಕಾರಗಳು, ಪರಿಸರಕ್ಕೆ ಮಾರಕ ಎಂದು ತಿಳಿದಿದ್ದರೂ ನೆಡುತೋಪುಗಳಿಗೆ ಉತ್ತೇಜನ ನೀಡುತ್ತಲೇ ಬಂದಿರುವುದು ದುರದೃಷ್ಟಕರ

ಶ್ರೀಗುರು
Published 20 ಸೆಪ್ಟೆಂಬರ್ 2020, 19:31 IST
Last Updated 20 ಸೆಪ್ಟೆಂಬರ್ 2020, 19:31 IST
   

ನಮ್ಮ ನೆಲಕ್ಕೆ ಮಾರಕವಾಗಿರುವ ಅಕೇಶಿಯ ನೆಡುತೋಪಿನ ವಿರುದ್ಧ ಮಲೆನಾಡಿನ ಭಾಗದಲ್ಲಿ ಹೋರಾಟ ಶುರುವಾಗಿರುವ ಹೊತ್ತಿನಲ್ಲೇ ‘ಏಕಜಾತಿ ನೆಡುತೋಪು ವಿರೋಧಿ ದಿನ’ (ಸೆ. 21) ಬಂದಿದೆ. ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್‌ಗೆ ಕಚ್ಚಾ ವಸ್ತು ಸರಬರಾಜು ಮಾಡಲು ದಶಕಗಳ ಹಿಂದೆ ಸಾವಿರಾರು ಹೆಕ್ಟೇರ್ ಜಾಗದಲ್ಲಿ ಅಕೇಶಿಯ ಬೆಳೆಯಲು ನೀಡಿದ್ದ ಪರವಾನಗಿಯ ಅವಧಿ ಈಗ ಮುಗಿದಿದೆ. ಕಾರ್ಖಾನೆಯೂ ಮುಚ್ಚಿದೆ. ಸರ್ಕಾರವು ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ವಹಿಸದೆ, ಮತ್ತೆ ಏಕಜಾತಿ ನೆಡುತೋಪು ಬೆಳೆಸದೆ, ಸ್ವಾಭಾವಿಕ ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂಬ ಹೋರಾಟ ಜೋರಾಗಿದೆ.

1960ರಷ್ಟು ಹಿಂದೆಯೇ ಆಸ್ಟ್ರೇಲಿಯಾದಿಂದ ನಮ್ಮ ಮಲೆನಾಡು ನೆತ್ತಿಗೆ, ಕರಾವಳಿ ಸೆರಗಿಗೆ ವಕ್ಕರಿಸಿದ ವೃಕ್ಷಕಳೆ ಅಕೇಶಿಯ, ಕಳೆದ ನಾಲ್ಕೈದು ದಶಕಗಳಿಂದ ಪಶ್ಚಿಮಘಟ್ಟದ ಕಾನನಗಳ ಜೀವವೈವಿಧ್ಯ ನಾಶ ಮಾಡಿ, ಹುಲ್ಲುಗಾವಲು ಮತ್ತು ದೇಸಿ ಮರಗಳಿಗೆ ಕಂಟಕವಾಗಿ ‘ಹಸಿರು ಮರುಭೂಮಿ’ಯನ್ನು ಸೃಷ್ಟಿಸಿದೆ. ಹಕ್ಕಿ ಗೂಡು ಕಟ್ಟದ, ಪ್ರಾಣಿಗಳ ಚಟುವಟಿಕೆಯೇ ಇಲ್ಲದ, ನೀರಿನ ಮೂಲಗಳನ್ನೆಲ್ಲಾ ಒಣಗಿಸಿರುವ ನೆಡುತೋಪುಗಳು ಸಹಜಾರಣ್ಯಕ್ಕೆ ವಿಲನ್‍ಗಳಾಗಿ, ತಂಪಾಗಿದ್ದ ಮಲೆನಾಡಿನ ವಾತಾವರಣದ ಬಿಸಿ ಏರಿಸಿವೆ. ಸ್ಥಳೀಯ ಹುಲ್ಲಿನ 30 ಪ್ರಭೇದಗಳನ್ನು ನುಂಗಿ ಹಾಕಿರುವ ಅಕೇಶಿಯ ಬೆಳೆಸುವುದಕ್ಕೆ, ಮೂಲ ತಾಣಗಳಾದ ಆಸ್ಟ್ರೇಲಿಯಾ, ಇಂಡೊನೇಷ್ಯಾ, ಪಪುವಾ ನ್ಯೂಗಿನಿ ಹೊರತುಪಡಿಸಿ ವಿಶ್ವದ ಎಲ್ಲ ಕಡೆ ವಿರೋಧವಿದೆ.

2011ರ ಮಹಿಳಾ ದಿನಾಚರಣೆಯಂದು ಬ್ರೆಜಿಲ್‍ನ ಎಸ್ಟಿರಿಟೊ ಸ್ಯಾಂಟೊ ಪ್ರದೇಶದ ಸಾವಿರಾರು ಮಹಿಳೆಯರು ಅಲ್ಲಿನ ನೀಲಗಿರಿ ನೆಡುತೋಪಿನ ಮರಗಳನ್ನೆಲ್ಲಾ ಕಡಿದು ಹಾಕಿ, ಸಾಗುವಳಿ ಮಾಡಿ, ಜೋಳ, ತರಕಾರಿ ಬೆಳೆದು ಸೆಪ್ಟೆಂಬರ್ 21ರಂದು ಇಡೀ ಜಗತ್ತಿಗೆ ತೋರಿಸಿದ ದಿನವನ್ನು ನೆಡುತೋಪು ವಿರೋಧಿ ದಿನ ಎಂದು ಘೋಷಿಸಲಾಯಿತು.

ADVERTISEMENT

ಕೇವಲ ಐದೇ ವರ್ಷಗಳಲ್ಲಿ ಬೃಹತ್ ಮರಗಳಾಗಿ ಬೆಳೆಯುತ್ತವೆ ಮತ್ತು ಕಟಾವು ಮಾಡಿ ಕಾಗದದ ಕಾರ್ಖಾನೆಗಳಿಗೆ ಸರಬರಾಜು ಮಾಡಿದರೆ ಬೊಕ್ಕಸ ತುಂಬಿಸುತ್ತವೆ ಎಂಬ ಕಾರಣಕ್ಕೆ ಅಕೇಶಿಯ ಮರಗಳಿಗೆ ಸರ್ಕಾರಿ ಕೃಪೆ ಮೊದಲಿನಿಂದಲೂ ಇತ್ತು. ಅರಣ್ಯ ಇಲಾಖೆಯೇ ಅಕೇಶಿಯ ಪ್ಲಾಂಟೇಷನ್ ಯೋಜನೆಯನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರಾರಂಭಿಸಿತ್ತು. ಜನರಿಗೆ ಸಾಮಾನ್ಯ ಉರುವಲಿಗಾದರೂ ಅಕೇಶಿಯ ಸಿಗಬೇಕು, ಇಲ್ಲವಾದರೆ ಮುಖ್ಯ ಅರಣ್ಯಕ್ಕೇ ನುಗ್ಗುತ್ತಾರೆ ಎಂದು ಅಕೇಶಿಯ ನೆಡುತೋಪು ಬೆಳೆಸುವ ಕ್ರಮವನ್ನು ಸಮರ್ಥಿಸಿಕೊಂಡಿತ್ತು.

ಮಲೆನಾಡಿನಲ್ಲಿ ಅಕೇಶಿಯ ವಿರುದ್ಧದ ಹೋರಾಟ ಇದೇ ಮೊದಲೇನಲ್ಲ. ಶಿವರಾಮ ಕಾರಂತರ ಕಾಲದಲ್ಲೇ ನೀಲಗಿರಿ, ಅಕೇಶಿಯ ತೋಪುಗಳ ವಿರುದ್ಧ ಕೋರ್ಟಿನ ಮೆಟ್ಟಿಲೇರಿ ಕೇಸು ಗೆದ್ದಾಗ, ನೆಡುತೋಪು ಬೆಳೆಸಲೆಂದು ಸ್ಥಾಪಿತಗೊಂಡಿದ್ದ ‘ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್’ಗೆ ಬೀಗ ಬಿದ್ದಿತ್ತು. ಪಶ್ಚಿಮ ಘಟ್ಟದ ನೀರಿನ ಮೂಲಗಳಿಗೇ ಧಕ್ಕೆ ತರಲು ಹೊರಟಿದ್ದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು ಗಣಿಗಾರಿಕೆಗಾಗಿ ಕಾಡು ಕಡಿದಲ್ಲೆಲ್ಲಾ ಅಕೇಶಿಯ ಬೆಳೆಸಿತ್ತು. ಇದರಿಂದ ‘ಕಾಡಿನ ಪುನರ್‌ನಿರ್ಮಾಣ’ ಮಾಡಿದ್ದೇವೆ ಎಂದು ಹೇಳಿ, ಪರಿಸರ ತಜ್ಞರಿಂದ ಛೀಮಾರಿ ಹಾಕಿಸಿಕೊಂಡಿತ್ತು.

ಅಕೇಶಿಯ ತೋಪಿನಿಂದಾಗಿ ಆಹಾರ ದೊರೆಯದ ಜಿಂಕೆ, ಕಡವೆ, ಹಂದಿ, ಹಕ್ಕಿಗಳೆಲ್ಲ ಹೊಲದ ಬೆಳೆಗೆ ದಾಳಿ ಮಾಡಿದಾಗ, ತೀರ್ಥಹಳ್ಳಿಯಲ್ಲಿ 2013ರಲ್ಲೇ ಅಕೇಶಿಯ ವಿರೋಧಿ ಹೋರಾಟದ ದೊಡ್ಡ ರೈತ ಸಮಾವೇಶ ನಡೆದಿತ್ತು. ಕಡಿಮೆ ಅರಣ್ಯವಿರುವ ಲ್ಯಾಟರೈಟ್ ಶಿಲಾಯುಕ್ತ ಬೋಳುಗುಡ್ಡಗಳಲ್ಲಿ ಮಾತ್ರ ಅಕೇಶಿಯ ಬೆಳೆಯಬೇಕೆಂಬ ಆದೇಶವಿತ್ತು. ಪೇಪರ್ ತಯಾರಿಕೆಗೆ ಬೇಕಾದ ಬಿದಿರು ಕಡಿಮೆಯಾದಾಗ ತಾನೇ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದ ಸರ್ಕಾರ, ನೀಲಗಿರಿ ಮತ್ತು ಅಕೇಶಿಯ ಬೆಳೆಸಲು ಅನುವು ಮಾಡಿಕೊಟ್ಟಿತ್ತು. ನಮ್ಮ ಸಾಮಾಜಿಕ ಕಾರ್ಯಕರ್ತರು ಹಾಗೂ ಹೋರಾಟಗಾರರು, ಮಳೆಕಾಡುಗಳ ನಡುವೆ ಅಕೇಶಿಯ ಬೇಡ ಎಂದು ಸರ್ಕಾರ– ಜನರನ್ನು ಎಚ್ಚರಿಸಿದ್ದರು, ಅದರ ಬದಲಿಗೆ ಹೆಬ್ಬೇವಿನ ಮರದ ಪರಿಹಾರವನ್ನೂ ಸೂಚಿಸಿದ್ದರು. ಅಕೇಶಿಯದ ಅನಾಹುತದ ಕುರಿತು ಸರಣಿ ಲೇಖನಗಳನ್ನು ಬರೆದು ಎಚ್ಚರಿಸಿದ್ದರು.

ಅಕೇಶಿಯ ಬದಲಿಗೆ, ‘ಸ್ವರ್ಗದ ಮರ’ ಎಂದೇ ಖ್ಯಾತವಾದ ದಕ್ಷಿಣ ಅಮೆರಿಕ ಮೂಲದ ಸಿಮರೂಬ ಮರವನ್ನು ಬೆಳೆಸಬಹುದಾಗಿದೆ. ಹೆಚ್ಚು ನೀರು ಬಯಸದೆ ಅಕೇಶಿಯದಷ್ಟೇ ವೇಗವಾಗಿ ಬೆಳೆಯುವ ಇದರ ಎಲೆಯಿಂದ ತಯಾರಾದ ಚಹಾ, ಪ್ರಾರಂಭಿಕ ಹಂತದ ಕ್ಯಾನ್ಸರ್ ಸೇರಿದಂತೆ ವಸಡಿನ ಅಲ್ಸರ್, ಲಿವರ್ ಸಮಸ್ಯೆ, ಮಂಡಿಯೂತ, ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಜೈವಿಕ ಇಂಧನ ಉತ್ಪಾದಿಸಲು ಸೋಯಾ, ರಬ್ಬರ್, ತಾಳೆ, ಪೈನ್ ಮರಗಳಂಥ ಏಕಜಾತಿಯ ನೆಡುತೋಪುಗಳು ವಿಶ್ವದ ಎಲ್ಲ ಭಾಗಗಳಲ್ಲಿ ಬೆಳೆದು ನಿಂತಿವೆ. ಪರಿಸರಕ್ಕೆ ಮಾರಕ ಎಂದು ತಿಳಿದಿದ್ದರೂ ಆರ್ಥಿಕ ಲಾಭವನ್ನೇ ನೆಚ್ಚಿಕೊಂಡ ಸರ್ಕಾರಗಳು ನೆಡುತೋಪುಗಳಿಗೆ ಉತ್ತೇಜನ ನೀಡುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.