ADVERTISEMENT

ಸಂಗತ | ವೈಲ್ಡ್‌ಲೈಫ್ ಕ್ರಾಸಿಂಗ್ ಎಷ್ಟು ಸುರಕ್ಷಿತ?

ಈ ಯೋಜನೆಯ ಉದ್ದೇಶಿತ ಗುರಿ ಸಾಧನೆಯ ಬಗ್ಗೆ ಜಿಜ್ಞಾಸೆ ಇದೆ

ಗುರುರಾಜ್ ಎಸ್.ದಾವಣಗೆರೆ
Published 9 ಆಗಸ್ಟ್ 2020, 19:30 IST
Last Updated 9 ಆಗಸ್ಟ್ 2020, 19:30 IST
   

ದೇಶದ ರಕ್ಷಿತಾರಣ್ಯಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳಿಗೆ ಸಿಲುಕಿ ಸಾಯುವ ವನ್ಯಪ್ರಾಣಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅದಕ್ಕೆಂದೇ ಕೆಲವು ಹೆದ್ದಾರಿಗಳಲ್ಲಿ ವಾಹನಗಳ ರಾತ್ರಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇದಷ್ಟೇ ಪರಿಹಾರವಾಗಲಾರದು ಎಂದು ತಿಳಿದಿರುವುದರಿಂದ, ದೇಶದ ಅನೇಕ ರಾಷ್ಟ್ರೀಯ ಉದ್ಯಾನಗಳ ಮೂಲಕ ಹಾದು ಹೋಗಿರುವ ಸುಮಾರು 55 ಸಾವಿರ ಕಿ.ಮೀ.ನಷ್ಟು ಉದ್ದದ ಹೆದ್ದಾರಿಗಳಿಗೆ ಅಂಡರ್‌ಪಾಸ್ ಇಲ್ಲವೇ ಓವರ್‌ಪಾಸ್ ನಿರ್ಮಿಸಿ ವನ್ಯಜೀವಿಗಳನ್ನು ವಾಹನ ಅಪಘಾತಗಳಿಂದ ತಪ್ಪಿಸುವ ಬೃಹತ್ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಪ್ರಾರಂಭಿಕ ಮಾದರಿಯಾಗಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ವ್ಯಾಪಿಸಿರುವ ಖಾನಾ- ಪೆಂಚ್ ವನ್ಯಜೀವಿ ಕಾರಿಡಾರ್ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಒಂಬತ್ತು ಅಂಡರ್‌ಪಾಸ್‍ಗಳನ್ನು ನಿರ್ಮಿಸಿ ವಿವಿಧ ವನ್ಯಪ್ರಾಣಿಗಳ ನಿರಾತಂಕ ಓಡಾಟಕ್ಕೆ ಅನುವು ಮಾಡಿಕೊಟ್ಟಿದೆ.

ಅಂಡರ್‌ಪಾಸ್‍ಗಳ ಮೂಲಕ ವನ್ಯಜೀವಿಗಳ ಓಡಾಟ ಹೆಚ್ಚಿರುವುದನ್ನು ಕ್ಯಾಮೆರಾ ಟ್ರ್ಯಾಪ್‌ನಿಂದ ಸೆರೆಹಿಡಿದಿರುವ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸದಸ್ಯರು, ಯೋಜನೆ ಯಶಸ್ವಿಯಾಗಿದೆ ಎಂದು ಖುಷಿಯಾಗಿದ್ದಾರೆ.

ADVERTISEMENT

ಅಭಿವೃದ್ಧಿಯ ಅಂಧಯುಗದಲ್ಲಿ ಕಾಲಿಟ್ಟಲ್ಲೆಲ್ಲ ಎಡವುತ್ತಿರುವ ನಾವೆಲ್ಲ ನಮಗೆ ಬೇಕೆನಿಸಿದ್ದನ್ನೆಲ್ಲ ಪಡೆಯಲು, ಇರುವ ಜಾಗವನ್ನೆಲ್ಲ ಆಕ್ರಮಿಸಿಕೊಂಡು, ಅದು ಸಾಲದಾದಾಗ ಸುತ್ತಲಿನ ಕಾಡನ್ನೂ ಕಡಿದು ರಸ್ತೆ, ರೆಸಾರ್ಟ್‌, ತೋಟ ಮಾಡಿಕೊಂಡು, ಕಾಡುಪ್ರಾಣಿಗಳ ನೆಲೆ ತಪ್ಪಿಸಿದ್ದೇವೆ. ಅವೆಲ್ಲ ದಿಕ್ಕುಗಾಣದೆ ಜನವಸತಿ, ವ್ಯವಸಾಯ ಪ್ರದೇಶಗಳಿಗೆ ನುಗ್ಗಿ ದಾಂದಲೆ ಎಬ್ಬಿಸಿ ಆಸ್ತಿ- ಪ್ರಾಣಹಾನಿ ಮಾಡುವುದು, ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ಕಾಡಿಗಟ್ಟಲು ಸಾಹಸ ಮಾಡುವುದು, ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ರೈತರು ಧರಣಿ ಕೂಡುವ ದೃಶ್ಯಗಳು ಸಾಮಾನ್ಯವಾಗಿ ಹೋಗಿವೆ.

ಕಾಡಿನಿಂದ ಕಾಡಿಗೆ ಆಹಾರ ಹುಡುಕಿಕೊಂಡು ಇಲ್ಲವೇ ವಂಶಾಭಿವೃದ್ಧಿಗಾಗಿ ಸಂಗಾತಿಯನ್ನರಸಿ ಸಾವಿರಾರು ಮೈಲಿ ಕ್ರಮಿಸುವ ವನ್ಯಜೀವಿಗಳು, ರಾಜ್ಯ– ರಾಜ್ಯಗಳನ್ನು ಸಂಪರ್ಕಿಸುವ ಕಾರಿಡಾರ್‌ಗಳನ್ನು ಬಳಸಿಕೊಳ್ಳುತ್ತವೆ. ರೈಲು, ರಸ್ತೆ, ಹೆದ್ದಾರಿ, ಕಾಲುವೆ, ಅಣೆಕಟ್ಟು, ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳ ನಿರ್ಮಾಣದಿಂದ ಬಹುತೇಕ ವನ್ಯಜೀವಿ ಕಾರಿಡಾರ್‌ಗಳು ಅಲ್ಲಲ್ಲಿ ತುಂಡರಿಸಿ ಹೋಗಿವೆ. ಇದರಿಂದ, ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುವ ವನ್ಯಜೀವಿಗಳು ಅನೇಕ ಸಲ ರೈಲು- ಬಸ್ಸು– ಕಾರುಗಳ ಚಕ್ರಗಳಿಗೆ ಸಿಲುಕಿ ಅಸುನೀಗುತ್ತವೆ.

ಖಾನಾ- ಪೆಂಚ್ ರಾಷ್ಟ್ರೀಯ ಉದ್ಯಾನದ ಸಂಪರ್ಕ ಕಾರಿಡಾರ್ ಹುಲಿಯ ಸುಭದ್ರ ಆವಾಸವೆನಿಸಿದ್ದು, ವರ್ಷವಿಡೀ ವನ್ಯಜೀವಿ ಚಲನವಲನ ಹೊಂದಿರುತ್ತದೆ. ಉತ್ತರದ ಶ್ರೀನಗರ ಮತ್ತು ದಕ್ಷಿಣದ ಕನ್ಯಾಕುಮಾರಿಯನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯು ಇಲ್ಲಿ ಹಾದು ಹೋಗುವುದರಿಂದ, ಆ ಭಾಗದ ವಾಹನ ಓಡಾಟವು ವನ್ಯಜೀವಿಗಳ ಮೇಲೆ ಅತೀವ ಒತ್ತಡ ಸೃಷ್ಟಿಸಿತ್ತು.

ಹುಲಿ ಸಂರಕ್ಷಣೆಯಲ್ಲಿ ನಿರತರಾಗಿರುವ ಹಬೀಬ್ ಬಿಲಾಲ್, ‘ಅಂಡರ್‌ಪಾಸ್‌ ಅಥವಾ ವೈಲ್ಡ್‌ಲೈಫ್ ಕ್ರಾಸಿಂಗ್‍ಗಳಿಂದ ತುಂಬಾ ಅನುಕೂಲ ಆಗಿದೆ. ಈ ರೀತಿಯ ಅಂಡರ್‌ಪಾಸ್‌ಗಳ ಅವಶ್ಯಕತೆ ದೇಶದ ಇತರ ಭಾಗಗಳ ಕಾಡಿಗೂ ಬೇಕಿದೆ’ ಎಂದಿದ್ದಾರೆ.

ಈ ವೈಲ್ಡ್‌ಲೈಫ್ ಕ್ರಾಸಿಂಗ್‍ಗಳ ಯಶಸ್ಸಿನಿಂದ ಉತ್ತೇಜಿತವಾಗಿರುವ ನೋಯ್ಡ ಪ್ರಾಧಿಕಾರ, ತನ್ನ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದಲ್ಲಿ ದೇಶದ ಪ್ರಥಮ ‘ಅನಿಮಲ್ ಬ್ರಿಡ್ಜ್’ ಅನ್ನು ನಿರ್ಮಿಸಿ, ಅದರ ಮೇಲೆ ಜೀವವೈವಿಧ್ಯ ಪಾರ್ಕ್, ಔಷಧ ಸಸ್ಯವನಗಳನ್ನು ರೂಪಿಸುವ ಗುರಿ ಹೊಂದಿದೆ. ಸ್ಥಳೀಯ ಜಾತಿಗಳ ಸಸ್ಯಗಳೂ ಇರುವುದರಿಂದ ವನ್ಯಪ್ರಾಣಿಗಳು ತಮ್ಮ ಆವಾಸ ಸಹಜವಾಗಿದೆ ಎಂದು ಭಾವಿಸಿ ಬದುಕುತ್ತವೆ ಎನ್ನಲಾಗಿದೆ. ಆದರೆ ಈ ರೀತಿಯ ಕ್ರಾಸಿಂಗ್‍ಗಳಿಂದ ಅಂಥ ದೊಡ್ಡ ಪ್ರಮಾಣದ ಸಂರಕ್ಷಣೆಯೇನೂ ಆಗದು ಎಂದಿರುವ ತಜ್ಞರು, ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸ ಬಯಸುತ್ತವೆಯೇ ಹೊರತು, ಎಲ್ಲೆಲ್ಲಿ ಕ್ರಾಸಿಂಗ್ ಇದೆ ಎಂದು ಬೋರ್ಡ್ ಓದಿಕೊಂಡು ರಸ್ತೆ ದಾಟುವುದಿಲ್ಲ ಎಂದು ಟೀಕಿಸಿದ್ದಾರೆ.

ಖಾನಾ- ಪೆಂಚ್ ಕಾರಿಡಾರ್ ಭಾಗದ ಕ್ರಾಸಿಂಗ್‌ಗಳನ್ನು ಖುದ್ದಾಗಿ ಗಮನಿಸಿರುವ ನಮ್ಮ ರಾಜ್ಯದ ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್, ‘ಅಂಡರ್‌ಪಾಸ್‍ಗಳಿಂದ ಸ್ವಲ್ಪಮಟ್ಟಿನ ಪ್ರಯೋಜನವಾಗಿದೆ ಎಂಬುದು ಸುಳ್ಳಲ್ಲ. ಆದರೆ ಪ್ರಾಣಿಗಳು ಹೆದ್ದಾರಿ ಪ್ರವೇಶಿಸುವುದನ್ನು ನಿಲ್ಲಿಸಿಲ್ಲ ಮತ್ತು ಈಗಲೂ ಅಪಘಾತಗಳಲ್ಲಿ ಪ್ರಾಣಿಗಳು ಸಾಯುತ್ತಿವೆ. ಇದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು, ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ಎಲ್ಲ ಹೆದ್ದಾರಿಗಳಲ್ಲಿ ಅಂಡರ್‌ಪಾಸ್ ನಿರ್ಮಿಸುವುದು ಸರಿಯಲ್ಲ’ ಎಂದಿದ್ದಾರೆ.

ಇಂಥ ವೈಲ್ಡ್‌ಲೈಫ್ ಕ್ರಾಸಿಂಗ್‍ಗಳ ನಿರ್ಮಾಣದಲ್ಲಿ ಹೆಚ್ಚಿನ ಅರಣ್ಯ ನಾಶವಾಗುವ ಸಾಧ್ಯತೆಯಿದೆ ಎಂದಿರುವ ಸಂರಕ್ಷಣಾನಿರತರು, ತೀರಾ ಅನಿವಾರ್ಯವೆನಿಸುವ ಜಾಗಗಳಲ್ಲಿ ಮಾತ್ರ ಅತ್ಯಂತ ವೈಜ್ಞಾನಿಕವಾಗಿ ಇವುಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.