
ಸಂಗತ
ಭಾರತದ ವನಿತೆಯರು ಚೊಚ್ಚಿಲ ಏಕದಿನ ವಿಶ್ವಕಪ್ ಕ್ರಿಕೆಟ್ ಟ್ರೋಫಿಗೆ ಮುತ್ತಿಕ್ಕಿ ಆನಂದಬಾಷ್ಪ ಸುರಿಸುತ್ತಿದ್ದ ಐತಿಹಾಸಿಕ ಕ್ಷಣಗಳನ್ನು ಟಿ.ವಿ.ಯಲ್ಲಿ ಕಣ್ತುಂಬಿಕೊಳ್ಳುತ್ತಿದ್ದ ಕೋಟ್ಯಂತರ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹಾಗೆಯೇ, ಅನೇಕ ಪೋಷಕರಲ್ಲಿ ಆಸೆಯೊಂದು ಚಿಗುರಿದ್ದು ಸುಳ್ಳಲ್ಲ.
ಭಾರತದ ಕ್ರಿಕೆಟ್ ಆಟಗಾರ್ತಿಯರು ಅನುಭವಿಸಿದ ಖುಷಿ ಹಾಗೂ ಹೆಮ್ಮೆಯ ಕ್ಷಣಗಳನ್ನು ನಮ್ಮ ಮನೆಯ ಮಗಳು ಮುಂದೊಂದು ದಿನ ಅನುಭವಿಸುವಂತಾಗಲಿ ಎನ್ನುವ ಆಕಾಂಕ್ಷೆ ಒಂದಷ್ಟು ಪೋಷಕರ ಮನಸ್ಸಿನಲ್ಲಿ ಟಿಸಿಲೊಡೆಯುವಂತೆ ಮಾಡಿದೆ. ವಿಶ್ವಕಪ್ ಗೆದ್ದ ಭಾರತ ತಂಡದ ಸಾಧನೆಯ ಭಾವುಕ ಕ್ಷಣಗಳ ದೃಶ್ಯಾವಳಿಗಳನ್ನು ಸಾಮಾಜಿಕ ತಾಣಗಳಲ್ಲಿ ಕಣ್ತುಂಬಿಕೊಂಡ ಹೆಣ್ಣುಮಕ್ಕಳಿಗೂ ಸಾಧನೆಗೆ ಪ್ರೇರಣೆ ಲಭಿಸಿದಂತಾಗಿದೆ.
ಸಾಧನೆಯ ಹಾದಿ ಸುಲಭದ್ದಲ್ಲ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗಂತೂ ಮತ್ತಷ್ಟು ಕಠಿಣ ಸವಾಲು. ವೃತ್ತಿಪರ ಕ್ರಿಕೆಟ್ ಆಟಗಾರ್ತಿಯಾಗುವ ಕನಸು ನನಸು ಮಾಡಿಕೊಳ್ಳುವ ಆಸೆ ಈಡೇರಿಸಿಕೊಳ್ಳಲು ರಾಜ್ಯದ ಬಹುತೇಕ ಜಿಲ್ಲೆಗಳ ಹೆಣ್ಣುಮಕ್ಕಳು ಬೆಂಗಳೂರಿನತ್ತ ಮುಖ ಮಾಡಬೇಕಾದ ಅನಿವಾರ್ಯತೆಯಿದೆ.
ಮಹಿಳಾ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್, ವೇದಾ ಕೃಷ್ಣಮೂರ್ತಿ, ಶ್ರೇಯಾಂಕ ಪಾಟೀಲ, ವಿ.ಆರ್. ವನಿತಾ– ಹೀಗೆ ಇತ್ತೀಚೆಗಿನ ತಲೆಮಾರಿನ ಕ್ರಿಕೆಟಿಗರು ಆರಂಭದಲ್ಲಿ ತಮ್ಮೂರಿನಲ್ಲಿ ಕ್ರಿಕೆಟ್ ಆಡುವುದನ್ನು ರೂಢಿಸಿಕೊಂಡರೂ, ವೃತ್ತಿಪರ ಕಲಿಕೆಗಾಗಿ ರಾಜಧಾನಿಗೆ ಹೋಗಬೇಕಾಯಿತು. ಒಮ್ಮೆ ಅವಕಾಶದ ‘ರೈಲು’ ಸಿಕ್ಕ ಬಳಿಕ ಕ್ರಿಕೆಟ್ ವೃತ್ತಿಬದುಕು ಹಳಿಯ ಮಾರ್ಗದಲ್ಲಿ ಸಾಗುತ್ತದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ, ಹೀಗೆ ಕೆಲ ಕಡೆ ಮಾತ್ರ ಸೀಮಿತ ಚೌಕಟ್ಟಿನಲ್ಲಿ ಹೆಣ್ಣುಮಕ್ಕಳ ತರಬೇತಿಗೆ ಅವಕಾಶಗಳಿವೆ. ಕೊಪ್ಪಳ, ರಾಯಚೂರು, ಯಾದಗಿರಿ, ಗದಗ ಹೀಗೆ ಅನೇಕ ಜಿಲ್ಲೆಗಳ ಹೆಣ್ಣುಮಕ್ಕಳು ನೆರೆಯ ಜಿಲ್ಲೆಗಳು ಅಥವಾ ಬೆಂಗಳೂರಿಗೆ ಹೋಗುವುದು ಅನಿವಾರ್ಯವಾಗುತ್ತಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪುರುಷರ ಕ್ರಿಕೆಟ್‌ನಲ್ಲಿ ವಿವಿಧ ವಯೋಮಿತಿಯೊಳಗಿನ ಪಂದ್ಯಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸುತ್ತಿದೆ. ಬಹಳಷ್ಟು ಕ್ಲಬ್‌ಗಳು ಇರುವ ಹುಬ್ಬಳ್ಳಿ ಹಾಗೂ ಬೆಳಗಾವಿಯಂಥ ಊರುಗಳಲ್ಲಿ ಪಂದ್ಯಗಳನ್ನು ಆಡಲು ಮಕ್ಕಳಿಗೆ ವೇದಿಕೆ ದೊರೆಯುತ್ತಿದೆ. ಇಂಥ ಪ್ರಯೋಗವನ್ನು ಮಹಿಳಾ ಕ್ರಿಕೆಟ್‌ನಲ್ಲಿಯೂ ಖಾಸಗಿ ಕ್ಲಬ್‌ಗಳು ಹಾಗೂ ಕೆಎಸ್‌ಸಿಎ ನಿಯಮಿತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಾಡಿದರೆ ಹೊಸ ಪ್ರತಿಭೆಗಳ ಶೋಧ ಸುಲಭವಾಗುತ್ತದೆ.
ಹನ್ನೊಂದು ಆಟಗಾರ್ತಿಯರ ತಂಡವನ್ನು ಕಟ್ಟಲು ಸಾಧ್ಯವಾಗದೆ ಪುರುಷರ ತಂಡದ ಜೊತೆಗೆ ಮಹಿಳೆ ಕ್ರಿಕೆಟ್ ಆಡಬೇಕಾದ ಅನಿವಾರ್ಯತೆ ಕೆಲವು ಭಾಗದಲ್ಲಿ ನಿರ್ಮಾಣವಾಗಿದೆ. ತರಬೇತಿಗೆ ಬರುವ ಬೆರಳೆಣಿಕೆಯಷ್ಟೇ ಹೆಣ್ಣುಮಕ್ಕಳಿಗೆ ಸ್ಥಳೀಯವಾಗಿ ಪುರುಷರೊಂದಿಗೆ ತರಬೇತಿ ಸಿಕ್ಕರೂ, ನಿರಂತರವಾಗಿ ಪಂದ್ಯಗಳನ್ನು ಆಡಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ, ಪ್ರತಿಭಾವಂತ ಆಟಗಾರ್ತಿಯರ ಪೂರ್ಣ ಸಾಮರ್ಥ್ಯ ಒರೆಗೆ ಹಚ್ಚಲು ಸಾಧ್ಯವಾಗುತ್ತಿಲ್ಲ.
ಹೆಣ್ಣುಮಕ್ಕಳ ಕ್ರಿಕೆಟ್ ಅಭ್ಯಾಸಕ್ಕಾಗಿ ಕುಟುಂಬ ತೊರೆದು ಬೆಂಗಳೂರಿಗೆ ಹೋಗಲು ಬಡ ಮತ್ತು ಮಧ್ಯಮವರ್ಗದ ಮಕ್ಕಳ ಪೋಷಕರಿಗೆ ಸುಲಭವಲ್ಲ. ಇದರಿಂದಲೂ ಸಾಧನೆಯ ಕನಸು ಕಮರಬಹುದು. ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ತಂಡದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವುದು ಆಟಗಾರ್ತಿಯ ಸಾಮರ್ಥ್ಯದ ಮೇಲೆ ಅವಲಂಬಿತವಾದರೂ, ಪ್ರಾಥಮಿಕ ಹಂತದ ತರಬೇತಿಯಾದರೂ ಇರುವೆಡೆ ಸಿಗುವಂತಾಗಬೇಕು.
ವಿಶ್ವಕಪ್ ಗೆದ್ದ ತಂಡದ ಆಟಗಾರ್ತಿಯರ ಪಟ್ಟಿ ನೋಡಿದರೆ ರಾಜ್ಯಕ್ಕೆ ಖಂಡಿತವಾಗಿಯೂ ನಿರಾಸೆಯಾಗುತ್ತದೆ. ದೊಡ್ಡ ಕ್ರಿಕೆಟ್ ಸಂಸ್ಥೆ, ನೂರಾರು ಪುರುಷ ಕ್ರಿಕೆಟ್ ಕ್ಲಬ್‌ಗಳನ್ನು ಹೊಂದಿರುವ ಕರ್ನಾಟಕದಲ್ಲಿ ಮಹಿಳೆಯರಿಗೆ ಕ್ರಿಕೆಟ್ ತರಬೇತಿಗೆ ಸೌಲಭ್ಯಗಳ ಕೊರತೆಯಿದೆ.
ಮಹಿಳೆಯರ ಕ್ರಿಕೆಟನ್ನು ಜನ ಈಗಿನಷ್ಟು ಗಂಭೀರವಾಗಿ ಪರಿಗಣಿಸದ ಕಾಲದಲ್ಲಿಯೂ ಶಾಂತಾ ರಂಗಸ್ವಾಮಿ ಅವರು ದೇಶವನ್ನು ಪ್ರತಿನಿಧಿಸಿ ಪ್ರೇರಣೆಯಾದರು. ಇವರ ನಾಯಕತ್ವದಲ್ಲಿ ಭಾರತ 1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಟ್ನಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. ಇದು ಭಾರತ ಮಹಿಳಾ ತಂಡ ಟೆಸ್ಟ್ ಮಾದರಿಯಲ್ಲಿ ಗಳಿಸಿದ ಮೊದಲ ಗೆಲುವು. ಮಹಿಳಾ ತಂಡದ ಪ್ರಥಮ ನಾಯಕಿಯೂ ಆಗಿದ್ದ ಶಾಂತಾ ಅವರು, ‘ಭಾರತೀಯ ಕ್ರಿಕೆಟಿಗರ ಸಂಘಟನೆ’ಯ (ಐಸಿಎ) ಅಧ್ಯಕ್ಷೆಯಾಗಿದ್ದಾರೆ. ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಶಾಂತಾ ರಂಗಸ್ವಾಮಿ ಸೇರಿದಂತೆ ಅನೇಕರ ಶ್ರಮದಿಂದಾಗಿ ಈಗಿನ ಮಹಿಳಾ ಕ್ರಿಕೆಟ್‌ನಲ್ಲಿ ಜೆಮಿಮಾ ರಾಡ್ರಿಗಸ್, ಹರ್ಮನ್ ಪ್ರೀತ್ ಕೌರ್, ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಸ್ಮೃತಿ ಮಂದಾನ ತಾರೆಯರಾಗಿ ಹೊಳೆಯುತ್ತಿದ್ದಾರೆ. ಮುಂದೆ ಇಂಥ ತಾರೆಯರ ಪಟ್ಟಿಯಲ್ಲಿ ರಾಜ್ಯದ ಆಟಗಾರ್ತಿಯರೂ ನಿರಂತರವಾಗಿ ಕಾಣಿಸಿಕೊಳ್ಳುವಂತಾಗಲು ಮಹಿಳಾ ಕ್ರಿಕೆಟ್‌ಗೆ ರಾಜ್ಯದ ರಾಜಧಾನಿಯ ಆಚೆಗೂ ಒತ್ತು ಕೊಡಬೇಕಾಗಿದೆ. ಮನೆಯಲ್ಲಿ ಮಧ್ಯರಾತ್ರಿ ಟಿ.ವಿ.ಯಲ್ಲಿ ‘ವಿಶ್ವ ವಿಜೇತ ವನಿತೆಯರ’ ಸಾಧನೆ ಕಣ್ತುಂಬಿಕೊಂಡ ಪೋಷಕರ ಎದೆಯ ದನಿಗೆ ಕೆಎಸ್‌ಸಿಎ ಹಾಗೂ ಖಾಸಗಿ ಕ್ಲಬ್‌ಗಳು ಕಿವಿಗೊಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.