ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಗುಜರಾತ್ ವಿಧಾನಸಭೆಯ ಶಾಸಕಿ. ಅವರು ಕ್ರಿಕೆಟ್ ಮೈದಾನದಲ್ಲಿ ತಮ್ಮ ಪತಿಯ ಪಾದಮುಟ್ಟಿ ನಮಸ್ಕರಿಸುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿ ಗಮನ ಸೆಳೆದಿದೆ. ಮತ್ತೊಬ್ಬ ಕ್ರಿಕೆಟಿಗರಿಗೆ ಸಂಬಂಧಿಸಿದ ಇದೇ ರೀತಿಯ ಫೋಟೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿದ್ದು, ಆ ಚಿತ್ರ ‘ಎ.ಐ’ ಸೃಷ್ಟಿ ಎನ್ನುವುದು ಖಚಿತವಾಗಿದೆ. ಗಂಡಿನ ಪಾದಗಳಿಗೆ ಹೆಣ್ಣು ನಮಸ್ಕರಿಸುವ ನಡವಳಿಕೆ ನಮ್ಮ ಸಮಾಜದಲ್ಲಿ ಅಸಹಜವೇನಲ್ಲ. ರವೀಂದ್ರ ಜಡೇಜಾ ಹಾಗೂ ಪತ್ನಿಯ ಚಿತ್ರಕ್ಕೆ ಸಂಬಂಧಿಸಿದಂತೆ ಪರ, ವಿರೋಧದ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆಕ್ಷೇಪ ವ್ಯಕ್ತಪಡಿಸಿದವರ ಪ್ರತಿಕ್ರಿಯೆಗಳಲ್ಲಿ ‘ಇದೊಂದು ವಿಧದ ಸ್ತ್ರೀ ಶೋಷಣೆ’ ಎನ್ನುವ ಪ್ರತಿರೋಧದ ಧ್ವನಿ ಅಡಕವಾಗಿದೆ.
ಸಾವಿರಾರು ಜನ ಸೇರಿರುವ ಆಟದ ಮೈದಾನದಲ್ಲಿ ಓರ್ವ ಮಹಿಳೆ, ಅದರಲ್ಲೂ ಶಾಸಕಿ, ತನ್ನ ಪತಿಯ ಕಾಲುಮುಟ್ಟಿ ನಮಸ್ಕರಿಸುವ ವರ್ತನೆ ನಿಜಕ್ಕೂ ಆಕ್ಷೇಪಾರ್ಹವಾದದ್ದು. ವಿದ್ಯಾವಂತ ಹಾಗೂ ಜನಪ್ರಿಯ ಮಹಿಳೆಯಿಂದ ವ್ಯಕ್ತವಾಗುವ ಇಂತಹ ವರ್ತನೆ, ಮಹಿಳಾ ಶೋಷಣೆಯ ಹಲವು ಅನಿಷ್ಟ ಪದ್ಧತಿಗಳ ಹುಟ್ಟಿಗೆ ಪ್ರೇರಣೆಯಾಗಬಹುದು. ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅಪ್ಪುಗೆ, ಹಣೆಗೊಂದು ಮುತ್ತು, ಬೆನ್ನುತಟ್ಟುವಿಕೆ– ಹೀಗೆ ಹಲವು ದಾರಿಗಳಿದ್ದವು. ಮಹಿಳೆ ಇನ್ನೂ ಪುರುಷನ ಅಡಿಯಾಳು ಎನ್ನುವುದನ್ನು ಸಂಕೇತಿಸುವಂತೆ ಈ ವರ್ತನೆ ಬಿಂಬಿತವಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿರುವ ದಿನಗಳಲ್ಲೂ ಮಹಿಳೆಯರ ಕುರಿತು ಜನರ ಕರ್ಮಠ ಮನೋಭಾವ ಬದಲಾಗಿಲ್ಲ. ಕೆಲವು ಸಮುದಾಯಗಳಲ್ಲಿ ಮಹಿಳೆಯರಿಗೆ ದೇವರನ್ನು ಪೂಜಿಸುವ ಹಕ್ಕಿಲ್ಲ. ಅವರು ದೇವರ ವಿಗ್ರಹಗಳನ್ನು ಮತ್ತು ಪಟಗಳನ್ನು ಸ್ಪರ್ಶಿಸುವಂತಿಲ್ಲ. ಆದರೆ, ಮಹಿಳೆಯರು ಮಾಡುವ ಅಡುಗೆ ನೈವೇದ್ಯವಾಗಿ ದೇವರಿಗೆ ಸಮರ್ಪಣೆಯಾಗುತ್ತದೆ. ದೈವಪ್ರಜ್ಞೆಯಲ್ಲೂ ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಹುನ್ನಾರವಿದು. ಮುಟ್ಟಾದ ಮಹಿಳೆಯರಂತೂ ಆ ಅವಧಿಯಲ್ಲಿ ಮನೆಯಲ್ಲೇ ಬಹಿಷ್ಕೃತ ಬಾಳನ್ನು ಬದುಕಬೇಕು.
ಪತಿಯ ಆಯುಷ್ಯದ ವೃದ್ಧಿಗಾಗಿ ಕರ್ವಾ ಚೌತ್ ಮತ್ತು ಭೀಮನ ಅಮಾವಾಸ್ಯೆಗಳಿವೆ. ಮಹಿಳೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಉಪವಾಸ ವ್ರತ ಆಚರಿಸುತ್ತಾರೆ. ಯುವತಿಯರು ಭವಿಷ್ಯದಲ್ಲಿ ಉತ್ತಮ ಪತಿ ದೊರೆಯಲೆಂದು ಗಿಡಗಳಿಗೆ ಸೀರೆ, ಬಳೆತೊಡಿಸಿ ಸುತ್ತು ಹಾಕುತ್ತಾರೆ. ಬಾಲ್ಯದಿಂದಲೇ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಸೀತೆ, ಸಾವಿತ್ರಿಯರ ಕಥೆಗಳನ್ನು ಬೋಧಿಸಲಾಗುತ್ತದೆ. ಆದರೆ, ಪತ್ನಿಯ ಒಳಿತಿಗಾಗಿ ಪತಿ ಉಪವಾಸ ಮಾಡಿದ ಉದಾಹರಣೆಗಳಿಲ್ಲ.
ವಿಧವೆಯರು ಮಂಗಳಸೂತ್ರ, ಬಳೆ ಮತ್ತು ಕಾಲುಂಗುರ ಧರಿಸುವುದನ್ನು ತ್ಯಜಿಸಬೇಕು, ಹೂ ಮುಡಿದುಕೊಳ್ಳಬಾರದು ಎನ್ನುವ ಕಟ್ಟುಪಾಡುಗಳಿವೆ. ವಿಪರ್ಯಾಸ ಎಂದರೆ, ಯಾವುದೇ ಕಟ್ಟುಪಾಡು ವಿಧುರರಿಗಿರುವುದಿಲ್ಲ. ತಮ್ಮ ಕಾದಂಬರಿಗಳಲ್ಲಿ ಸ್ತ್ರೀ ಶೋಷಣೆ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ ತಂದ ಗೀತಾ ನಾಗಭೂಷಣ ಅವರು, ತಮ್ಮ ಪತಿಯ ಮರಣಾನಂತರವೂ ತಾಳಿ, ಕುಂಕುಮ ಮತ್ತು ಕಾಲುಂಗುರ ಧರಿಸುತ್ತಿದ್ದರು. ಹೆಣ್ಣಿಗೆ ಜನ್ಮದತ್ತವಾಗಿ ಪ್ರಾಪ್ತವಾದ ಅಲಂಕಾರ ಸಾಧನಗಳಿವು ಎನ್ನುತ್ತಿದ್ದರು. ಅವರ ನಡೆ ಅನೇಕ ಮಹಿಳೆಯರಿಗೆ ಮಾದರಿಯಾಯಿತು.
ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಪ್ರತಿನಿಧಿಗಳಿದ್ದರೂ ಅದು ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಚುನಾಯಿತ ಮಹಿಳೆಯರ ಪರವಾಗಿ ಕುಟುಂಬದ ಪುರುಷ ಸದಸ್ಯರೇ ಅಧಿಕಾರ ಚಲಾಯಿಸುವುದು ಸಾಮಾನ್ಯವಾಗಿದೆ.
ಕುಟುಂಬ ವ್ಯವಸ್ಥೆಯ ಗೋಡೆಗಳ ನಡುವಿನಿಂದಲೇ ಸ್ತ್ರೀ ಶೋಷಣೆ ಶುರುವಾಗುತ್ತದೆ. ಗಂಡುಮಕ್ಕಳೇ ಜನಿಸಬೇಕೆಂದು ಅಪೇಕ್ಷಿಸುವ ಪಾಲಕರ ಸಂಖ್ಯೆ ಹೇರಳವಾಗಿದೆ. ಮಕ್ಕಳ ಶಿಕ್ಷಣದ ವಿಷಯದಲ್ಲಿ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳೆಂಬ ತಾರತಮ್ಯವಿದೆ. ಹೆಣ್ಣುಭ್ರೂಣ ಹತ್ಯೆ ಅವ್ಯಾಹತವಾಗಿ ಮುಂದುವರಿದಿದೆ.
ಭಾಷೆಯ ಭೇದವಿಲ್ಲದಂತೆ ಭಾರತೀಯ ಸಿನಿಮಾಗಳಲ್ಲಿ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿವೆ. ಮಹಿಳಾ ಪಾತ್ರಗಳು ಹಾಡು, ನೃತ್ಯ, ಅತ್ಯಾಚಾರದಂತಹ ದೃಶ್ಯಗಳಲ್ಲಿ ಅಂಗಾಂಗ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆ. ಕರ್ವಾ ಚೌತ್ ಆಚರಣೆಯ ದೃಶ್ಯಗಳನ್ನು ಸಿನಿಮಾಗಳಲ್ಲಿ ಅತ್ಯಂತ ಆಕರ್ಷಣೀಯವಾಗಿ ತೋರಿಸಲಾಗುತ್ತಿದೆ. ಧಾರಾವಾಹಿಗಳಲ್ಲಿ ಸ್ತ್ರೀ ಪಾತ್ರಗಳನ್ನು ಬಾಲಿಶವಾಗಿ ಚಿತ್ರಿಸಲಾಗುತ್ತಿದೆ. ಹಾದರಕ್ಕೆ ಎಡೆಮಾಡಿಕೊಡುವ ಮತ್ತು ಕುಟುಂಬಗಳನ್ನು ಒಡೆಯುವ ಖಳನಾಯಕಿಯರಂತೆ ಮಹಿಳಾ ಪಾತ್ರಗಳನ್ನು ತೋರಿಸುವುದರಲ್ಲೇ ಸಿನಿಮಾ ಮತ್ತು ಧಾರಾವಾಹಿಗಳ ನಿರ್ದೇಶಕರು ತಮ್ಮ ಜಾಣ್ಮೆ ಹಾಗೂ ಪ್ರೌಢಿಮೆ ಮೆರೆಯುತ್ತಿದ್ದಾರೆ.
1899ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾವ್ ಅವರ ‘ಇಂದಿರಾಬಾಯಿ’ ಕಾದಂಬರಿಯಲ್ಲಿ ವಿಧವಾ ವಿವಾಹಕ್ಕೆ ಆದ್ಯತೆ ನೀಡಲಾಗಿದೆ. ಸನಾತನ ಸಂಪ್ರದಾಯ ಕಟ್ಟುನಿಟ್ಟಾಗಿದ್ದ ಕಾಲದಲ್ಲಿ ವಿಧವಾ ವಿವಾಹ ಪ್ರಸ್ತಾಪಿಸಿದ್ದು ಕಾದಂಬರಿಯ ಹೆಗ್ಗಳಿಕೆ. ಇಂದಿರಾಬಾಯಿ ಪಾತ್ರದ ಮೂಲಕ ಕಾದಂಬರಿಕಾರರು ಕೇಳುವ ಪ್ರಶ್ನೆ ಹೀಗಿದೆ: ‘ಸ್ತ್ರೀಯು ಪತಿಯ ಮರಣಾನಂತರ ತಲೆಬೋಳಿಸಿ, ರೂಪ ವಿರೂಪ ಮಾಡಿ ಸನ್ಯಾಸದಲ್ಲಿರಬೇಕಂತೆ. ಪುರುಷನು ಪತ್ನಿಯ ಮರಣಾನಂತರ ತಲೆ, ಗಡ್ಡ, ಮೀಸೆ ಬೋಳಿಸಿ ಏಕೆ ಸನ್ಯಾಸಿಯಾಗಬಾರದು?’. ಒಂದೇ ಕಾಲಾವಧಿಯಲ್ಲಿ ಬದುಕುತ್ತಿರುವ ಎರಡು ಜೀವಗಳ ನಡುವಣ ತಾರತಮ್ಯಕ್ಕೆ ಇಂದಿರಾಬಾಯಿ ಮಾತು ದೃಷ್ಟಾಂತವಾಗಿದೆ. ಶತಮಾನ ಕಳೆದರೂ ಸ್ತ್ರೀ ಶೋಷಣೆಯ ಈ ಪ್ರಶ್ನೆ ಅನುರಣಿಸುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.