‘ಈಗೀಗ ಮಕ್ಕಳು ಮತ್ತು ಯುವಜನ ಸಾಹಿತ್ಯ, ಸಂಗೀತ ಮತ್ತು ಕಲೆಗಳಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳಲ್ಲಿ ಸಾಂಸ್ಕೃತಿಕ ಹವ್ಯಾಸಗಳನ್ನು ಬೆಳೆಸಬೇಕಾದ ಪಾಲಕರಾದ ನಾವು, ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನಿಸುತ್ತಿದೆ’– ಇತ್ತೀಚೆಗೆ ನಾಟಕ ವೀಕ್ಷಣೆಗೆಂದು ಹೋಗಿದ್ದ ಸಂದರ್ಭದಲ್ಲಿ ವಿರಾಮದ ವೇಳೆ ಹಿರಿಯರೊಬ್ಬರು ಹೀಗೆ ಆತಂಕ ವ್ಯಕ್ತಪಡಿಸಿದರು. ಅವರು ಹೀಗೆ ಹೇಳುವುದಕ್ಕೆ, ಅಂದು ನಾಟಕ ವೀಕ್ಷಿಸಲು ಸೇರಿದ್ದ ಪ್ರೇಕ್ಷಕರ ಸಮೂಹದಲ್ಲಿ ಮಕ್ಕಳು ಮತ್ತು ಯುವಜನ ಇಲ್ಲದಿದ್ದುದೇ ಕಾರಣವಾಗಿತ್ತು. ವೃದ್ಧರು ಮತ್ತು ಬೆರಳೆಣಿಕೆಯಷ್ಟು ಸಂಖ್ಯೆಯ ಮಧ್ಯ ವಯಸ್ಸಿನವರು ಮಾತ್ರ ಅಲ್ಲಿ ಉಪಸ್ಥಿತರಿದ್ದರು. ಆ ಸನ್ನಿವೇಶವು ಸಾಂಸ್ಕೃತಿಕ ಲೋಕದ ದುರಂತಕ್ಕೆ ಕನ್ನಡಿ ಹಿಡಿದಂತಿತ್ತು.
ಪಾಲಕರಾಗಿ, ಶಿಕ್ಷಕರಾಗಿ, ಸಮಾಜದ ಪ್ರಜ್ಞಾವಂತ ನಾಗರಿಕರಾಗಿ ಹೀಗೆ ಹಲವು ಪಾತ್ರಗಳ ಮೂಲಕ ಮಕ್ಕಳು ಮತ್ತು ಯುವಜನರಲ್ಲಿ ಸಾಹಿತ್ಯ, ಸಂಗೀತ, ನಾಟಕ, ಕಲೆಗಳ ಕುರಿತು ಆಸಕ್ತಿ, ಅಭಿರುಚಿ ಬೆಳೆಸ
ಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ‘ಬದುಕು ಯಾಂತ್ರಿಕವಾಗುತ್ತಿರುವ ಯುಗದಲ್ಲಿ ನಮ್ಮನ್ನು ಆಗೀಗಲಾದರೂ ಮನುಷ್ಯರನ್ನಾಗಿಸುವ ಸಾಮರ್ಥ್ಯವು ಸಾಹಿತ್ಯ ಮತ್ತು ಇತರ ಕಲೆಗಳಿಗಿದೆ’ ಎಂದಿದ್ದಾರೆ ಕಥೆಗಾರ ಯಶವಂತ ಚಿತ್ತಾಲ.
ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ, ಸಂಗೀತ ಕಛೇರಿಯಂತಹ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದೇ ಆಯೋಜಕರಿಗೆ ಬಹು ದೊಡ್ಡ ತಲೆನೋವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ವಯೋವೃದ್ಧರೇ ಪ್ರೇಕ್ಷಕರ ಸಾಲಿನಲ್ಲಿ ಗೋಚರಿಸುತ್ತಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಕೆಲವೊಮ್ಮೆ ಸಿನಿಮಾಲೋಕದ ತಾರೆಗಳನ್ನು ಅತಿಥಿಗಳನ್ನಾಗಿ ಆಮಂತ್ರಿಸುವುದುಂಟು. ಆಗೆಲ್ಲ ಸೆಲೆಬ್ರಿಟಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಉಮೇದು ಪ್ರೇಕ್ಷಕರಲ್ಲಿ ಮೂಡಿ, ಕಾರ್ಯಕ್ರಮದ ನಿಜವಾದ ಉದ್ದೇಶ ಮೂಲೆಗುಂಪಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಭಿಕರನ್ನು ಆಕರ್ಷಿಸಲು ಉಪಾಹಾರ ಅಥವಾ ಊಟದ ವ್ಯವಸ್ಥೆಯನ್ನು ಮಾಡುವ ಪರಿಪಾಟ ಒಂದು ಸಂಪ್ರದಾಯದಂತಾಗಿದೆ. ಇಂತಹ ಪ್ರಲೋಭನೆಯ ಮೂಲಕ ಜನರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆತರಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಲೇಖಕರು ತಮ್ಮ ಪುಸ್ತಕಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುವ ಪರಿಪಾಟ ಹೆಚ್ಚುತ್ತಿದೆ. ರಾಜಧಾನಿಯ ಹೊರಗೆ ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದು ಕಷ್ಟದ ಕೆಲಸ ಎನ್ನುವುದು ಇದಕ್ಕೆ ಕೊಡುವ ಕಾರಣವಾಗಿದೆ. ಬೆಂಗಳೂರಿನ ಚಿಕ್ಕ ಸಭಾಂಗಣವೊಂದರಲ್ಲಿ ಸೇರುವ ನೂರರಿಂದ ನೂರೈವತ್ತು ಪ್ರೇಕ್ಷಕರನ್ನು ಇಡೀ ರಾಜ್ಯದ ಓದುಗ ವಲಯದ ಪ್ರತಿನಿಧಿಗಳೆಂದಾಗಲಿ ಅಥವಾ ಸಾಂಸ್ಕೃತಿಕ ಜವಾಬ್ದಾರಿ ಹೊತ್ತ ನೇತಾರರೆಂದಾಗಲಿ ಪರಿಭಾವಿಸಬೇಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ಮನೆ ಮತ್ತು ಶಾಲೆಯಲ್ಲಿ ಮಕ್ಕಳಲ್ಲಿ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ವಾತಾವರಣ ಇಲ್ಲದಿರುವುದು ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆಯ ಹಿಂದಿರುವ ಕಾರಣವಾಗಿದೆ. ಅದೆಷ್ಟೋ ಮನೆಗಳಲ್ಲಿ ಪುಸ್ತಕದ ಪುಟ್ಟ ಗೂಡು ಸಹ ಇರುವುದಿಲ್ಲ. ಮಕ್ಕಳನ್ನು ಸಂಗೀತ, ನಾಟಕ, ಚಿತ್ರಕಲಾ ಪ್ರದರ್ಶನಗಳಿಗೆ ಕರೆದೊಯ್ಯುವ ಮನೋಭಾವದ ಪಾಲಕರ ಸಂಖ್ಯೆ ಕ್ಷೀಣಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಬಳಕೆಯಾಗುವ ಸಮಯವನ್ನು ಮಕ್ಕಳು ಶಾಲಾ ಹೋಂವರ್ಕ್, ಪರೀಕ್ಷಾ ಸಿದ್ಧತೆ ಮತ್ತು ಪಠ್ಯಪುಸ್ತಕಗಳ ಓದಿಗೆ ವಿನಿಯೋಗಿಸಿಕೊಳ್ಳಲಿ ಎಂದು ಪಾಲಕರು ಅಪೇಕ್ಷಿಸುತ್ತಿದ್ದಾರೆ. ಶಾಲಾ ರಜಾದಿನಗಳಲ್ಲೂ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸಿ ಬೋಧನೆ ಮತ್ತು ಪರೀಕ್ಷೆಯಂತಹ ಶೈಕ್ಷಣಿಕ ವಾತಾವರಣದಲ್ಲೇ ಸಮಯ ಕಳೆಯುವಂತೆ ನೋಡಿಕೊಳ್ಳುತ್ತಿದ್ದಾರೆ.
ಸಾಂಸ್ಕೃತಿಕ ಹವ್ಯಾಸಗಳ ಕೊರತೆಯ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಹಿಂಸಾಪ್ರವೃತ್ತಿ ಹೆಚ್ಚುತ್ತಿದೆ. ಪುಸ್ತಕಗಳ ಓದು, ಸಂಗೀತ ಆಲಿಸುವುದು, ನಾಟಕದಂತಹ ಸಾಂಸ್ಕೃತಿಕ ಹವ್ಯಾಸಗಳಿಲ್ಲದ ಮಕ್ಕಳು ಮೊಬೈಲ್ ಫೋನ್ ವ್ಯಸನಿಗಳಾಗುತ್ತಿದ್ದಾರೆ. ಈಗಂತೂ ಮಕ್ಕಳ ಮೊಬೈಲ್ ಗೀಳು ಕೊರೊನಾ ನಂತರ ಕಾಲದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಸಾಂಸ್ಕೃತಿಕ ಹವ್ಯಾಸಗಳ ಕೊರತೆಯು ಭಾಷೆಯ ದುರ್ಬಳಕೆಗೆ ಕಾರಣವಾಗುತ್ತಿದೆ. ಕೆಲವು ಜಾಹೀರಾತುಗಳು ಮತ್ತು ಸಿನಿಮಾಗಳಲ್ಲಿ ಭಾಷೆಯನ್ನು ಕೆಟ್ಟದಾಗಿ ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಸಿನಿಮಾ ಮಾಧ್ಯಮದ ಪ್ರಭಾವದಿಂದಾಗಿ, ಶಬ್ದಕೋಶದಲ್ಲೂ ಸಿಗದ, ಅರ್ಥವೇ ಇಲ್ಲದ ಪದಗಳು ಶಾಲೆ ಮತ್ತು ಕಾಲೇಜುಗಳ ಆವರಣಗಳಲ್ಲಿ ಹರಿದಾಡುತ್ತಿವೆ. ‘ಮಕ್ಕಳನ್ನು ಸಾಹಿತ್ಯದ ಓದುಗರ
ನ್ನಾಗಿಸುವುದು ಅತ್ಯಂತ ಅವಶ್ಯವಾಗಿದೆ. ಸಾಹಿತ್ಯದ ಮೂಲಕವೇ ಮಗು ಪ್ರೀತಿ ಮತ್ತು ಅಂತಃಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ’ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ. ಬ್ರಾಡ್‌ಸ್ಕಿ ಅವರ ಮಾತು ಮಕ್ಕಳಲ್ಲಿ ಬೆಳೆಸಬೇಕಾದ ಸಾಂಸ್ಕೃತಿಕ ಹವ್ಯಾಸದ ಅಗತ್ಯವನ್ನು ಧ್ವನಿಸುತ್ತದೆ.
ಸೃಜನಶೀಲ ಹವ್ಯಾಸವು ಮನುಷ್ಯ ಸ್ವಭಾವದಲ್ಲಿ ಪರಿವರ್ತನೆಯನ್ನು ತಂದು ಆ ಮೂಲಕ ಸಮಾಜದಲ್ಲಿ ಕೇಡಿನ ಪ್ರಮಾಣವನ್ನು ತಗ್ಗಿಸುವ ಕೆಲಸ ಮಾಡುತ್ತದೆ. ಪರಿಣಾಮವಾಗಿ, ಮಕ್ಕಳಲ್ಲಿ ಸೃಜನಶೀಲ ಹವ್ಯಾಸಗಳನ್ನು ಬೆಳೆಸುವುದು, ಆ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಸಾಂಸ್ಕೃತಿಕ ಜವಾಬ್ದಾರಿಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.