ADVERTISEMENT

ದೇವರನ್ನು ನಂಬದೇ ಯಶಸ್ವಿಯಾಗೋದು ಹೇಗೆ?

ಸಹನೆ
Published 17 ಜನವರಿ 2026, 2:30 IST
Last Updated 17 ಜನವರಿ 2026, 2:30 IST
<div class="paragraphs"><p>ಚಿತ್ರ: ಗುರು ನಾವಳ್ಳಿ</p></div>

ಚಿತ್ರ: ಗುರು ನಾವಳ್ಳಿ

   

ದೇವರಿಲ್ಲ ಅಂತಲ್ಲ. ಅವನ ಮೇಲಿನ ನಂಬಿಕೆ ಬೇಡ ಅಂತಲೂ ಅಲ್ಲ. ಇಲ್ಲಿ ಆಸ್ತಿಕತೆ ಮತ್ತು ನಾಸ್ತಿಕತೆಯ ಬಗ್ಗೆ ಚರ್ಚೆ ಮಾಡಲು ಹೊರಟಿರುವುದೂ ಅಲ್ಲ. ಇಂಥವು ನಮಗೆ ಬೇಕಾಗುವುದು ನಮ್ಮ ವಿಶ್ವಾಸವನ್ನು ಹೆಚ್ಚಿಸಲು. ಅಸಲಿಗೆ ಭಗವದ್ವಿಶ್ವಾಸವನ್ನು ಇಡುವ ಮೊದಲು ನಮ್ಮೊಳಗಿನ ವಿಶ್ವಾಸ ಹೆಚ್ಚಿಸಿಕೊಳ್ಳಬೇಕಾದುದು ಅತ್ಯಗತ್ಯ.

ಎಲ್ಲ ಧರ್ಮಗಳ ಸಾರವೂ ಇದೇ. ನಿಮಗೆ ಗೊತ್ತಾ, ಜೀವನದ ಯಶಸ್ಸಿನ ರಹಸ್ಯ ಅಡಗಿರುವುದು ಧರ್ಮ, ಸಿದ್ಧಾಂತಗಳಲ್ಲಿ ಅಲ್ಲವೇ ಅಲ್ಲ. ದೇವರೆಂಬುದನ್ನು ವಿಶ್ವಾಸ ವೃದ್ಧಿಯ ಅಸ್ತ್ರವಾಗಿ ಉಪಯೋಗಿಸಬೇಕು. ಆಚಾರ್ಯ ರಜನೀಶರು ಹೇಳುವುದು ಬಹಳ ಸ್ವಾರಸ್ಯಕರವಾಗಿದೆ. ನಮಗೆ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಅಂದೊದು ರೀತಿಯ ನೆಮ್ಮದಿ, ಶಾಂತಿಯ ಅನುಭೂತಿ ಆಗುತ್ತದೆ. ದೇವರ ಮೂರ್ತಿಯನ್ನು ನೋಡುತ್ತಿದ್ದಂತೆಯೇ ನಿರಾಳ ಭಾವ ಮೂಡುತ್ತದೆ. ಕಾರಣವಿಷ್ಟೇ, ದೇಗುಲದ ಒಳಗೆ ಇರುವುದು ದೇವತಾ ಬಿಂಬವಷ್ಟೇ ಅಲ್ಲ. ಅದು ನಮ್ಮ ವ್ಯಕ್ತಿತ್ವದ ಬಿಂಬ. ದೇವರ ಪ್ರತಿಮೆಯಲ್ಲಿ ನಮ್ಮ ಪ್ರತಿಬಿಂಬವನ್ನು ನಾವು ನೋಡಿಕೊಳ್ಳತೊಡಗುತ್ತೇವೆ. ಬೇರೆಲ್ಲ ಜಂಜಡಗಳು ಸಮಸ್ಯೆಗಳನ್ನು ಮರೆತು ಏಕಾಗ್ರತೆಗೆ ಜಾರುತ್ತೇವೆ. ನಮ್ಮ ತಪ್ಪು, ಲೋಪ ದೋಷಗಳನ್ನೆಲ್ಲಾ ಒಂದೊಂದಾಗಿ ನೆನಪಿಗೆ ತಂದುಕೊಳ್ಳುತ್ತೇವೆ. ಅದನ್ನೆಲ್ಲ ಒಪ್ಪಿಕೊಂಡು ಪಶ್ಚಾತ್ತಾಪಕ್ಕೆ ಜಾರುತ್ತೇವೆ. ಇನ್ನು ಅದು ಪುನಾರಾವರ್ತನೆ ಮಾಡದಿರುವ ಸಂಕಲ್ಪ ತೊಡುತ್ತೇವೆ. ಬಹುತೇಕ ಅಲ್ಲಿ ಬಂದು ಸೇರುವ ಎಲ್ಲ ‘ಭಕ್ತ’ರ ಮನಃಸ್ಥಿತಿಯೂ ಇದೇ ಆಗಿರುತ್ತದೆ. ಅಂದರೆ, ನಮ್ಮೊಳಗನ್ನು ಅಂದರೆ ಅಂತರಂಗವನ್ನು ತೆರೆದಿಡುವುದ ಜಾಗ ಅದಾಗಿರುವುದರಿಂದಲೇ ಅದನ್ನು ದೇಗುಲವೆಂದು ಕರೆಯುತ್ತೇವೆ. ‘ಅಂತರಂಗದಿಂದ ಬಹಿರಂಗ’ ಒಳಗಿನದೆಲ್ಲವನ್ನೂ ತೆರೆದಿಟ್ಟು ನಮ್ಮನ್ನು ನಾವು ಒಂದು ಕ್ಷಣ ಏನನ್ನೂ ಬರೆಯದ ಸ್ವಚ್ಛ ಹಾಳೆಯನ್ನಾಗಿ ಪರಿವರ್ತಿಸಿಕೊಳ್ಳುತ್ತೇವೆ.

ADVERTISEMENT

ಇದೇ ಆತ್ಮ ವಿಮರ್ಶೆ. ಇಂಥಾ ಸ್ವವಿಮರ್ಶೆಯ ಮನಸ್ಸು ಮತ್ತು ಸಾಮರ್ಥ್ಯಗಳು ನಮ್ಮಲ್ಲಿ ಬಲವಾಗಿದ್ದರೆ ದೇಗುಲಕ್ಕೇ ಹೋಗಬೇಕೆಂದೇನೂ ಇಲ್ಲ. ನೀವು ಕೇಳಬಹುದು ಹಾಗಾದರೆ ಮನೆಯಲ್ಲೇ ದೇವರ ಕೋಣೆ ಇರುತ್ತದಲ್ಲಾ, ಅಲ್ಲಿಯೇ ಇಂಥ ಆತ್ಮ ವಿಮರ್ಶೆ ಮಾಡಕೊಳ್ಳಬಹಹುದಲ್ಲಾ, ದೇವಸ್ಥಾನಕ್ಕೇ ಏಕೆ ಹೋಗಬೇಕು? ಪ್ರಶ್ನೆಯಲ್ಲಿ ತಪ್ಪಿಲ್ಲ. ಆದರೆ ಮನೆಯಲ್ಲಾದರೆ ನಾವೊಬ್ಬರೇ ಅಥವಾ ಹೆಚ್ಚೆಂದರೆ ಮನೆಯ ಮಂದಿ ಮಾತ್ರ ಸಹಜ. ಅದೂ ದೇವರೆದುರು ನಿಂತ ಕ್ಷಣದಲ್ಲಿ ಮಾತ್ರ. ಆದರೆ, ದೇಗುಲದಲ್ಲಿ ಈಪ್ರಕ್ರಿಯೆ ನಿರಂತರ. ಅಲ್ಲಿ ಅನುಗಾಲವೂ ಬರುವ ಭಕ್ತಗಣವೆಲ್ಲವೂ ಹಾಗೆ ತಮ್ಮನ್ನು ತಾವು ತೆರೆದಿಟ್ಟು ಬರಿದಾಗುತ್ತಾರೆ. ಒಬ್ಬಿಬ್ಬರಲ್ಲ, ನಿತ್ಯ ಬರುವ ನೂರಾರು ಮಂದಿಯೂ. ಹಾಗಾಗಿ ದೇಗುಲವೆಂಬುದು ಒಂದು ರೀತಿಯಲ್ಲಿ ಪ್ರಾಯಶ್ಚಿತ್ತ ಕೇಂದ್ರವಾಗಿರುತ್ತದೆ. ಆ ಹಂತದಲ್ಲಿ ನಮಗರಿವಿದಲ್ಲದೇ ಒಂದು ಆವರಣ ನಮ್ಮನ್ನು ಆವರಿಸಿಕೊಳ್ಳುತ್ತದೆ. ಅದೇ ಸಕಾರಾತ್ಮಕ ಭಾವ ಮೊಳೆಯಲು ಕಾರಣ. ವ್ಯಕ್ತಿ ಯಾವಾಗ ಒಳಗಿನಿಂದ ಶುದ್ಧವಾಗುತ್ತಾನೋ ಆಗ ದೇವರನ್ನು ನಂಬದೆಯೂ, ಪೂಜೆ, ಪ್ರಾರ್ಥನೆಗಳನ್ನು ಮಾಡದೆಯೂ ವಿಶ್ವಾಸ ವೃದ್ಧಿಗೊಳಿಸಿಕೊಳ್ಳಲು ಸಾಧ್ಯ.

ಇಷ್ಟು ತಿಳಕೊಳ್ಳಿ, ಒಳ್ಳೆಯತನ ಎಂಬುದೇ ಎಲ್ಲ ಧರ್ಮದ ಸಾರ. ಒಳ್ಳೆಯವರಾಗಿ ಬಾಳಲು ಯಾವುದೇ ಧರ್ಮ, ದೇವರೇ ಬೇಕಿಲ್ಲ. ನಮ್ಮಲ್ಲಿ ವಿಶ್ವಾಸ ವೃದ್ಧಿಸಿಕೊಂಡರೆ ಭಗವದ್ವಿಶ್ವಾಸ ತನ್ನಿಂದ ತಾನೇ ಮೊಳೆಯುತ್ತದೆ. ಯಾರಿಗೆ ತನ್ನ ಮೇಲೆ ನಂಬಿಕೆ ಇರುತ್ತದೋ ಅವರು ಬೇರೆಯವರನ್ನೂ ನಂಬುತ್ತಾರೆ. ಇದಕ್ಕೆ ದೇವರೂ ಹೊರತಲ್ಲ.

ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಋಜು ಮಾರ್ಗದಲ್ಲಿ ಪ್ರಾಮಾಣಿವಾಗಿ ಪ್ರಯತ್ನ ಮಾಡೋಣ. ಕೈಲಾಗದ ಹೇಡಿಗಳು, ಅಬಲರು ಮಾತ್ರ ಹಣೆಬರಹ, ದೇವರು ಕೊಟ್ಟದ್ದೇ ಇಷ್ಟು ಎಂದು ಗೊಣಗುತ್ತಾ, ಕೊರಗುತ್ತಾ ಇರುತ್ತಾರೆ ನೆನಪಿರಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.