ADVERTISEMENT

ಪಿವಿ ವೈಬ್ಸ್‌ | ಕಂಫರ್ಟ್ ಆಗಿದೀರಾ, ನೀವು ಬೆಳೆಯುವುದಿಲ್ಲ ಬಿಡಿ!

ಸಹನೆ
Published 19 ಜನವರಿ 2026, 7:26 IST
Last Updated 19 ಜನವರಿ 2026, 7:26 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಮಹಾವಿಷ್ಣುವಿನ ದಶಾವತಾರ ನಮಗೆ ಗೊತ್ತಿದೆ. ಆ ಮಹಾನುಭಾವ ಧರ್ಮ ರಕ್ಷಣೆಗಾಗಿ ಹತ್ತು ಅವತಾರಗಳನ್ನು ಎತ್ತಿ ಬಂದನಂತೆ. ಅದಲ್ಲದೇ ಇನ್ನೂ ಹತ್ತಾರು ವೇಷಗಳಲ್ಲಿ ಕಾಣಿಸಿಕೊಂಡಿದ್ದಾನೆನ್ನುತ್ತವೆ ನಮ್ಮ ಪುರಾಣಗಳು. ದೇವಾನು ದೇವತೆಗಳೆಲ್ಲರೂ ಸಂದರ್ಭಕ್ಕೆ ತಕ್ಕಂತೆ ಹಲವಾರು ವೇಷಗಳಲ್ಲಿ, ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದ್ದಿರಲೂಬಹುದು. ಅದು ಅವರವರ ನಂಬಿಕೆ ಬಿಟ್ಟ ವಿಷಯ. ಅದಲ್ಲ ಇವತ್ತಿನ ಚರ್ಚೆ.

ನಮ್ಮ ನಡುವೆಯೂ ಬಹಳಷ್ಟು ಮಂದಿ ಯಾವ್ಯಾವುದೋ ಕಾರಣಕ್ಕೆ ಏನೇನೋ ಅವತಾರಗಳನ್ನು ತಾಳುತ್ತಾರೆ. ನಮ್ಮ ಕೆಲ ರಾಜಕಾರಣಿಗಳಂತೂ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಿಸುತ್ತಾರೆ. ನಟರು, ಕಲಾವಿದರು ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳನ್ನು ಹಾಕುವುದು ವೃತ್ತಿ ಎನಿಸಿಕೊಂಡಿದೆ. ಅವೆಲ್ಲ ಬಿಟ್ಹಾಕಿ, ಇವತ್ತಿನ ನಮ್ಮ ಫ್ಯಾಷನ್, ಟ್ರೆಂಡ್ ಬದಲಾಗುವುದು ನಿರಂತರ ಪ್ರಕ್ರಿಯೆ.

ADVERTISEMENT

ಇಷ್ಟೆಲ್ಲ ಪ್ರತಿ ನಿತ್ಯವೂ ಬದಲಾಗುತ್ತಿದೆ ಎನ್ನುವಾಗ ನಾವೇಕೆ ಬದಲಾಗುವುದೇ ಇಲ್ಲ? ನಮ್ಮ ಮನಸ್ಸನ್ನು ಜಡ್ಡುಗಟ್ಟಿಸಿಕೊಂಡೇ ಗೂಟ ಹೊಡಕೊಂಡು ಕುಳಿತಿರುತ್ತೇವೆ. ನಮ್ಮ ಜೀವನ ಶೈಲಿ, ಸ್ವಭಾವ, ಮಾತಿನ ಧಾಟಿ, ವರ್ತನೆ, ಕೆಲಸದ ರೀತಿ, ವ್ಯವಹಾರ... ಹೀಗೆ ಯಾವೊಂದೂ ಬದಲಾಗುವುದೇ ಇಲ್ಲ. ಅದನ್ನು ಬದಲಿಸಿಕೊಳ್ಳುವ ಯೋಚನೆಯನ್ನೂ ಮಾಡುವುದಿಲ್ಲ. ಹಾಗೆಂದು ನಮ್ಮ ಸ್ವಂತಿಕೆ, ವ್ಯಕ್ತಿತ್ವವನ್ನೇ ಕಳಕೊಳ್ಳಬೇಕೆಂಬುದು ನನ್ನ ವಾದವಲ್ಲ. ಹೊಸತಕ್ಕೆ ನಾವು ತೆರಕೊಳ್ಳದಿದ್ದರೆ ಜೀವನ ನಿಂತ ನೀರಾಗಿಬಿಡುತ್ತದೆ. ಬೆಳವಣಿಗೆಯನ್ನೇ ಕಾಣುವುದಿಲ್ಲ. ನಾವು ಅಭಿವೃದ್ಧಿಯನ್ನೇ ಕಾಣುವುದಿಲ್ಲ.

ಒಂದನ್ನು ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಿ, ನಮ್ಮ ಬೆಳವಣಿಗೆ ಬಗ್ಗೆ ನಮಗೆ ಸದಾ ಒಂದು ಮಟ್ಟದ ಅತೃಪ್ತಿ ಕಾಡುತ್ತಲೇ ಇರಬೇಕು. ಪ್ರತಿ ನಿತ್ಯವೂ ನಾವು ಬದಲಾಗುತ್ತಲೇ ಇರಬೇಕು. ಮಹಾವಿಷ್ಣು ಹತ್ತು ಅವತಾರಗಳನ್ನು ಎತ್ತಿದನೋ ಇಲ್ಲವೋ, ಆದರೆ ಅಂಥದ್ದೊಂದು ಅವಸ್ಥಾಂತರ ಬದುಕಿನ ಚಲನಶೀಲತೆಯ ಸಂಕೇತ.

ಒಂದು ಚಿಕ್ಕ ಬೀಜ ಮಣ್ಣಿಗೆ ಬಿದ್ದ ಮರುಕ್ಷಣವೇ ಬದಲಾಗಲು ಆರಂಭಿಸುತ್ತದೆ. ಅದು ಬಿದ್ದಲ್ಲಿಯೇ ಬಿದ್ದು ಬೆಚ್ಚಗೆ ಮಲಗಿಕೊಂಡಿದ್ದರೆ ಮತ್ತೊಂದು ಮಹಾವೃಕ್ಷ ಬೆಳೆದು ನಿಲ್ಲಲು ಸಾಧ್ಯವೇ ಇಲ್ಲ. ಬೀಜ ಬೀಗಬೇಕು, ತನ್ನ ತೊಗಟೆಯನ್ನು ಕಳಚಿ, ಮೊಳಕೆಯನ್ನು ಹೊರದಬ್ಬಬೇಕು, ಬೇರು ಬಿಟ್ಟು ನಿಲ್ಲಬೇಕು. ಚಿಗುರರಳಿಸಿ ಟಿಸಿಲೊಡೆದು ತಲೆ ಎತ್ತಬೇಕು... ಗಿಡ ಬೆಳೆದು ವೃಕ್ಷವಾಗಿ, ಫಲ ಬಿಟ್ಟು ಮತ್ತೆ ಬೀಜಕ್ಕೆ ನಿಲ್ಲಬೇಕು. ಈ ಚಕ್ರ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಒಂದು ಪುಟ್ಟ ಬೀಜವೇ ನಿಂತಲ್ಲಿ ನಿಲಲಾರದು ಎಂದಾದ ಮೇಲೆ ನಾವೇಕೆ ಜೋಭದ್ರ ಸ್ಥಿತಿಯಲ್ಲಿ ಉಳಿದುಬಿಡುತ್ತೇವೆ?

ಜೀವನದಲ್ಲಿ ಎಲ್ಲರೂ ಒಂದು ಕಂಫರ್ಟ್ ಝೋನ್‌ ಅನ್ನು ನಿರ್ಮಿಸಿಕೊಳ್ಳಲು ಬಯಸುವವರೇ. ಅಂಥ ಸ್ಥಿತಿ ತಲುಪಿದ ತಕ್ಷಣ ಕದಲದೇ ಉಳಿದುಬಿಡುತ್ತೇವೆ. ಅದು ನೌಕರಿಯ ವಿಚಾರ ಇರಬಹುದು, ಬ್ಯುಸಿನೆಸ್‌ ಆಗಿರಬಹುದು, ಕುಟುಂಬವೇ ಇರಬಹುದು... ಹೀಗೆ ಪ್ರತಿಯೊಂದರಲ್ಲೂ ರಿಸ್ಕ್‌ ತೆಗೆದುಕೊಳ್ಳುವುದು ನಮಗ್ಯಾರಿಗೂ ಬೇಕಿಲ್ಲ. ಕೊನೆಪಕ್ಷ ನಮ್ಮ ಹೇರ್‌ಸ್ಟೈಲ್‌ ಬದಲಿಸಲೂ ನಾವು ಹಿಂಜರಿಯುತ್ತೇವೆ. ನಾವೇ ಬದಲಾಗಲು ಸಿದ್ಧರಿಲ್ಲ ಎಂದಾದ ಮೇಲೆ ನಮ್ಮಲ್ಲಿನ ಬದಲಾವಣೆಯನ್ನು ಬೇರೆಯವರೂ ತಕ್ಷಣಕ್ಕೆ ಸ್ವೀಕರಿಸುವುದಿಲ್ಲ. ಹಾಗೆಂದು ನಾವು ಬದಲಾಗಲೇಬಾರದೆಂಬ ನಿರ್ಧಾರಕ್ಕೆ ಬಂದರೆ ನಮ್ಮ ಬೆಳವಣಿಗೆಯೂ ಅಷ್ಟಕ್ಕೇ ನಿಂತುಹೋಗುತ್ತದೆ. ಬೆಳೆಯುವ ಹಂಬಲ ಇರುವವರು ಬದಲಾಗುತ್ತಲೇ ಇರಬೇಕು, ಅಂಥ ಬದಲಾವಣೆಗಳನ್ನು ಒಪ್ಪಿಕೊಳ್ಳಲು ನಾವು ಮೊದಲು ಸಿದ್ಧರಿರಬೇಕು. ಆಗ ಸುತ್ತಲಿನ ಸಮಾಜ ತಂತಾನೆ ನಮ್ಮ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತ ಸಾಗುತ್ತದೆ.

ಹೊಸತನ್ನು ಸ್ವಾಗತಿಸೋಣ. ನಿತ್ಯವೂ ಹೊಸದಾಗಿ ಬದುಕೋಣ. ಬದಲಾದ ವ್ಯವಸ್ಥೆಗೆ ನಮ್ಮನ್ನು ನಾವು ತೆರೆದುಕೊಳ್ಳೋಣ. ಆತ್ಮವಿಶ್ವಾಸಿ ಮಾತ್ರವೇ ಬದಲಾವಣೆಯನ್ನು ದೈರ್ಯವಾಗಿ ಸ್ವೀಕರಿಸಬಲ್ಲ. ಹೇಡಿ, ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದು ಕೂತಿರುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.