ADVERTISEMENT

ಪಿವಿ ವೈಬ್ಸ್‌ | ಖುಷಿಯಾಗಿ ಇರೋದು ಹೇಗೆ?: ಒಂದಷ್ಟು ಸಿಂಪಲ್‌ ಟೆಕ್ನಿಕ್‌

ಸಹನೆ
Published 12 ಫೆಬ್ರುವರಿ 2026, 23:30 IST
Last Updated 12 ಫೆಬ್ರುವರಿ 2026, 23:30 IST
   

ಜೀವನವನ್ನು ನಾವುಗಳು ಇಷ್ಟು ಯಾಕೆ ಕಾಂಪ್ಲಿಕೇಟ್‌ ಮಾಡ್ಕೋತೀವೋ ಗೊತ್ತಿಲ್ಲ! ಲೈಫ್‌ ತುಂಬ ಸಿಂಪಲ್‌ ಆಗಿದೆ. ಅದನ್ನು ಬೇಕು ಬೇಕೆಂದೇ ನಾವೇ ಗೋಜಲಾಗಿಸಿಕೊಳ್ಳೋದು. ಇಲ್ಲದ ಕಾರಣವನ್ನು ಹುಡುಕಿ, ಸಲ್ಲದ ರಾದ್ಧಾಂತಗಳನ್ನು ಮಾಡಿಕೊಂಡು ಕೊನೆಗೊಮ್ಮೆ ಬದುಕೇ ಬೇಸರವಾಗಿದೆ ಎಂದುಕೊಂಡು ಒಂದೇ ಏನೇನೋ ಚಟಕ್ಕೆ ದಾಸರಾಗ್ತೀವಿ, ಇಲ್ಲವೇ ಮಾನಸಿಕವಾಗಿ ಕುಗ್ಗಿ ಯಾವ್ಯಾವುದೋ ಕಾಯಿಲೆಗಳನ್ನು ಅಂಟಿಸಿಕೊಳ್ತೀವಿ. ಒಟ್ಟಾರೆ ಖುಷಿಖುಷಿಯಾಗಿ ಬದುಕೋಕೇ ನಮ್ಮಿಂದ ಸಾಧ್ಯವೇ ಆಗಲ್ಲ ಯಾಕೆ ಗೊತ್ತಾ? ನಮ್ಮ ನಿರೀಕ್ಷೆಗಳು. ನಾವು ಯಾವತ್ತೂ ಮೇಲೆ ನೋಡ್ತಾನೇ ಇರ್ತೀವೇ ಹೊರ್ತು, ಕೆಳಗೆ ನೋಡೋದೇ ಇಲ್ಲ. ಅದಕ್ಕಾಗೇ ನಮಗೆ ಸಂತೋಷವಾಗಿ ಲೈಫ್‌ ಲೀಡ್‌ ಮಾಡೋಕ್ಕೇ ಆಗಲ್ಲ. ಹಾಗಾದ್ರೆ ಖುಷಿಯಾಗಿ ಇರೋದು ಹೇಗೆ–ಒಂದಷ್ಟು ಸಿಂಪಲ್‌ ಟೆಕ್ನಿಕ್‌ಗಳನ್ನು ಹೇಳ್ತೀನಿ, ನೋಡಿ...

  • ಏನೋ ಕಾರಣಕ್ಕೆ ನೀವು ಯಾರೊಂದಿಗೋ ಜಗಳ ಆಡ್ತೀರಾ, ಅಥವಾ ಅಂಥ ಸನ್ನಿವೇಶ ನಿರ್ಮಾಣ ಆಗಿ ಬಾಯಿಗೆ ಬಂದ ಹಾಗೆ ಕೋಗಾಡ್ತೀರಾ ಅಂದುಕೊಳ್ಳೋಣ. ನೆಕ್ಷ್ಟ್‌ ಟೈಮ್‌ ಇಂಥ ಸೀನ್‌ ಕ್ರಿಯೇಟ್‌ ಬಂದಾಗ ಒಂದು ಸಲ ಈ ಜಗತ್ತಿನಲ್ಲಿ ಕೊನೇಪಕ್ಷ ಅಮ್ಮನಿಗೆ ‘ಅಮ್ಮಾ’ ಅಂತ ಕರಿಯಲಿಕ್ಕೂ ಆಗದ, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಹುಡುಗಿಗೆ ಒಂದ ಸಲನೂ ’ ಐ ಲವ್‌ ಯು’ ಅನ್ನಲಿಕ್ಕೂ ಆಗದ ಮೂಗರ ಬಗ್ಗೆ ಯೋಚಿಸಿ.

  • ಮನೆಯಲ್ಲಿ ಯಾವಾಗ್ಲೂ ಊಟ–ತಿಂಡಿಗೆ ಕೂತಾಗ ಅದು ಸರಿ ಇಲ್ಲ, ಇದು ನನಗೆ ಸೇರಲ್ಲ, ಉಪ್ಪು ಜಾಸ್ತಿ, ಖಾರ ಕಡಿಮೆ ಎಂದೆಲ್ಲ ಯಾವಾಗ್ಲೂ ಕೋಪ ಮಾಡ್ಕೋತಾ ಇರ್ತೀವಲ್ಲಾ? ಕೊನೆ ಪಕ್ಷ ದಿನಕ್ಕೆ ಒಂದು ಹೊತ್ತೂ ತಿನ್ನಲು ಗತಿ ಇಲ್ಲದವರು ಎಷ್ಟು ಮಂದಿ ಇ್ದದಾರೆ, ಯೋಚಿಸಿ.

    ADVERTISEMENT
  • ನಿಮ್ಮ ಗಂಡ/ಹೆಂಡತಿಯ ಬಗ್ಗೆ, ಬಾಯ್‌ ಫ್ರಂಡ್‌/ ಗರ್ಲ್‌ ಫ್ರೆಂಡ್‌ ಬಗ್ಗೆ ಒಂದಲ್ಲಾ ಒಂದು ಕ್ಯಾತೆ ತೆಗೆದು, ಸಣ್ಣ ಸಣ್ಣದಕ್ಕೂ ಜಗಳ ಕೋಪ ಮಾಡೋಕೆ ಮುಂಚೆ, ವಯಸ್ಸು ನಲವತ್ತು ದಾಟಿದರೂ ಜೀವನದಲ್ಲಿ ಒಬ್ಬ ಸಂಗಾತಿ ಸಿಗದೇ ಒಂಟಿ ಪಿಶಾಚಿಗಳಾಗಿ ಬದುಕ್ತಾ ಇರೋರ ಬಗ್ಗೆ ಯೋಚಿಸಿ.

  • ಜೀವನದಲ್ಲಿ, ಅದಿಲ್ಲ, ಇದಿಲ್ಲ. ಅವರು ನೋಡಿ ಏನೂ ಕಷ್ಟಪಡದೇ ಎಷ್ಟು ಆರಾಮಾಗಿದಾರೆ, ನಾವು ಉದ್ದಾರ ಆಗೋದೇ ಇಲ್ಲ. ಜೀವನ ಇಡೀ ಒದ್ದಾಡೋದೇ ಆಯ್ತು. ಒಂದು ದಿನಾನೂ ನೆಮ್ಮದಿ ಇಲ್ಲ. ಏನು ಬದುಕೋ ಏನೋ...ಅಂತೆಲ್ಲ ಗೊಣಗಾಡ್ತಾ ಇರ್ತೀವಲ್ಲಾ?! ನಿಲ್ಲಿ, ಇನ್ನೂ ಜೀವನದಲ್ಲಿ ಅರಳ್ತಾ ಇರೋ ವಯಸ್ಸಲ್ಲೇ, ಹತ್ತಿಪ್ಪತ್ತು ವರ್ಷಕ್ಕೇ ಜೀವ ಕಳಕೊಂಡವರೆಷ್ಟೋ ಮಂದಿ ಇದ್ದಾರೆ. ಕೊನೆಪಕ್ಷ ನಮಗೆ ಬದುಕುವ ಅವಕಾಶವಾದರೂ ಇದೆಯಲ್ಲಾ; ಯೋಚಿಸಿ.

ಬೇರೆಯವರ ಮಕ್ಕಳಿಗೆ ನಿಮ್ಮ ಮಕ್ಕಳನ್ನು ಹೋಲಿಸಿ, ನೀನು ದಡ್ಡ, ನಿಶ್ಪ್ರಯೋಜಕ ಎಂದೆಲ್ಲ ಮೂದಲಿಸುವ ಮುನ್ನ, ಕೊನೆಪಕ್ಷ ಕಣ್ಣು ಕೈಕಾಳು ಸರಿ ಇರು , ಚೆಂದ ಮಗುವಾದರೂ ನಮಗಿದೆ, ಕೆಲವರಿಗೆ ಮಕ್ಕಳೇ ಆಗದೇ ಒಡಲು–ಮಡಿಲು ಖಾಲಿತನ ಅನುಭವಿಸುತ್ತಿದ್ದಾರೆ ಎಂಬುದನ್ನು ಕಣ್ಣ ಮುಂದೆ ತಂದುಕೊಳ್ಳಿ.

ಹಾಗೆಯೇ ಎಲ್ಲವೂ, ಮನೆ ಸಣ್ಣದು, ಚೆಂದ ಇಲ್ಲ ಎಂಬ ಮೊದಲು ಬೀದಿಯಲ್ಲಿ, ಗುಡಿಸಲಿನಲ್ಲಿ ವಾಸಿಸುವವವರ ಚಿತ್ರ ಮನಸಿಗೆ ಬರಲಿ. ನಿಮ್ಮ ಪಯಣದ ಸುದೀರ್ಘತೆ, ನಿಮ್ಮ ದಣಿವರಿಯದ ದುಡಿಮೆ, ನಿಮ್ಮ ಕಷ್ಟಕರ ವೃತ್ತಿಯ ಬಗೆಗೆ ಬೇಸರಿಸಿಕೊಳ್ಳುವ ಮುನ್ನ ನಿರುದ್ಯೋಗಿಗಳು, ಅಂಗವಿಕಲರು ನೆನಪಾಗಲೇಬೇಕು.

ಅದೇ ರೀತಿ ಇನ್ನೊಬ್ಬರನ್ನು ಬೆರಳು ತೋರಿಸುವಾಗಲೂ ನಮ್ಮನ್ನು ಜಗತ್ತಿಗೆ ತಂದ ಕಾಲವೇ ಅವರನ್ನೂ ತಂದಿದೆ ಎಂಬದನ್ನು ಮರೆಯಬಾರದು. ಯಾವತ್ತಿಗೂ ಖಿನ್ನತೆ, ಕೀಳರಿಮೆಯ ಆಲೋಚನೆಗಳು ನಮ್ಮನ್ನು ಇನ್ನಷ್ಟು ಕುಗ್ಗಿಸುತ್ತದೆಯೇ ಹೊರತು ಯಾವ ಸಾಧನೆಗೂ ದಾರಿ ಮಾಡಿಕೊಡದು. ಹೆಚ್ಚೆಂದರೆ ಸುತ್ತಲಿರುವ ಒಂದಷ್ಟು ಮಂದಿ ನಮ್ಮ ಮುಂದಷ್ಟೇ ಸಿಂಪಥಿ ತೋರಿ, ಹಿಂದಿನಿಂದ ಆಡಿಕೊಂಡು ನಗುತ್ತಾರೆ. ಅದರ ಬದಲು ಸದಾ ಮುಖದಲ್ಲಿ ನಗುವನ್ನು ಇಟ್ಟುಕೊಂಡು ನಾವು, ಸದೃಢವಾಗಿ, ಜೀವಂತವಾಗಿ ಪ್ರತಿ ಬೆಳಗನ್ನೂ ನೋಡುತ್ತಿರುವ ಬಗ್ಗೆ ಕೃತಜ್ಞರಾಗಿರೋಣ. ಬದುಕೆಂಬ ಉಡುಗೊರೆಯನ್ನು ಸಂಭ್ರಮಿಸೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.