ADVERTISEMENT

ಪಿವಿ ವೈಬ್ಸ್: ಚಪ್ಪಲಿ ಎಷ್ಟು ದಿನ ತಲೆಯೊಳಗೆ ಉಳಿದೀತು?

ಸಹನೆ
Published 29 ಜನವರಿ 2026, 2:30 IST
Last Updated 29 ಜನವರಿ 2026, 2:30 IST
   

ಸಾಮಾನ್ಯವಾಗಿ ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ನಿಮಗೂ ಹೀಗಾಗಿರಬಹುದು, ಯೋಚಿಸಿ ನೋಡಿ.

ಬಹಳ ದಿನಗಳ ನಂತರ ಹೊಸದೊಂದು ಚಪ್ಪಲಿ ತೆಗೆದುಕೊಂಡಿರುತ್ತೇವೆ. ಲೇಟೆಸ್ಟ್‌ ಟ್ರೆಂಡ್‌ನದ್ದು. ತಾಸುಗಟ್ಟಲೆ ಅಂಗಡಂಗಡಿ ತಿರುಗಿ, ಎಲ್ಲ ಕಡೆಗೂ ವಿಚಾರಿಸಿ, ಕೊನೆಗೂ ಒಂದು ಅಂಗಡಿಯಲ್ಲಿ ಮತ್ತರ್ಧ ಗಂಟೆ ಕೂತು ಹತ್ತಾರು ನಮೂನೆಯ ಚಪ್ಪಲಿಗಳನ್ನು ತೆಗೆಸಿ, ದರದಲ್ಲಿ ಚೌಕಾಶಿ ಮಾಡಿ ಅಂತೂ ಒಂದನ್ನು ಖರೀದಿಸಿ ಯುದ್ಧ ಗೆದ್ದ ಅನುಭವದೊಂದಿಗೆ ಮನೆಗೆ ಬಂದಿರುತ್ತೇವೆ. ದಾರಿಯುದ್ದಕ್ಕೂ ಚಪ್ಪಲಿಯದ್ದೇ ಧ್ಯಾನ. ಇದು ನನ್ನ ಕಾಲಿಗೆ ಹೊಂದಾಣಿಕೆಯಾಗುತ್ತದೋ ಇಲ್ಲವೋ, ಇದಕ್ಕಿಂತ ಮೊದಲು ಆರಿಸಿದ್ದೇ ಚೆನ್ನಾಗಿತ್ತೇನೋ, ಸ್ವಲ್ಪ ದುಬಾರಿ ಆಯಿತು ಎನಿಸುತ್ತದೆ, ಮೊದಲಿನ ಅಂಗಡಿಯಲ್ಲಿ ಇದಕ್ಕಿಂತ ಚಂದದ ಚಪ್ಪಲಿಗೆ ಅಂವ ನೂರೈವತ್ತೇ ರೂಪಾಯಿ ಹೇಳಿದ್ದ, ಇದು ಸ್ವಲ್ಪ ಕಾಸ್ಟ್ಲಿ ಅಯ್ತಿರಬೇಕು. ಆದರೂ ಇದು ಒಳ್ಳೆ ಕ್ವಾಲಿಟಿಯದ್ದು, ಹೇಗೂ ಹಬ್ಬ ಬರುತ್ತಿದೆ, ಸ್ವಲ್ಪ ಕಾದಿದ್ದರೆ ಡಿಸ್ಕೌಂಟ್ ಸೇಲ್ ಇರುತ್ತಿತ್ತು... ಅವಾಗಲೇ ತಗೋಬಹುದಿತ್ತೇನೋ...ಇತ್ಯಾದಿ ಇತ್ಯಾದಿ ನೂರೆಂಟು ಯೋಚನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ.

ರಾತ್ರಿ ಮಲಗಿದರೂ ಚಪ್ಪಲಿಯದ್ದೇ ಕನಸು. ಹೊರಗೆಲ್ಲೋ ಇಟ್ಟು, ಅದನ್ನು ನಾಯಿ ಕಚ್ಚಿದಂತೆ, ದೇವಸ್ಥಾನಕ್ಕೆ ಹೋಗಿ ಬರುವುದರೊಳಗೆ ಹೊಚ್ಚ ಹೊಸ ಜೋಡುಗಳೇ ಕದ್ದು ಹೋದ ಹಾಗೆ... ಆತಂಕ ಇನ್ನಿಲ್ಲದಂತೆ ಕಾಡಿ, ಧಿಗ್ಗನೆ ಎಚ್ಚರವಾಗಿ ‘ಅಯ್ಯೋ ಅದು ಕನಸು’ ಎಂದುಕೊಂಡು ಸಮಾಧಾನಪಟ್ಟುಕೊಳ್ಳುತ್ತೇವೆ. ಆದರೂ ಮನಸ್ಸು ಕೇಳದೇ ಮನೆಯ ಹೊರಗಿನ ಸ್ಟ್ಯಾಂಡ್‌ನಲ್ಲಿದ್ದ ಚಪ್ಪಲಿಯನ್ನು ನಿದ್ದೆಗಣ್ಣಲ್ಲೇ ಎದ್ದು ಹೋಗಿ ಒಳಗೆ ತಂದು ಜಗುಲಿಯ ಮೂಲೆಯಲ್ಲಿಟ್ಟು ಬಂದು ಮಲಗಿದ ಮೇಲೆಯೇ ನೆಮ್ಮದಿಯ ನಿದ್ರೆ.

ADVERTISEMENT

ಮರುದಿನ ಬೆಳಗ್ಗೆ ಎದ್ದು ಅದನ್ನೇ ಮೆಟ್ಟಿ ಹೊರ ಹೊರಟರೆ ಯಾರೆಲ್ಲ ನಮ್ಮನ್ನು (ನಮ್ಮ ಹೊಸ ಚಪ್ಪಲಿಯನ್ನು) ಗಮನಿಸುತ್ತಿದ್ದಾರೆ ಎಂಬ ಬಗ್ಗೆ ಒಳಗೊಳಗೇ ಕುತೂಹಲ. ನಿಜವಾಗಿ ಅವರ್ಯಾರಿಗೂ ನಾವ್ಯಾರೆಂದೇ ಗೊತ್ತಿರುವುದಿಲ್ಲ. ಹೀಗಾಗಿ ನಮ್ಮನ್ನು ಗಮನಿಸಿರುವುದಿಲ್ಲ; ಇನ್ನು ನಮ್ಮ ಚಪ್ಪಲಿಯತ್ತ ಕಣ್ಣು ಹಾಯಿಸುವುದು ದೂರದ ಮಾತಾಗಿರುತ್ತದೆ. ಆದರೂ ಅಪ್ಪೀ ತಪ್ಪಿ ನಾವು ಹೊಸ ಚಪ್ಪಲಿ (ಅವರಿಗೇನು ಗೊತ್ತಿರುತ್ತದೆ ನಮ್ಮದು ಹೊಸ ಚಪ್ಪಲಿ ಅಂತ) ಹಾಕಿಕೊಂಡಿದ್ದೇವೆ, ಅದರ ಡಿಸೈನ್‌ ಚೆನ್ನಾಗಿದೆ ಎಂಬ ಕಾರಣಕ್ಕೆ ನೋಡಿರುತ್ತಾರೋ ಏನೋ ಎಂಬ ಕಲ್ಪನೆ. ಇಷ್ಟೇ ಆಗಿದ್ದರೆ ಒಂದು ಮಾತು. ನಮ್ಮ ಚಪ್ಪಲಿ ಪುರಾಣ ಇಷ್ಟಕ್ಕೇ ಮುಗಿಯುವುದಿಲ್ಲ. ನಮ್ಮ ಚಪ್ಪಲಿ ಹೊಸದಾಗಿದ್ದರೆ ಸಾಲದು, ಎದುರು ಸಿಗುವವರ ಚಪ್ಪಲಿಗಳೆಲ್ಲಾ ಹೇಗಿವೆ? ಅವರು ಎಂಥ ಚಪ್ಪಲಿ ಧರಿಸಿರಬಹುದು ಎಂಬ ಕುತೂಹಲ. ಒಂದೊಮ್ಮೆ ಯಾರಾದರೂ ನಮ್ಮ ಹೊಸ ಚಪ್ಪಲಿ ಗಮನಿಸಿ ಕೇಳಿದರಂತೂ ಮುಗಿದೇ ಹೋಯಿತು, ಅರ್ಧಗಂಟೆ ಅದರ ಬಗೆಗೇ ಬಣ್ಣನೆಯ ಭಾಷಣ; ಚಪ್ಪಲಿಗಳಲ್ಲಿ ನಾವೇ ಎಕ್ಸಪರ್ಟ್‌ ಎನ್ನವಂತೆ ಬಿಂಬಿಸಿಕೊಂಡು, ಹಾಗಿರಬೇಕು, ಹೀಗಿರಬೇಕು, ಇಂತಿಂಥ ಸನ್ನಿವೇಶಕ್ಕೆ ಇಂತಿಂಥ ಚಪ್ಪಲಿ, ಶೂಗಳನನ್ನು ನಾನು ಧರಿಸುತ್ತೇನೆ. ಈ ಕಾಲಕ್ಕೆ ಇವು ಸೂಟ್‌ ಆಗಲ್ಲ... ಹೀಗೆ ಪುಟ್ಟ ಪ್ರಬಂಧದ ಮಂಡನೆಯೇ ನಡೆದುಬಿಡುತ್ತದೆ. ಒಂದೊಮ್ಮೆ ಯಾರೂ ನಮ್ಮ ಚಪ್ಪಲಿ (ಹೊಸ) ಗಮನಿಸಿ ಕೇಳಲಿಲ್ಲ ಎಂದುಕೊಳ್ಳಿ, ನಾವೇ ಮಾತಿನ ಮಧ್ಯೆ ಏನೋ ಒಂದು ಉದ್ದೇಶ ಮಾಡಿಕೊಂಡು ನಮ್ಮ ಚಪ್ಪಲಿಯನ್ನು ಒಂದಿಬ್ಬರಿಗಾದರೂ ತೋರಿಸಿ ಅದರ ಬಗ್ಗೆ ಹೇಳದಿದ್ದರೆ ಸಮಾಧಾನವೇ ಇರುವುದಿಲ್ಲ. ಒಂದೆರಡು ದಿನ ಹೀಗೆಲ್ಲ ಇದು ಇರುತ್ತದೆ. ನಂತರ ಎಲ್ಲವೂ ಮರೆತು ಎಂದಿನಂತೆ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ.

ಒಂದು ಪುಟ್ಟ ಚಪ್ಪಲಿಗೇ ಮನಸ್ಸು ಹೀಗಾಗಿರಬೇಕಾದರೆ ಇನ್ನು ಜೀವನದಲ್ಲಿ ಘಟಿಸುವ ಪ್ರಮುಖ ಘಟನೆಗಳು, ಬೆಳವಣಿಗೆಗಳ ಬಗ್ಗೆಯೇ ಮನಸ್ಸು ಗಿರಕಿ ಹೊಡೆಯುವುದು ಸಹಜ. ಅದು ಎಂಥ ನೋವಿನ ಘಟನೆಯೇ ಇರಲಿ, ಅದನ್ನು ಅನುಭವಿಸಲು ಮನಸ್ಸಿಗೆ ಬಿಡಿ. ನೀವು ಎಷ್ಟೇ ಪ್ರಯತ್ನಪಟ್ಟರೂ ಸಹಜವಾಗಿ ನಾಲ್ಕು ಜನರ ಗಮನ ಸೆಳೆಯುವವರೆಗೆ ಮನಸ್ಸು ಸುಮ್ಮನಿರುವುದಿಲ್ಲ. ಇಂಥವೆಲ್ಲ ಸರ್ಕಸ್ಸನ್ನು ಮಾಡೇ ಮಾಡುತ್ತದೆ. ಯಾವುದೂ ಹೊಚ್ಚ ಹೊಸದಾಗೇ ಇರಲು ಸಾಧ್ಯವಿಲ್ಲವೆಂಬುದು ಸತ್ಯ. ಕಹಿ ಘಟನೆಗಳೂ ಇವತ್ತಲ್ಲಾ ನಾಳೆ ಹಳೆಯದಾಗಲೇಬೇಕು, ಆಗುತ್ತದೆ. ಅಷ್ಟೆ, ತನ್ನಿಂದತಾನೇ ಮನಸ್ಸಿನಲ್ಲಿ ಅದಕ್ಕಿರುವ ಪ್ರಾಮುಖ್ಯ ಕಡಿಮೆಯಾಗುತ್ತದೆ. ವಿಚಾರ ಮಾಡಲು, ಚಿಂತಿಸಲು ಬೇಕಷ್ಟು ಹೊಸ ಸಂಗತಿಗಳು ಸಿಗುತ್ತವೆ. ತನ್ನಿಂದ ತಾನೇ ಕಹಿ ಮರೆಯಾಗುತ್ತದೆ. ದಿನವೂ ಹೊಸ ಸಂಗತಿಗಳನ್ನು ಹುಡುಕಿ, ನೋವು ಮರೆಯವುದು ಸುಲಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.