ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 29–12–1995

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:30 IST
Last Updated 28 ಡಿಸೆಂಬರ್ 2020, 19:30 IST
   

ಕಾವೇರಿ: ಪ್ರಧಾನಿ ಮಧ್ಯಸ್ಥಿಕೆಗೆ ಕೋರ್ಟ್ ಆದೇಶ
ನವದೆಹಲಿ, ಡಿ. 28–
ತಮಿಳುನಾಡಿನಲ್ಲಿ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಲು ಕೂಡಲೇ 11 ಟಿಎಂಸಿ ಅಡಿ ನೀರನ್ನು ಬಿಡಬೇಕೆಂಬ ಕಾವೇರಿ ನ್ಯಾಯಮಂಡಳಿಯ ಆಜ್ಞೆಯಿಂದ ಉದ್ಭವಿಸಿರುವ ಬಿಕ್ಕಟ್ಟಿಗೆ ಇನ್ನು ಎರಡು ದಿನಗಳೊಳಗೆ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು, ವಿಧಾನಮಂಡಲದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಂ.ಪಿಗಳ ಸಭೆ ಕರೆದು ಸೂಕ್ತ ಪರಿಹಾರ ಹುಡುಕುವಂತೆ ಸುಪ್ರೀಂ ಕೋರ್ಟ್‌ ಇಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಆದೇಶಿಸಿತು.

ನ್ಯಾಯಮಂಡಳಿಯು ಕಳೆದ 19ರಂದು ನೀಡಿದ ಆಜ್ಞೆಯನ್ನು ಜಾರಿಗೆ ತರಬೇಕೆಂದು ಕರ್ನಾಟಕ ಸರ್ಕಾರಕ್ಕೆ ಆದೇಶಿಸಬೇಕೆಂದು ತಮಿಳುನಾಡು ಸೋಮವಾರ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ರಾಮಸ್ವಾಮಿ ಮತ್ತು ಎಸ್‌.ಸಿ. ಅಗರವಾಲ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಇಂದು ಈ ತೀರ್ಮಾನ ಕೈಗೊಂಡಿತು.

ಐಆರ್‌ಎಸ್‌ ಯಶಸ್ವಿ ಉಡಾವಣೆ
ಬೆಂಗಳೂರು, ಡಿ. 28–
ಭಾರತದ ಅತ್ಯಾಧುನಿಕ ದೂರ ಸಂವೇದಿ ಉಪಗ್ರಹ ‘ಐಆರ್‌ಎಸ್‌–1ಸಿ’ಯನ್ನು ರಷ್ಯಾದ ಕಜಕಸ್ಥಾನದ ಬೈಕೊನೆರ್ ಉಡ್ಡಯನ ಕೇಂದ್ರದಿಂದ ಇಂದು ಯಶಸ್ವಿಯಾಗಿ ಉಡಾಯಿಸಲಾಯಿತು.

ADVERTISEMENT

ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 12.15ಕ್ಕೆ ಸರಿಯಾಗಿ ಈ ಉಪಗ್ರಹ ಗಗನದತ್ತ ಚಿಮ್ಮಿತು. ಮುಂದಿನ ಒಂದು ತಿಂಗಳಲ್ಲಿ ಅದು ಬಾಹ್ಯಾಕಾಶದಲ್ಲಿ ತನ್ನ ನಿಗದಿತ ಕಾರ್ಯವನ್ನು ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.