ನವದೆಹಲಿ, ನ. 27 (ಯುಎನ್‌ಐ, ಪಿಟಿಐ)– ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಇಂದು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಯಿತು.
‘ನಿನ್ನೆ ಕಲ್ಯಾಣ್ ಸಿಂಗ್ ಅವರು ನೀಡಿದ ಹೇಳಿಕೆ ಹಾಗೂ ಅಲಿಗಢದಲ್ಲಿ ನೀಡಿದ ಟಿ.ವಿ. ಸಂದರ್ಶನವು ಶಿಸ್ತುಕ್ರಮವನ್ನು ಅಗತ್ಯವನ್ನಾಗಿ ಮಾಡಿದವು’ ಎಂದು ಅಮಾನತಿನ ವಿಚಾರವನ್ನು ಇಂದು ಪತ್ರಕರ್ತರಿಗೆ
ತಿಳಿಸಿದ ಪಕ್ಷದ ಅಧ್ಯಕ್ಷ ಕುಶಭಾವು ಠಾಕ್ರೆ ಹೇಳಿದರು.
ಬೆಂಗಳೂರು, ನ. 27– ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆ ಸೇರುವ ವಿಚಾರಣಾಧೀನ ಕೈದಿಗಳು ಪಹರೆ ಪೊಲೀಸರಿಗೆ ಆಮಿಷ ಒಡ್ಡಿ ಅಲ್ಲಿಂದ ಪರಾರಿಯಾಗುತ್ತಿರುವ ಘಟನೆಗಳಿಂದ ಸಾರ್ವಜನಿಕರು ಹಾಗೂ ಪೊಲೀಸರು ಆತಂಕಕ್ಕೆ ಈಡಾಗಿದ್ದಾರೆ.
ಆಸ್ಪತ್ರೆಯಲ್ಲಿರುವ ವಿಚಾರಣಾಧೀನ ಕೈದಿಗಳು ಒಡ್ಡುವ ಆಮಿಷಕ್ಕೆ ಪಹರೆಯಲ್ಲಿರುವ (ನಗರ ಸಶಸ್ತ್ರ ಮೀಸಲು ಪಡೆ– ಸಿಎಆರ್) ಪೊಲೀಸರು ಬಲಿಯಾಗುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.
‘ರೋಗಿ’ಗಳಾಗಿ ಆಸ್ಪತ್ರೆ ಸೇರುವ ಕೈದಿಗಳ ಕಾವಲು ಕಾಯುವ ಪೊಲೀಸ್ ಸಿಬ್ಬಂದಿಯೇ ಕೈದಿಗಳು ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿರುವುದು ಆರು ತಿಂಗಳಲ್ಲಿ ಇದು ಎರಡನೇ ಸಲ. ಕುಖ್ಯಾತ ರೌಡಿ ತನ್ವೀರ್ ಸಹ ತನ್ನ ಜತೆಗಿದ್ದ ಪೊಲೀಸರ ನಂಬಿಕೆ ಗಳಿಸಿ ಅವರಿಗೆ ಹಣದ ಆಮಿಷ ಒಡ್ಡಿ ನಂತರ ಪರಾರಿಯಾಗಿದ್ದ.
ಈಗಲೂ ಮುತ್ತಪ್ಪ ರೈ ಸಹಚರ ಸುಧೀರ್ ಪ್ರಭು ತಪ್ಪಿಸಿಕೊಳ್ಳಲು ನಗರ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗೇಬ್ರಿಯಲ್ ಕಾರಣ ಎನ್ನಲಾಗಿದೆ.
ಉಡುಪಿ, ನ. 27– ಕಳೆದ ವರ್ಷ ಕರ್ನಾಟಕ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ನೀಡಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಆಶ್ರಯದಲ್ಲಿರುವ ಸಾಹಿತ್ಯ ಅಕಾಡೆಮಿ ಈ ವರ್ಷ ನೀಡಿರುವ ಪ್ರಶಸ್ತಿಯನ್ನು ವೈಯಕ್ತಿಕ ನೆಲೆಯಲ್ಲಿ ತಾವು ತಿರಸ್ಕರಿಸುವುದಾಗಿ ಲೇಖಕಿ ವೈದೇಹಿ ಅವರು ಅಕಾಡೆಮಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ಇದು ಉದ್ಧಟತನದಿಂದ ಅಲ್ಲ, ದುಡ್ಡಿನ ಜಿಜ್ಞಾಸೆಯಿಂದಲೂ ಅಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.