ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 2–9–1997

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 19:30 IST
Last Updated 1 ಸೆಪ್ಟೆಂಬರ್ 2022, 19:30 IST
   

ಚಿಂತಾಮಣಿ ಬಳಿ ಗುಂಪು ಘರ್ಷಣೆ: ಪೊಲೀಸರು ಸೇರಿ ನಾಲ್ವರ ಸಾವು
ಚಿಂತಾಮಣಿ, ಸೆ. 1–
ಇಲ್ಲಿಗೆ ಸಮೀಪದ ಆಂಧ್ರ ಗಡಿ ಭಾಗದ ಬಿಲ್ಲಾಂಡ್ಲಹಳ್ಳಿಯ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಮೂವರು ಪೊಲೀಸರು ಹಾಗೂ ಒಬ್ಬ ನಾಗರಿಕ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ.

‌ದಂಗೆಕೋರರ ಆಕ್ರಮಣಕ್ಕೆ ಸಿಕ್ಕಿ ಮೀಸಲು ಪಡೆಯ ಮುಖ್ಯ ಪದೇದೆ ಅಬ್ದುಲ್ ಬಷೀರ್, ಪೇದೆ ನರಸಿಂಹಪ್ಪ, ಕಾನೂನು ಸುವ್ಯವಸ್ಥೆಯ ಪೊಲೀಸ್ ಪೇದೆ ಸುಧಾಕರ ಮತ್ತು ಓಬಳಾಪುರದ ಸುಧಾಕರ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿನ್ನೆಲೆ: ಬಿಲ್ಲಾಂಡ್ಲಹಳ್ಳಿಯಲ್ಲಿ ಚಿಂತಾಮಣಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಕಲಾ ಮಂಡಳಿಯ ಶಾಖೆಯನ್ನು ಇಂದು ಆರಂಭಿಸುವ ಕಾರ್ಯಕ್ರಮ ಇತ್ತು. ಇದಕ್ಕೆ ಆ ಪ್ರದೇಶದ ಗ್ರಾಮಸ್ಥರು, ಬಿಲ್ಲಾಂಡ್ಲಹಳ್ಳಿಯ ಸವರ್ಣೀಯರು ವಿರೋಧ ವ್ಯಕ್ತಪಡಿಸಿ, ಚಿಂತಾಮಣಿ ವೃತ್ತನಿರೀಕ್ಷಕರಿಗೆ ಶನಿವಾರವೇ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಪೊಲೀಸರು ದಲಿತ ಮುಖಂಡರನ್ನು ಕರೆಸಿ ಇಂದಿನ ಕಾರ್ಯಕ್ರಮ ರದ್ದುಪಡಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪದ ದಲಿತ ಮುಖಂಡರು ‘ಸಂಘವನ್ನು ಸಂಘಟಿಸುವುದು ನಮ್ಮ ಜನತಾಂತ್ರಿಕ ಹಕ್ಕು’ ಎಂದು ಪ್ರತಿಪಾದಿಸಿದ್ದರು. ಇದರಿಂದ ಗ್ರಾಮದಲ್ಲಿ ಎರಡೂ ಜನಾಂಗದ ನಡುವೆ ಗಲಭೆ ನಡೆಯುವುದೆಂದು ಶಂಕಿಸಿದ ಪೊಲೀಸರು ಸಿಬ್ಬಂದಿಯನ್ನು ಆ ಗ್ರಾಮಕ್ಕೆ ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.