ADVERTISEMENT

50 ವರ್ಷಗಳ ಹಿಂದೆ ಶುಕ್ರವಾರ 28‌.7.1972

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 19:30 IST
Last Updated 27 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉದಯವಾಯಿತು ನಮ್ಮ ಚೆಲುವ ‘ಕರ್ನಾಟಕ’

ಬೆಂಗಳೂರು, ಜುಲೈ 27– ಮೈಸೂರು ಎಂಬ ಹೆಸರನ್ನು ಇತಿಹಾಸದ ಪುಟಗಳಿಗೆ ಸೇರಿಸಿ, ಹದಿನಾರರ ಹರೆಯದ ವಿಶಾಲ ರಾಜ್ಯಕ್ಕೆ ‘ಕರ್ನಾಟಕ’ವೆಂದು ಮರು ನಾಮಕರಣ ಮಾಡುವ ನಿರ್ಣಯವನ್ನು ಒಕ್ಕೊರಲಿನಿಂದ ಒಪ್ಪಿದ ವಿಧಾನಸಭೆಯಲ್ಲಿ ಇಂದು ಆನಂದ ಸಂತಸಗಳು ಕಟ್ಟೆ ಒಡೆದವು.

ಅಧ್ಯಕ್ಷೆ ಶ್ರೀಮತಿ ಕೆ.ಎಸ್. ನಾಗರತ್ನಮ್ಮ ಅವರು, ಅಧಿಕೃತ ನಿರ್ಣಯಕ್ಕೆ ಸಭೆಯು ಸರ್ವಾನುಮತದಿಂದ ಒಪ್ಪಿದೆ ಎಂದು
ಹೇಳಿದ ಕೂಡಲೇ, ಮುಖ್ಯಮಂತ್ರಿಯವರೇ ನೇತೃತ್ವ ವಹಿಸಿ ಎದ್ದು ನಿಂತಿದ್ದ ಸಭೆಯನ್ನು ಮೂರು ಬಾರಿ ‘ಕರ್ನಾಟಕಕ್ಕೆ ಜಯವಾಗಲಿ’ ಎಂದು ಕೂಗಿಸಿದಾಗ ಕಂಡ ದೃಶ್ಯ, ಕೇಳಿದ ಧ್ವನಿ, ಅಲ್ಲಿದ್ದವರಿಗೆ ಚಿರಸ್ಮರಣೀಯ.

ADVERTISEMENT

ಮಹಾಭಾರತದಲ್ಲಿ ‘ಕರ್ನಾಟಕ’ ಹೆಸರಿನ ಉಲ್ಲೇಖ: ದೇಜಗೌ

ಮೈಸೂರು, ಜುಲೈ 27– ‘ಕರ್ನಾಟಕ’ ಹೆಸರಿನ ಮೂಲವನ್ನು ಪ್ರಶ್ನಿಸಿ ಶ್ರೀ ಸಿ. ರಾಜಗೋಪಾಲಾಚಾರಿಯವರು ನೀಡಿರುವ ಹೇಳಿಕೆಯನ್ನು ಮೈಸೂರು ವಿಶ್ವವಿದ್ಯಾಲಯದ ಉ‍ಪ ಕುಲಪತಿ ಪ್ರೊ.ದೇ. ಜವರೇಗೌಡ ಅವರು ಪ್ರಸ್ತಾಪಿಸಿ ‘ಈ ಹಿರಿಯ ರಾಜಕಾರಣಿ ಹೇಳಿದುದನ್ನೆಲ್ಲ ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ’ ಎಂದು ತಿಳಿಸಿದ್ದಾರೆ.

ಮಹಾಭಾರತದಲ್ಲಿ ‘ಕರ್ನಾಟಕ’ ಹೆಸರಿನ ಉಲ್ಲೇಖವಿದೆಯೆಂದೂ ಅದರ ಅರ್ಥ ಉನ್ನತ ಪ್ರದೇಶ ಎಂದೂ, ಮೂರನೇ ಶತಮಾನದ ತಮಿಳು ಪುಸ್ತಕವೊಂದರಲ್ಲಿ ಈ ಹೆಸರಿನ ಉಲ್ಲೇಖವಾಗಿದೆಯೆಂದೂ ದೇಜಗೌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.