ADVERTISEMENT

ಇಂದಿರಾಗೆ ಪಕ್ಷದ ಸದಸ್ಯತ್ವ ರದ್ದು ಮಾಡಲು ಸಿದ್ಧತೆ ನಡೆಸಿದ್ದ ಸಿಂಡಕೇಟ್!

ಬುಧವಾರ, 5–11–1969

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 20:08 IST
Last Updated 4 ನವೆಂಬರ್ 2019, 20:08 IST
   

ಪ್ರಧಾನಿ ಪ್ರಾಥಮಿಕ ಸದಸ್ಯತ್ವ ರದ್ದಿಗೆ ಸಿಂಡಕೇಟ್ ಸನ್ನಾಹ?
ನವದೆಹಲಿ, ನ. 4– ಕಾಂಗ್ರೆಸ್ ಕಾರ್ಯಸಮಿತಿಯು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ತೆಗೆದು ಹಾಕುವ ನಿರೀಕ್ಷೆ ಇದೆ. ಇಷ್ಟೇ ಅಲ್ಲದೆ ಈ ಬಾರಿಯ ಪಾರ್ಲಿಮೆಂಟ್ ಅಧಿವೇಶನ ಆರಂಭವಾಗುವುದಕ್ಕೆ ಮುಂಚೆಯೇ 16ರಂದು ಹೊಸ ನಾಯಕರೊಬ್ಬರನ್ನು ಚುನಾಯಿಸುವಂತೆ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷಕ್ಕೆ ಆದೇಶ ನೀಡುವ ಸಂಭವವೂ ಇದೆ.

ಒಂದುವೇಳೆ ಇಷ್ಟೆಲ್ಲಾ ಆದಲ್ಲಿ ಈಗಾಗಲೇ ಹದಗೆಟ್ಟು ಹೋಗಿರುವ ಪಕ್ಷದ ದುಸ್ಥಿತಿಯು 16 ರಂದು ಮತ್ತಷ್ಟು ವಿಕೋಪಕ್ಕೆ ಹೋಗುವುದು ಖಚಿತ.

ಎಸ್ಸೆನ್ ತಾವಾಗಿಯೇ ಪ್ರಧಾನಿಯ ಭೇಟಿ ಮಾಡಲಿ – ಅರಸು
ಬೆಂಗಳೂರು, ನ. 4– ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ‘ತಾವಾಗಿಯೇ ಪ್ರಧಾನಿ ಅವರನ್ನು ಭೇಟಿ ಮಾಡುವ ದಿಟ್ಟ ನಿರ್ಧಾರವನ್ನು’ ಕೈಗೊಳ್ಳಬೇಕೆಂದು ಮಾಜಿ ಸಚಿವ ಶ್ರೀ ಡಿ. ದೇವರಾಜಅರಸ್ ಅವರು ಒತ್ತಾಯ ಮಾಡಿದ್ದಾರೆ.

ADVERTISEMENT

ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಒಡಕಿನ ಬಗ್ಗೆ ಶ್ರೀಯುತರು ಹೇಳಿಕೆಯೊಂದನ್ನಿತ್ತು ದೆಹಲಿಗೆ ತೆರಳಲಿರುವ ರಾಜ್ಯದ ಮುಖ್ಯಮಂತ್ರಿಗಳು ಒಡಂಬಡಿಕೆಗಾಗಿ ತಮ್ಮ ಪ್ರಯತ್ನವನ್ನು ಮುಂದುವರೆಸಬೇಕೆಂದೂ ಸಲಹೆ ಮಾಡಿದ್ದಾರೆ.

‘ಸಂಸ್ಥೆಯಲ್ಲಿ ನಡೆಯುತ್ತಿರುವ ಭೀಕರ ಹೋರಾಟವನ್ನು ನಿಲ್ಲಿಸಲು ಒಬ್ಬರಿಗೆ ಸಾಧ್ಯ. ಆ ವ್ಯಕ್ತಿ ‘ಕಾಂಗ್ರೆಸ್ ಅಧ್ಯಕ್ಷರು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸಿನಲ್ಲಿ ಐಕಮತ್ಯ ತೀರ ಅಸಂಭವ: ಮುರಾರಜಿ
ನವದೆಹಲಿ, ನ. 4– ಕಾಂಗ್ರೆಸ್ಸಿನಲ್ಲಿ ಐಕಮತ್ಯದ ಪ್ರತೀಕ್ಷೆ ‘ತೀರ ಅಸಂಭವವೆಂದು ಕಾಣುತ್ತದೆ’ ಎಂದು ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಹೇಳಿದರು.

‘ಏಕಪಕ್ಷೀಯ ಷರತ್ತುಗಳಿಂದ ಒಗ್ಗಟ್ಟು ಸಾಧ್ಯವಿಲ್ಲ’ ಎಂದು ಅವರು‍ಪತ್ರಕರ್ತರಿಗೆ ತಿಳಿಸಿದರು.

‘ಐಕ್ಯಮತ್ಯದ ಧ್ಯೇಯ ರಾಷ್ಟ್ರ ಸೇವೆಯನ್ನು ಗುರಿಯನ್ನಾಗಿ ಹೊಂದಿರಬೇಕು. ಶರಣಾಗತಿ ಐಕಮತ್ಯವಲ್ಲ’ ಎಂದರು ದೇಸಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.