ADVERTISEMENT

50 ವರ್ಷಗಳ ಹಿಂದೆ: ಸೋಮವಾರ ಆಗಸ್ಟ್‌ 24 1970

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
   

ಕಾವೇರಿ ಜಲವಿವಾದ: 1924ರ ಒಪ್ಪಂದದ ಆಧಾರದ ಮೇಲೆ ಮಾತುಕತೆ– ಕರುಣಾನಿಧಿ

ಮಧುರೆ, ಆ. 23– ಕಾವೇರಿ ಜಲವಿವಾದದ ಬಗ್ಗೆ ಕೈಗೊಳ್ಳುವ ಯಾವುದೇ ನಿರ್ಧಾರವು 1924ರ ಒಪ್ಪಂದಕ್ಕೆ ಅನುಗುಣವಾಗಿರ ಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ. ಕರುಣಾನಿಧಿ ಇಂದು ಪುನರ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಡನೆ ಮಾತನಾಡುತ್ತಾ, ಸೆಪ್ಟೆಂಬರ್ 23 ಮತ್ತು 24ರಂದು ಉದಕಮಂಡಲದಲ್ಲಿ ತಮ್ಮ ಮತ್ತು ಮೈಸೂರು ಮುಖ್ಯಮಂತ್ರಿಗಳ ಸಭೆಯೊಂದನ್ನು ನೀರಾವರಿ ಸಚಿವರು ಏರ್ಪಡಿಸುವ ಬಗ್ಗೆ ತಮಗೇನೂ ತಿಳಿಯದೆಂದೂ ಮೈಸೂರು ಸರ್ಕಾರವು ಹೇಮಾವತಿ ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಮುಂದುವರಿಯುತ್ತಿದೆ ಎಂಬುದು ಮಾತ್ರ ತಮಗೆ ಗೊತ್ತೆಂದೂ ಅವರು ನುಡಿದರು.

ADVERTISEMENT

ಜಪಾನ್‌ಗೆ ಹೆಚ್ಚು ವಸ್ತು ರಫ್ತಿಗೆ ಭಾರತದ ಯತ್ನ

ನವದೆಹಲಿ, ಆ. 23– ತನ್ನ ಕೈಗಾರಿಕಾ ಉತ್ಪಾದನಾ ವಸ್ತುಗಳನ್ನು ಹೆಚ್ಚು ಕೊಳ್ಳುವಂತೆ ಜಪಾನ್ ಮನವೊಲಿಸಲು ಭಾರತ ದೃಢ ಪ್ರಯತ್ನ ಮಾಡಲಿದೆ.

ಮುಂದಿನ ತಿಂಗಳು 3ರಂದು ಕ್ಯೂಟೊದಲ್ಲಿ ನಡೆಯಲಿರುವ ಉಭಯ ರಾಷ್ಟ್ರಗಳ ವಾಣಿಜ್ಯ ಸಹಕಾರ ಸಮಿತಿಗಳ ಐದನೇ ಜಂಟಿ ಸಭೆಯಲ್ಲಿ ಈ ಪ್ರಯತ್ನ ನಡೆಯಲಿದೆ.

ನಾನಾ ರೀತಿಯ ಬಳಕೆ ವಸ್ತುಗಳನ್ನು ಮತ್ತು ಎಂಜಿನಿಯರಿಂಗ್ ಉಪಕರಣಗಳನ್ನು ಭಾರತ ಸರಬರಾಜು ಮಾಡಬಲ್ಲದೆಂದು ಭಾರತೀಯ ನಿಯೋಗದ ನಾಯಕತ್ವ ವಹಿಸಲಿರುವ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಫೆಡರೇಷನ್ನಿನ ಅಧ್ಯಕ್ಷ ಶ್ರೀ ಡಿ.ಸಿ. ಕೊಠಾರಿ ಅವರು ಈ ಮಾತುಕತೆಯಲ್ಲಿ ಸೂಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.