ADVERTISEMENT

50 ವರ್ಷಗಳ ಹಿಂದೆ ಬುಧವಾರ 23.6.1971

50 ವರ್ಷಗಳ ಹಿಂದೆ ಬುಧವಾರ 23.6.1971

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 19:25 IST
Last Updated 22 ಜೂನ್ 2021, 19:25 IST
   

ನಿಷೇಧಾಜ್ಞೆ ಉಲ್ಲಂಘಿಸಿ ಪಾಕಿಸ್ತಾನಕ್ಕೆ ಎರಡು ಹಡಗು ಭರ್ತಿ ಅಮೆರಿಕ ಶಸ್ತ್ರಾಸ್ತ್ರ

ನ್ಯೂಯಾರ್ಕ್, ಜೂನ್ 22– ಅಮೆರಿಕನ್ ಮಿಲಿಟರಿ ಉಪಕರಣಗಳನ್ನು ಹೊತ್ತ ಪಾಕಿಸ್ತಾನಿ ಹಡಗು ‘ಸುಂದರಬನ’ ಮೇ 8ರಿಂದ ನ್ಯೂಯಾರ್ಕ್ ಬಿಟ್ಟಿದ್ದು, ನಾಳೆ ಕರಾಚಿ ತಲುಪಲಿದೆಯೆಂದು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಇಂದು ವರದಿ ಮಾಡಿದೆ.

ಎಂಟು ವಿಮಾನಗಳು, ಪ್ಯಾರಾಶೂಟ್‌ ಗಳು, ಸಹಸ್ರಾರು ಟನ್‌ಗಳಷ್ಟು ವಿಮಾನ ಹಾಗೂ ಟ್ರಕ್‌ಗಳ ಬಿಡಿಭಾಗಗಳನ್ನುಹೊತ್ತ ಇನ್ನೊಂದು ಪಾಕಿಸ್ತಾನಿ ಹಡಗು ‘ಪದ್ಮಾ’ ಸದ್ಯದಲ್ಲೇ ನ್ಯೂಯಾರ್ಕ್ ಬಿಡಲಿದ್ದು, ಆಗಸ್ಟ್ ಮಧ್ಯದ ಹೊತ್ತಿಗೆ ಕರಾಚಿಯನ್ನು ಸೇರಲಿದೆಯೆಂದೂ ಪತ್ರಿಕೆ ಹೇಳಿದೆ.

ADVERTISEMENT

ಮಾರ್ಚ್ 25ರಂದು ಬಾಂಗ್ಲಾದೇಶ ಚಳವಳಿಯನ್ನು ಹತ್ತಿಕ್ಕಲು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಕೂಡಲೆ ಪಾಕಿಸ್ತಾನಕ್ಕೆ ಮಿಲಿಟರಿ ಉಪಕರಣ ರವಾನೆ ವಿರುದ್ಧ ಸ್ಟೇಟ್ ಇಲಾಖೆ ಹಾಕಿದ್ದ ಪ್ರತಿಬಂಧಕವನ್ನು ಈ ರಫ್ತುಗಳು ಉಲ್ಲಂಘಿಸಿ ವೆಯೆಂದು ‘ನ್ಯೂಯಾರ್ಕ್ ಟೈಮ್ಸ್’ ಆಪಾದಿಸಿದೆ.

ಏನೂ ಇಲ್ಲದ ಸಂಸ್ಥೆಗೆಸಂಶೋಧನೆ ನೆರವು!

ನವದೆಹಲಿ, ಜೂನ್ 22– ಕೇಂದ್ರ ಶಿಕ್ಷಣ ಸಚಿವ ಶಾಖೆ 1967–68ರಲ್ಲಿ ನವದೆಹಲಿಯ ಸಂಸ್ಥೆಯೊಂದಕ್ಕೆ ಭಾಷಾಂತರ ಕಾರ್ಯನಿರ್ವಹಿಸಲು ಅನುಮತಿ ನೀಡಿತು. ಈ ಸಂಸ್ಥೆಯ ಹೆಸರು: ಪುರಾತನ ವಿಜ್ಞಾನ ಸಂಶೋಧನಾ ಸಂಸ್ಥೆ. ಸಚಿವ ಶಾಖೆ ಐದು ಪುಸ್ತಕಗಳ ಭಾಷಾಂತರಕ್ಕಾಗಿ ಈ ಸಂಸ್ಥೆಗೆ 33 ಸಾವಿರ ರೂಪಾಯಿ ನೀಡಿತು.

ಇತ್ತೀಚೆಗೆ ತನಿಖೆ ನಡೆಸಿದಾಗ ಈ ಸಂಸ್ಥೆಯಲ್ಲಿ ಸಿಬ್ಬಂದಿಯೇ ಕಾಣಬರಲಿಲ್ಲ. ಈ ಸಂಸ್ಥೆ ಜೊತೆ ಯಾವುದೇ ರೀತಿಯ ವ್ಯವಹಾರವಿಟ್ಟುಕೊಳ್ಳಬಾರದೆಂದು ಸರ್ಕಾರ ತೀರ್ಮಾನಿಸಿದೆ.

ಮಂಗಳೂರು ಗೊಬ್ಬರ ಕಾರ್ಖಾನೆ ಸ್ಥಾಪನೆಗೆ ವಿದೇಶಿ ಸಂಸ್ಥೆ ಸಹಕಾರ ಅಪೇಕ್ಷೆ ಬಗ್ಗೆ ಶಂಕೆ

ಬೆಂಗಳೂರು, ಜೂನ್ 22– ಮಂಗಳೂರಿ ನಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಯನ್ನು ಸ್ಥಾಪಿಸಲು ವಿದೇಶಿ ಸಂಸ್ಥೆಯೊಂದರ ಸಹಕಾರವನ್ನು ಪಡೆಯುವುದರ ಔಚಿತ್ಯವನ್ನು ವಿಧಾನ ಪರಿಷತ್ ಸದಸ್ಯ ಶ್ರೀ ಜಿ.ಎಸ್. ಉಳ್ಳಾಲ್ ಅವರು ಪ್ರಶ್ನಿಸಿದ್ದಾರೆ.

ಗೊಬ್ಬರ ತಯಾರಿಕೆಯಲ್ಲಿ ಫರ್ಟಿಲೈಸರ್ ಕಾರ್ಪೊರೇಷನ್ ಆಫ್ ಇಂಡಿಯಾ, ಫ್ಯಾಕ್ಟ್ ಮುಂತಾದ ಸಂಸ್ಥೆಗಳ ಅಥವಾ ಇತರ ದೇಶೀಯ ತಜ್ಞರ ನೆರವು ಸುಲಭದಲ್ಲಿ ದೊರೆಯುವ ಸಾಧ್ಯತೆ ಇರುವಾಗ ವಿದೇಶಿ ಸಂಸ್ಥೆಗಳ ಆಶ್ರಯವನ್ನು ಪಡೆಯುವುದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಅವರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.