ADVERTISEMENT

ಗುರುವಾರ, 16–06–1994

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 18:30 IST
Last Updated 15 ಜೂನ್ 2019, 18:30 IST

ತಪ್ಪು ಲೆಕ್ಕಾಚಾರ: ರಾವ್ ವರ್ಚಸ್ಸಿಗೆ ಧಕ್ಕೆ

ನವದೆಹಲಿ, ಜೂನ್ 15– ರಾಜಕೀಯ ಮುತ್ಸದ್ಧಿ ಎಂದು ಕರೆಸಿಕೊಳ್ಳುವ ಪ್ರಧಾನಿ ಪಿ.ವಿ. ನರಸಿಂಹರಾವ್ ಈಗ ಮುಗ್ಗರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ 2/3 ರಷ್ಟು ಬಹುಮತವಿಲ್ಲದಿದ್ದರೂ, ಚುನಾವಣೆ ಸುಧಾರಣೆ ಹೆಸರಿನಲ್ಲಿ ಸಂವಿಧಾನದ 83ನೇ ತಿದ್ದುಪಡಿಯಂತಹ ಮಹತ್ವದ ವಿಷಯಕ್ಕೆ ಕೈಹಾಕಿ ತಿದ್ದುಪಡಿ ಮಸೂದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಿ ಬಂದ ಪರಿಸ್ಥಿತಿಯಿಂದ ಸಂಸತ್ತಿನ ಒಳಗೆ ಮಾತ್ರವಲ್ಲ ಹೊರಗೂ ನಗೆಪಾಟಲಿಗೆ ಗುರಿಯಾಗಬೇಕಾದ ಸ್ಥಿತಿ ಬಂದದ್ದು ಅವರ ರಾಜಕೀಯ ಜೀವನದಲ್ಲಿ ಒಂದು ಹಿನ್ನಡೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಸುಂದರಿಗೆ ಶುಕ್ರದೆಸೆ

ADVERTISEMENT

ಮನಿಲಾ ಜೂನ್ 15 (ಪಿಟಿಐ)– ವಿಶ್ವಸುಂದರಿ ಸ್ಪರ್ಧೆಯಲ್ಲಿ ಬೆಲ್ಜಿಯಂನ ಕ್ರಸ್ಟಿಲ್‌ ರೋಲೆಂಡ್ಸ್‌ಗೆ ಪೂರ್ವಾಂತ್ಯ ಕೂಡ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಫಿಲಿಫೈನ್ಸ್‌ನ ತರುಣರ ಹೃದಯದಲ್ಲಿ ಆಕೆ ಬಿರುಗಾಳಿ ಎಬ್ಬಿಸಿದ್ದಾಳೆ. ಮನಿಲಾದ ಸ್ಟಾಲೊಂದ
ರಲ್ಲಿ ಈಜು ಉಡುಗೆಯಲ್ಲಿಕಾಣಿಸಕೊಂಡ ರೋಲೆಂಡ್ಸ್‌ಳನ್ನು ನೋಡಲು ಭಾರಿ ಜನಸ್ತೋಮ ಏರ್ಪಟ್ಟಿತ್ತು. ಈಗ ಫಿಲಿಫೈನ್ಸ್‌ನ ಬೀದಿ ಬೀದಿಗಳಲ್ಲಿ ಅವಳ ಚಿತ್ರ ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. 19 ವರ್ಷದ ಬೆಲ್ಜಿಯಂನ ಈ ಸುಂದರಿ ಫೋಟೋವನ್ನು ಮಲಗುವ ಕೋಣೆಯಲ್ಲಿ ತೂಗು ಹಾಕುವುದು ಹದಿಹರೆಯದ ಫಿಲಿಫೈನ್ಸ್ ತರುಣರಲ್ಲಿ ಫ್ಯಾಶನ್ ಆಗಿಬಿಟ್ಟಿದೆ.

ಮಸೂದೆಯಲ್ಲಿ ಸಣ್ಣಪುಟ್ಟ ಬದಲಾವಣೆ

ನವದೆಹಲಿ, ಜೂನ್ 15 (ಪಿಟಿಐ)– ಚುನಾವಣೆ ಸುಧಾರಣೆಯ ಸಂವಿಧಾನ ತಿದ್ದುಪಡಿ ಮಸೂದೆಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲು ಸಿದ್ಧ ಎಂದು ಸರಕಾರ ಇಂದು ತಿಳಿಸಿತಲ್ಲದೆ ಈ ಮಸೂದೆಯನ್ನು ಸಂಸತ್ತಿನಲ್ಲಿ ಮುಂದಿನ ಅಧಿವೇಶನದಲ್ಲಿ ಮತ್ತೆ ಮಂಡಿಸಲಾಗುವುದು ಎಂದು ಪ್ರಕಟಿಸಿತು.

ಸಂಸದೀಯ ವ್ಯವಹಾರ ಸಚಿವ ವಿ.ಸಿ. ಶುಕ್ಲಾ ಅವರು ‘ಐ ವಿಟ್‌ನೆಸ್’ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು. ಆದರೆ ಯಾವ ಬದಲಾವಣೆಗಳನ್ನು ಮಾಡಲು ಸರಕಾರ ಸಿದ್ಧವಿದೆ ಎಂದು ತಿಳಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.