ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 27–1–1995

ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST

ಜಮ್ಮು: ಮೂರು ಬಾಂಬ್ ಸ್ಫೋಟ; 8 ಮಂದಿ ಸಾವು– ರಾಜ್ಯಪಾಲರು ಪಾರು

ಜಮ್ಮು, ಜ. 26– ಗಣರಾಜ್ಯೋತ್ಸವ ಸಮಾರಂಭ ನಡೆಯುತ್ತಿದ್ದ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಇಂದು ಸರಣಿ ಬಾಂಬ್ ಸ್ಫೋಟ ಸಂಭವಿಸಿ ರಾಜ್ಯಪಾಲ ಜನರಲ್ ಕೆ.ವಿ. ಕೃಷ್ಣರಾವ್ ಹಾಗೂ ಸೇನಾಪಡೆಯ ಉತ್ತರ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುರಿಂದರ್ ಸಿಂಗ್ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾದರು. ಆದರೆ ರಾಜ್ಯಪಾಲರ ಅಂಗರಕ್ಷಕರಾಗಿದ್ದ ಮೂವರು ಬ್ಲಾಕ್‌ ಕ್ಯಾಟ್ ಕಮಾಂಡೊಗಳೂ ಸೇರಿದಂತೆ 8 ಮಂದಿ ಮೃತಪಟ್ಟು ಸುಮಾರು 100 ಮಂದಿ ಗಾಯಗೊಂಡರು.

ಬೆಳಿಗ್ಗೆ 10.22ರಿಂದ 10.35ರೊಳಗೆ ನಡೆದ ಮೂರು ದೂರ ನಿಯಂತ್ರಿತ ಬಾಂಬ್ ಸ್ಫೋಟ ಹಾಗೂ ನಂತರದ ನೂಕು ನುಗ್ಗಲಿನಲ್ಲಿಯೂ ಹಲವರು ಗಾಯಗೊಂಡರು. ‘ರಾಜ್ಯಪಾಲ ಕೃಷ್ಣರಾವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಲ್ಲಿ 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ಈದ್ಗಾದಲ್ಲಿ ಅರಳಿದ ತ್ರಿವರ್ಣ ಧ್ವಜ: ಹೋರಾಟಕ್ಕೆ ತೆರೆ– ಬಿಜೆಪಿ ಘೋಷಣೆ ಸರ್ಪಗಾವಲಿನಲ್ಲಿ ಸರಳ ಸಮಾರಂಭ

ಹುಬ್ಬಳ್ಳಿ, ಜ. 26– ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅಂಜುಮನ್–ಎ–ಇಸ್ಲಾಂ ಸಂಸ್ಥೆಯಿಂದ ಗೌರವಪೂರ್ವಕವಾಗಿ ತ್ರಿವರ್ಣ ಧ್ವಜ ಆರೋಹಣದ ಚಾರಿತ್ರಿಕ ಘಟನೆ ಮತ್ತು ಇದನ್ನು ಅನುಸರಿಸಿ ಕಳೆದ ಮೂರು ವರ್ಷಗಳ ತಮ್ಮ ಧ್ವಜಾರೋಹಣ ಹೋರಾಟಕ್ಕೆ ಮಂಗಳ ಹಾಡುತ್ತಿರುವುದಾಗಿ ಬಿಜೆಪಿ ಮತ್ತು ರಾಷ್ಟ್ರಧ್ವಜ ಗೌರವ ಸಂರಕ್ಷಣಾ ಸಮಿತಿಗಳ ಘೋಷಣೆ. ಇದರೊಂದಿಗೆ ಇಡೀ ದೇಶದ ಗಮನ ಸೆಳೆದಿದ್ದ ಈದ್ಗಾ ಧ್ವಜಾರೋಹಣ ವಿವಾದಕ್ಕೆ ಇಂದು ಅಂತಿಮ ತೆರೆ ಬಿತ್ತು.

ತೆರಿಗೆ ಮುಕ್ತ ಬಜೆಟ್

ಮೈಸೂರು, ಜ. 26– ಕರ್ನಾಟಕವು ಹೆಚ್ಚು ಪ್ರಮಾಣದ ತೆರಿಗೆ ವಿಧಿಸಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಹೊಸದಾಗಿ ತೆರಿಗೆಗಳನ್ನು ವಿಧಿಸಲು ಅವಕಾಶ ಇಲ್ಲ ಎಂದು ರಾಜ್ಯದ ಹಣಕಾಸು ಮತ್ತು ಯೋಜನಾ ಸಚಿವ ಸಿದ್ಧರಾಮಯ್ಯ ಅವರು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.