
ಬೆಂಗಳೂರು, ಡಿ. 3– ಪಾಕಿಸ್ತಾನ ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಗ್ಗಿಸುವುದನ್ನು ಹಾಗೂ ನಿಜವಾದ ಅರ್ಥದಲ್ಲಿ ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸುವುದನ್ನು ನಿಲ್ಲಿಸಿದರೆ ಮಾತ್ರ ಭಾರತ ಆ ದೇಶ ದೊಂದಿಗೆ ಮಾತುಕತೆಯನ್ನು ಪುನರಾರಂಭಿಸುತ್ತದೆ ಎಂಬ ಇಂಗಿತವನ್ನು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ವ್ಯಕ್ತಪಡಿಸಿದರು.
ಪಾಕಿಸ್ತಾನದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಅತ್ಯಂತ ಸಂಯಮದಿಂದ ಇರುವಂತೆ ಸೇನೆಗೆ ಆದೇಶ ನೀಡಿದೆ ಎಂದು ವರದಿಯಾಗಿರುವುದರ ಬಗ್ಗೆ ರಕ್ಷಣಾ ಸಚಿವರು ಪ್ರತಿಕ್ರಿಯೆ ವ್ಯಕ್ತಪಡಿಸಿ, ಸೂಕ್ತವಾದ ಕಾಲದಲ್ಲಿ ಪಾಕಿಸ್ತಾನ ಈ ಕ್ರಮ ತೆಗೆದುಕೊಂಡಿದೆ ಎಂದರು.
ಬೆಂಗಳೂರು, ಡಿ. 3– ಅಂಗವಿಕಲರಿಗೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ರಿಯಾಯಿತಿ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೋಟಮ್ಮ ಇಂದು ಇಲ್ಲಿ ಹೇಳಿದರು.
ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.