ADVERTISEMENT

ವರ್ಷಗಳ ಹಿಂದೆ: ಶುಕ್ರವಾರ 17-10-1997

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 22:00 IST
Last Updated 16 ಅಕ್ಟೋಬರ್ 2022, 22:00 IST
   

ನಾಳೆಯೊಳಗೆ ಶರಣಾದರೆ ರಕ್ಷಣೆ, ಇಲ್ಲವೇ ಜಂಟಿ ಕಾರ್ಯಾಚರಣೆ

ನವದೆಹಲಿ, ಅಕ್ಟೋಬರ್‌ 16– ವೀರಪ್ಪನ್‌ ತಾನು ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಶನಿವಾರದೊಳಗೆ ಶರಣಾಗದಿದ್ದರೆ ಕರ್ನಾಟಕವು ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ಕೆಲವು ‘ಕಠಿಣ ಕ್ರಮ’ ಕೈಗೊಳ್ಳುವುದು ಅನಿ
ವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಇಂದು ಇಲ್ಲಿ ಪ್ರಕಟಿಸಿದರು.

ವೀರಪ್ಪನ್‌ ಪ್ರಕರಣದ ಬಗೆಗೆ ಪ್ರಧಾನ ಮಂತ್ರಿ ಐ.ಕೆ. ಗುಜ್ರಾಲ್‌ ಅವರ ಜತೆ ಎರಡನೇ ಸುತ್ತಿನ ಮಾತುಕತೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪನ್‌ ಶರಣಾದರೆ ‘ಕೆಲ ಮಟ್ಟಿಗೆ ರಕ್ಷಣೆ’ ನೀಡಬಹುದು ಎಂದರು.‌

ADVERTISEMENT

ಪ್ರಧಾನಿಯವರ ಜತೆ ಇಂದು ಈ ಸಮಸ್ಯೆ ಕುರಿತು ಚರ್ಚಿಸಿದಾಗ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಪರವಾಗಿ ಮುರಸೋಳಿ ಮಾರನ್‌ ಅವರು ಪ್ರತಿನಿಧಿಸಿದ್ದರು ಎಂದರು.

l ಕಾವೇರಿ: ಶೀಘ್ರವೇ ಮುಖ್ಯಮಂತ್ರಿಗಳ ಸಭೆ

ನವದೆಹಲಿ, ಅಕ್ಟೋಬರ್‌ 16– ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಜಾರಿಗೆ ಕಾವೇರಿ ಪ್ರಾಧಿಕಾರ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಕಾವೇರಿ ಜಲಾನಯನ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಹೇಳಿದ್ದಾರೆ.

ತಾವು ನಿನ್ನೆ ಕೇಂದ್ರದ ಜಲಸಂಪನ್ಮೂಲ ಸಚಿವ ಸಿಸ್‌ರಾಂ ಒಲಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಒಲಾ ಅವರು ಈ ಭರವಸೆ ನೀಡಿದರು ಎಂದು ಪಟೇಲ್‌ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಕಾವೇರಿ ಪ್ರಾಧಿಕಾರ ರಚಿಸುವುದನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಲಾಗಿದೆ. ಪ್ರಾಧಿಕಾರ ರಚಿಸುವ ಬದಲು ಸುಪ್ರೀಂ ಕೋರ್ಟ್‌ನ ಆದೇಶ ಜಾರಿಗೊಳಿಸಲು ಸಮನ್ವಯ ಸಮಿತಿಯೊಂದನ್ನು ರಚಿಸಬಹುದು ಎಂದು ರಾಜ್ಯ ಸಲಹೆ ಮಾಡಿರುವುದಾಗಿ ಅವರು ತಿಳಿಸಿದರು.

l ಬೆನಜೀರ್‌ ಭುಟ್ಟೊ ಸ್ವಿಸ್‌ ಖಾತೆ ಮುಟ್ಟುಗೋಲು

ಇಸ್ಲಾಮಾಬಾದ್‌,ಅಕ್ಟೋಬರ್‌ 16 (ಪಿಟಿಐ): ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೊ ಹಾಗೂ ಅವರ ಕುಟುಂಬದ ಸದಸ್ಯರು ಏಳು ಸ್ವಿಸ್‌ ಬ್ಯಾಂಕುಗಳಲ್ಲಿ ಇಟ್ಟಿರುವ 13.5 ದಶಲಕ್ಷ ಡಾಲರ್‌ ಹಣವನ್ನು ಅಲ್ಲಿನ ಸರ್ಕಾರ ಅನಿರ್ದಿಷ್ಟ ಅವಧಿಗೆ ಮುಟ್ಟುಗೋಲು ಹಾಕಿಕೊಂಡಿದೆ.

ಈ ಕುರಿತಂತೆ ಇಸ್ಲಾಮಾಬಾದ್‌ ಸರ್ಕಾರ ಕಾನೂನು ಸಹಾಯ ಕೇಳಿದ ಹಿನ್ನೆಲೆಯಲ್ಲಿ ಸ್ವಿಟ್ಜರ್‌ಲೆಂಡ್‌ ಸರ್ಕಾರ ಕ್ರಮ ಕೈಗೊಂಡಿದೆ.

ಈ ಹಿಂದೆ ನಾಲ್ಕು ಬ್ಯಾಂಕುಗಳಲ್ಲಿ ಬೆನಜೀರ್‌ ಅವರು ಇಟ್ಟಿದ್ದ ಹಣವನ್ನು ಮೂರು ತಿಂಗಳ ಅವಧಿಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.