ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 20–07–1972

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:03 IST
Last Updated 19 ಜುಲೈ 2022, 15:03 IST
   

‘ಕಂಡಲ್ಲಿಗುಂಡು’ ನಕ್ಸಲೀಯ ಹಿಂಸಾಚಾರ ಮೆಟ್ಟಿಹಾಕಲು ಪ.ಬಂಗಾಳ ಸರ್ಕಾರದ ಆಜ್ಞೆ

ಕಲ್ಕತ್ತ, ಜುಲೈ 19– ನಕ್ಸಲೀಯರ ಹಿಂಸಾಚಾರ ಪರಿಣಾಮವಾಗಿ ಇಂದು ನಗರದಲ್ಲಿ ಇನ್ನೂ ಒಬ್ಬ ‍ಕಾನ್‌ಸ್ಟೇಬಲ್‌ ಬಲಿಯಾದುದರಿಂದ ಕೊಲೆಗಾಗಿ ಯಾರಾದರೂ ಪ್ರಯತ್ನ ನಡೆಸುತ್ತಿದ್ದುದು ಕಂಡು ಬಂದರೆ ತತ್‌ಕ್ಷಣ ಅಂತಹವರ ಮೇಲೆಗುಂಡುಹಾರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ದಾರ್ಥ ಶಂಕರರಾಯ್‌ ಅವರು ಪೊಲೀಸರಿಗೆ ಆಜ್ಞೆ ಮಾಡಿದ್ದಾರೆ.

ನಕ್ಸಲೀಯ ನಾಯಕ ಚಾರು ಮಜುಂದಾರ್‌ ಅವರ ಬಂಧನದ ನಂತರ ನಕ್ಸಲೀಯರ ಚಟುವಟಿಕೆಗಳು ಮತ್ತೆ ಸಿಡಿದೆದ್ದಿರುವುದರ ಹಿನ್ನೆಲೆಯಲ್ಲಿ ರಾಜ್ಯ ಸಂಪುಟದ ವಿಶೇಷ ಸಭೆಯು ಇಂದು ಕಾನೂನು ಮತ್ತು ಶಿಸ್ತು ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ರಾಯ್‌ ಅವರು ಈ ಆಜ್ಞೆ ನೀಡಿದರು.

ADVERTISEMENT

ಹೌರಾ ಸೇತುವೆಯ ಪೂರ್ವ ಭಾಗದಲ್ಲಿ ಇಂದು ಒಬ್ಬ ಟ್ರಾಫಿಕ್‌ ಕಾನ್‌ಸ್ಟೇಬಲ್‌ ಕೊಲೆಯಾದ. ಎರಡು ದಿನಗಳಲ್ಲಿ ಇದು ಎರಡನೆಯ ಕೊಲೆ. ಕಲ್ಕತ್ತ ಸಶಸ್ತ್ರ ಪೊಲಿಸ್‌ ಪಡೆಯ ಒಬ್ಬ ಹವಾಲ್ದಾರ್‌ ನಕ್ಸಲೀಯರಿಗೆ ನಿನ್ನೆ ಬಲಿಯಾದ.

ರಾಜ್ಯದ ಸಣ್ಣ ಹಿಡುವಳಿದಾರರಿಗೆ ಭೂ ಕಂದಾಯ ವಿನಾಯಿತಿ ಇಲ್ಲ

ಬೆಂಗಳೂರು, ಜುಲೈ 19– ರಾಜ್ಯದಲ್ಲಿ ಸಣ್ಣ ಹಿಡುವಳಿದಾರರಿಗೆ ಭೂಕಂದಾಯ ರದ್ದುಪಡಿಸುವ ಸಲಹೆ ಸರ್ಕಾರದಲ್ಲಿ ಇಲ್ಲ ಎಂದು ಕಂದಾಯ ಸಚಿವ ಶ್ರೀ ಎನ್‌. ಹುಚ್ಚಮಾಸ್ತಿ ಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಹಣಕಾಸಿ ತೊಂದರೆಯಿಂದ ರದ್ದುಪಡಿಸಲು ಸಾಧ್ಯವಿಲ್ಲ. ಇದರಿಂದ 2ಕೋಟಿ ರೂಪಾಯಿ ಕಡಿಮೆ ಆಗುತ್ತೆ ಎಂದು ಭೂತಲಿಂಗಂ ಸಮಿತಿ ತಿಳಿಸಿರುವುದಲ್ಲದೇ, ರದ್ದು ಮಾಡುವುದು ಸೂಕ್ತವಲ್ಲ ಎಂದು ಸಲಹೆ ಮಾಡಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಸಚಿವರು ಶ್ರೀ ಎಂ.ವಿ. ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರ ನೀಡಿದರು.

ಕಂದಾಯ ರದ್ದು ಮಾಡಬೇಕೆಂದು ಸಾರ್ವಜನಿಕರಿಂದ ಹೆಚ್ಚಾಗಿ ಒತ್ತಾಯ ಬಂದಿಲ್ಲವಾದರೂ, ಸಾರ್ವಜನಿಕ ಪ್ರತಿನಿಧಿಗಳಿಂದ ಒತ್ತಾಯಪಡಿದುತ್ತಿದ್ದಾರೆಂದು ಶ್ರೀ ವೆಂಕಟಪ್ಪ ಅವರಿಗೆ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.