ADVERTISEMENT

ಕನ್ನಡಕ್ಕೆ ಬೂಕರ್ ಗರಿ: ಬಹು ಆಯಾಮದ ಅನುವಾದಕಿ ದೀಪಾ ಭಾಸ್ತಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 1:51 IST
Last Updated 22 ಮೇ 2025, 1:51 IST
<div class="paragraphs"><p>ಬಾನು&nbsp;ಮುಷ್ತಾಕ್ ಅವರೊಂದಿಗೆ&nbsp;ದೀಪಾ ಭಸ್ತಿ</p></div>

ಬಾನು ಮುಷ್ತಾಕ್ ಅವರೊಂದಿಗೆ ದೀಪಾ ಭಸ್ತಿ

   

ಚಿತ್ರಕೃಪೆ: X / @arunava

ಬೂಕರ್‌ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಹಣತೆಯನ್ನು ಬೆಳಗಿಸಿದ ಪತ್ರಕರ್ತೆ, ಲೇಖಕಿ, ಅನುವಾದಕಿ ದೀಪಾ ಭಾಸ್ತಿ ಕೊಡಗಿನವರು. ಮಡಿಕೇರಿಯಲ್ಲಿ ಹುಟ್ಟಿ, ಬೆಳೆದ ಅವರು ಕೊಡಗು ವಿದ್ಯಾಲಯದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮಾಡಿದರು. ನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನಲ್ಲಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದಷ್ಟು ಕಾಲ ಕೆಲಸ ಮಾಡಿದ ಅವರು ನಂತರ ಫ್ರೀಲ್ಯಾನ್ಸ್ ಲೇಖಕಿ, ಅನುವಾದಕಿ ಆದರು.

ADVERTISEMENT

ಇಂಡಿಯನ್ ಎಕ್ಸ್‌ಪ್ರೆಸ್, ಕ್ಯಾರವಾನ್, ಟೈಮ್ಸ್ ಆಫ್ ಇಂಡಿಯಾ, ಸ್ಕ್ರಾಲ್, ಓಪನ್ ಮುಂತಾದ ಪತ್ರಿಕೆಗಳಲ್ಲಿ ಅವರ ಸುದ್ದಿ/ಲೇಖನಗಳು ಪ್ರಕಟವಾಗಿವೆ; ಆರ್ಟ್ ರಿವ್ಯೂ, ದಿ ಗಾರ್ಡಿಯನ್, ಪ್ಯಾರಿಸ್ ರಿವ್ಯೂಗಳಲ್ಲಿ ಬರಹಗಳು ಪ್ರಕಟವಾಗಿವೆ. ದೀಪಾ ಅವರಿಗೆ ಸಾಹಿತ್ಯದಂತೆಯೇ ಕಲೆ, ಆಹಾರದ ಬಗೆಗೂ ಅಪಾರ ಆಸಕ್ತಿ. ಅವರು ಕಲಾ ವಿಮರ್ಶೆಯನ್ನೂ ಬರೆದಿದ್ದಾರೆ. 

ಅಜ್ಜನ ಗ್ರಂಥಾಲಯದಲ್ಲಿದ್ದ ಪುಸ್ತಕಗಳು, ಅಜ್ಜಿ, ಅಮ್ಮನ ಕಥೆಗಳಿಂದ ಸಾಹಿತ್ಯದ, ಕನ್ನಡ ಪರಂಪರೆಯ ಅರಿವನ್ನು ದಕ್ಕಿಸಿಕೊಂಡವರು ಭಾಸ್ತಿ. ಕನ್ನಡ ಕಾದಂಬರಿಗಳನ್ನು ಓದುತ್ತಾ ಬೆಳೆದ ಅವರಿಗೆ ಪತ್ರಿಕೋದ್ಯಮದ ಅನುಭವದ ನಂತರ ಅನುವಾದದ ಬಗ್ಗೆ ಆಸಕ್ತಿ ಮೂಡಿತು. ಶಿವರಾಮ ಕಾರಂತ ಅವರ ‘ಅದೇ ಊರು, ಅದೇ ಮರ’ ಕಾದಂಬರಿ ಹಾಗೂ ಕೊಡಗಿನ ಗೌರಮ್ಮ ಅವರ ಸಣ್ಣಕತೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.   

ಬೆಂಗಳೂರಿನಲ್ಲಿ ‘ಫೋರೇಜರ್ ಕಲೆಕ್ಟಿವ್’ ಎನ್ನುವ ಲೇಖಕಿಯರ, ಕಲಾವಿದರ ಗುಂಪನ್ನು ರೂಪಿಸಿ, ಅದರ ಮೂಲಕ ರಾಜಕಾರಣ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅದರ ಭಾಗವಾಗಿಯೇ ಆಹಾರದ ಸಾಂಸ್ಕೃತಿಕ ಹಾಗೂ ರಾಜಕೀಯ ಆಯಾಮಗಳ ಕುರಿತಂತೆ ‘ದಿ ಫೋರೇಜರ್’ ಎನ್ನುವ ಆನ್‌ಲೈನ್ ಪಾಕ್ಷಿಕ ‍ಪತ್ರಿಕೆಯನ್ನು ಹೊರತರುತ್ತಿದ್ದರು. 

ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಕೆಲವು ಕಥೆಗಳನ್ನು ಅನುವಾದಿಸಿ, ಅದಕ್ಕೆ ಬ್ರಿಟನ್‌ನ ಸಂಸ್ಥೆಯೊಂದು ಕೊಡಮಾಡುವ ‘ಇಂಗ್ಲಿಷ್ ಪೆನ್’ ಅನುವಾದ ಪ್ರಶಸ್ತಿ ದೊರಕಿತ್ತು.

ಬಾನು ಮುಷ್ತಾಕ್ ಅವರ ಕಥೆಗಳಲ್ಲಿನ ಸಾಮಾಜಿಕ ಪ್ರಜ್ಞೆ, ಮಹಿಳಾ ನೋಟ ಮತ್ತು ರಾಜಕೀಯ ತಮ್ಮ ವ್ಯಕ್ತಿತ್ವಕ್ಕೆ ಹತ್ತಿರವಾದವು; ಬರವಣಿಗೆಯಂತೆಯೇ ಅನುವಾದವೂ ಒಂದು ರಾಜಕೀಯ ಕ್ರಿಯೆ ಎನ್ನುವುದು ದೀಪಾ ಅವರ ಅಭಿಪ್ರಾಯ. ತಮ್ಮ ಪತಿ ಕಲಾವಿದ, ರೈತ ಚೆಟ್ಟೀರ ಸುಜನ್ ನಾಣಯ್ಯ ಅವರೊಂದಿಗೆ ದೀಪಾ ಅವರು ಮಡಿಕೇರಿಯಲ್ಲಿ ನೆಲಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.