ADVERTISEMENT

ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ

ವಿಶಾಖ ಎನ್.
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
<div class="paragraphs"><p>ಸರೋಜಾದೇವಿ</p></div>

ಸರೋಜಾದೇವಿ

   

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ರಾಜ್‌ಕುಮಾರ್ ಸ್ಮಾರಕ ಪ್ರಾರಂಭೋತ್ಸವದಲ್ಲಿ ನಟರಾದ ಅಂಬರೀಷ್, ಚಿರಂಜೀವಿ, ರಜನಿಕಾಂತ್, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆವಿಶಾಲ ಕಣ್ಣು. ಬಲಗಣ್ಣಿನ ಕೆಳಗೊಂದು ಕಾಡುವ ಮಚ್ಚೆ. ಕಣ್ಣಿಗೆ ಢಾಳು ಕಾಡಿಗೆಯ ಚೌಕಟ್ಟು. ನೆರಿಗೆಗಳನ್ನೆಲ್ಲ ಮುಚ್ಚಲೇಬೇಕೆಂಬ ಹಟಕ್ಕೆ ಬಿದ್ದಂತಹ ಮೇಕಪ್. ಮಾತಿನಲ್ಲಿ ಸದಾ ಗತ್ತು, ಸೂಪರ್‌ಸ್ಟಾರ್‌ಗಿರಿಯನ್ನು ಉಜ್ಜುವಂತಹ ಧೋರಣೆ...

ನಟಿ ಬಿ. ಸರೋಜಾದೇವಿ ಪ್ರಕಟಗೊಳ್ಳುತ್ತಿದ್ದ ಬಗೆ ಇದು.

ADVERTISEMENT

ಇಪ್ಪತ್ತೊಂಬತ್ತು ವರ್ಷ ಸತತವಾಗಿ ಬಹುಭಾಷಾ ಚಿತ್ರಗಳಲ್ಲಿ ನಾಯಕಿಯಾಗಿ ಮೆರೆದ ಅಭಿನೇತ್ರಿಗೆ ಅಂತಹ ಗತ್ತು ಇರುವುದು ಅಸಹಜವೇನೂ ಅಲ್ಲ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಅಷ್ಟೆಲ್ಲ ಗತವೈಭವ ಕಂಡುಂಡ, ನಾಲ್ಕು ದಶಕ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಸರೋಜಾದೇವಿ ಅವರಿಗೆ ‘ಅಭಿನಯ ಸರಸ್ವತಿ’ ಎನ್ನುವ ಬಿರುದು ಇದೆ. ಅವರನ್ನು ಹತ್ತಿರದಿಂದ ಕಂಡವರು ದೈವೀಸ್ವರೂಪವನ್ನೇ ನೋಡಿದಂತೆ ಕೈಮುಗಿದ ಪ್ರಸಂಗಗಳು ಒಂದೆರಡಲ್ಲ. ಕಿತ್ತೂರಿಗೆ ಒಮ್ಮೆ ಅವರು ಹೋದಾಗ, ಚೆನ್ನಾಗಿ ಅಲಂಕಾರ ಮಾಡಿ, ಅವರಲ್ಲಿಯೇ ಚೆನ್ನಮ್ಮನನ್ನು ನೋಡಿ ಆ ಊರಿನ ಜನರು ಕೃತಾರ್ಥರಾಗಿದ್ದರು. ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಅಥವಾ ಪ್ರತಿಮೆ ಕಟೆದ ಶಿಲ್ಪಿಗಳ ಮನದಲ್ಲಿ ಇವರದ್ದೇ ಚಹರೆ ಮೂಡಿದ್ದು ನಟಿಯಾಗಿ ಇವರು ಒತ್ತಿರುವ ಛಾಪಿಗೆ ಉದಾಹರಣೆಯಷ್ಟೆ.

‘ಕನ್ನಡತ್ತು ಪೈಂಗಿಳಿ’ (ಕನ್ನಡದ ಅರಗಿಣಿ) ಎಂದೇ ತಮಿಳುನಾಡು ಇವರನ್ನು ಕೊಂಡಾಡಿದೆ. ಆ ಬಿರುದಿನಲ್ಲಿಯೂ ಇರುವುದು ಕನ್ನಡದ ಬೇರು.

ಬಿ. ಸರೋಜಾದೇವಿ ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ. ಓದಿದ್ದು ಬೆಂಗಳೂರಿನ ಸೇಂಟ್ ಥೆರೆಸಾ ಶಾಲೆಯಲ್ಲಿ. ‘ಶ್ರೀರಾಮ ಪೂಜಾ’ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದರು. ಅದು ಚಿತ್ರರಂಗಕ್ಕೆ ಅವರ ಮೊದಲ ಪ್ರವೇಶ.

ಬಾಲ್ಯದಿಂದಲೂ ಅವರಿಗೆ ಹಾಡು, ನೃತ್ಯ ಎಂದರೆ ಮೆಚ್ಚು. ಒಮ್ಮೆ ಬೆಂಗಳೂರಿನ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಲತಾ ಮಂಗೇಷ್ಕರ್ ಕಂಠದ ಹಿಂದಿ ಗೀತೆಯೊಂದನ್ನು ಸರೋಜಾದೇವಿ ಹಾಡಿದರು. ಹೊನ್ನಪ್ಪ ಭಾಗವತರ್ ಅದನ್ನು ನೋಡಿದರು. ಮೊದಲಿಗೆ, ಹಿನ್ನೆಲೆ ಗಾಯಕಿಯಾಗುವ ಅರ್ಹತೆ ಈ ಹುಡುಗಿಗೆ ಇದೆ ಎಂದು ಹೊನ್ನಪ್ಪ ಅವರಿಗೆ ಅನಿಸಿತು. ಹತ್ತಿರದಿಂದ ನೋಡಿದ ಮೇಲೆ, ಇಷ್ಟು ದೊಡ್ಡ ಕಣ್ಣುಗಳಿರುವ ಹುಡುಗಿ ನಟಿಯೇ ಯಾಕಾಗಬಾರದು ಎಂದೆನಿಸಿ, ‘ಮಹಾಕವಿ ಕಾಳಿದಾಸ’ ಚಿತ್ರದ ನಟನೆಗೆ ಆಹ್ವಾನವಿತ್ತರು. ಕು.ರಾ. ಸೀತಾರಾಮ ಶಾಸ್ತ್ರಿ ಆ ಸಿನಿಮಾದ ನಿರ್ದೇಶಕರಷ್ಟೇ ಅಲ್ಲದೆ, ಸಂಪೂರ್ಣ ನಿರ್ವಹಣೆ ವಹಿಸಿಕೊಂಡಿದ್ದರು. ಮೇಕಪ್ ಸುಬ್ಬಣ್ಣ ಸರೋಜಾದೇವಿ ಅವರ ಹೆಸರನ್ನು ಮೊದಲು ಸೂಚಿಸಿದ್ದರಿಂದ ಇಷ್ಟೆಲ್ಲ ಆಯಿತು. ಆಗಿನ್ನೂ ಶಾಲೆಯಲ್ಲಿ ಕಲಿಯುತ್ತಿದ್ದ ಪ್ರತಿಭೆಗೆ ಸಾಣೆ ಹಿಡಿದದ್ದು ಸೀತಾರಾಮ ಶಾಸ್ತ್ರಿ.

ಸರೋಜಾದೇವಿ ಅವರು ತಾಯಿ ರುದ್ರಮ್ಮನವರ ಇಷ್ಟದ ಕೂಸು. ತಂದೆ ಬೈರಪ್ಪನವರಿಂದ ಶಿಸ್ತನ್ನೂ ಕಲಿತಿದ್ದರು. ಸಿನಿಮಾ ಎಂದರೆ ತಾಯಿಗೆ ಪಂಚಪ್ರಾಣ. ಮಗಳಿಗೋ ಶಾಲೆಯ ಮೇಲೆ ಒಲವು. ಹೀಗಾಗಿ ಸಿನಿಮಾದಲ್ಲಿ ನಟಿಸುವ ಅವಕಾಶ ಆ ದಿನಮಾನದಲ್ಲಿ ರೋಚಕವಾಗಿಯೇನೂ ಕಂಡಿರಲಿಲ್ಲ. ಅದೊಂದು ಸಿನಿಮಾದಲ್ಲಿ ನಟಿಸಿ, ಶಾಲೆಗೆ ಮರಳಿದರಾಯಿತು ಎಂದು ತಾಯಿ ತಲೆ ನೇವರಿಸಿದರು. ‘ಮಹಾಕವಿ ಕಾಳಿದಾಸ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಅವಕಾಶಗಳ ದಿಡ್ಡಿ ಬಾಗಿಲು ತೆರೆಯಲು ಇನ್ನೇನು ಬೇಕು?

ಅದಾಗಿ ಮರುವರ್ಷ ‘ಕಚದೇವಯಾನಿ’ ಸಿನಿಮಾ ಚಿತ್ರೀಕರಣ ಆಗಿನ ಮದ್ರಾಸ್‌ನ ಸ್ಟುಡಿಯೊದಲ್ಲಿ ನಡೆಯುತ್ತಿತ್ತು. ಅಲ್ಲಿಗೆ ಒಬ್ಬರು ಬಂದರು. ಅವರು ಬಂದೊಡನೆ ಅಲ್ಲಿದ್ದವರೆಲ್ಲ ಎದ್ದು ನಿಂತು, ಗೌರವ ಸೂಚಿಸಿದರು. ಈ ಹುಡುಗಿಯನ್ನು ನೋಡಿದ ಅವರು, ಕನ್ನಡದಲ್ಲಿ ‘ಚೆನ್ನಾಗಿ ಇದ್ದೀಯ’ ಎಂದು ಹೇಳಿ ಹೊರಟರು. ಆಗ ಸರೋಜಾದೇವಿ ಅವರಿಗೆ ಅವರು ಯಾರೆನ್ನುವುದು ಕೂಡ ಗೊತ್ತಿರಲಿಲ್ಲ. ಕನ್ನಡದಲ್ಲಿಯೂ ಮಾತನಾಡಬಲ್ಲವರಾಗಿದ್ದ ಎಂ.ಜಿ. ರಾಮಚಂದ್ರನ್ (ಎಂ.ಜಿ.ಆರ್) ಈ ಹುಡುಗಿಗೆ ಒಂದು ಸನ್ನಿವೇಶದ ಟೆಸ್ಟ್ ಕೊಟ್ಟರು– ಪಟವೊಂದನ್ನು ಹಿಡಿದು ನೋಡುತ್ತಾ, ಭಾವಾವೇಶದಲ್ಲಿ ಅದನ್ನು ಕೆಳಕ್ಕೆ ಕೆಡವಿ, ಒಂದು ಸುತ್ತು ಹಾಕಬೇಕು. ಪಟ ಕೆಡವಿದ ಮೇಲೆ ಅದರ ಗಾಜು ಚೆಲ್ಲಾಪಿಲ್ಲಿಯಾಯಿತು. ಸರೋಜಾದೇವಿ ಅದರ ಮೇಲೆಯೇ ನಡೆದಾಡಿಬಿಟ್ಟರು. ತಕ್ಷಣವೇ ಆಕೆಯನ್ನು ತಡೆದು, ಪಾದಗಳನ್ನು ಕೈಯಲ್ಲಿ ಹಿಡಿದು, ಪಾದಕ್ಕೆ ನಾಟಿದ್ದ ಗಾಜಿನ ಚೂರನ್ನು ಹೊರತೆಗೆದು, ಬಟ್ಟೆ ಕಟ್ಟಿದರು. ಸರೋಜಾದೇವಿ ತಾವು ಅವರಲ್ಲಿ ಮಾನವೀಯತೆಯ ಒರತೆಯನ್ನು ಆಗ ಕಂಡಿದ್ದಾಗಿ ಹೇಳಿಕೊಳ್ಳುತ್ತಲೇ ಇದ್ದರು. ಆ ಭೇಟಿಯ ನಂತರ ‘ನಾಡೋಡಿ ಮನ್ನನ್’ (1956) ತಮಿಳು ಸಿನಿಮಾದಲ್ಲಿ ಸರೋಜಾದೇವಿ ನಾಯಕಿಯಾದರು.

ಸರೋಜಾದೇವಿ

ಕನ್ನಡವೇ ಬೇರು

ಬೇರೆ ಭಾಷೆಗಳಲ್ಲಿ ಅವಕಾಶದ ಚಿಗುರು ಮೂಡಿದರೂ ಕನ್ನಡದ ಬೇರನ್ನು ಅವರು ಮರೆಯಲಿಲ್ಲ. ರಾಜ್‌ಕುಮಾರ್, ಉದಯಕುಮಾರ್, ಕಲ್ಯಾಣ್‌ಕುಮಾರ್ ಅವರೊಟ್ಟಿಗೆ ಅಭಿನಯ ಮುಂದುವರಿಸಿದರು. ರಾಜ್‌ಕುಮಾರ್ ಜೋಡಿಯಾಗಿ ಈ ನಟಿಯ ನೆನಪು ಈಗಲೂ ಹಸಿರು. ‘ಅಣ್ಣ ತಂಗಿ’ ಚಿತ್ರದಲ್ಲಿನ ದೇಸಿ ಸೊಗಡಿನ ಮಾತಿನಲ್ಲಿ ಇಬ್ಬರದ್ದೂ ಜುಗಲ್ಬಂದಿ. ‘ಭಾಗ್ಯವಂತರು’ ಚಿತ್ರದಲ್ಲಿನ ಭಾವತೀವ್ರತೆಯ ಕ್ಷಣಗಳನ್ನು ಇಬ್ಬರೂ ಜೀವಿಸಿರುವುದು ಚಿತ್ತಾಪಹಾರಿ. ‘ಮಲ್ಲಮ್ಮನ ಪವಾಡ’, ‘ಬಬ್ರುವಾಹನ’ ಇವೆಲ್ಲವೂ ಸರೋಜಾದೇವಿ ನಟನಾಸಾಮರ್ಥ್ಯದ ನಮೂನೆಗಳು. ಕಿತ್ತೂರು ರಾಣಿ ಚೆನ್ನಮ್ಮನಾಗಿ ಅವರು ‘ನಿಮಗೇಕೆ ಕೊಡಬೇಕು ಕಪ್ಪ’ ಎಂದು ಹೇಳಿರುವ ಸಂಭಾಷಣೆಯನ್ನು ಇವತ್ತಿಗೂ ಮಕ್ಕಳು ಕಣ್ಣಿಗೊತ್ತಿಕೊಂಡಂತೆ ಅಭಿನಯಿಸಿ ತೋರುತ್ತಿದ್ದಾರೆ.

ಎಂ.ಜಿ.ಆರ್. ಸಿನಿಮಾಗಳ ನಾಯಕಿಯರಿಗೆ ಆಗ ಶಿವಾಜಿ ಗಣೇಶನ್ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಗುತ್ತಿರಲಿಲ್ಲ. ಆದರೆ, ಸರೋಜಾದೇವಿ ವಿಷಯದಲ್ಲಿ ಹಾಗೆ ಆಗಲಿಲ್ಲ. ಅವರು ಶಿವಾಜಿ ಚಿತ್ರಗಳಲ್ಲೂ ಅಭಿನಯಿಸಿದರು. ಅಷ್ಟೇ ಏಕೆ, ಮುಂದುವರಿದು ತಮಿಳುನಾಡಿನ ವಿಜಯ್, ಸೂರ್ಯ ಸಿನಿಮಾಗಳಲ್ಲಿಯೂ ಅಭಿನಯಿಸಿ ತಮ್ಮ ಗತವೈಭವವನ್ನು ಮತ್ತೆ ಅನುಭವಿಸಿ ಬಂದರು.

ತಮಿಳಿನಿಂದ ತೆಲುಗಿಗೆ ಗಾಳಿ ಬೀಸಿತು. ಅಕ್ಕಿನೇನಿ ನಾಗೇಶ್ವರರಾವ್, ಎನ್.ಟಿ. ರಾಮರಾವ್ (ಎನ್.ಟಿ.ಆರ್) ಅವರಿಗೂ ನಾಯಕಿಯಾದರು.

ಸರೋಜಾದೇವಿ ಅವರ ಸೌಂದರ್ಯ ಹಾಗೂ ಅಭಿನಯದ ಟೈಮಿಂಗ್ ಜನಪ್ರಿಯವಾದದ್ದೇ ಹಿಂದಿ ಚಿತ್ರರಂಗಕ್ಕೂ ಆಹ್ವಾನ ಬಂದಿತು. ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಚಿತ್ರಗಳಲ್ಲಿ ನಾಯಕಿಯ ಪಾತ್ರಗಳು ಸಿಕ್ಕವು.

ಬೆಂಗಳೂರಿನಲ್ಲಿ ನಡೆದಿದ್ದ ಗುಬ್ಬಿ ವೀರಣ್ಣ ಅವರ ಜನ್ಮಶತಮಾನೋತ್ಸವ (1991) ಕಾರ್ಯಕ್ರಮದಲ್ಲಿ ವರನಟ ರಾಜ್‌ಕುಮಾರ್ ಅವರೊಂದಿಗೆ ಸರೋಜಾದೇವಿ

ಭರ್ಜರಿ ಫಾರ್ಮ್

ಎಂ.ಜಿ.ಆರ್ ಜೋಡಿಯಾಗಿ 26, ಶಿವಾಜಿ ನಾಯಕಿಯಾಗಿ 22 ಸಿನಿಮಾಗಳಲ್ಲಿ ಸರೋಜಾದೇವಿ ನಾಯಕಿಯಾಗಿ ನಟಿಸಿದ್ದು ಅವರ ಅಭಿನಯದ ಇನಿಂಗ್ಸ್‌ನ ಭರ್ಜರಿ ಫಾರ್ಮ್‌ಗೆ ಹಿಡಿದ ಕನ್ನಡಿ.

ಕಳೆದ ಎರಡು ದಶಕಗಳಿಂದ ಸರೋಜಾದೇವಿ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ‘ನಟಸಾರ್ವಭೌಮ’ ಅವರ ನಟನೆಯ ಕೊನೆಯ ಸಿನಿಮಾ. ಪುನೀತ್ ರಾಜ್‌ಕುಮಾರ್ ಜೊತೆ ‘ಯಾರಿವನು’ ಸಿನಿಮಾದಲ್ಲಿ ನಟಿಸಿದ್ದಾಗಲೇ, ‘ಆ ಹುಡುಗ ಮುಂದೆ ಬೆಳೆಯುತ್ತಾನೆ’ ಎಂದು ಭವಿಷ್ಯ ನುಡಿದಿದ್ದ ಪ್ರಾಂಜಲ ಮನಸ್ಸು ಅವರದ್ದು. ರಾಜ್ ಕುಟುಂಬದ ಜೊತೆಗೆ ನಿಕಟವಾದ ನಂಟು ಇತ್ತು.

ಅಭಿನಯದ ಉತ್ತುಂಗದಲ್ಲಿ ಇರುವಾಗಲೇ ಮನೆಯವರು ತೋರಿಸಿದ ಶ್ರೀಹರ್ಷ ಅವರನ್ನು ಸರೋಜಾದೇವಿ 1967ರಲ್ಲಿ ಮದುವೆಯಾದರು. ಹಣಕಾಸು ವ್ಯವಹಾರದ ಸಮಸ್ಯೆಗೆ ಪತ್ನಿ ಸಿಲುಕಿದಾಗ, ಕೈಹಿಡಿದು ದಾರಿ ತೋರಿದವರು ಶ್ರೀಹರ್ಷ. 1986ರಲ್ಲಿ ಅವರು ಹೃದಯಾಘಾತದಿಂದ ತೀರಿಕೊಂಡರು. ಭುವನೇಶ್ವರಿ ಎಂಬ ದತ್ತುಪುತ್ರಿ ಸರೋಜಾದೇವಿ ಅವರಿಗೆ ಇದ್ದರು. ಇಂದಿರಾದೇವಿ, ಗೌತಮ್ ಎಂಬವರನ್ನೂ ತಮ್ಮ ಮಕ್ಕಳು ಎಂದೇ ಅವರು ಹೇಳಿಕೊಳ್ಳುತ್ತಿದ್ದರು.

ತಾವು ತುಂಬಾ ಇಷ್ಟಪಡುತ್ತಿದ್ದ ತಾಯಿಯನ್ನು ಕಳೆದುಕೊಂಡ ಮೇಲೆ ಸರೋಜಾದೇವಿ ಅವರಲ್ಲಿ ಶೂನ್ಯ ಆವರಿಸಿಕೊಂಡಿತ್ತು. ಪತಿ ಅಗಲಿದ ಮೇಲೆ ಸಂಕಷ್ಟಗಳ ಸರಮಾಲೆ ಎದುರಾಯಿತು ಎಂದೂ ಅವರು ಹೇಳಿಕೊಂಡಿದ್ದರು.

ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರಗಳು, ರಾಜ್ಯೋತ್ಸವ ಪ್ರಶಸ್ತಿ, ಎಂ.ಜಿ.ಆರ್. ಪ್ರಶಸ್ತಿ, ಎನ್.ಟಿ.ಆರ್. ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದ ಅವರನ್ನು ತಮಿಳುನಾಡಿನ ಅಭಿಮಾನಿಗಳು ಇಳಿಗಾಲದಲ್ಲೂ ಕೊಂಡಾಡುತ್ತಲೇ ಇದ್ದರು. ಹುಟ್ಟೂರಿನ ಸರ್ಕಾರಿ ಶಾಲೆಯನ್ನು ಪುನರುಜ್ಜೀವನಗೊಳಿಸಿದ್ದೇ ಅಲ್ಲದೆ, ಕೆಲವು ಆಸ್ಪತ್ರೆಗಳಿಗೂ ಸರೋಜಾದೇವಿ ನೆರವು ನೀಡಿದ್ದರು.

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ಅವರು ತಮ್ಮ ವಯಸ್ಸನ್ನು ಹೇಳಲು ಅನುಮತಿ ಕೊಟ್ಟಿರಲಿಲ್ಲ. ಸರ್ವಾಲಂಕಾರಭೂಷಿತೆಯಾಗಿಯೇ ಕಾಣಿಸಿಕೊಳ್ಳಲು ಬಯಸುತ್ತಿದ್ದ ಅವರಲ್ಲಿ ಸದಾ ಜೀವಂತಿಕೆ ಹಾಗೂ ಹೆಮ್ಮೆ ತುಂಬಿ ತುಳುಕುತ್ತಿತ್ತು.

ಬೊಗಸೆಕಂಗಳಲ್ಲೇ ಭಾವಸ್ಫುರಿಸುತ್ತಿದ್ದ ಸೂಪರ್ ಸ್ಟಾರ್ ನಟಿ ಇನ್ನು ನೆನಪಿನ ಅಧ್ಯಾಯವಾಗಿದ್ದಾರೆ. ಅವರು ಉಳಿಸಿರುವ ಸಿನಿಮಾಗಳು ಉಸಿರಾಡುತ್ತಲೇ ಇರುತ್ತವೆ.

ಶ್ರೀಹರ್ಷ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣ (1.3.1967)

ಪ್ರಮುಖ ಚಿತ್ರಗಳು

ಕನ್ನಡ: ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ವಿಜಯನಗರದ ವೀರಪುತ್ರ, ಲಕ್ಷ್ಮೀ, ಸರಸ್ವತಿ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಾ, ಶ್ರೀ ಶ್ರೀನಿವಾಸ ಕಲ್ಯಾಣ

ತಮಿಳು: ನಾಡೋಡಿ ಮನ್ನನ್, ಅನ್ಬೇವಾ, ಎಂಗವೀಟ್ಟು ವಿಳ್ಳೈ, ತಿರುಡಾದೆ, ಪಡಕೋಟಿ, ಆಲಯಮಣಿ, ಪಾಲುಂ ಪಳಮುಂ, ಪುದಿಯ ಪರವೈ

ತೆಲುಗು: ಭೂಕೈಲಾಸ್, ಪೆಳ್ಳಿ ಸಂದಡಿ, ಇಂಟಿಕಿ ದೀಪಂ ಇಲ್ಲಾಲೆ, ಜಗದೇಕ ವೀರುನಿ ಕಥಾ, ಶ್ರೀ ಸೀತಾರಾಮ ಕಲ್ಯಾಣಂ, ಮಂಚಿ ಚೆಡು, ಶಕುಂತಲಾ, ಭಾಗ್ಯಚಕ್ರಮು

ಹಿಂದಿ: ಒಪೆರಾ ಹೌಸ್, ಪರೀಕ್ಷಾ, ಪ್ಯಾರ್ ಕಿಯಾ ತೊ ಡರ್ನಾ ಕ್ಯಾ, ಪ್ರೀತ್ ನ ಜಾನೆ ರೀತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.