ADVERTISEMENT

SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ

ಬದುಕಿನ ಪರ್ವ ಮುಗಿಸಿದ ಭೈರಪ್ಪ

ಬಾನು ಮುಷ್ತಾಕ್
Published 25 ಸೆಪ್ಟೆಂಬರ್ 2025, 0:30 IST
Last Updated 25 ಸೆಪ್ಟೆಂಬರ್ 2025, 0:30 IST
<div class="paragraphs"><p>ಎಸ್‌.ಎಲ್‌.ಭೈರಪ್ಪ</p></div>

ಎಸ್‌.ಎಲ್‌.ಭೈರಪ್ಪ

   

ಆವರಣ ಕಾದಂಬರಿ ಬರೆಯುವುದಕ್ಕೂ ಮೊದಲು ಎಸ್‌.ಎಲ್‌.ಭೈರಪ್ಪನವರು ಹಾಸನದಲ್ಲಿ ಒಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾನು ಆ ಕಾರ್ಯಕ್ರಮಕ್ಕೆ ತಡವಾಗಿ ಹೋಗಿದ್ದೆ. ಅಲ್ಲಿದ್ದ ಕೆಲವರು, ಭೈರಪ್ಪ ಅವರು ನನ್ನ ಬಗ್ಗೆ ವಿಚಾರಿಸಿದರು ಎಂದರು. ಕಾರ್ಯಕ್ರಮದ ನಂತರ ಅವರನ್ನು ಭೇಟಿಯಾದೆ. ಆಗ ಅವರು,  ‘ನಾನು ನಿಮ್ಮ ಮನೆಗೆ ಬರಬೇಕು ಎಂದಿದ್ದೇನೆ. ಆದರೆ, ಈಗಲೇ ಬರುವುದಿಲ್ಲ. ನಿಮ್ಮ ಮನೆಗೆ ಬಂದು ಒಂದು ವಾರ ಉಳಿಯುತ್ತೇನೆ’ ಎಂದರು. ಆಗ ನನಗೆ ಗಲಿಬಿಲಿಯಾದರೂ, ಕೆಲ ದಿನಗಳ ನಂತರ ಆ ವಿಷಯ ಮರೆತುಬಿಟ್ಟಿದ್ದೆ.

ತಿಂಗಳ ನಂತರ ನಮ್ಮ ಮನೆಯ ಲ್ಯಾಂಡ್‌ಲೈನ್‌ ಫೋನ್‌ಗೆ ಒಂದು ಕರೆ ಬಂತು. ಆಕಡೆಯಿಂದ ಎಸ್‌.ಎಲ್‌.ಭೈರಪ್ಪ ಅವರು ಮಾತನಾಡುತ್ತಿದ್ದರು. ಇಂತಹ ದಿನ ನಿಮ್ಮ ಮನೆಗೆ ಬರುತ್ತೇನೆ, ಇಷ್ಟು ದಿನ ಇರುತ್ತೇನೆ ಎಂದು ಮಾಹಿತಿ ನೀಡಿದರು. ನನಗೆ  ಗಾಬರಿಯಾಯಿತು. ಅವರಿಗೆ ಉಪಚಾರದ ವ್ಯವಸ್ಥೆ ಹೇಗೆ ಮಾಡಿಕೊಳ್ಳಬೇಕು ಎಂಬುದು ಗೊತ್ತಾಗದೆ ಗಲಿಬಿಲಿಯಾದೆ. ಅವರಿಗೆ ಕರೆ ಮಾಡಿ, ಯಾವ ರೀತಿಯ ವ್ಯವಸ್ಥೆ ಬೇಕು ಎಂದು ಕೇಳಿದೆ. ಭೈರಪ್ಪ ಅವರು, ‘ನಾನು ಮಾಂಸಾಹಾರಕ್ಕೆ ಒಗ್ಗಿಕೊಂಡಿಲ್ಲ. ಸಸ್ಯಾಹಾರವಾದರೆ ಸಾಕು. ನಿಮ್ಮ ಅಡುಗೆ ಮನೆಯಲ್ಲಿ ನಿಮಗೆ ಮಾಡಿಕೊಳ್ಳುವ ಸಸ್ಯಾಹಾರವನ್ನೇ ನನಗೂ ನೀಡಿದರೆ ಸಾಕು’ ಎಂದರು.

ADVERTISEMENT

ದಿನವೂ ಮಾಂಸಾಹಾರ ತಿನ್ನುವ ನಮ್ಮ ಮನೆಯಲ್ಲಿನ ಫ್ರಿಜ್‌ನಲ್ಲಿದ್ದ ಎಲ್ಲ ಮಾಂಸಾಹಾರವನ್ನು ಬಳಸಿ, ಖಾಲಿ ಮಾಡಿದೆ. ಫ್ರಿಜ್‌ ಸ್ವಚ್ಛಗೊಳಿಸಿ, ತಾಜಾ ತರಕಾರಿಗಳನ್ನು ತುಂಬಿಸಿದೆ. 15 ದಿನ ಮಾಂಸಾಹಾರ ಸಿಗುವುದಿಲ್ಲ ಎಂದು ಮಗ ತಾಹೀರ್‌ ಬಹಳ ತಕರಾರು ಮಾಡಿದ. ಅಜ್ಜಿಯ ಮನೆಗೆ ಹೋಗುತ್ತೇನೆ ಎಂದು ಬೆದರಿಕೆ ಹಾಕಿದ. ಅದ್ಯಾವುದಕ್ಕೂ ನಾವು ಬಗ್ಗದ ಕಾರಣ, ಸುಮ್ಮನಾದ. ನಮ್ಮ ಮನೆಯಲ್ಲಿ ಇದ್ದಷ್ಟೂ ದಿನ, ನನ್ನ ಅಡುಗೆ ಸಹಾಯಕಿ ಶಬಾನಾ ಮಾಡಿದ ತರಕಾರಿ ಪಲ್ಯ, ಸೊಪ್ಪಿನ ಸಾರನ್ನು ಭೈರಪ್ಪ ಅವರು ಬಹಳವಾಗಿ ಮೆಚ್ಚಿಕೊಂಡರು.

‘ಕಾದಂಬರಿ ಒಂದರ ವಸ್ತುವಿಗೆ ಮಾಹಿತಿ ಸಂಗ್ರಹಿಸಲು ಬಂದಿದ್ದೇನೆ. ಮುಸ್ಲಿಂ ಸಾಂಸ್ಕೃತಿಕ ಹಿನ್ನೆಲೆಯ ಮನೆಯ ವಾತಾವರಣ ಮತ್ತು ಮುಸ್ಲಿಂ ಕುಟುಂಬದ ನಡವಳಿಕೆಗಳನ್ನು ಅವಲೋಕಿಸಬೇಕಾಗಿದೆ’ ಎಂದು ತಿಳಿಸಿದರು. ಅವರ ಮಾತಿಗೆ ನಾನು ನಕ್ಕು, ‘ನಮ್ಮಲ್ಲಿ ಅಂತಹ ಸಾಂಸ್ಕೃತಿಕ ವಾತಾವರಣ ಸಿಗುವುದಿಲ್ಲ. ಅಂತಹ ನೈಜ ವಾತಾವರಣ ಸಿಗುವ ಮನೆಯಲ್ಲಿ ನಿಮಗೆ ಸ್ವಾಗತವಿರುವುದಿಲ್ಲ’ ಎಂದು ತಿಳಿಸಿದೆ. ಅವರು ನಮ್ಮ ಮನೆಯಲ್ಲೇ ಉಳಿಯುವುದಾಗಿ ತಿಳಿಸಿದರು.

ಖಬರಸ್ಥಾನ, ಮಸೀದಿ, ಮದರಸಾ ನೋಡಬೇಕು ಎಂದು ಭೈರಪ್ಪ ಅವರು ಕೇಳಿದರು. ಮುಷ್ತಾಕ್‌ (ಬಾನು ಅವರ ಪತಿ) ಅವರು ಭೈರಪ್ಪ ಅವರನ್ನು ಖಬರಸ್ಥಾನಕ್ಕೆ ಕರೆದುಕೊಂಡು ಹೋದರು. ಭೈರಪ್ಪ ಅವರು ಖಬರಸ್ಥಾನವನ್ನು ಹೊರಗಿನಿಂದಲೂ ನೋಡಿದರು, ಗೋರಿಗಳ ನಡುವಣ ಪ್ರತಿ ಸಾಲು ಮತ್ತು ಖಬರಸ್ಥಾನದ ಮೂಲೆ–ಮೂಲೆಯಲ್ಲೂ ಓಡಾಡಿದರು. ಒಂದು ಗೋರಿಯ ಬಳಿ ನಿಂತು, ‘ಗೋರಿಯ ಕಲ್ಲಿನ ಮೇಲೆ ಉರ್ದುವಿನಲ್ಲಿ ಏಕೆ ಬರೆದಿದ್ದಾರೆ’ ಎಂದು ಮುಷ್ತಾಕರನ್ನು ಕೇಳಿದರಂತೆ. ಅವರು ಬಹಳ ಗಲಿಬಿಲಿಯಾದರಂತೆ. ಮನೆಗೆ ಬಂದ ನಂತರ, ‘ನೀನೇ ಅವರ ಪ್ರಶ್ನೆಗೆ ಉತ್ತರಿಸು’ ಎಂದು ನನಗೆ ಹೊಣೆ ಹೊರಿಸಿದರು. ನಾವು ನೀಡುತ್ತಿದ್ದ ಪ್ರತಿ ವಿವರಣೆಯನ್ನೂ ಭೈರಪ್ಪ ಅವರು ನೋಟ್‌ ಮಾಡಿಕೊಳ್ಳುತ್ತಿದ್ದರು.

ಹೊಳೆನರಸೀಪುರದ ರಸ್ತೆಯಲ್ಲಿರುವ ಮಸೀದಿಯಲ್ಲಿ ಮಹಿಳೆಯರೂ ನಮಾಜ್‌ ಮಾಡಲು ಅವಕಾಶವಿತ್ತು. ನಾನು ಅಲ್ಲಿಗೆ ನಮಾಜ್‌ ಮಾಡಲು ಹೋಗುತ್ತಿದ್ದೆ. ಮುಷ್ತಾಕ್‌ ಅವರು ಭೈರಪ್ಪ ಅವರನ್ನು ಆ ಮಸೀದಿಗೆ ಕರೆದುಕೊಂಡು ಹೋದರು. ಎಲ್ಲರಂತೆ ಅವರೂ ಕೈಕಾಲು ತೊಳೆದು, ಮಸೀದಿಯೊಳಗೆ ಹೋದರು. ಒಂದೆಡೆ ಕೂತು, ಇತರರು ನಮಾಜ್‌ ಮಾಡುವ ಬಗೆಯನ್ನು ಗಮನವಿಟ್ಟು ನೋಡಿದರು. ತಾವು ಗಮನಿಸಿದ್ದೆಲ್ಲವನ್ನೂ ನೋಟ್‌ ಮಾಡಿಕೊಳ್ಳುತ್ತಿದ್ದರು. ಮುಸ್ಲಿಮರ ಧಾರ್ಮಿಕ ವಿದ್ಯಾಸಂಸ್ಥೆಯನ್ನು ನೋಡಬೇಕು ಎಂದು ಕೇಳಿದಾಗ, ಮುಷ್ತಾಕ್‌ ಅವರು ಆಲೂರಿನಲ್ಲಿದ್ದ ವಿದ್ಯಾಸಂಸ್ಥೆಗೆ ಅವರನ್ನು ಕರೆದೊಯ್ದರು. ಅಲ್ಲಿನ ಶಿಕ್ಷಣ, ಬೋಧನೆ, ಇತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ನೋಟ್‌ ಮಾಡಿಕೊಂಡರು.

ಆಗೆಲ್ಲಾ ಜನರು ಮೊಬೈಲ್‌ಗೆ ಈಗಿನಷ್ಟು ಅಂಟಿಕೊಂಡಿರಲಿಲ್ಲ. ಭೈರಪ್ಪನವರೂ ನಮ್ಮೊಂದಿಗೆ ಒಟ್ಟಿಗೇ ಊಟಕ್ಕೆ ಕೂರುತ್ತಿದ್ದರು. ಅಂದಂದು ಅವರು ಸಂಗ್ರಹಿಸಿದ ಮಾಹಿತಿಗಳ ಬಗ್ಗೆ ನಮ್ಮೊಂದಿಗೆ ಚರ್ಚಿಸುತ್ತಿದ್ದರು. ಚರ್ಚೆ ಬಹಳ ಗಂಭೀರವಾಗಿ, ದೀರ್ಘವಾಗಿರುತ್ತಿತ್ತು. ಐಎಎಸ್‌ಗೆ ತಯಾರಿ ನಡೆಸುತ್ತಿದ್ದ ಸಮೀನಾಳೊಂದಿಗೆ ಭಾರತದ ಇತಿಹಾಸದ ಬಗ್ಗೆ ಚರ್ಚಿಸುತ್ತಿದ್ದರು. ಹೀಗೆ ಒಂದು ವಾರ ಅವರು ನಮ್ಮೊಂದಿಗೆ ಇದ್ದರು. ಆದರೆ, ಮುಸ್ಲಿಮರ ನೈಜ ಸಾಂಸ್ಕೃತಿಕ ಬದುಕು ಅವರಿಗೆ ಅಗೋಚರವಾಗಿಯೇ ಉಳಿಯಿತು. ಒಂದು ವಾರದಲ್ಲಿ ಒಂದು ಸಮುದಾಯವನ್ನು ಅರಿತುಕೊಳ್ಳುವುದು ಕಷ್ಟದ ಕೆಲಸ. ಆದರೆ, ಅವರ ತೀವ್ರ ಕುತೂಹಲ, ವಿಷಯ ಸಂಗ್ರಹಣೆಯ ದಾಹ ಮತ್ತು ಅಪರಿಚಿತ ಲೋಕಗಳ ಅನುಭವ ಗಳಿಸುವ ತೀವ್ರತೆ ಬಹಳ ವಿಶಿಷ್ಟವಾದುದು.

‘ಕಾದಂಬರಿಯಲ್ಲಿ ಉಲ್ಲೇಖಿಸಿದ ಸೋದರಿ ನಾನೇ’

ಅವರು ಮುಸ್ಲಿಂ ಲೋಕದ ಹೊರ ತೊಗಟೆಯ ಅರಿವನ್ನಷ್ಟೇ ಪಡೆಯುತ್ತಿದ್ದಾರೆ. ಅದರ ಅನುಭವವನ್ನು ಪಡೆಯುವಲ್ಲಿ ಸೋಲುತ್ತಿದ್ದಾರೆ ಎಂದು ಅನಿಸುತ್ತಿತ್ತು. ಮುಸ್ಲಿಮರ ಬಗೆಗೆ ಅವರ ಗ್ರಹಿಕೆ ಬರವಣಿಗೆಗಳಲ್ಲಿ ಮುಸ್ಲಿಂ ವಿರೋಧಿ ನಿಲುವು ನೆನಪಾಗಿ ಅವರು ನಮ್ಮೊಂದಿಗೆ ಸಂಗ್ರಹಿಸಿದ ಮಾಹಿತಿಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದೆ. ಆನಂತರ ‘ಆವರಣ’ ಪ್ರಕಟವಾಯಿತು. ಭೈರಪ್ಪ ಅವರು ತಮ್ಮ ಕೆಲವು ಪೂರ್ವನಿರ್ಧರಿತ ಪ್ರಮೇಯಗಳಿಗೆ ಅನುಕೂಲವಾಗುವ ಮತ್ತು ಅವಕ್ಕೆ ತಕ್ಕುದಾದ ನಿದರ್ಶನಗಳನ್ನು ಆಯ್ಕೆಮಾಡಿಕೊಂಡು ಮುಸ್ಲಿಂ ಸಮುದಾಯದ ರಾಕ್ಷಸೀಕರಣದ ಬಿಂಬಕ್ಕೆ ಪೂರಕವಾದ ಚಿತ್ರಣವನ್ನು ‘ಆವರಣ’ದಲ್ಲಿ ಕೊಟ್ಟಿದ್ದರು. ಆ ಕಾದಂಬರಿ ಬಹಳ ವಿವಾದವಾಗುತ್ತದೆ ಎಂದು ಅವರು ಅಂದುಕೊಂಡಿದ್ದರು. ಆದರೆ ಆಗಲಿಲ್ಲ. ಕಾದಂಬರಿಯ ಪೀಠಿಕೆಯಲ್ಲಿ ‘ಒಬ್ಬ ಸೋದರಿಯ ಮನೆಯಲ್ಲಿ ಉಳಿದಿದ್ದೆ’ ಎಂದು ಬರೆದಿದ್ದರು. ಆದರೆ ಅದು ಯಾರು ಎಂದು ಹೇಳಿರದ ಕಾರಣ ಊಹಾಪೋಹಕ್ಕೆ ಕಾರಣವಾಗಿತ್ತು. ಅವರು ನಮ್ಮ ಮನೆಯಲ್ಲಿದ್ದ ಅವಧಿಯಲ್ಲಿ ಅನೇಕ ಲೇಖಕರು ಬಂದು ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದರು. ಹೀಗಾಗಿ ಭೈರಪ್ಪ ಅವರು ಇದ್ದದ್ದು ನಮ್ಮ ಮನೆಯಲ್ಲೇ ಎಂಬುದು ಎಲ್ಲರಿಗೂ ಗೊತ್ತಾಯಿತು.

ಬುಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಲೇಖಕಿ ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಬರೆದುಕೊಂಡ ನೆನಪಿನ ಸಂಗ್ರಹ ರೂಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.