ADVERTISEMENT

SL Bhyrappa: ಭಿತ್ತಿ ಉಳಿಸಿ ದೂರ ಸರಿದರು

ಶಶಾಂಕ ಪರಾಶರ
Published 25 ಸೆಪ್ಟೆಂಬರ್ 2025, 0:30 IST
Last Updated 25 ಸೆಪ್ಟೆಂಬರ್ 2025, 0:30 IST
<div class="paragraphs"><p>ಎಸ್.ಎಲ್.ಭೈರಪ್ಪ</p></div>

ಎಸ್.ಎಲ್.ಭೈರಪ್ಪ

   

ಭೈರಪ್ಪನವರ ಜೊತೆಗೆ ಕನ್ನಡ ಸಾರಸ್ವತಲೋಕದ ಒಂದು ಮಹಾಧ್ಯಾಯ ಅಂತ್ಯ ಗೊಂಡಿದೆ. ಮಹಾಚೇತನಗಳು ತಮ್ಮ ಅಂತ್ಯದ ಜೊತೆಗೆ ತುಂಬಲು ಸಾಧ್ಯವಿಲ್ಲದ ನಿರ್ವಾತವನ್ನು ಸೃಷ್ಟಿಸಿಬಿಡುತ್ತವೆ. ಭೈರಪ್ಪನವರ ನಿರ್ಗಮನವೂ ಸಾಹಿತ್ಯಲೋಕದಲ್ಲಿ ಅಂಥದೊಂದು ಖಾಲಿತನವನ್ನು ಸೃಷ್ಟಿಸಿದೆ. ಭೈರಪ್ಪ ಅವರು ತಮ್ಮ ಸುದೀರ್ಘ ಬದುಕಿನಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ಮತ್ತು ಸಹೃದಯರಿಗೆ ರಸಾನಂದದ ಜಲಪಾತವನ್ನೇ ಒದಗಿಸಿದ್ದಾರೆ. 

ಕೇವಲ ಕಾದಂಬರಿಗಳನ್ನು ರಚಿಸುತ್ತೇನೆ ಎಂದು ಭೀಷ್ಮನಿಷ್ಠೆಯಿಂದ ಸಂಕಲ್ಪ ಮಾಡಿ ಬರೆದವರು ಭೈರಪ್ಪನವರು. ಸಾಹಿತ್ಯಕೃಷಿಯ ಪ್ರಾರಂಭದ ಅವಧಿಯಲ್ಲಿ ಸಣ್ಣಕತೆಗಳನ್ನು ಬರೆದರಾದರೂ ನಂತರ ತಮ್ಮ ಶಕ್ತಿ ಮತ್ತು ವಿಸ್ತಾರ ದೃಷ್ಟಿಗೆ ಅನುಕೂಲವಾಗುವಂತಹ ಕಾದಂಬರಿಯ ಪ್ರಕಾರವನ್ನೇ ಅವರ ಅಭಿವ್ಯಕ್ತಿಗೆ ಆರಿಸಿಕೊಂಡರು. ತಾವು ಅಪಾರ ಪ್ರೀತಿ ಇಟ್ಟುಕೊಂಡಿದ್ದ ಹಿಂದೂಸ್ಥಾನಿ ಶೈಲಿಯ ಸಂಗೀತದಂತೆಯೇ ಮಾನವ ಸ್ವಭಾವದ ಹಲವು ಮಗ್ಗಲುಗಳನ್ನು ವಿಸ್ತಾರವಾಗಿ ಅನ್ವೇಷಿಸುವಂತಹ ರೀತಿಯಲ್ಲಿ ಕಾದಂಬರಿಗಳನ್ನು ರಚಿಸಿದರು. ಇವು ಭಾರತೀಯತೆಯ ಶ್ರುತಿಗೂ, ಜೀವನದ ಸತ್ಯ, ಶಿವ, ಸೌಂದರ್ಯಗಳ ಲಯಸಂಚಾರಕ್ಕೂ ಬದ್ಧವಾಗಿವೆ.

ADVERTISEMENT

ಅವರ ಸಾಹಿತ್ಯದ ಪರ್ವಕಾಲ ಸುಮಾರು ಏಳು ದಶಕಗಳಷ್ಟು ಸುದೀರ್ಘವಾಗಿತ್ತು ಎನ್ನುವುದು ಒಂದು ಸೋಜಿಗವೇ ಸರಿ. ಕನ್ನಡದ ವಿಮರ್ಶಾಲೋಕ ಅವರಿಂದ ದೂರ ಸರಿದರೂ, ಓದುಗರು ಮಾತ್ರ ಅವರ
ಕಾದಂಬರಿಗಳ ಸತ್ಯ ಮತ್ತು ಸೌಂದರ್ಯ ವನ್ನು ಆದರಿಸುತ್ತಲೇ ಬಂದರು.

ಭೈರಪ್ಪನವರ ಕಾದಂಬರಿಗಳಲ್ಲಿ ಹಲವು ಮುಖಗಳ ಮತ್ತು ಹಲವು ಸ್ತರಗಳ ಮೌಲ್ಯಮೀಮಾಂಸೆಗಳು ಸ್ಥಾನ ಪಡೆದಿವೆ. ಎಲ್ಲ ಕಾದಂಬರಿಗಳಲ್ಲೂ ಭಾರತೀಯ ಪುರುಷಾರ್ಥಗಳ ಕುರಿತು ಅವರು ನಡೆಸಿದ ಜಿಜ್ಞಾಸೆ ಅನನ್ಯವಾದದ್ದು. ಅವರ ಕಾದಂಬರಿಗಳು ಭಾರತೀಯ ಸಂಸ್ಕೃತಿಯ ಪುನರುತ್ಥಾನ ಯುಗಕ್ಕೂ ನಾಂದಿ ಹಾಡಿದವು ಎಂದರೆ ಅದೇನೂ ತಪ್ಪಾಗದು. ಭೈರಪ್ಪನವರ ಶಕ್ತಿ ಮತ್ತು ಪ್ರತಿಭೆ ಕಾಣುವುದು ಹೃದ್ಯವಾದ ಕತೆಯನ್ನು ಹೆಣೆಯುವುದರ ಜೊತೆಗೆ ಈ ಮೌಲ್ಯಮೀಮಾಂಸೆಯನ್ನು ಸಾಹಿತ್ಯದಲ್ಲಿ ಸಂದರ್ಭೋಚಿತವಾಗಿ ಬೆರೆಸುವುದ ರಲ್ಲಿ. ಇದೇ ಕಾರಣಕ್ಕಾಗಿಯೇ ಭೈರಪ್ಪ ನವರ ಕಾದಂಬರಿಗಳು ಶ್ರೀಸಾಮಾನ್ಯ ರನ್ನು ಮತ್ತು ಗಂಭೀರ ಓದುಗರನ್ನು ಒಂದೇ ರೀತಿಯಲ್ಲಿ ಸೆಳೆದಿವೆ. ಭೈರಪ್ಪ ನವರ ಕಾದಂಬರಿಗಳು ವರ್ಷಗಳು ಉರುಳಿದರೂ ಮರುಮುದ್ರಣಗಳನ್ನು ಕಾಣುತ್ತಲೇ ಇವೆ. ಕನ್ನಡದಲ್ಲಿ ನಾಲ್ಕು ತಲೆಮಾರಿನ ಸಾಹಿತ್ಯಾಸಕ್ತರ
ಓದನ್ನು ಸಂಪಾದಿಸಿದ ಕೆಲವೇ ಸಾಹಿತಿಗಳ ಪಟ್ಟಿಗೆ ಭೈರಪ್ಪನವರು ಸೇರುತ್ತಾರೆ. ಭಾರತೀಯ ಮನಸ್ಸುಗಳಿಗೆ ಪಾತಾಳಗರಡಿ ಹಾಕುವ ಇವರ ಕೃತಿಗಳು ಭಾರತದ 20ಕ್ಕೂ ಹೆಚ್ಚು ಭಾಷೆಗಳು ಮಾತ್ರವಲ್ಲದೇ ರಷ್ಯಾ ಮತ್ತು ಚೀನೀ ಭಾಷೆಗಳಿಗೂ ಅನುವಾದಗೊಂಡು, ಆ ಭಾಷೆಗಳಲ್ಲಿಯೂ ಜನಮನ್ನಣೆಯನ್ನು ಗಳಿಸಿರುವುದು ಅತಿಶಯೋಕ್ತಿಯಲ್ಲ. ಭೈರಪ್ಪನವರು ಕನ್ನಡದ ಕಾದಂಬರಿಕಾರರಾಗಿ ಮಾತ್ರವೇ ಉಳಿಯಲಿಲ್ಲ, ಅವರು ಭಾರತೀಯ ಲೇಖಕರಾಗಿಯೂ ಮನ್ನಣೆಯನ್ನು ಪಡೆದವರು. 

ಭಾರತದ ಒಂದು ಸಣ್ಣ ಹಳ್ಳಿಯಿಂದ ಹಿಡಿದು ರಾಷ್ಟ್ರದ ರಾಜಧಾನಿ ದೆಹಲಿಯವರೆಗೆ ಹಲವು ಪ್ರದೇಶಗಳ ಕಥೆಗಳನ್ನು ಭೈರಪ್ಪನವರು ಕಟ್ಟಿಕೊಟ್ಟಿ ದ್ದಾರೆ; ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಸಮಾಜದ ಎಲ್ಲ ರೀತಿಯ ಮನುಷ್ಯರ ಮನೋವ್ಯಾಪಾರಗಳನ್ನು ಹಲವು ಮಜಲುಗಳಲ್ಲಿ ಕಂಡರಿಸಿದ್ದಾರೆ. ಸೃಜನಶೀಲಸಾಹಿತ್ಯದ ಭಾಷೆಗೇ ಹೊಸ ಆಯಾಮವನ್ನು ಕಾಣಿಸಿದರು ಅವರು. ಮಾತ್ರವಲ್ಲ, ಕಾದಂಬರಿ ಎಂದರೆ ಕಲ್ಪನೆ ಮಾತ್ರವೇ ಅಲ್ಲ, ಅದಕ್ಕೂ ಆಳವಾದ ಅಧ್ಯಯನ, ಜೊತೆಗೆ ಗಾಢವಾದ ಜೀವನಾನುಭವಗಳು ಅನಿವಾರ್ಯ ಎಂಬ ಸೂತ್ರವನ್ನು ಸ್ಥಾಪಿಸಿದರು; ಈ ಸೂತ್ರಕ್ಕೆ ಭಾಷ್ಯವಾಗಿಯೇ ಅವರು ತಮ್ಮ ಕೃತಿಗಳನ್ನು ರಚಿಸಿದರು. ಮನ್ನಣೆಯ ಆತುರದಲ್ಲಿ ಸಾಹಿತ್ಯಶಕ್ತಿಯನ್ನು ಲೇಖಕ ಕಳೆದುಕೊಳ್ಳುವ ಅಪಾಯವಿದೆ ಎಂಬ ತತ್ತ್ವದಂತೆ ಅವರು ಮಾಧ್ಯಮಗಳಿಂದಲೂ ಪ್ರಶಸ್ತಿಗಳ ಹುಡುಕಾಟದಿಂದಲೂ ದೂರವೇ ಉಳಿದರು.

ಆದರೆ, ಸಾರಸ್ವತ ತಪಸ್ಸು ಫಲವನ್ನು ಕೊಡದೇ ಹೋಗಲಿಲ್ಲ; ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ಅದಕ್ಕಿಂತಲೂ ಹೆಚ್ಚಾಗಿ ಅಪಾರ ಸಂಖ್ಯೆಯ ಓದುಗರ ಪ್ರೀತಿ–ಅಭಿಮಾನ ಗಳು ಅವರಿಗೆ ದಕ್ಕಿದವು. ಹೀಗಿದ್ದರೂ ಭೈರಪ್ಪನವರಂಥ ಸಶಕ್ತ ಮಹಾಕಾದಂಬರಿಕಾರನ್ನು ಕನ್ನಡ ವಿಮರ್ಶಾಲೋಕ ಅವಗಣನೆ ಮಾಡಿದ್ದು, ‘ಜನಪ್ರಿಯ ಸಾಹಿತ್ಯ’ ಎಂದು ಅವರ ಕೃಷಿಯನ್ನು ಅಗ್ಗ ಮಾಡಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸರಿಪಡಿಸಲಾಗದ ಲೋಪವಾಗಿ ಉಳಿದುಬಿಟ್ಟಿದೆ.

ಭೈರಪ್ಪನವರು ಬಾಲ್ಯದಲ್ಲಿ ಎದುರಿಸಿದ ಕಡುಬಡತನ ಮತ್ತು ಅವರ ಕುಟುಂಬದ ಆತ್ಮೀಯ ಸದಸ್ಯರ ಸಾವು ಅವರನ್ನು ತೀವ್ರವಾಗಿ ಪ್ರಭಾವಿಸಿದವು. ಈ ಕಷ್ಟಗಳ ಪರಂಪರೆ ಅವರನ್ನು ಜೀವನದ ಅರ್ಥವನ್ನು ಹುಡುಕುವಂತೆ ಪ್ರೇರಿಸಿದವು. ಜೀವನ ಎಂದರೇನು? ಸಾವು ಎಂದರೇನು? ಪ್ರೀತಿಗೂ ಜೀವನಕ್ಕೂ ಏನು ಸಂಬಂಧ? ನಮ್ಮ ಜೀವನಕ್ಕೂ ಧರ್ಮಕ್ಕೂ ನಂಟು ಇದೆಯೆ? ಇಂಥ ಪ್ರಶ್ನೆಗಳ ಜಿಜ್ಞಾಸೆಗೆ ಅವರನ್ನು ಸಿದ್ಧಗೊಳಿಸಿದವು. ಅವರನ್ನು ತತ್ತ್ವಶಾಸ್ತ್ರದ ಅಧ್ಯಯನದ ಕಡೆಗೆ ಹೊರಳುವಂತೆ ಮಾಡಿದವು.

ಅವರು ತತ್ತ್ವಶಾಸ್ತ್ರದ ಪ್ರಾಧ್ಯಾಪಕರೂ ಆದರು. ತಾತ್ವಿಕ ಸಮಸ್ಯೆಗಳಿಗೆ ಕಲೆಯ ಮೂಲಕ ಉತ್ತರ ಹುಡುಕಬೇಕು ಎಂದು ತೀರ್ಮಾನಿಸಿಕೊಂಡು, ತತ್ತ್ವಶಾಸ್ತ್ರ ಮತ್ತು ಕಲೆಯ ಕಸಿಯನ್ನು ತಮ್ಮ ಕಾದಂಬರಿಗಳ ಮೂಲಕ ಮಾಡಿದರು. ಹೀಗಾಗಿ ಅವರು ಕಂಡುಕೊಂಡ ಹೊಳಹುಗಳಿಗೆ ಸೌಂದರ್ಯದ ಆಯಾಮವೂ ಒದಗಿತು. ಅವರ ಆ ಕಾಣ್ಕೆಗಳೇ ಅವರ ಕಾದಂಬರಿಗಳ ಹೂರಣವೂ ಆಯಿತು. ಈ ಕಾರಣದಿಂದಲೇ ಭೈರಪ್ಪನವರ ಕೃತಿಗಳು ಪಂಡಿತ ಚಿಂತನೆಗಳಿಗೂ, ಪಾಮರರ ಸಂತೋಷಕ್ಕೂ ಏಕಕಾಲದಲ್ಲಿ ಒದಗುವಂತಾಯಿತು. 

ಭೈರಪ್ಪನವರಿಗೆ ಟೀಕೆಗಳೂ ಎದುರಾದವು. ಅವರನ್ನು ಬಲಪಂಥೀಯ ಲೇಖಕ ಎಂದೂ ವ್ಯಂಗ್ಯ ಮಾಡಲಾಯಿತು. ಅಧ್ಯಯನ, ಅಭಿವ್ಯಕ್ತಿ, ಜೀವನಪ್ರೀತಿ ಮತ್ತು ಜೀವನಮೌಲ್ಯಗಳಲ್ಲಿ ಅಭೇದವನ್ನು ಸಾಧಿಸಿದವರು ಭೈರಪ್ಪ. ಬದುಕನ್ನೂ ಬರಹವನ್ನೂ ಶುದ್ಧವಾಗಿ ಉಳಿಸಿಕೊಂಡವರು ಅವರು.
ಅವರ ನಿಲುವುಗಳನ್ನು ಟೀಕೆ ಮಾಡಿದ ವರಿಗೂ ಅವರ ವೈಯಕ್ತಿಕ ಜೀವನವನ್ನು ಟೀಕೆ ಮಾಡಲು ಸಾಧ್ಯವಾಗಲಿಲ್ಲ. ಒಬ್ಬ ಸಾಹಿತಿಯ ನಿಜವಾದ ಪರೀಕ್ಷೆ ಅವನ ಕೃತಿಗಳು ಕಾಲವನ್ನು ಎದುರಿಸುವು ದರಲ್ಲಿದೆ ಎಂದು ಹಲವು ಸಂದರ್ಭಗಳಲ್ಲಿ ಭೈರಪ್ಪನವರೇ ಹೇಳಿದ್ದಾರೆ. ಮೂರ್ನಾಲ್ಕು ತಲೆ ಮಾರುಗಳ ಓದುಗ
ರನ್ನು ಪಡೆದ ಭೈರಪ್ಪ ಆಗಲೇ ಈ ವಿಷಯದಲ್ಲಿ ಗೆಲುವನ್ನು ಸಾಧಿಸಿ ದ್ದಾರೆ ಎನ್ನುವುದು ಸುಳ್ಳಲ್ಲ.

ಭಾರತ ಕಂಡಿರುವ ಮಹಾಕಾದಂಬರಿಕಾರರಲ್ಲಿ ಒಬ್ಬರು ಎಸ್‌. ಎಲ್‌. ಭೈರಪ್ಪ ಎನ್ನುವುದರಲ್ಲಿ ಎರಡು ಮಾತಿಲ್ಲ. ಭೈರಪ್ಪನರೇ  ಗೌರವಿಸುವ, ಆದರಿಸುವ ಎಂ. ಹಿರಿಯಣ್ಣ, ಆನಂದ ಕುಮಾರಸ್ವಾಮಿ, ಕುಮಾರವ್ಯಾಸರಂಥವರು ಭಾರತೀಯ ಪ್ರಜ್ಞೆಯಲ್ಲಿ ಚಿರಸ್ಥಾಯಿಯಾಗಿರುವವರೆಗೂ ಭೈರಪ್ಪನವರ ಸಾಹಿತ್ಯವೂ ಅಜರಾಮರವಾಗಿರುತ್ತದೆ ಎನ್ನುವುದೂ ಸತ್ಯ. 

ಎಸ್‌.ಎಲ್‌.ಭೈರಪ್ಪ ಇನ್ನಿಲ್ಲ

ಮೈಸೂರು: ‘ಪದ್ಮಭೂಷಣ’, ‘ಸರಸ್ವತಿ ಸಮ್ಮಾನ್’ ಪುರಸ್ಕೃತ ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ (94) ಅವರು ಹೃದಯಾ ಘಾತದಿಂದ ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ನಿಧನರಾದರು. 

ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ಅವರನ್ನು 6 ತಿಂಗಳ ಹಿಂದೆ ವಯೋಸಹಜ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್‌ ಇದ್ದಾರೆ.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಗುರುವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ಮೈಸೂರಿನ ಕಲಾಮಂದಿರದ ಆವರಣದಲ್ಲಿ ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಶುಕ್ರವಾರ ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.