
ಅಪರೂಪದ ಸಂಗಮ.. ದಾವಣಗೆರೆಯ ರೇಣುಕಾ ಮಂದಿರದಲ್ಲಿ ನಡೆದಿದ್ದ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಶಾಮನೂರು ಶಿವಶಂಕರಪ್ಪ
(ಸಂಗ್ರಹ ಚಿತ್ರಗಳು)
ದಾವಣಗೆರೆ: 60ನೇ ವಯಸ್ಸು ಯಾವುದೇ ಒಬ್ಬ ವ್ಯಕ್ತಿಯ ನಿವೃತ್ತ ಜೀವನ ಆರಂಭವಾಗುವಂಥದ್ದು. ‘ಜೀವನದಲ್ಲಿ ಇನ್ನೇನಿದೆ?, ಎಲ್ಲವೂ ಮುಗಿಯಿತು’ ಎಂಬ ಭಾವ ಆವರಿಸುವ ವಯಸ್ಸೂ ಹೌದು. 60ಕ್ಕೆ ಅರಳುಮರುಳು ಶುರುವಾಗುವುದೂ ಉಂಟು.
ಆದರೆ, ಭಾನುವಾರ ಸಂಜೆ ನಿಧನರಾದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರಿಗೆ ಈ ಮಾತು ಅನ್ವಯಿಸುವುದಿಲ್ಲ. ತಮ್ಮ 38ನೇ ವಯಸ್ಸಿಗೆ ಮೊದಲ ಬಾರಿಗೆ ದಾವಣಗೆರೆ ನಗರಸಭೆ ಸದಸ್ಯರಾಗುವ ಮೂಲಕ ಸ್ಥಳೀಯ ರಾಜಕಾರಣಕ್ಕೆ ಅಡಿ ಇಟ್ಟ ಇವರು ರಾಜ್ಯಮಟ್ಟದ ರಾಜಕೀಯ ಜೀವನ ಆರಂಭಿಸಿದ್ದೇ 60ರ ನಂತರ.
1994ರಲ್ಲಿ ಮೊತ್ತಮೊದಲ ಬಾರಿಗೆ ಅವರು ವಿಧಾನಸಭೆ ಪ್ರವೇಶಿಸಿದಾಗ ಅವರ ವಯಸ್ಸು 63. 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಎಂದೂ ‘ಇದು ನನ್ನ ಕೊನೆಯ ಚುನಾವಣೆ’ ಎಂದು ಹೇಳಿದವರೇ ಅಲ್ಲ. ಬದಲಿಗೆ, ‘ಜೀವ ಇರುವವರೆಗೂ ಸ್ಪರ್ಧಿಸುವೆ’ ಎಂದೇ ಹೇಳುವ ಮೂಲಕ ಜೀವನೋತ್ಸಾಹಕ್ಕೆ ನಿದರ್ಶನ ಎಂಬಂತೆ ನಡೆದುಕೊಂಡರು.
ವ್ಯಾಪಾರ, ಉದ್ಯಮದ ಜೊತಜೊತೆಗೆ ರಾಜಕಾರಣದಲ್ಲೂ ತಮ್ಮದೇ ಛಾಪು ಮೂಡಿಸಿರುವ ಶಾಮನೂರು 2013ರಲ್ಲಿ ಮೊದಲ ಬಾರಿಗೆ ಸಚಿವರಾದಾಗ ಅವರಿಗೆ 83ರ ಹರೆಯ.
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರೊಂದಿಗೆ ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್ ಕಟ್ಟಾಳು:
ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಮನೂರು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇ ಇಲ್ಲ. 1998ರಲ್ಲಿ ಲೋಕಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ಸಂಸತ್‌ಗೆ ತೆರಳಿದ್ದ ಇವರು, 13 ತಿಂಗಳ ಬಳಿಕ ಮತ್ತೆ 1999ರಲ್ಲಿ ಲೋಕಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ ಅವರ ವಿರುದ್ಧ ಸೋಲನುಭವಿಸಿದರು. ಇಡೀ ರಾಜಕೀಯ ಜೀವನದಲ್ಲಿ ಇದೊಂದೇ ಅವರಿಗೆ ಎದುರಾದ ಸೋಲು.
ರಾಜಕೀಯ ಜೀವನದ ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳುವಿನಂತೆ ಇದ್ದ ಅವರು ಕೊನೆಯ ಉಸಿರಿರುವವರೆಗೂ ಪಕ್ಷಾಂತರ ಮಾಡಿದವರಲ್ಲ. ಅವರು ಮಾತ್ರವಲ್ಲ, ಅವರ ಕುಟುಂಬದ ಯಾವ ಸದಸ್ಯರೂ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷದತ್ತ ಒಲವು ತೋರಿಲ್ಲ. ಹಾಗಂತ ಕಾಂಗ್ರೆಸ್ ಪಕ್ಷದಲ್ಲೂ ಇವರು ಮುಖಂಡರನ್ನು ಓಲೈಸಿದವರಲ್ಲ. ‘ಹೈಕಮಾಂಡ್ ಗೀಕಮಾಂಡ್ ನನಗಿಲ್ಲ. ನಮ್ಮದೇನಿದ್ದರೂ ಪಕ್ಷನಿಷ್ಠೆ ಮಾತ್ರ’ ಎಂದು ಬಹಿರಂಗ ಹೇಳಿಕೆ ನೀಡಿದ್ದ ಇವರು, ‘ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ನಾವು ಕೇಳಿದವರಿಗೆ ಟಿಕೆಟ್ ಕೊಡಬೇಕು. ನಮ್ಮ ಮನೆಯಲ್ಲೇ ನಾಲ್ಕೈದು ಜನ ಸ್ಪರ್ಧಿಸಿದರೂ ಟಿಕೆಟ್ ಕೊಡಲೇಬೇಕು. ಪಕ್ಷ ಅಧಿಕಾರಕ್ಕೆ ಬರುವಂತಿದ್ದರೆ ಗೆಲ್ಲುವವರಿಗೇ ಟಿಕೆಟ್ ಹಂಚಬೇಕು’ ಎಂದು ವಿಧಾನಸಭೆಯ ಕಳೆದ ಚುನಾವಣೆ ವೇಳೆಯೂ ಹೇಳಿದ್ದರು.
ನೇರ ನಡೆ, ನುಡಿಗೆ ಹೆಸರುವಾಸಿಯಾಗಿದ್ದ ಶಾಮನೂರು ಯಾವುದೇ ಮುಲಾಜಿಗೆ ಒಳಗಾದವರಲ್ಲ. ಸಂಬಂಧಿಗಳೇ ಇರಲಿ, ಸ್ವಪಕ್ಷದವರೇ ಇರಲಿ ಸಂದರ್ಭಗಳಿಗೆ ಅನುಸಾರ ಅವರ ಕುರಿತು ಟೀಕೆ–ಟಿಪ್ಪಣಿ ಮಾಡಲು ಹಿಂಜರಿದವರೇ ಅಲ್ಲ. ಕಂಡದ್ದನ್ನು ಕಂಡಹಾಗೆ ಹೇಳುವುದಕ್ಕೆ ಹೆಸರಾಗಿದ್ದ ಇವರು, ‘ರಾಜಕಾರಣದಲ್ಲಿ ನೈತಿಕತೆ ಮರೆಯಾಗಿ ವರ್ಷಗಳೇ ಕಳೆದುಹೋಗಿವೆ. ರಾಜಕಾರಣವು ದುಡ್ಡಿನ ಮೇಲೆ ನಡೆಯುತ್ತಿದೆ. ಯುವಜನರು ದುಡ್ಡು ಮಾಡುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬರಬೇಡಿ. ಜನರ ಸುಲಿಗೆ ಮಾಡಬೇಡಿ. ಸೂಕ್ತ ಮಾರ್ಗದಲ್ಲೇ ನಡೆಯಿರಿ’ ಎಂದು ಸದಾ ಕಿವಿಮಾತು ಹೇಳುತ್ತಿದ್ದರು.
ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಎನ್. ತಿಪ್ಪಣ್ಣ
ಅಜಾತಶತ್ರು:
ಉಪ ಮುಖ್ಯಮಂತ್ರಿ ಸೇರಿದಂತೆ ದೊಡ್ಡಮಟ್ಟದ ಹುದ್ದೆ, ಸ್ಥಾನಮಾನಗಳ ಆಮಿಷ ಬಂದರೂ ಕಾಂಗ್ರೆಸ್ ತ್ಯಜಿಸುವ ಮನಸ್ಸು ಮಾಡದ ಇವರು, ಇತರ ಪಕ್ಷಗಳ ಮುಖಂಡರು, ಕಾರ್ಯಕರ್ತರೊಂದಿಗೆ ಸ್ನೇಹದಿಂದಲೇ ಇದ್ದರು. ಯಾರೊಂದಿಗೂ ವೈರತ್ವ ಸಾಧಿಸದೆ ಸಮಾನವಾಗಿ ಕಂಡು ಜಾತ್ಯತೀತ ನಿಲುವಿಗೆ ಅಂಟಿಕೊಂಡಿದ್ದರು.
ಉಚಿತವಾಗಿ ಲಸಿಕೆ ನೀಡಿದ್ದರು:
2020ರಲ್ಲಿ ಮೊದಲ ಅಲೆಯಲ್ಲೇ ಕೊರೊನಾ ಸೋಂಕಿಗೆ ಒಳಗಾಗಿದ್ದ ಶಿವಶಂಕರಪ್ಪ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ ಉಚಿತವಾಗಿ ಲಸಿಕೆ ಹಂಚಿದ್ದರು. 2 ಲಕ್ಷ ಜನರಿಗೆ ಲಸಿಕೆ ಕೊಡಲು ₹ 18 ಕೋಟಿ ವೆಚ್ಚವಾಗಲಿದೆ ಎಂದು ಸರ್ಕಾರ ತಿಳಿಸಿದಾಗ ₹ 9 ಕೋಟಿ ಕೊಡಲು ಸಮ್ಮತಿ ಸೂಚಿಸಿದ್ದರಲ್ಲದೆ, ಸರ್ಕಾರ ಮೊದಲು ಆ ಹಣವನ್ನು ಜಿಲ್ಲಾಧಿಕಾರಿಯವರಿಗೆ ನೀಡುವಂತೆ ತಿಳಿಸಿದ್ದರಿಂದ ಬೇಸತ್ತು ಸರ್ಕಾರದ ಉಸಾಬರಿ ಬೇಡ ಎಂದು ತಾವೇ ಲಸಿಕೆ ಖರೀದಿಸಿ ಜನರಿಗೆ ಕೊಡಿಸಿದ್ದರು. ಜಿಲ್ಲೆಯ ಬಡಜನರಿಗೆ ಕೋವಿಡ್ ಸಂದರ್ಭ ಉಚಿತ ಆಹಾರ, ಔಷಧ ಕಿಟ್ಟನ್ನೂ ಹಂಚುವ ಮೂಲಕ ಕಳಕಳಿ ವ್ಯಕ್ತಪಡಿಸಿದ್ದರು.
ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಎನ್. ತಿಪ್ಪಣ್ಣ
ದಾವಣಗೆರೆ ಅಭಿವೃದ್ಧಿ:
ಹತ್ತಿ ಗಿರಣಿಗಳಿಂದಾಗಿ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದು ಹೆಸರಾಗಿದ್ದ ದಾವಣಗೆರೆಗೆ ಜಿಲ್ಲಾ ಕೇಂದ್ರದ ಸ್ಥಾನಮಾನ ಸಿಗುವ ಹೊತ್ತಿಗೆ ಹತ್ತಿ ಗಿರಣಿಗಳು ನೇಪಥ್ಯಕ್ಕೆ ಸರಿಯಲಾರಂಭಿಸಿದ್ದವು. ಮಧ್ಯ ಕರ್ನಾಟಕದ ಈ ಪ್ರಮುಖ ನಗರಿ ದಿವಾಳಿಯ ಅಂಚನ್ನು ತಲುಪಿತು ಎಂದು ಕೆಲವರು ಟೀಕಿಸಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿ, ಈ ನಗರವನ್ನು ವಿದ್ಯಾಕಾಶಿಯಾಗಿ ಮಾಡುವ ಪಣ ತೊಟ್ಟು ತಮ್ಮ ನೇತೃತ್ವದ ಬಾಪುಜಿ ಶಿಕ್ಷಣ ಸಂಸ್ಥೆಯ ಮೂಲಕ ಬಿಬಿಎ, ಎಂಬಿಎ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಒಳಗೊಂಡ ಅರೆ ವೈದ್ಯಕೀಯ ಕೋರ್ಸ್‌ಗಳನ್ನು ಆರಂಭಿಸಿ, ವಿದ್ಯಾರ್ಥಿಗಳನ್ನು ಆಕರ್ಷಿಸಿದರು.
ಬೇರೆಯವರೂ ಸಿಇಟಿ, ಜೆಇಇ, ಎನ್‌ಇಇಟಿ ತರಬೇತಿ ನೀಡುವ ಅನೇಕ ಕಾಲೇಜುಗಳ ಸ್ಥಾಪನೆಗೆ ಬೆನ್ನು ತಟ್ಟಿದ್ದರಿಂದ ಅವರು ಅಂದುಕೊಂಡಂತೆಯೇ ನಗರವು ಶಿಕ್ಷಣಕ್ಕೆ ಹೆಸರಾಗಿದೆ.
ದುಡಿಮೆಗೆ ಮಹತ್ವ:
ಹದಿಹರೆಯದಿಂದಲೇ ದುಡಿಮೆಗೆ ಮಹತ್ವ ನೀಡುತ್ತಲೇ ಬಂದಿದ್ದ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದಾಗಿ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗುವವರೆಗೂ ವ್ಯಾಪಾರ– ವಹಿವಾಟಿನ ಬಗ್ಗೆ ಗಮನ ಹರಿಸಿದ್ದರು. ಸಕ್ಕರೆ ಕಾರ್ಖಾನೆ ವಹಿವಾಟು, ಅಕ್ಕಿ, ತೊಗರಿಬೇಳೆ, ಕಡ್ಲೆ ಬೇಳೆ ವ್ಯಾಪಾರಸ್ಥರಾಗಿದ್ದ ಇವರು ನಿತ್ಯವೂ ಕಲ್ಲೇಶ್ವರ ರೈಸ್ ಮಿಲ್‌ಗೆ ತೆರಳಿ ಒಂದೆರಡು ಗಂಟೆ ಇದ್ದು ಬರುತ್ತಿದ್ದರು.
ನಿತ್ಯ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ಆರಾಧ್ಯ ದೈವಕ್ಕೆ ನಮಿಸಿಯೇ ದಿನವನ್ನು ಆರಂಭಿಸುತ್ತಿದ್ದ ಇವರು, ಶಿವನ ಆರಾಧಕರೂ ಹೌದು. ನೇಪಾಳದ ಕಠ್ಮಂಡುವಿನಲ್ಲಿ ಇರುವ ಪಶುಪತಿನಾಥ ದೇವಸ್ಥಾನವನ್ನು ಬಾಪುಜಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ 2022ರಲ್ಲಿ ನಿರ್ಮಿಸಿದ್ದರಲ್ಲದೆ, ಶಿವನ ಮತ್ತೊಂದು ದೇಗುಲವನ್ನೂ ಅದೇ ಆವರಣದ ಇನ್ನೊಂದು ಬದಿಯಲ್ಲಿ ಮೊದಲೇ ನಿರ್ಮಿಸಿ ಶಿವರಾತ್ರಿಯಂದು ಜಾಗರಣೆ ಮಾಡುತ್ತಿದ್ದರು.
ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಎನ್. ತಿಪ್ಪಣ್ಣ
ಪಂಚಪೀಠ ಒಗ್ಗೂಡಿಸಿದ್ದರು:
2016ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೇಳಿಸಿದಾಗ ಅದು ‘ವೀರಶೈವ ಲಿಂಗಾಯತ ಧರ್ಮ’ ಎಂದು ಪ್ರತಿಪಾದಿಸಿ, ಪಂಚಪೀಠಾಧೀಶರಿಗೆ ಬೆಂಬಲವಾಗಿ ನಿಂತಿದ್ದ ಶಾಮನೂರು ಶಿವಶಂಕರಪ್ಪ, ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವ ಬಿಟ್ಟುಕೊಟ್ಟವರಲ್ಲ.
ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಮೂಲಕ ಪಂಚಪೀಠಾಧ್ಯಕ್ಷರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು. ಜುಲೈ 21, 22ರಂದು ದಾವಣಗೆರೆಯಲ್ಲಿ ನಡೆದ ‘ವೀರಶೈವ ಪೀಠಾಚಾರ್ಯರ ಶೃಂಗ‘ದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ 16 ವರ್ಷಗಳ ಬಳಿಕ ಒಂದೇ ವೇದಿಕೆಗೆ ಬಂದಿದ್ದು ಐತಿಹಾಸಿಕ.
ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ವೃದ್ಧೆಯೊಬ್ಬರು ಶಾಮನೂರು ಶಿವಶಂಕರಪ್ಪನವರಿಗೆ ಆಶೀರ್ವದಿಸಿದ್ದ ಸಂದರ್ಭ
ಶಾಮನೂರು ಜೀವನದ ಪಕ್ಷಿ ನೋಟ
*1931 ಜೂನ್ 16ರಂದು ಶಾಮನೂರು ಕಲ್ಲಪ್ಪ–ಸಾವಿತ್ರಮ್ಮ ದಂಪತಿ ಪುತ್ರರಾಗಿ ಜನನ
*ಇಂಟರ್ ಮಿಡಿಯಟ್ ವರೆಗೆ ಶಿಕ್ಷಣ
*ತಂದೆಯ ‘ಶಾಮನೂರು ಕಲ್ಲಪ್ಪ ಅಂಡ್ ಸನ್ಸ್’ ಅಂಗಡಿಯಲ್ಲಿ ವ್ಯಾಪಾರ, ಉದ್ಯಮಿಯಾಗಿ ಬೆಳವಣಿಗೆ
*1954ರಲ್ಲಿ ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಗ್ರಾಮದ ಪಾರ್ವತಮ್ಮ ಅವರೊಂದಿಗೆ ವಿವಾಹ
*ಶಾಮನೂರು ದಂಪತಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು
*1969ರಲ್ಲಿ ನಗರಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆ
*1971 ರಲ್ಲಿ ನಗರಸಭೆ ಸದಸ್ಯರಾಗಿ ಪುನರಾಯ್ಕೆ
*1972ರಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ
*1971ರಿಂದ 73ರವರೆಗೆ ದಾವಣಗೆರೆ ನಗರಸಭೆ ಅಧ್ಯಕ್ಷ
*1978-80 ಕಾಂಗ್ರೆಸ್ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ
*1994-1998 ದಾವಣಗೆರೆ ಕ್ಷೇತ್ರದ ವಿಧಾನಸಭಾ ಸದಸ್ಯ
*1998-99 ದಾವಣಗೆರೆ ಲೋಕಸಭಾ ಸದಸ್ಯ
*1999 ಲೋಕಸಭಾ ಚುನಾವಣೆಯಲ್ಲಿ ಸೋಲು
*2004 ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
*2008 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
*2013 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
*ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ, ಎಪಿಎಂಸಿ ಸಚಿವ
*2018ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ
*2023ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ
*ಕೆಪಿಸಿಸಿ ಖಾಯಂ ಖಜಾಂಚಿಯಾಗಿ ಬಹು ವರ್ಷ ಸೇವೆ
ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ವೃದ್ಧೆಯೊಬ್ಬರು ಶಾಮನೂರು ಶಿವಶಂಕರಪ್ಪನವರಿಗೆ ಆಶೀರ್ವದಿಸಿದ್ದ ಸಂದರ್ಭ
ಚಿತ್ರ ನಿರ್ಮಾಣ
ಲಾಭ–ನಷ್ಟದ ಲೆಕ್ಕಾಚಾರದಲ್ಲಿ ಚತುರರಾಗಿದ್ದ ಶಾಮನೂರು ಶಿವಶಂಕರಪ್ಪ ಜನಪ್ರಿಯತೆಯ ಬೆನ್ನು ಹತ್ತಿದವರಲ್ಲ. ವ್ಯಾಪಾರದ ಭಾಗವಾಗಿಯೇ ಬಹಳ ಹಿಂದೆ ‘ಬೆಂಗಳೂರಿಗೆ ಬಂದ ಬೋರೇಗೌಡ’ ಮತ್ತು ‘ಬೆತ್ತಲೆಸೇವೆ’ ಚಲನಚಿತ್ರಗಳನ್ನು ಇತರರೊಡನೆ ಸೇರಿ ನಿರ್ಮಿಸಿದ್ದ ಇವರು, ಆ ಚಿತ್ರಗಳು ಯಶಸ್ಸು ಕಾಣದಿದ್ದಾಗ, ‘ಈ ಕ್ಷೇತ್ರ ನನ್ನದಲ್ಲ’ ಎಂದು ತಿಳಿಸಿ ಚಿತ್ರೋದ್ಯಮದಿಂದಲೇ ದೂರ ಸರಿದಿದ್ದರು.
ಸೋಮವಾರ ಅಂತ್ಯಕ್ರಿಯೆ
ದಾವಣಗೆರೆ: ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಗರದ ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 10.30ರಿಂದ ದರ್ಶನ ಪಡೆಯಬಹು
ದಾಗಿದ್ದು, ಕಲ್ಲೇಶ್ವರ ಮಿಲ್ ಆವರಣದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.
ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ದಾವಣಗೆರೆಗೆ ತರಲಾಗುತ್ತಿದೆ. ಸೋಮವಾರ ನಸುಕಿನ 4.30ಕ್ಕೆ ಎಂಸಿಸಿ ಬಡಾವಣೆಯಲ್ಲಿರುವ ಸಚಿವ ಮಲ್ಲಿಕಾರ್ಜುನ್ ಅವರ ನಿವಾಸ ತಲುಪಲಿದೆ. ಕುಟಂಬದ ಸದಸ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಜೀವನದಲ್ಲಿ ಅಪವಾದ, ಆರೋಪಗಳಿಂದ ದೂರವಿದ್ದು ದೊರೆತ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಮೀಸಲಾಗಿಟ್ಟ ಅಪರೂಪದ ನಾಯಕ ಶಾಮನೂರು ಶಿವಶಂಕರಪ್ಪಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.