‘ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ಯುದ್ಧ ಬಿಟ್ಟು ಅನ್ಯ ಮಾರ್ಗ ಇಲ್ಲವೇ?’ ಎಂಬುದಾಗಿ ಟಿ. ಕೆ. ತ್ಯಾಗರಾಜ್ ಅವರು ಕೇಳುತ್ತಾ, ‘ಪ್ರೀತಿ, ಶಾಂತಿಗಳಿಂದ ಪರಸ್ಪರ ಮಾತುಕತೆ ನಡೆಸಿ, ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳಲು ನೂರಾರು ಮಾರ್ಗಗಳಿವೆ’ ಎನ್ನುತ್ತಾರೆ (ಪ್ರ.ವಾ. ಮೇ 9)
ಪಾಕಿಸ್ತಾನ ಜನ್ಮ ತಾಳಿದ ಕ್ಷಣದಿಂದಲೇ ನಮ್ಮ ಭೂಭಾಗ ಕಾಶ್ಮೀರದ ಕೆಲವೊಂದು ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇಡೀ ಕಾಶ್ಮೀರ ತನ್ನದೆಂದು ಕ್ಯಾತೆ ತೆಗೆದು ಜಾಗತಿಕ ಮಟ್ಟದಲ್ಲಿ ಈ ವಿವಾದವನ್ನು ಜೀವಂತವಾಗಿ ಇಡುವಲ್ಲಿ ಯಶಸ್ವಿಯಾಗಿದೆ. ನಾವು ಪಾಕಿಸ್ತಾನದೊಂದಿಗೆ ನಡೆಸಿದ ಶಾಂತಿ ಮಾತುಕತೆಗಳಿಗೆ ಲೆಕ್ಕವಿಲ್ಲ.
‘ಮುಷ್ಟಿಯನ್ನು ಬಿಗಿಹಿಡಿದು ಹಸ್ತಲಾಘವ ಮಾಡಲಾಗುವುದಿಲ್ಲ’ ಎಂದು ಇಂದಿರಾಗಾಂಧಿ ಹೇಳಿದ್ದರು.
ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ, ನಮ್ಮ ಯೋಧರನ್ನು ಕೊಚ್ಚಿ, ಅವರ ತಲೆಗಳನ್ನು ಕೊಂಡೊಯ್ದ ಘಟನೆ ನೆನೆದರೆ ರಕ್ತ ಕುದಿಯುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದಂತೆ, ‘ಪೆಟ್ಟಿಗೆ ಪ್ರತಿ ಪೆಟ್ಟು ಕೊಡದೆ, ಶಾಂತಿ ಮಂತ್ರವನ್ನು ಜಪಿಸುವವನನ್ನು ಜಗತ್ತು ಹೇಡಿ ಎಂದು ಕರೆಯುತ್ತದೆ’.
ಹಿಂಬಾಗಿಲಿನಿಂದ ಒಳಹೊಕ್ಕು, ನಮ್ಮ ಪ್ರಾಣಿಗಳನ್ನು ಕೊಂಡೊಯ್ಯುವ ಗುಳ್ಳೆನರಿಯನ್ನು ಬೇಟೆಯಾಡಿ ಕೊಲ್ಲಬೇಕೇ ಹೊರತು, ಅದರೊಂದಿಗೆ ಸಂಧಾನದ ಮಾತುಕತೆ ಆಡಲಾದೀತೆ?
–ಉಡುಪಿ ಅನಂತೇಶ ರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.