ಶೇಕಡ 10 ಹೊಸ ಮೀಸಲಾತಿ ಕುರಿತ ವಾದಿರಾಜ್ ಅವರ ಲೇಖನ (ಸಂಗತ, ಜುಲೈ 13) ಮಾಹಿತಿಪೂರ್ಣವಾಗಿದೆ. ಹಳದಿ ಕನ್ನಡಕದವರಿಗೆ ಹಾಗೂ ದ್ವಿಮುಖ ನೀತಿ ಹೊಂದಿದವರಿಗೆ ಪಾಠ ಹೇಳಿದಂತಿದೆ. ಮತ್ತೊಂದು ಅಂಶ ಗಮನಕ್ಕೆ ತರಲೇಬೇಕು. ಕರ್ನಾಟಕದ ಮೀಸಲಾತಿಯಲ್ಲಿ ಒಬಿಸಿ ಕೋಟಾ ಕತ್ತರಿಸಿ ಕೊಟ್ಟಿರುವುದರ ನಿಜ ಬೇನೆ ಅನುಭವಿಸುತ್ತಾ ವಂಚನೆಗೆ ಒಳಗಾಗಿರುವವರು ಕಸುಬು ಆಧಾರಿತ ಅತಿ ಹಿಂದುಳಿದ ಕಾಯಕ ಸಮುದಾಯಗಳಿಗೆ ಸೇರಿದವರು. ಇದರ ಜತೆಗೇ ‘ಆದಾಯ ಮಿತಿ’ ಎಂಬುದು ಅಪರೂಪಕ್ಕೆ ಅವಕಾಶಕ್ಕಾಗಿ ಪ್ರಯತ್ನಿಸುವ ಪ್ರತಿಭೆಗಳ ಕತ್ತು ಕೊಯ್ಯುತ್ತಿದೆ.
ನಾನು ಮಡಿವಾಳ. ಆದರೆ ಆದಾಯದ ಕಾರಣಕ್ಕಾಗಿ ನನ್ನ ಮಕ್ಕಳು ಸರ್ಕಾರಿ ಕೆಲಸ ಪಡೆಯಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದಲ್ಲೇ ಪೈಪೋಟಿ ನಡೆಸಬೇಕಿದೆ. ಜಾತಿಯ ಕಾರಣಕ್ಕೆ ಶೋಷಣೆ, ದಬ್ಬಾಳಿಕೆ ಗಳನ್ನು ಇಂದಿಗೂ ಅನುಭವಿಸುತ್ತಿರುವ ನಾವು, ಮೀಸಲಾತಿಯಲ್ಲೂ ಮೂಲೋತ್ಪಾಟನೆಯಾಗಿ ಶೋಷಣೆ ಅನುಭವಿಸುವಂತಾಗಿದೆ. ಸಾಮಾಜಿಕ ನ್ಯಾಯ ಪಡೆಯಲು ವಕೀಲರಿಲ್ಲದ ಕಕ್ಷಿದಾರರ ಅನಾಥ ಪ್ರಜ್ಞೆಯನ್ನು ನಾವು ಅನುಭವಿಸುತ್ತಿದ್ದೇವೆ. ಆದಾಯಮಿತಿ ನಿಗದಿ ಮಾಡುವುದಾದರೆ ಮೀಸಲಾತಿ ಪಡೆಯುವ ಎಲ್ಲಾ ಸಮುದಾಯ ಹಾಗೂ ವರ್ಗಗಳಿಗೂ ನಿಗದಿ ಮಾಡಲಿ. ಈ ಬಗೆಯ ತಾರತಮ್ಯ ಯಾವ ನ್ಯಾಯ?
ಇದರಿಂದ ಮೀಸಲಾತಿ ಸವಲತ್ತು ಪಡೆಯುತ್ತಿರುವ ಸಂಘಟಿತ ಜಾತಿಗಳಿಗೆ ಮಾತ್ರ ಸಿಂಹಪಾಲು ದೊರೆಯುತ್ತದೆ. ಬಲಹೀನ ಅಸಂಘಟಿತ ಸಮುದಾಯವು ಮೀಸಲಾತಿಯಿಂದ ಬಲುದೂರ ಉಳಿದಿದೆ. ಸದಾ ದಲಿತರ ಪರ ದನಿಯಾಗಿ ಮಾತನಾಡುವ ದೇವನೂರ ಮಹಾದೇವ ಅವರು ನಮ್ಮಂಥವರ ಬಗ್ಗೆಎಂದಾದರೂ ಸಂಶೋಧನಾತ್ಮಕವಾಗಿ ಚಿಂತಿಸಿದ್ದಾರೆಯೇ? ಆ ಕುರಿತು ಎಲ್ಲಾದರೂ ಬರೆದಿದ್ದಾರೆಯೇ?
ಆರ್.ರಘು,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.